ಮನದ ಮಾತು: ಮಗನೇ ಅನುಮಾನದ ಪಿಶಾಚಿಯಾದರೆ ಅಮ್ಮನ ಬದುಕು ಅದೆಷ್ಟು ಘೋರ, ಅಸಹಾಯಕ ತಾಯಿಗಿಷ್ಟು ಸಾಂತ್ವನ, ನೆಮ್ಮದಿಯ ಹುಡುಕಾಟಕ್ಕೆ ಬೇಕು ಆಸರೆ
Jul 22, 2023 09:23 AM IST
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
- ಎಷ್ಟೋ ಮಹಿಳೆಯರ ಭವಿಷ್ಯ ಅನುಮಾನದ ಪಿಡುಗಿನಿಂದ ಹಾಳಾಗಿದೆ. ಸ್ವತಃ ಮಗನೇ ತಾಯಿಯ ನಡತೆ ಅನುಮಾನಿಸಿ, ಅವಮಾನಿಸಿದರೆ ಆಕೆಯ ಮನಸ್ಸಿಗೆ ಎಷ್ಟು ಘಾಸಿಯಾಗಬೇಡ? ಮಗನಿಗೆ ವಾಸ್ತವ ಏನು ಎಂಬುದನ್ನು ಮನಗಾಣಿಸುವುದರ ಜೊತೆಗೆ ಭವಿಷ್ಯಕ್ಕೆ ಹೇಗೆ ಸಜ್ಜಾಗಬೇಕು ಎಂದು ತಿಳಿಸಿಕೊಟ್ಟಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.
ಪ್ರಶ್ನೆ: 1) ಮೇಡಂ, ನನ್ನ ಪರಿಸ್ಥಿತಿ ಬಗ್ಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ. ನನಗಂತೂ ಬದುಕೇ ಸಾಕು ಅನ್ನಿಸ್ತಿದೆ. ಒಂದು ಕಡೆಗೆ ಸಂಸಾರಕ್ಕೆ ಸಾಕಾಗುವಷ್ಟು ದುಡಿಮೆ ಮಾಡದ ಗಂಡ, ಮತ್ತೊಂದು ಕಡೆ ನನ್ನ ನಡತೆಯನ್ನೇ ಅನುಮಾನಿಸುವ ಮಗ. ನಾನು ಕೆಲಸಕ್ಕೆ ಹೋಗಲೇಬೇಕು ಮೇಡಂ. ನಾನು ಕೆಲಸಕ್ಕೆ ಹೋಗದಿದ್ದರೆ ಅವನ ಕಾಲೇಜು ಫೀಸ್ ಕಟ್ಟೋಕೂ ಆಗಲ್ಲ. ಅಕ್ಕಪಕ್ಕದ ಮನೆಯವರೆಲ್ಲಾ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿ ಅವರ ತಲೆ ಕೆಡಿಸಿದ್ದಾರೆ. ಆದರೆ ನನ್ನ ಗಂಡನಿಗೆ ಎಲ್ಲ ವಿಷಯ ಗೊತ್ತು. ಅವರು ನನ್ನ ಪರ ಇದ್ದಾರೆ. ಅವನು ನನ್ನ ಬಗ್ಗೆ ಕೀಳಾಗಿ ಮಾತಾಡುವುದು ತಿಳಿದಾಗ ಅವರೂ ಕಣ್ಣೀರು ಹಾಕಿದ್ದರು. ನನಗೆ ಕೆಲಸ ಬಿಡೋಣ ಅನ್ನಿಸುತ್ತೆ. ಆದರೆ ಬಿಟ್ಟರೆ ಅವನ ಭವಿಷ್ಯ ಹಾಳಾಗುತ್ತೆ. ಇವನು ಹೀಗೆ ಕೆಟ್ಟಕೆಟ್ಟದಾಗಿ ಮಾತನಾಡಿದಾಗ ಇವನಿಗಾಗಿ ಇಷ್ಟೆಲ್ಲಾ ಕಷ್ಟಪಡಬೇಕಾ ಅನ್ನಿಸುತ್ತೆ. ಯೋಚನೆ ಮಾಡಿ ಮಾಡಿ ಸಾಕಾಗಿದೆ ಮೇಡಂ. ನೀವೇ ಒಂದು ದಾರಿ ತೋರಿಸಿ. - ಪುಷ್ಪವತಿ, ಬೆಂಗಳೂರು
