Nija Sharavana Masa: ನಾಳೆಯಿಂದ ನಿಜ ಶ್ರಾವಣ ಮಾಸ ಆರಂಭ; ಈ ತಿಂಗಳಲ್ಲಿ ಬರುವ ಹಬ್ಬಗಳು, ವಿಶೇಷ ದಿನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Aug 16, 2023 11:08 AM IST
ಆಗಸ್ಟ್ 17ರಿಂದ ನಿಜ ಶ್ರಾವಣ ಮಾಸ ಆರಂಭವಾಗಲಿದ್ದು ಕೃಷ್ಣಜನ್ಮಾಷ್ಟಮಿ, ಮಂಗಳಗೌರಿ ವ್ರತ ಸೇರಿದಂತೆ ಹಲವು ವಿಶೇಷ ಹಬ್ಬಗಳನ್ನು ಈ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
- Nija Sharavana Masa: ಆಗಸ್ಟ್ 17 ರಿಂದ ನಿಜ ಶ್ರಾವಣ ಮಾಸ ಆರಂಭವಾಗುತ್ತದೆ. ಅಧಿಕ ಶ್ರಾವಣ ಮಾಸ ಇಂದು (ಆಗಸ್ಟ್ 16) ಮುಕ್ತಾಯವಾಗುತ್ತದೆ. ನಿಜ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು, ವಿಶೇಷ ದಿನಗಳ ಕುರಿತ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಪ್ರಧಾನ್ಯವಿದೆ. 2023ರಲ್ಲಿ ಆಗಸ್ಟ್ 16ಕ್ಕೆ ಅಧಿಕ ಶ್ರಾವಣವು ಮುಕ್ತಾಯವಾಗಿ, ಆಗಸ್ಟ್ 17ರಿಂದ ನಿಜ ಶ್ರಾವಣ ಮಾಸವು ಆರಂಭವಾಗಲಿದೆ. ಶ್ರಾವಣ ಮಾಸವು ಶಿವನಿಗೆ ಅಚ್ಚುಮೆಚ್ಚು. ಈ ಮಾಸದಲ್ಲಿ ಶಿವನನ್ನು ಮೆಚ್ಚಿಸುವ ಸಲುವಾಗಿ ಉಪವಾಸ ವ್ರತ, ಮಾಂಸಾಹಾರ ತ್ಯಜಿಸುವುದು ಮಾಡುತ್ತಾರೆ.
ನಿಜ ಶ್ರಾವಣ ಮಾಸ ಆರಂಭದಿಂದ ಹಲವು ಹಬ್ಬಗಳು ಸಾಲು ಸಾಲಾಗಿ ಆರಂಭವಾಗುತ್ತವೆ. ಈ ಹಬ್ಬಗಳಲ್ಲಿ ನಾಗರಪಂಚಮಿ ಮೊದಲು ಬರುವ ಹಬ್ಬ. ನಂತರ ದಿನಗಳಲ್ಲಿ ವರಮಹಾಲಕ್ಷ್ಮೀ, ಜನ್ಮಾಷ್ಟಮಿಯಂತಹ ಹಬ್ಬಗಳ ಬರುತ್ತವೆ. ಹಾಗಾದರೆ ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ಧಾರ್ಮಿ ಹಿನ್ನೆಲೆಯುಳ್ಳ ದಿನಗಳು ಯಾವುವು ನೋಡಿ.
ಇನ್ನಷ್ಟು ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ನಾಗರಪಂಚಮಿ
ನಿಜ ಶ್ರಾವಣ ಮಾಸ ಆರಂಭವಾದ ನಂತರ ಮೊದಲು ಬರುವ ಹಬ್ಬ ನಾಗರಪಂಚಮಿ. ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿಯಂದು ಈ ದಿನವನ್ನು ಆಚರಿಸಲಾಗುತ್ತದೆ. ಅಂದು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಈ ದಿನ ಭೂಮಿಯನ್ನು ಅಗೆಯುವುದು ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಮುತೈದೆಯರು ನಾಗನಿಗೆ ಹಾಲೆರೆಯುವ ಮೂಲಕ ಮನೆಯ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳುವ ಕ್ರಮವೂ ಕೆಲವೊಂದು ಕಡೆ ಇದೆ. ಈ ವರ್ಷ ಆಗಸ್ಟ್ 21 ರಂದು ನಾಗರಪಂಚಮಿ ಆಚರಣೆ ಇದೆ.
ವರಮಹಾಲಕ್ಷ್ಮೀ ಹಬ್ಬ
ವರಮಹಾಲಕ್ಷ್ಮೀ ಹಬ್ಬವನ್ನು ಕರ್ನಾಟಕದಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣದಲ್ಲೂ ಹಬ್ಬದ ಆಚರಣೆ ಇದೆ. ಮುತೈದೆಯರಿಗೆ ಬಾಗಿನ ಕೊಡುವ ಮೂಲಕ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಲಕ್ಷ್ಮೀದೇವಿಯನ್ನು ಪೂಜಿಸುವುದು ಈ ಹಬ್ಬದ ವಿಶೇಷ. ಕಲಶವನ್ನು ಪ್ರತಿಷ್ಠಾಪಿಸಿ ಅಷ್ಟಲಕ್ಷ್ಮೀಯರನ್ನು ಪೂಜಿಸಿ, ಸಿಹಿ ತಿನಿಸುಗಳ ನೇವೇದ್ಯ ಮಾಡುವುದು ವಾಡಿಕೆ. ಈ ವರ್ಷ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.
