Deepawali 2023: ಪಟಾಕಿ ಸಿಡಿದರಷ್ಟೇ ದೀಪಾವಳಿಯಲ್ಲ; ಈ ಬಾರಿ ಪಟಾಕಿಯಿಲ್ಲದೇ ಬೆಳಕಿನ ಹಬ್ಬವನ್ನು ಹೀಗೆ ಆಚರಿಸಿ, ಸಂಪ್ರದಾಯ ಪಾಲಿಸಿ
Nov 10, 2023 04:46 PM IST
ಪಟಾಕಿ ಸಿಡಿದರಷ್ಟೇ ದೀಪಾವಳಿಯಲ್ಲ
- ದೀಪಾವಳಿಗೂ ಪಟಾಕಿಗೂ ಅವಿನಾಭಾವ ಸಂಬಂಧ. ಹಾಗೆ ನೋಡಿದರೆ ಯಾವ ರೀತಿಯಲ್ಲೂ ಸಂಬಂಧವೇ ಇಲ್ಲ. ಆದರೂ ಒಂದಕ್ಕೊಂದು ಬೆಸೆದುಕೊಂಡಿದೆ. ಪಟಾಕಿಗಳಿಲ್ಲದೆಯೂ ಪಟಾಕಿ ಹೊಡೆದಷ್ಟೇ ಸಂಭ್ರಮದಿಂದ ದೀಪಾವಳಿ ಆಚರಣೆ ಸಾಧ್ಯ. ಈ ಬಾರಿ ಪ್ರಯತ್ನಿಸಿ ನೋಡಿ (ಬರಹ: ಎಚ್.ಮಾರುತಿ)
ಆಧುನಿಕತೆ ಬೆಳೆದಂತೆ ಹಬ್ಬಗಳ ಆಚರಣೆಯ ಅರ್ಥ ಸೀಮಿತವಾಗುತ್ತಿದೆ. ಈಗ ಆಚರಿಸುತ್ತಿರುವ ದೀಪಾವಳಿ ಆಚರಣೆಗೆ ವಿಶಾಲ ಅರ್ಥವಿದೆ. ಅದನ್ನು ಮೀರಿದ ಪ್ರೀತಿ, ವಿಶ್ವಾಸ ಹರಡುವ ಕತ್ತಲೆಯನ್ನು ಕಳೆದು ಜ್ಞಾನವನ್ನು ಹರಡುವ ಸಂಕೇತ ಈ ಹಬ್ಬಕ್ಕಿದೆ. ಆದರೆ ಇಂತಹ ಅರ್ಥಗಳೆಲ್ಲಾ ಅನರ್ಥಗಳಾಗಿ ಬಿಟ್ಟಿವೆ.
ಆಧುನಿಕ ಜಗತ್ತಿನಲ್ಲಿ ಜಗಮಗಿಸುವ ವಿದ್ಯುತ್ ದೀಪಗಳನ್ನು ಇಳೆಬಿಟ್ಟು ಪಟಾಕಿ ಸಿಡಿಸುವುದಷ್ಟೇ ದೀಪಾವಳಿ ವಿಶೇಷವಾಗಿದೆ. ಮಕ್ಕಳು ಮತ್ತು ಯುವಕರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ನೆರೆಹೊರೆ ಬಂಧುಬಳಗದವರ ಜೊತೆ ಪೈಪೊಟಿ ನಡೆಸಿ ಪಟಾಕಿ ಹೊಡೆಯುವುದನ್ನು ದುಪ್ಪಟ್ಟುಗೊಳಿಸುತ್ತಾರೆ. ಹೀಗೆ ಸಂತೋಷಿಸುತ್ತಾ ನಾವು ಪಟಾಕಿ ಸಿಡಿಸುವುದರಿಂದ ಉಂಟಾಗುವ ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ಎಷ್ಟು ಎನ್ನುವುದನ್ನು ಅರಿತುಕೊಂಡರೆ ಆತಂಕ ಉಂಟಾಗುತ್ತದೆ. ಸಾರ್ವಜನಿಕರ ಆರೋಗ್ಯ, ರೋಗಿಗಳ ಮೇಲಾಗುವ ಪರಿಣಾಮ, ಪ್ರಾಣಿಪಕ್ಷಿಗಳು ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮ, ಮಕ್ಕಳ ಆರೋಗ್ಯ ಮತ್ತು ಕಣ್ಣು ಕಳೆದುಕೊಳ್ಳುವವರ ಸಂಖ್ಯೆ ಅಪರಿಮಿತ. ಹಾಗಾದರೆ ದೀಪಾವಳಿಯನ್ನು ಪಟಾಕಿಗಳಿಲ್ಲದೆ ಅಚರಿಸುತ್ತಾ ಹರ್ಷಪಡಲು ಸಾಧ್ಯ ಇಲ್ಲವೇ? ಖಂಡಿತ ಇದು ಸಾಧ್ಯ. ಪರಿಸರ ಮೇಲಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡೇ ಸಾಂಪ್ರದಾಯಿಕವಾಗಿ ದೀಪಾವಳಿಯನ್ನು ಆಚರಿಸಲು ಸಾಧ್ಯವಿದೆ.