ಉತ್ತರ: ನಿಮ್ಮ ವೇದನೆ, ಸಂಕಟ ಅರ್ಥವಾಗುತ್ತದೆ. ನೀವು ಅಸಹಾಯಕತೆ, ನಿರಾಸೆ, ಕೋಪ, ದುಃಖ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದೀರಿ. ಒಂದು ಕಡೆ ಬಡತನ ನೀಗಿಸುವ ಜವಬ್ದಾರಿ, ಇನ್ನೊಂದು ಕಡೆ ವ್ಯಕ್ತಿತ್ತ್ವಕ್ಕೆ ಧಕ್ಕೆ ಬರುವ ಸವಾಲು. ದಿನ ಬೆಳಗಾದರೆ ಮಗನಿಂದ ಅವಮಾನ, ಸಮಾಜದಿಂದ ಅಹಿತಕರ ಪ್ರತಿಕ್ರಿಯೆ, ಬಡತನದ ಬಾಧೆ ನಿಮ್ಮನ್ನು ಮಾನಸಿಕವಾಗಿ ಬಹಳ ನರಳುವಂತೆ ಮಾಡಿರುವಂತೆ ಕಾಣುತ್ತದೆ. ನಿಮ್ಮ ಮಗನ ಮತ್ತು ಬೇರೆಯವರ ವರ್ತನೆ, ನಡತೆ, ಯೋಚನೆ, ಅಭಿಪ್ರಾಯಗಳು ಯಾವುದೂ ನಿಮ್ಮ ನಿಯಂತ್ರಣದಲ್ಲಿಲ್ಲ. ಆದ್ದರಿಂದ ನಿಮ್ಮನ್ನು ನೀವು ಮಗನ ಮತ್ತು ಬೇರೆಯವರ ಎದುರು ಸಾಬೀತುಪಡಿಸಿಕೊಳ್ಳಲು ಕಷ್ಟವಾಗಬಗುದು.
ಆದರೆ, ನಿಮ್ಮ ಯೋಚನೆಗಳು, ಭಾವನೆಗಳು, ನಿರ್ಣಯ, ಅಭಿಪ್ರಾಯ ನಿಮ್ಮ ನಿಯಂತ್ರಣದಲ್ಲಿವೆ. ನಿಮ್ಮ ಕಠಿಣ ಶ್ರಮ, ಪ್ರಯತ್ನಗಳನ್ನು ನೀವು ಗೌರವಿಸಿಕೊಳ್ಳಿ. ನಿಮ್ಮ ಮೇಲೆ ನಿಮಗೆ ಹೆಮ್ಮೆಯಿರಲಿ, ಆತ್ಮವಿಶ್ವಾಸ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ. ನಿಮ್ಮ ಮಗನ ವಿದ್ಯಾಭ್ಯಾಸ ನಿಮ್ಮ ದುಡಿಮೆಯಿಂದ ಸಾಗಬೇಕು. ಕೆಲಸ ಮಾಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ, ಸಮಾಧಾನ ಸಿಗುತ್ತದೆ ಎಂದಾದರೆ ದುಡಿಮೆ ಮುಂದುವರೆಸಿ. ಒಂದು ಪಕ್ಷ, ನಿಮಗೆ ಮಗ ಮಾಡುವ ಅವಮಾನ ಮತ್ತು ನೋವು ತಡೆದುಕೊಳ್ಳಲು ಸಾಧ್ಯವಿಲ್ಲ, ಅವನಿಗೋಸ್ಕರ ಕಷ್ಟಪಟ್ಟು ದುಡಿಯುವುದು ಸರಿಯಲ್ಲ ಎನಿಸಿದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನಿಮಗೆ ಇದ್ದೇ ಇರುತ್ತದೆ. ಬಹಳ ಗೊಂದಲದಿಂದ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತಿದ್ದಾರೆ ಯಾವುದೇ ಹಿಂಜರಿಕೆ ಇಲ್ಲದೆ ಆಪ್ತಸಮಾಲೋಚಕರ ಸಹಾಯ ತೆಗೆದುಕೊಳ್ಳಿ.