ಓಣಂ
ಕೇರಳಿಗರು ಬಹಳ ಸಂಭ್ರಮ ಸಡಗರದಿಂದ ಆಚರಿಸುವ ಓಣಂ ಹಬ್ಬದ ಆಚರಣೆ ಇರುವುದು ಇದೇ ಶ್ರಾವಣ ಮಾಸದಲ್ಲಿ. ಕೇರಳದಲ್ಲಿ ಇದು ವಿಶೇಷ ಹಬ್ಬ. ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕೇರಳಿಗರು ಪೂಕಳಂ (ಹೂವಿನ ರಂಗೋಲಿ) ರಚಿಸುವ ಮೂಲಕ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ವಿವಿಧ ಬಗೆಯ ತಿನಿಸು ಹಾಗೂ ಖಾದ್ಯಗಳಿರುವ ಸದ್ಯ (ಊಟದ ಮೆನು) ಓಣಂನ ವಿಶೇಷ. ಈ ಬಾರಿ ಆಗಸ್ಟ್ 29 ರಂದು ಓಣಂ ಆಚರಣೆ ಇದೆ.
ನೂಲುಹುಣ್ಣಿಮೆ (ಯುಜರುಪಾಕರ್ಮ)
ಉಪಾಕರ್ಮವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ನೂಲು ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಧನಿಷ್ಠಾ ನಕ್ಷತ್ರದ ದಿನವಾದ ಅಂದು ಹೋಮ ಮಾಡಿ ಹೊಸ ಜನಿವಾರ ಹಾಕಿಕೊಳ್ಳುವ ಪದ್ಧತಿ ಕೆಲವು ಸಮುದಾಯದಲ್ಲಿದೆ. ಈ ವರ್ಷ ಆಗಸ್ಟ್ 30 ರಂದು ಯಜರುಪಾಕರ್ಮವಿದೆ.
ರಕ್ಷಾಬಂಧನ
ಈ ವರ್ಷ ಆಗಸ್ಟ್ 31ಕ್ಕೆ ರಕ್ಷಾಬಂಧನವಿದೆ. ಇದೇ ದಿನದಂದು ನಾರಾಯಣಗುರುಗಳ ಜನ್ಮದಿನವೂ ಇದೆ. ಅಣ್ಣ-ತಂಗಿಯರ ನಡುವೆ ಬಾಂಧವ್ಯವನ್ನು ಹೆಚ್ಚಿಸುವ ರಕ್ಷಾಬಂಧನವನ್ನು ದೇಶದಾದ್ಯಂತಹ ಬಹಳ ಸಡಗರದಿಂದ ಆಚರಿಸುತ್ತಾರೆ. ಈ ರಕ್ಷಾಬಂಧನವನ್ನು ರಾಖಿ ಹಬ್ಬ ಎಂದೂ ಕರೆಯುತ್ತಾರೆ.
ರಾಘವೇಂದ್ರ ಸ್ವಾಮಿಗಳ ಆರಾಧನೆ
ಶ್ರಾವಣ ಮಾಸದ ಕೃಷ್ಣ ಪಕ್ಷದ ಬಿದಿಗೆಯಂದು ರಾಘವೇಂದ್ರ ಸ್ವಾಮಿಗಳ ಆರಾಧನೆ ನಡೆಯುತ್ತದೆ. ಮಂತ್ರಾಲಯದಲ್ಲಿ ಈ ದಿನದಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿ ಸೆಪ್ಟೆಂಬರ್ 1 ರಂದು ರಾಯರ ಆರಾಧನೆ ಇದೆ.
ಕೃಷ್ಣ ಜನ್ಮಾಷ್ಟಮಿ
ಭಾರತದಲ್ಲಿ ಆಚರಿಸುವ ವಿಶೇಷ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ರೋಹಿನಿ ನಕ್ಷತ್ರದಂದು ಈ ದಿನದ ಆಚರಣೆ ಇರುತ್ತದೆ. ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 6 ರಂದು ಜನ್ಮಾಷ್ಟಮಿ ಇದೆ.
ವಿಟ್ಲಪಿಂಡಿ
ಕೃಷ್ಣ ಜನ್ಮಾಷ್ಟಮಿಯ ಮರುದಿನ ವಿಟ್ಲಪಿಂಡಿ ಆಚರಣೆ ಇರುತ್ತದೆ. ಇದನ್ನು ಮೊಸರು ಕುಡಿಕೆ ಹಬ್ಬ ಎಂದೂ ಕರೆಯುತ್ತಾರೆ. ಸೆಪ್ಟೆಂಬರ್ 7ಕ್ಕೆ ವಿಟ್ಲಪಿಂಡಿ ಇದೆ.
ಮೊಂತಿ ಫೆಸ್ಟ್
ಕ್ರಿಶ್ಚಿಯನ್ ಸಮುದಾಯವರು ಸೆಪ್ಟೆಂಬರ್ 8ಕ್ಕೆ ಮೊಂತಿ ಫೆಸ್ಟ್ ಆಚರಿಸುತ್ತಾರೆ. ಮಾತೆ ಮರಿಯಮ್ಮ ಜಯಂತಿ ಎಂದೂ ಇದನ್ನು ಕರೆಯಲಾಗುತ್ತದೆ.
ಮಂಗಳಗೌರಿ ಪೂಜೆ
ಮಂಗಳಗೌರಿ ಪೂಜೆಯನ್ನು ಮಂಗಳಗೌರಿ ವ್ರತ ಎಂದೂ ಆಚರಿಸಲಾಗುತ್ತದೆ. ಮುತೈದೆಯರು ಈ ಮಂಗಳಗೌರಿ ವೃತವನ್ನು ಆಚರಿಸುತ್ತಾರೆ. ಪಾರ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಈ ದಿನದ ವಿಶೇಷ.