ಪಟಾಕಿ ಸಿಡಿಸುವುದು ಏಕೆ?
ಅಜ್ಞಾನದ ವಿರುದ್ಧ ಜ್ಞಾನದ ಗೆಲುವು, ದುಷ್ಟತನದ ವಿರುದ್ಧ ಒಳ್ಳೆಯತನದ ಗೆಲುವು, ಅಂಧಕಾರದ ವಿರುದ್ಧ ಬೆಳಕಿನ ಗೆಲುವು ಎಂಬ ಅರ್ಥಗಳೂ ದೀಪಾವಳಿಗೆ ಇವೆ. ದುಷ್ಟತನದ ಮೇಲೆ ಒಳ್ಳೆಯತನ ಗೆಲ್ಲುತ್ತದೆ ಎನ್ನುವುದನ್ನು ತೋರಿಸುವ ಅರ್ಥವೂ ಇದೆ. ಆದರೆ ಆಧುನಿಕ ಯುಗದಲ್ಲಿ ಪಟಾಕಿ ಸಿಡಿಸುವ ಆಚರಣೆ ಸೇರಿಕೊಂಡಿದೆ. ಆದರೆ ಪಟಾಕಿಗಳನ್ನೇ ಏಕೆ ಸಿಡಿಸಬೇಕು ಎನ್ನುವುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ.
ದೀಪಗಳನ್ನು ಹೆಚ್ಚೆಚ್ಚು ಬೆಳಗಿಸಿ
ಮನೆಯ ಪ್ರತಿಯೊಂದು ಮೂಲೆಯನ್ನು ದೀಪಗಳಿಂದ ಬೆಳಗಿಸಿ. ನಮ್ಮ ಸಾಂಪ್ರದಾಯಿಕ ಆಚರಣೆಯ ರೀತಿಯಲ್ಲೇ ದೀಪಗಳನ್ನು ಬೆಳಗಿಸೋಣ. ವಿದ್ಯುತ್ ದೀಪಗಳಿಗೆ ಬದಲಾಗಿ ಮಣ್ಣಿನ ಹಣತೆಗಳನ್ನು ಬಳಸಿ ಅಂಧಕಾರವನ್ನು ಹೊಡೆದೋಡಿಸೋಣ. ಇದರಿಂದ ವಿದ್ಯುತ್ ಉಳಿತಾಯವಾಗುವುದರ ಜೊತೆಗೆ ಮನೆಯ ಸೌಂದರ್ಯವೂ ಹೆಚ್ಚುತ್ತದೆ. ಜೊತೆಗೆ ಈ ದೀಪಗಳನ್ನು ಮರು ಬಳಕೆ ಮಾಡಬಹುದು, ಜೈವಿಕವಾಗಿ ನಾಶಗೊಳಿಸಬಹುದು ಮತ್ತು ಹಣದ ದೃಷ್ಟಿಯಿಂದಲೂ ಒಳ್ಳೆಯದು.
ದೀಪಾವಳಿಯನ್ನು ಇನ್ನೂ ವೈವಿಧ್ಯಮಯವಾಗಿಸಲು ದೀಪಗಳನ್ನು ಅಲಂಕರಿಸಿ, ದೀಪಗಳ ಮೇಲೆ ಬಣ್ಣ ಬಣ್ಣಗಳಿಂದ ಚಿತ್ತಾರವನ್ನು ಬಿಡಿಸಿ. ಈ ಸಂಭ್ರಮವನ್ನು ಅನುಭವಿಸಿಯೇ ತೀರಬೇಕು.
