logo
ಕನ್ನಡ ಸುದ್ದಿ  /  ಜೀವನಶೈಲಿ  /  Sagara ಊರುಬದಿ: ಅವನತಿಯತ್ತ ಮಲೆನಾಡು ಗಿಡ್ಡ; ರೋಗನಿರೋಧಕ ಶಕ್ತಿಯ ಈ ಊರದನ ಸಾಮಾನ್ಯದ್ದಲ್ಲ, ಚರ್ಮರೋಗ-ಕ್ಯಾನ್ಸರ್​ಗೂ ಔಷಧಿ ನೀಡುವ ಗೋಮಾತೆ

Sagara ಊರುಬದಿ: ಅವನತಿಯತ್ತ ಮಲೆನಾಡು ಗಿಡ್ಡ; ರೋಗನಿರೋಧಕ ಶಕ್ತಿಯ ಈ ಊರದನ ಸಾಮಾನ್ಯದ್ದಲ್ಲ, ಚರ್ಮರೋಗ-ಕ್ಯಾನ್ಸರ್​ಗೂ ಔಷಧಿ ನೀಡುವ ಗೋಮಾತೆ

Meghana B HT Kannada

Jun 10, 2023 07:00 PM IST

google News

'ಮಲೆನಾಡು ಗಿಡ್ಡ'ನ ಕುರಿತ ಅಂಕಣ

    • Urubadi -Malnad Life -Malnad Gidda : 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ.  ಮಲೆನಾಡಿನ ಬದುಕು ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಪ್ರಕಟವಾಗಲಿದೆ. 'ಮಲೆನಾಡು ಗಿಡ್ಡ'ನ ಮೂಲಕ ಊರುಬದಿ ಅಂಕಣ ಪ್ರಾರಂಭವಾಗುತ್ತಿದೆ.. 
'ಮಲೆನಾಡು ಗಿಡ್ಡ'ನ  ಕುರಿತ ಅಂಕಣ
'ಮಲೆನಾಡು ಗಿಡ್ಡ'ನ ಕುರಿತ ಅಂಕಣ

ಮಲೆನಾಡಿನ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಬೆಟ್ಟಗುಡ್ಡ, ಕಾಡುಮೇಡಿನಿಂದಾವೃತವಾದ ಈ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ, ಕಣ್ಣಿಗೆ-ಮನಸ್ಸಿಗೆ ಮುದ ನೀಡುತ್ತಾ ಇರುತ್ತದೆ. ಇಲ್ಲಿ ನೆಲೆಸುವುದೇ ಸ್ವರ್ಗ. ಮಲೆನಾಡಿನ ಊರು-ಕೇರಿ, ಸಂಸ್ಕೃತಿ-ಸಂಪ್ರದಾಯ, ರೈತಾಪಿ ಜೀವನ, ಪ್ರಾಣಿ-ಪಕ್ಷಿಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರತಿ ಶನಿವಾರ 'ಊರುಬದಿ' ಎಂಬ ಅಂಕಣ ಪ್ರಕಟವಾಗಲಿದೆ. ಅವನತಿಯಂಚಿನಲ್ಲಿರುವ 'ಮಲೆನಾಡು ಗಿಡ್ಡ'ನ ಮೂಲಕ 'ಊರುಬದಿ' ಅಂಕಣವನ್ನು ಆರಂಭಿಸುತ್ತಿದ್ದೇನೆ..