ಸದ್ಯದ ಮಟ್ಟಿಗೆ ನೀವು ಈ ಕೆಳಕಂಡಂತೆ ಮಾಡುವುದು ಉತ್ತಮ:
1) ನೀವು ನಿಮ್ಮ ಮಗನ ಹತ್ತಿರ ಕೂಲಂಕಶವಾಗಿ ಮಾತನಾಡಿ. ಮಾತನಾಡುವಾಗ ಸಂಯಮವಿರಲಿ. ಅತಿಭಾವುಕತೆ ಬೇಡ.
2) ಮಗನ ಮನಸ್ಸು, ಯೋಚನೆಗಳು, ನಿರೀಕ್ಷೆಗಳನ್ನು ಅವನಿಂದಲೆೇ ತಿಳಿದುಕೊಳ್ಳಿ.
3) ಅವನ ಈ ವತ೯ನೆಗೆ ಕಾರಣವೇನೆಂದು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಮಾಡಿಕೊಡಿ.
4) ಅಕ್ಕಪಕ್ಕದವರು ಅವನಿಗೆ ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆ ಕೊಟ್ಟಿರುವ ಬಗ್ಗೆ ಕೇಳಿಸಿಕೊಳ್ಳಿ. ನಂತರ ನಿಧಾನವಾಗಿ ಅವನೊಂದಿಗೆ ಮಾತನಾಡುತ್ತಾ ತಪ್ಪುಕಲ್ಪನೆಗಳನ್ನು ನಿವಾರಿಸಲು ಪ್ರಯತ್ನಿಸಿ.
5) ಅವನ ಅವಮಾನಕರವಾದ ವರ್ತನೆಯಿಂದಾಗಿ ನಿಮಗಾಗಿರುವ ನೋವನ್ನು ಹಂಚಿಕೊಳ್ಳಿ. ನಿಮ್ಮ ದುಡಿಮೆ ಅವನ ವಿದ್ಯಾಭ್ಯಾಸಕ್ಕೆ ಎಷ್ಟು ಅವಶ್ಯಕವೆಂದು ವಿವರಿಸಿ.
6) ಮಗನ ಪ್ರೀತಿ, ಬೆಂಬಲ, ನಂಬಿಕೆ, ವಿಶ್ವಾಸ ಮತ್ತು ಸಾಂತ್ವನ ನಿಮಗೆ ಅತ್ಯವಶ್ಯಕ ಎನ್ನುವುದನ್ನು ಮನದಟ್ಟು ಮಾಡಿಕೊಡಿ.
7) ನಿಮ್ಮ ಪತಿಯೂ ಮಾತುಕತೆಯಲ್ಲಿ ಭಾಗವಹಿಸಿ ನಿಮ್ಮ ಪರವಾಗಿ ಮಗನಲ್ಲಿ ಪ್ರೀತಿ, ಗೌರವ, ವಿಶ್ವಾಸ. ಮೂಡಿಸುವುದಕ್ಕೆ ಯತ್ನಿಸುವುದು ಒಳ್ಳೆಯದು.
8) ನೀವಿಬ್ಬರೂ ಪೋಷಕರು ಒಗ್ಗಟ್ಟಿನಿಂದ ಮಗನಿಗೆ ಸರಿಯಾದ ಮಾರ್ಗದರ್ಶನ ನೀಡಿ. ನೀವೂ ಸಹ ಪೋಷಕರ ಬಗ್ಗೆ ಕೃತಜ್ಞತೆ, ಗೌರವ, ನಂಬಿಕೆ, ವಿಶ್ವಾಸ ವ್ಯಕ್ತಪಡಿಸಿ. ಅವನಿಗೆ ಮಾದರಿಯಾಗಿರಿ.
9) ಮಗನಿಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಮತ್ತು ಸಂಯಮ ಅಗತ್ಯವಿದೆ. ಕಾದು ನೋಡಿ. ಇಷ್ಟಾಗಿಯೂ ಮಗನ ವರ್ತನೆಯಲ್ಲಿ ಬದಲಾವಣೆ ಕಾಣಿಸದಿದ್ದರೆ ಆಪ್ತಸಮಾಲೋಚಕರನ್ನು ಸಂಪರ್ಕಿಸುವುದು ಉತ್ತಮ.
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.