Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ
May 18, 2024 03:55 PM IST
ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ
- ದಾಂಪತ್ಯ ಅಥವಾ ಪ್ರೇಮ ಜೀವನವನ್ನು ಒಂದೇ ರೀತಿಯಲ್ಲಿ ಸಾಗಿಸಿಕೊಂಡು ಹೋಗುವುದ ನಿಜಕ್ಕೂ ಕಷ್ಟಸಾಧ್ಯ. ಜೊತೆಯಾಗಿ ಹಲವು ವರ್ಷಗಳು ಬಾಳಿದ ಬಳಿಕ ಸಂಬಂಧ ಹಳಸಲು ಆರಂಭಿಸುತ್ತದೆ. ಇಂಥಹ ಸಂದರ್ಭದಲ್ಲಿ ನೀವು ಪ್ರೀತಿಯನ್ನು ಬಾಡದಂತೆ ಸಂಬಂಧವನ್ನು ಕಾಪಾಡಿಕೊಳ್ಳಲು ಸಂಗಾತಿಗಳು ಪಾಲಿಸಬೇಕಾದ ನಿಯಮಗಳಿವು.
ಪ್ರೀತಿ ಮಾಡೋದು ಸುಲಭ, ಆದರೆ ಆ ಪ್ರೀತಿಯ ತಾಜಾತನವನ್ನ ಕೊನೆ ತನಕವೂ ಉಳಿಸಿಕೊಳ್ಳುವುದು ಬಹಳ ಕಷ್ಟ. ನೀವು ವಿವಾಹಿತರಾಗಿದ್ದರೆ ಅಥವಾ ನಿಮ್ಮ ಪ್ರೇಮ ಜೀವನ ಬಹಳ ವರ್ಷಗಳ ಕಾಲ ಮುಂದುವರಿದಿದ್ದರೆ ಪ್ರೀತಿಯನ್ನು ಕಾಪಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದರ ಅನುಭವ ಖಂಡಿತ ನಿಮಗಾಗಿರುತ್ತದೆ. ಇಬ್ಬರು ಜೊತೆಯಾಗಿ ಬಾಳಬೇಕು ಎಂದು ನಿರ್ಧರಿಸಿದ ಬಳಿಕ ಇಬ್ಬರು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಎಷ್ಟು ಪ್ರಯತ್ನಿಸುತ್ತಿದ್ದೀರಿ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಸಾಕಷ್ಟು ವರ್ಷ ಕಳೆದರೂ ಆ ಪ್ರೀತಿಯ ಭಾವ ಹಾಗೆಯೇ ಉಳಿಯಲು ಏನು ಮಾಡಬೇಕು ಎನ್ನಲು ಇಲ್ಲಿವೆ ನಾಲ್ಕು ಪ್ರಮುಖ ಸಲಹೆಗಳು:
1. ಎಲ್ಲಾ ಬೇಡಿಕೆಗಳನ್ನು ಸಂಗಾತಿ ಈಡೇರಿಸಲೇಬೇಕು ಎಂಬ ನಿರೀಕ್ಷ ಬೇಡ
ನಿಮ್ಮ ಸಂಗಾತಿಯು ನಿಮ್ಮ ಉತ್ತಮ ಸ್ನೇಹಿತರಂತೆ ಇರಬೇಕು, ಪೋಷಕರಂತೆ ಕಾಳಜಿ ವಹಿಸಬೇಕು ಎಂಬೆಲ್ಲ ಆಸೆ ಇರುವುದು ಸಹಜ. ಆದರೆ ಅವರು ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಬೇಕು, ನಿಮ್ಮೆಲ್ಲ ಈಡೇರಿಕೆಗಳನ್ನು ಅವರು ಈಡೇರಿಸಲೇಬೇಕು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಈ ರೀತಿಯ ಭಾವನೆ ಹೊಂದಿದಾಗ ಮಾತ್ರ ನಿಮ್ಮ ನಡುವೆ ತಪ್ಪು ಭಾವನೆಗಳು ಬರಲು ಆಸ್ಪದ ಇರುವುದಿಲ್ಲ.