ಕರ್ನಾಟಕದ ಪಶ್ಚಿಮ ಘಟ್ಟಗಳ ಗುಡ್ಡಗಾಡು, ದಟ್ಟವಾದ ಅರಣ್ಯ ಹೊಂದಿರುವ ಪ್ರದೇಶಗಳಲ್ಲಿ, ಹೆಚ್ಚಾಗಿ ಮಲೆನಾಡು ಭಾಗದಲ್ಲಿ ಕಾಣಸಿಗುವ ವಿಶೇಷ ಗೋವಿನ ತಳಿ ಎಂದರೆ ಅದು ಮಲೆನಾಡು ಗಿಡ್ಡ. ಹೆಸರೇ ಹೇಳುವಂತೆ ಇವುಗಳು ಕುಬ್ಜ (ಕುಳ್ಳ) ದೇಹವುಳ್ಳ ಜಾನುವಾರುಗಳಾಗಿದೆ. ಊರದನ, ವರ್ಷಗಂಧಿ ಎಂದೂ ಇವುಗಳನ್ನು ಕರೆಯಲಾಗುತ್ತದೆ. ರೋಗ ನಿರೋಧಕತೆಗೆ ಹೆಸರುವಾಸಿಯಾಗಿರುವ, ಒಂದು ಕಾಲದಲ್ಲಿ ಹೇರಳವಾಗಿದ್ದ ಮಲೆನಾಡು ಗಿಡ್ಡ ಈಗ ವಿನಾಶದ ಅಂಚಿನಲ್ಲಿದೆ. ಬನ್ನಿ ಅವುಗಳ ಲಕ್ಷಣ, ಉಪಯೋಗಗಳು, ಹಾಗೂ ಅವನತಿ ಅಂಚಿನಲ್ಲಿರಲು ಕಾರಣಗಳೇನು ಎಂಬುದನ್ನ ತಿಳಿಯೋಣ.

ಮುಂದೆ ಬಂದರೆ ಹಾಯೋದು ಇಲ್ಲ, ಹಿಂದೆ ಬಂದರೆ ಒದೆಯೋದು ಇಲ್ಲ..

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಮಲೆನಾಡು ಗಿಡ್ಡಗಳ ಎತ್ತರ ಕಡಿಮೆ. ಮೂರು ಅಡಿ ದಾಟೊಲ್ಲ. ಈ ಗೋವುಗಳೇ ಮುಗ್ಧ ಸ್ವಭಾದವು, ಅದರಲ್ಲಿಯೂ ಮಲೆನಾಡು ಗಿಡ್ಡಕ್ಕೆ ನಾಚಿಕೆ, ಅಂಜಿಕೆ ಸ್ವಲ್ಪ ಜಾಸ್ತಿನೇ. ಹೀಗಾಗಿ ಇವು ಮುಂದೆ ಬಂದರೆ ಹಾಯೋದು ಇಲ್ಲ, ಹಿಂದೆ ಬಂದರೆ ಒದೆಯೋದು ಇಲ್ಲ. ಕೆಲವೊಂದು ಗಿಡ್ಡಗಳು ಕಪ್ಪು ಬಣ್ಣದ ಚರ್ಮವನ್ನು ಹೊಂದಿದ್ದರೆ, ಇನ್ನು ಕೆಲವು ತಳಿ ಕಂದು ಬಣ್ಣವನ್ನು ಹೊಂದಿರುತ್ತವೆ.

ಇವುಗಳ ಹಾಲು ಮತ್ತು ಮೂತ್ರ (ಗೋಮೂತ್ರ)ವು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಇವುಗಳಿಗೆ ಒಂದು ಕಾಲದಲ್ಲಿ ಭಾರೀ ಬೇಡಿಕೆಯಿತ್ತು. ಈ ಹಸುಗಳು ದಿನಕ್ಕೆ ಎರಡರಿಂದ ಐದು ಲೀಟರ್​ ಹಾಲು ಉತ್ಪಾದನಾ ಸಾಮರ್ಥ್ಯ ಹೊಂದಿದೆ. 2012ರಲ್ಲಿ ಭಾರತ ಸರ್ಕಾರ ಮಾನ್ಯತೆ ಪಡೆದ ಗೋತಳಿಗಳ ಪಟ್ಟಿಯಲ್ಲಿ ಮಲೆನಾಡು ಗಿಡ್ಡವನ್ನು ಸೇರ್ಪಡೆ ಮಾಡಲಾಗಿದೆ.

