Deepawali 2023: ದೀಪಾವಳಿಯಲ್ಲಿ ಎಣ್ಣೆಸ್ನಾನ ಮಾಡುವ ಮುನ್ನ ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ವಹಿಸಬೇಕಾದ ಎಚ್ಚರಿಕೆಗಳಿವು
Nov 10, 2023 11:11 AM IST
ಎಣ್ಣೆಸ್ನಾನ ಮಾಡುವ ಮುನ್ನ ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ವಹಿಸಬೇಕಾದ ಎಚ್ಚರಿಕೆಗಳಿವು
- ದೀಪಾವಳಿಯಲ್ಲಿ ಅಭ್ಯಂಗ ಸ್ನಾನ ವಿಶೇಷ. ಮನೆಮಂದಿಯೆಲ್ಲಾ ಮೈಕೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಶುದ್ಧರಾಗುತ್ತಾರೆ. ನಂತರ ಪೂಜಾ ಕೈಂಕರ್ಯಗಳಲ್ಲಿ ತೊಡುಗುವುದು ವಾಡಿಕೆ. ಎಣ್ಣೆ ಸ್ನಾನ ಅಥವಾ ಅಭ್ಯಂಗ ಒಳ್ಳೆಯದೇ ಆದರೂ ಮಕ್ಕಳು, ಹಿರಿಯರು ಹಾಗೂ ಗರ್ಭಿಣಿಯರು ಕೆಲವು ಎಚ್ಚರಿಕೆ ವಹಿಸಿಬೇಕು. ಹಾಗಾದರೆ ಇವರ ಅಭ್ಯಂಗಸ್ನಾನ ಹೇಗಿರಬೇಕು ವಿವರ ಇಲ್ಲಿದೆ.
ದೀಪಾವಳಿ ಹಬ್ಬದ ಮುನ್ನ ದಿನ ನೀರು ತುಂಬುವ ಹಬ್ಬ ಇರುತ್ತದೆ. ನೀರು ತುಂಬುವ ಹಬ್ಬ ಎಂದರೆ ನೀರಿನ ಹಂಡೆಯನ್ನು ಸ್ವಚ್ಛ ಮಾಡಿ ಹಂಡೆಗೆ ಬಾವಿಯಿಂದ ಸೇದಿದ ಶುದ್ಧ ನೀರು ತುಂಬಿಸಿ, ಹಂಡೆಗೆ ಅರಿಸಿನ, ಕುಂಕುಮ ಹೂಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಗುತ್ತದೆ. ಮರುದಿನ ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಈ ನೀರಿನಿಂದ ಅಭ್ಯಂಗ ಸ್ನಾನ ಮಾಡಬೇಕು. ಇದು ಅನಾದಿ ಕಾಲದಿಂದಲೂ ದೀಪಾವಳಿ ಸಮಯದಲ್ಲಿ ಆಚರಿಸಿಕೊಂಡು ಬಂದ ವಾಡಿಕೆ. ಇದನ್ನು ಹಳ್ಳಿಗಳಲ್ಲಿ ಈಗಲೂ ಆಚರಿಸುತ್ತಾರೆ.
ವರ್ಷಕ್ಕೊಮ್ಮೆ ಎಣ್ಣೆಸ್ನಾನ ಮಾಡುವುದರ ಹಿಂದೆ ಶಾಸ್ತ್ರ, ಸಂಪ್ರದಾಯ ಮಾತ್ರವಲ್ಲ ಆಯುರ್ವೇದ ಪ್ರಯೋಜನಗಳೂ ಸೇರಿವೆ. ಎಣ್ಣೆಸ್ನಾನವು ದೇಹದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಅಭ್ಯಂಗಸ್ನಾನದಿಂದ ಮಾನಸಿಕ ಒತ್ತಡ ನಿವಾರಣೆ, ವಾತದೋಷ ಪರಿಹಾರ, ಚರ್ಮದ ಸೌಂದರ್ಯ ವೃದ್ಧಿ, ನಿದ್ರಾಹೀನತೆಯ ಸಮಸ್ಯೆ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಕ್ಕಳಯಾದಿಯಾಗಿ ಎಲ್ಲರೂ ಎಣ್ಣೆ ಸ್ನಾನ ಮಾಡಬಹುದು. ಆದರೆ ಮಕ್ಕಳು, ಗರ್ಭಿಣಿಯರು ಮತ್ತು ವಯಸ್ಸಾದವರು ಎಣ್ಣೆಸ್ನಾನ ಮಾಡುವಾಗ ಕೆಲವೊಂದು ಎಚ್ಚರಿಕೆ ವಹಿಸಬೇಕು.
ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವ ಮುನ್ನ
ಮಕ್ಕಳಿಗೆ ಎಣ್ಣೆಸ್ನಾನ ಮಾಡಿಸುವುದು ಭಾರತದಲ್ಲಿ ರೂಢಿಯಲ್ಲಿರುವ ಸಾಮಾನ್ಯ ಪದ್ಧತಿ. ಎಳೆ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸುವುದರಿಂದ ಚರ್ಮ ಹಾಗೂ ದೇಹದ ಅಂಗಾಂಗ ಬೆಳವಣಿಗೆ ಸುಧಾರಿಸುತ್ತದೆ ಎನ್ನುತ್ತಾರೆ. ಆದರೆ ಎಣ್ಣೆ ಸ್ನಾನಕ್ಕೂ ಮುನ್ನ ಈ ಸಲಹೆ ಪಾಲಿಸಿ.
- ಮಕ್ಕಳ ಚರ್ಮ ತುಂಬಾ ಸೂಕ್ಷ್ಮ. ಆ ಕಾರಣಕ್ಕೆ ಸೂಕ್ತ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
- ತೆಂಗಿನೆಣ್ಣೆ ಬಳಕೆ ಹಿಂದಿನಿಂದಲೂ ರೂಢಿಯಲ್ಲಿರುವ ಕಾರಣ ಮಕ್ಕಳಿಗೆ ಎಣ್ಣೆಸ್ನಾನ ಮಾಡಿಸಲು ತೆಂಗಿನೆಣ್ಣೆ ಬಳಸುವುದು ಸೂಕ್ತ.
- ದೀಪಾವಳಿ ಹಬ್ಬ ಎನ್ನುವ ಕಾರಣಕ್ಕೆ ಮಕ್ಕಳಿಗೆ ಸೂರ್ಯೋದಯಕ್ಕೂ ಮುನ್ನ ತೆಂಗಿನೆಣ್ಣೆ ಹಚ್ಚಿ ಸ್ನಾನ ಮಾಡಿಸಬೇಕು ಎಂಬುದೇನಿಲ್ಲ.
- ಬೆಳಗಿನ ಜಾವ ಬೇಗನೆ ಮಕ್ಕಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದರಿಂದ ಶೀತ, ನೆಗಡಿಯಂತಹ ಸಮಸ್ಯೆಗಳು ಕಾಡಬಹುದು.
- ಮಕ್ಕಳ, ಕಣ್ಣು ಕಿವಿಯೊಳಗೆ ಎಣ್ಣೆ ಹೋಗದಂತೆ ನೋಡಿಕೊಳ್ಳಿ.
- ಎಣ್ಣೆಯ ಗುಣಮಟ್ಟ ಪರೀಕ್ಷಿಸುವುದು ಬಹಳ ಮುಖ್ಯ.
- ಎಣ್ಣೆಸ್ನಾನಕ್ಕೂ ಮುನ್ನ ಚೆನ್ನಾಗಿ ಮಸಾಜ್ ಮಾಡಬೇಕು
- ಅತಿಯಾದ ಬಿಸಿನೀರು ಅಥವಾ ತಣ್ಣಗಿನ ನೀರು ಕೂಡ ಮಕ್ಕಳಿಗೆ ಒಳ್ಳೆಯದಲ್ಲ.