ಮನೆಯನ್ನು ಅಲಂಕರಿಸಿ
ರಂಗೋಲಿ ದೀಪಾವಳಿಯ ಅವಿಭಾಜ್ಯ ಅಂಗ. ಜೈವಿಕ ಬಣ್ಣಗಳನ್ನು ಬಳಸಿ ರಂಗೋಲಿಯನ್ನು ಬಿಡಿಸಬಹುದು. ಅರಿಸಿಣ, ಅಕ್ಕಿಹಿಟ್ಟು ಬಳಕೆ ಮಾಡಿದರೆ ಇನ್ನೂ ಕ್ಷೇಮ. ಈ ಬಣ್ಣಗಳು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಸಂಪ್ರದಾಯಿಕ ಲಾಟೀನುಗಳಿಂದ ಮನೆಯನ್ನು ಬೆಳಗಿಸುವ ಒಂದು ಪ್ರಯತ್ನ ಮಾಡಿ ನೋಡಿ. ಜೊತೆಗೆ ಬಣ್ಣ ಬಣ್ಣದ ಪೇಪರ್‌ಗಳನ್ನು ವೈವಿಧ್ಯಮಯವಾಗಿ ಕತ್ತರಿಸಿ ಅಲಂಕರಿಸಬಹುದು.
ಹಸಿರು ಪಟಾಕಿ ಬಳಸಿ
ಪಟಾಕಿ ಬೇಡವೇ ಬೇಡ ಎಂದು ಹೇಳಲಾಗದು. ಮಾಲಿನ್ಯ ಉಂಟು ಮಾಡುವ ಪಟಾಕಿಗಳಿಗೆ ಬದಲಾಗಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸಿ. ಈ ಪಟಾಕಿಗಳನ್ನು ಸಿಡಿಸಿಯೂ ಸಂಭ್ರಮಿಸಬಹುದಲ್ಲವೇ?
ಪಟಾಕಿಗಳಿಗಾಗಿ ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ವೆಚ್ಚ ಮಾಡುವವರು ಇದ್ದಾರೆ. ಇದು ಒಣ ಆಡಂಬರದ ಪ್ರದರ್ಶನವಲ್ಲದೆ ಮತ್ತೇನೂ ಅಲ್ಲ. ಈ ಹಣವನ್ನು ಅವಶ್ಯಕತೆ ಇರುವವರಿಗೆ ಹಂಚಿ ಅವರ ನಗುವಿನಲ್ಲಿ ಪಾಲುದಾರರಾಗಿ. ಅನಾಥ ಮಕ್ಕಳ ಶುಲ್ಕ ಹಾಗೂ ಅವರಿಗೆ ಬಟ್ಟೆ ಪುಸ್ತಕ ಕೊಡಿಸಬಹುದು, ಅಸ್ಪತ್ರೆಗಳಿಗೆ ತೆರಳಿ ಹಣ್ಣು ಹಂಪಲು ಮತ್ತು ಸಿಹಿಯನ್ನು ಹಂಚಬಹುದು.
ಮನೆಗಳಲ್ಲೇ ಸಂತೋಷ ಕೂಟ ಹಮ್ಮಿಕೊಳ್ಳಿ
ಮನೆಗೆ ನಿಮ್ಮ ಬಂಧುಮಿತ್ರರ ಕುಟುಂಬಗಳನ್ನು ಆಹ್ವಾನಿಸಿ ದೀಪಾವಳಿ ಆಚರಿಸಿ. ಹಬ್ಬದ ಊಟವನ್ನು ತಯಾರಿಸಿ ಸಹಭೋಜನ ನಡೆಸಿ. ಮನೆಯಲ್ಲೇ ಸಿಹಿ ತಯಾರಿಸಬಹುದು. ಮನೆಯಲ್ಲಿ ನೀವು ಮತ್ತು ನಿಮ್ಮ ಮಕ್ಕಳು ತಯಾರಿಸಿದ ಗಿಫ್ಟ್ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳಿ. ಚಿಂತನೆಯನ್ನು ಒರೆಗೆ ಹಚ್ಚುವ ಪುಸ್ತಕಗಳನ್ನು ಹಂಚಲೂಬಹುದು. ಜಗತ್ತನ್ನು ಬದಲಾಯಿಸುವ ಭ್ರಮೆ ಬೇಡ. ನಮಗೆ ನಾವು ಬದಲಾಗೋಣ. ನಾನು ನನ್ನ ಕುಟುಂಬ ಪರಿಸರ ಮತ್ತು ನೆರೆಹೊರೆಯವರಿಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ ಎಂಬ ಆತ್ಮತೃಪ್ತಿ ಇದ್ದರೆ ಅರ್ಥಪೂರ್ಣ ದೀಪಾವಳಿ ಆಚರಿಸದಂತಲ್ಲವೇ?