ರೋಗ ನಿರೋಧಕ ಶಕ್ತಿ

ಇವುಗಳನ್ನು ಸಾಕುವವರಿಗೆ ಯಾವುದೇ ತಲೆಬಿಸಿ ಇಲ್ಲ. ಯಾಕಂದ್ರೆ ಇವುಗಳ ನಿರ್ವಹಣಾ ವೆಚ್ಚ ತೀರಾ ಕಡಿಮೆ. ಹೆಚ್ಚೆಚ್ಚು ಹಿಂಡಿಗಳನ್ನು ತಿನ್ನಿಸಿ ಬೆಳೆಸಬೇಕೆಂದೇನಿಲ್ಲ, ಕಾಡುಮೇಡಿನಲ್ಲಿ ತಮ್ಮ ಪಾಡಿಗೆ ಅಲೆಯುತ್ತಾ ಹುಲ್ಲು, ಸೊಪ್ಪು-ಸದೆಗಳನ್ನು ಮೆಂದು ಆರೋಗ್ಯಕರವಾಗಿರುತ್ತವೆ. ಗಾಳಿ-ಮಳೆಯಿರಲಿ, ಚಳಿ-ಬಿಸಿಲಿರಲಿ ಇವು ಜಗ್ಗೋದಿಲ್ಲ. ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶಗಳಲ್ಲಿ ನಮಗೆ ತಿಳಿಯದ ಅನೇಕ ಔಷಧೀಯ ಸಸ್ಯಗಳಿವೆ. ಇವುಗಳನ್ನೂ ಮಲೆನಾಡು ಗಿಡ್ಡಗಳು ತಿನ್ನುವುದರಿಂದ ಇವುಗಳ ರೋಗನಿರೋಧಕ ಶಕ್ತಿಯೂ ಹೆಚ್ಚು. ಅಷ್ಟೇ ಅಲ್ಲ ಮಲೆನಾಡು ಗಿಡ್ಡಗಳು ನೀಡುವ ಹಾಲುಗಳನ್ನು ಕುಡಿಯುವವರಿಗೂ ರೋಗ ನಿರೋಧಕ ಶಕ್ತಿ ಸಿಗುತ್ತದೆ. ಇವುಗಳ ಹಾಲು ಪ್ರೊಟೀನ್​, ಕ್ಯಾಲ್ಸಿಯಂ, ವಿಟಮಿನ್​ಗಳು ಹಾಗೂ ಒಳ್ಳೆಯ ಕೊಬ್ಬನ್ನು ಹೊಂದಿದೆ. ಹೀಗಾಗಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ಹಾಲನ್ನು ಕುಡಿಯಬಹುದು. ರೋಗಿಗಳಿಗಂತೂ ಇದು ಸಂಜೀವಿನಿ ಇದ್ದಹಾಗೆ. ಹೀಗಾಗಿ ಮಲೆನಾಡು ಗಿಡ್ಡದ ಹಾಲಿನ ಬೆಲೆಯೂ ದುಬಾರಿ. ಲೀಟರ್​ಗೆ ನೂರು ರೂಪಾಯಿ ದಾಟುತ್ತದೆ.