- ಮಕ್ಕಳಿಗೆ ಎಣ್ಣೆ ಹಚ್ಚಿದ ನಂತರ 10ರಿಂದ ನಿಮಿಷಗಳ ಹೊತ್ತು ಸ್ನಾನ ಮಾಡಿಸಬೇಕು.
- ಜ್ವರ, ನೆಗಡಿಯಂತಹ ಸಮಸ್ಯೆ ಇರುವಾಗ ಎಣ್ಣೆ ಸ್ನಾನ ಮಾಡಿಸದೇ ಇರುವುದು ಉತ್ತಮ.
ಗರ್ಭಿಣಿಯರಿಗೆ ಸಲಹೆ
ಗರ್ಭಿಣಿಯರು ಕೂಡ ಎಣ್ಣೆಸ್ನಾನ ವಿಚಾರದಲ್ಲಿ ಒಂದಿಷ್ಟು ಸಲಹೆಗಳನ್ನು ಪಾಲಿಸಬೇಕು.
- ಗರ್ಭಿಣಿಯರು ಕೂಡ ಎಣ್ಣೆಸ್ನಾನಕ್ಕೆ ಎಲ್ಲಾ ರೀತಿಯ ಎಣ್ಣೆಗಳನ್ನು ಬಳಸುವುದು ಸೂಕ್ತವಲ್ಲ.
- ಗರ್ಭಿಣಿಯರ ಆರೋಗ್ಯ ಸೂಕ್ಷ್ಮವಾಗಿರುವ ಕಾರಣ ಬೆಳಿಗ್ಗೆ ಬೇಗ ಎದ್ದು ಚಳಿಯಲ್ಲಿ ಎಣ್ಣೆಸ್ನಾನ ಮಾಡುವುದು ಸರಿಯಲ್ಲ.
- ಅತಿ ಬಿಸಿಯಾದ ಎಣ್ಣೆ ಬಳಕೆಯೂ ಗರ್ಭಿಣಿಯರಿಗೆ ಸೂಕ್ತವಲ್ಲ.
- ಇನ್ನು ಎಣ್ಣೆ ಹಚ್ಚಿ ಸ್ನಾನ ಮಾಡುವ ಮುನ್ನ ಆಯುರ್ವೇದ ತಜ್ಞರನ್ನು ಭೇಟಿ ಮಾಡಿ ಒಂದಿಷ್ಟು ಸಲಹೆ ಪಡೆಯುವುದು ಉತ್ತಮ.
- ಗರ್ಭಿಣಿಯರು ಎಣ್ಣೆಸ್ನಾನ ಮಾಡುವಾಗ ಎಷೆನ್ಷಿಯಲ್ ಆಯಿಲ್ ಅಥವಾ ಸಾರಭೂತ ತೈಲ ಬಳಕೆ ಮಾಡಬಾರದು.
- ಜ್ವರ, ನೆಗಡಿ, ಶೀತದಂತಹ ಆರೋಗ್ಯ ಸಮಸ್ಯೆಗಳಿದ್ದರೆ ಎಣ್ಣೆ ಸ್ನಾನ ಮಾಡದೇ ಇರುವುದು ಉತ್ತಮ.
- ಗರ್ಭಿಣಿಯರು ಹಾಗೂ ಬಾಣಂತಿಯರು ಇಬ್ಬರಿಗೂ ಎಣ್ಣೆಸ್ನಾನಕ್ಕೆ ತೆಂಗಿನೆಣ್ಣೆ ಬಳಕೆ ಉತ್ತಮ.
- ಎಣ್ಣೆ ಹಚ್ಚಿರುವ ಕಾರಣಕ್ಕೆ ಅತಿಯಾದ ಬಿಸಿನೀರಿನ ಬಳಕೆ ಒಳ್ಳೆಯದಲ್ಲ.