2. ನಿಮ್ಮ ಮಾತು ಹಾಗೂ ಕ್ರಿಯೆ ಒಂದಕ್ಕೊಂದು ಹೋಲುವಂತಿರಲಿ
ನಿಮ್ಮ ಮಾತು ಹಾಗೂ ಕ್ರಿಯೆಯಲ್ಲಿ ಸಾಮ್ಯತೆ ಇದ್ದಾಗ ಮಾತ್ರ ನಿಮ್ಮ ಮೇಲೆ ವಿಶ್ವಾಸ ಮೂಡಲು ಸಾಧ್ಯವಿದೆ. ಯಾವುದೋ ಒಂದು ಸಂಭಾಷಣೆಯನ್ನು ಕೊನೆಗೊಳಿಸಬೇಕು ಅಥವಾ ಜಗಳದಿಂದ ತಪ್ಪಿಸಿಕೊಳ್ಳಬೇಕು ಎಂದು ನಿಮ್ಮ ಕೈಯಲ್ಲಿ ಆಗದ ಭರವಸೆಗಳನ್ನು ನೀಡುವುದು ಕೂಡ ಒಳಿತಲ್ಲ. ನಿಮ್ಮ ಕೈಯಲ್ಲಿ ಆಗದ ಕೆಲಸಗಳ ಬಗ್ಗೆ ನೀವು ಮಾತು ಕೊಟ್ಟು ಅದನ್ನು ಪೂರೈಸಲು ನಿಮ್ಮಿಂದ ಸಾಧ್ಯವಾಗದೇ ಇದ್ದಾಗ ನಿಮ್ಮ ಮೇಲೆ ನಿಮ್ಮ ಸಂಗಾತಿಗೆ ಅಪನಂಬಿಕೆ ಇನ್ನಷ್ಟು ಹೆಚ್ಚಾಗುತ್ತದೆ.
3. ಭಾವನಾತ್ಮಕವಾಗಿ ಸಾಕ್ಷರರಾಗಬೇಕು
ನೀವು ಹೇಗೆ ಬೆಳೆದಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ಭಾವನಾತ್ಮಕ ಅರಿವು, ಬುದ್ಧಿವಂತಿಕೆ ಹಾಗೂ ಅಭಿವ್ಯಕ್ತಿ ಬದಲಾಗುತ್ತಾ ಹೋಗುತ್ತದೆ. ಭಾವನಾತ್ಮಕವಾಗಿ ನೀವು ಪ್ರಬುದ್ಧರಾಗಿದ್ದಾಗ ಮಾತ್ರ ನಿಮ್ಮಿಂದ ಆರೋಗ್ಯಕರ ಸಂಬಂಧವವನ್ನು ನಿರೀಕ್ಷಿಸಬಹುದಾಗಿದೆ. ಹೀಗಾಗಿ ಮೊದಲು ನಿಮ್ಮ ಭಾವನೆಗಳ ಬಗ್ಗೆ ನೀವು ತಿಳಿದುಕೊಳ್ಳಿ ಹಾಗೂ ಸಂಬಂಧದಿಂದ ನೀವು ಏನನ್ನು ಬಯಸುತ್ತೀರಿ ಎಂಬುದನ್ನು ಅರಿತುಕೊಳ್ಳುವುದು ಉತ್ತಮ.
4. ನಿಮ್ಮ ಬಂಧಕ್ಕೆ ಆದ್ಯತೆ ನೀಡಿ
ನೀವು ಸುರಕ್ಷಿತ ಸಂಬಂಧವನ್ನು ಬಯಸುತ್ತಿದ್ದರೆ ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡುವುದನ್ನು ಮೊದಲು ಕಲಿತುಕೊಳ್ಳಬೇಕು. ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡುವುದು ಎಂದರೆ ನಿಮ್ಮ ಸಂಗಾತಿಯ ಅಗತ್ಯಗಳಿಗೆ ಪಾಲುದಾರರಾಗುವುದು ಹಾಗೂ ಅವರನ್ನು ಹೇಗೆ ಕಾಳಜಿ ಮಾಡುತ್ತೀರಿ ಎಂಬುದೆಲ್ಲವೂ ಪರಿಗಣಿಸಲ್ಪಡುತ್ತದೆ. ಅಂದರೆ ನಿಮ್ಮ ಕುಟುಂಬ, ಕೆಲಸ ಇವೆಲ್ಲದಕ್ಕೂ ಮಿಗಿಲಾಗಿ ನಿಮ್ಮ ಸಂಗಾತಿಯ ಕಾಳಜಿ ವಹಿಸುವುದು ನಿಮ್ಮ ಆದ್ಯತೆಯಾಗಿರಲಿ.
ಪ್ರೀತಿಯ ಬಂಧ ಯಾವಾಗಲೂ ಸಿಹಿಯಾಗಿರಬೇಕು ಎಂದೇನಿಲ್ಲ. ಆದರೆ ಎಂಥಹ ಏರಿಳಿತದಲ್ಲಿಯೂ ಈ ಬಂಧವನ್ನು ಬಿಟ್ಟುಕೊಡದ ಮನಸ್ಥಿತಿ ನಿಮ್ಮದಾಗಿರಬೇಕು. ಸಂಗಾತಿಯ ಭಾವನೆಗಳನ್ನು ಗೌರವಿಸುವ ಹಾಗೂ ಅವರ ಬೇಕು ಬೇಡಗಳ ಬಗ್ಗೆ ಕಾಳಜಿ ವಹಿಸುವ ಭಾವನೆ ನಿಮ್ಮಲ್ಲಿ ಅಡಕವಾಗಿದ್ದರೆ ಎಷ್ಟೇ ವರ್ಷ ಸವೆದರೂ ನಿಮ್ಮ ಪ್ರೀತಿಗೆ ಯಾವುದೇ ಭಂಗ ಬರಲಾರದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