ಕಾಡುಮೇಡಿನಲ್ಲಿ ಸಿಗುವ ಮೇವೆ ಮಲೆನಾಡು ಗಿಡ್ಡಗಳಿಗೆ ಆಧಾರ. ಆದರೆ ಈಗ ಕಾಡುಗಳು ಬರಿದಾಗುತ್ತಿದೆ, ಮೇಯಲು ಸೊಪ್ಪು-ಸದೆಗಳು ಸರಿಯಾಗಿ ಸಿಗುತ್ತಿಲ್ಲ. ಇತ್ತ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಹಾಗೂ ಭತ್ತವನ್ನು ಬೆಳೆಯುವುದು ಕಡಿಮೆಯಾಗಿದ್ದ ಹುಲ್ಲಿನ ಅಭಾವ ಎದುರಾಗಿದೆ. ಹೀಗಾಗಿ ಮಲೆನಾಡು ಗಿಡ್ಡಗಳು ಸೇರಿದಂತೆ ಜಾನುವಾರುಗಳಿಗೆ ಪೋಷಕಾಂಶಯುಕ್ತ ಮೇವು ಸಿಗುತ್ತಿಲ್ಲ. ಇದರಿಂದಾಗಿ ರೋಗ ನಿರೋಧಕತೆಗೆ ಹೆಸರಾಗಿದ್ದ ಮಲೆನಾಡು ಗಿಡ್ಡಗಳೇ ಈಗ ಚರ್ಮಗಂಟು ರೋಗ, ಕಾಲುಬಾಯಿ ಜ್ವರ, ಉಣ್ಣೆ ಬಾಧೆ ಸೇರಿದಂತೆ ನಾನಾ ರೋಗಗಳಿಗೆ ತುತ್ತಾಗುತ್ತಿವೆ. ಹೀಗಾಗಿ ರೈತರು ಸಹ ಮಲೆನಾಡು ಗಿಡ್ಡಗಳನ್ನು ಸಾಕಲು ಹಿಂದುಮುಂದು ನೋಡುತ್ತಿದ್ದಾರೆ.

ಕೊರೊನಾ ಸಾಂಕ್ರಾಮಿಕದ ವೇಳೆ ರೋಗ ನಿರೋಧಕ ಶಕ್ತಿ ಎಂಬುದನ್ನು ಅರಿಯದವರೂ ಅರಿತರು. ಮಲೆನಾಡು ಗಿಡ್ಡಗಳ ಹಾಲಿಗೆ ಬೇಡಿಕೆ ಹೆಚ್ಚಾಯಿತು, ಆದರೆ ಕೋವಿಡ್​ ತಗ್ಗಿದ್ದು, ಈಗ ಮತ್ತೆ ಇದರ ಬೇಡಿಕೆಯೂ ಕುಗ್ಗಿದೆ.

ಹಸುಗಳು ಹೆಚ್ಚೆಂದರೆ 15 ರಿಂದ 25 ವರ್ಷ ಬದುಕುತ್ತವೆ. ಆದರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಮುಸುವಳ್ಳಿ ಗ್ರಾಮದ ಮಲೆನಾಡು ಗಿಡ್ಡ ತಳಿಯ ಹಸು ಬರೋಬ್ಬರಿ 36 ವರ್ಷ ಬದುಕಿತ್ತು. ಮುಸುವಳ್ಳಿ ಗ್ರಾಮದ ನಾರಾಯಣ ಭಟ್ಟ ಎಂಬವರ ಮನೆಯ ಈ ಹಸುವಿಗೆ ಕೌಲೆ ಎಂದು ಹೆಸರಿಟ್ಟಿದ್ದರು.