ಹಿರಿಯರಿಗೆ ಟಿಪ್ಸ್
ವಯಸ್ಸಾದವರು ಮೈಕೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹ ಸಡಿಲವಾದಂತೆ ಭಾಸವಾಗುವುದು ನಿಜ. ಆದರೆ ಇವರೂ ಕೂಡ ದೀಪಾವಳಿ ಎಣ್ಣೆಸ್ನಾನ ಸೇರಿದಂತೆ ಬೇರೆ ಸಂದರ್ಭದಗಳಲ್ಲೂ ಎಣ್ಣೆಸ್ನಾನಕ್ಕೂ ಮುನ್ನ ಒಂದಿಷ್ಟು ಎಚ್ಚರ ವಹಿಸಬೇಕು.
- ವಯಸ್ಸಾದವರು ಬೆಳಗಿನ ಜಾಗ ಬೇಗ ಥಂಡಿ ವಾತಾವರಣದಲ್ಲಿ ಎಣ್ಣೆ ಹಚ್ಚಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.
- ಕೆಲವೊಮ್ಮೆ ಎಣ್ಣೆಸ್ನಾನಕ್ಕೆ ಬಳಸುವ ಎಣ್ಣೆಯೊಂದ ಅಲರ್ಜಿ ಉಂಟಾಗಬಹುದು, ಹೀಗಾಗಿ ಗುಣಮಟ್ಟದ ಎಣ್ಣೆ ಬಳಕೆ ಸೂಕ್ತ.
- ವಯಸ್ಸಾದವರ ಚರ್ಮವು ಮಕ್ಕಳ ಚರ್ಮದಂತೆ ಸೂಕ್ಷ್ಮವಾಗಿರುವ ಅತಿ ಬಿಸಿಯಾದ ಎಣ್ಣೆ ಬಳಕೆ ಸಲ್ಲ.
- ವಯಸ್ಸಾದವರು ಬೆಳಗಿನ ಜಾವ ತಣ್ಣೀರಿನ ಸ್ನಾನ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟು ಬಿಸಿನೀರಿನ ಸ್ನಾನ ಉತ್ತಮ.
- ಅತಿಯಾದ ಸೂರ್ಯನ ಬಿಸಿಲು ಇರುವಾಗಲೂ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಒಳ್ಳೆಯದಲ್ಲ.
- ಎಣ್ಣೆ ಹಚ್ಚಿಕೊಂಡು ತಿರುಗಾಡುವಾಗ ಕಾಲು ಜಾರಿ ಬೀಳುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಹೆಚ್ಚು ತಿರುಗಾಡಲು ಹೋಗದಿರಿ.
- ಶೀತ, ನೆಗಡಿ, ಅಜೀರ್ಣದಂತಹ ಸಮಸ್ಯೆ ಇರುವವರು ಎಣ್ಣೆ ಸ್ನಾನ ಮಾಡದೇ ಇರುವುದು ಉತ್ತಮ.
ಇದನ್ನೂ ಓದಿ
Deepawali 2023: ದೀಪಾವಳಿಯಂದು ಲಕ್ಷ್ಮೀದೇವಿಗೆ ಕಮಲದ ಹೂಗಳಿಂದ ಪೂಜಿಸುವುದು ಒಳ್ಳೆಯದು ಎನ್ನುತ್ತೆ ಶಾಸ್ತ್ರ, ಏನು ಫಲ? ಇಲ್ಲಿದೆ ವಿವರ
ಸಂಭ್ರಮ ಕಸಿಯದಿರಲಿ ಪಟಾಕಿ; ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಮುನ್ನ ಮುದ್ದು ಮಕ್ಕಳ ಮೇಲಿರಲಿ ಒಂದು ಕಣ್ಣು
Deepawali 2023: ದೀಪಾವಳಿ ಆಚರಣೆ ಕುರಿತ ನಿಮಗೆ ತಿಳಿದಿರದ, ಅಚ್ಚರಿ ಮೂಡಿಸುವ 15 ವಿಚಾರಗಳಿವು