ಸಾಗರದ ವಾಣಿಶ್ರೀ ಮತ್ತು ಮಲೆನಾಡು ಗಿಡ್ಡ

ಕೇಂದ್ರ ಸರ್ಕಾರದ ಪಿಎಂಎಫ್​​ಎಂಇ (PMFME -Pradhan Mantri Formalisation of Micro Food Processing Enterprises Scheme) ಯೋಜನೆಯ ಶಿವಮೊಗ್ಗ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಯಾದ ವಾಣಿಶ್ರೀ ಸಾಗರ್ ಹಾಗೂ ಅವರ ಪತಿ ಪತ್ರಕರ್ತರಾಗಿದ್ದ ನಾಗೇಂದ್ರ ಸಾಗರ್​ ಅವರು ಸಾಗರದ ಚಿಪ್ಪಳಿ ಗ್ರಾಮದ ತಮ್ಮ ಮನೆಯಲ್ಲಿ ಇತರ ತಳಿಯ ಹಸುಗಳ ಜೊತೆ ಮಲೆನಾಡು ಗಿಡ್ಡಗಳನ್ನೂ ಸಾಕಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿ ಚಿನ್ನದ ಪದಕ ಪಡೆದ ವಾಣಿಶ್ರೀ ಸಾಗರ್ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಡಿಕೆ ಕೃಷಿ, ಜೇನುಸಾಕಣೆ, ಹೈನುಗಾರಿಕೆ, ಎರೆಗೊಬ್ಬರ ತಯಾರಿ, ಬಿದಿರು ಕೃಷಿ ಹೀಗೆ ಅನೇಕ ಕೃಷಿ ಸಂಬಂಧ ಕಾರ್ಯದಲ್ಲಿ ಪತಿಗೆ ಸಂಪೂರ್ಣ ಸಾಥ್​ ನೀಡುತ್ತಿರುವ ವಾಣಿಶ್ರೀ ಸಾಗರ್ ಮಲೆನಾಡು ಗಿಡ್ಡದ ಬಗ್ಗೆ ನಮಗೆ ಅರಿಯದ ಸಾಕಷ್ಟು ಮಾಹಿತಿ ನೀಡಿದ್ದಾರೆ. ಬನ್ನಿ ಅವರ ಮಾತುಗಳಲ್ಲೇ ಮಲೆನಾಡು ಗಿಡ್ಡದ ಬಗ್ಗೆ ತಿಳಿಯೋಣ..

"ಮಲೆನಾಡು ಗಿಡ್ಡ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿನ ಪರಿಸರಕ್ಕೆ ತಕ್ಕಂತ ಹಸುಗಳು ಅವು. ತನಗೇನು ಬೇಕು ಎಂಬುದನ್ನ ಆಯ್ಕೆ ಮಾಡಿ ತಿನ್ನುತ್ತವೆ. ಪಶ್ಚಿಮ ಘಟ್ಟಗಳಲ್ಲಿ ವೈವಿಧ್ಯಮಯ ಗಿಡಗಳು ಇರೋದ್ರಿಂದ ಅವುಗಳನ್ನು ತಿಂದ ಗಿಡ್ಡಗಳ ಜೀರ್ಣಕ್ರಿಯೆಯೂ ಚೆನ್ನಾಗಿರತ್ತೆ. ಪ್ರತಿರೋಧಕ ಶಕ್ತಿ ಜಾಸ್ತಿ ಇರೋದ್ರಿಂದ ಮಲೆನಾಡು ಗಿಡ್ಡಗಳಿಗೆ ಹೆಚ್ಚು ರೋಗಗಳು ಬರಲ್ಲ, ಬಂದ್ರೂ ರೋಗಗಳ ವಿರುದ್ಧ ಹೋರಾಡುತ್ತವೆ" ಎನ್ನುತ್ತಾರೆ ವಾಣಿಶ್ರೀ.

ವಾಣಿಶ್ರೀ ಅವರು ತಿಳಿಸಿದಂತೆ ಮಲೆನಾಡು ಗಿಡ್ಡದ ಉಪಯೋಗಗಳಿವು..

1. ಮಲೆನಾಡು ಗಿಡ್ಡದ ಹಾಲು ಮತ್ತು ತುಪ್ಪದಲ್ಲಿ ಔಷಧೀಯ ಗುಣಗಳು ಇರುವುದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆಯೂ ಚೆನ್ನಾಗಿದೆ. ಇದನ್ನೇ ಬಯಸುವ ಗ್ರಾಹಕರು ಇದ್ದಾರೆ. ಮಲೆನಾಡು ಗಿಡ್ಡದ ಹಾಲನ್ನು ಎ2 ಮಿಲ್ಕ್​ ಅಂತಾನೆ ಕನ್ಸಿಡರ್​ ಮಾಡ್ತಾರೆ. ಇದರ ಒಂದು ಲೀಟರ್ ಹಾಲಿಗೆ 200 ರೂಪಾಯಿ ವರೆಗೂ ಬೆಲೆ ಇದೆ. ಆದರೆ ಹಳ್ಳಿಗಳಲ್ಲಿ ಇಷ್ಟೆಲ್ಲ ದುಡ್ಡು ಕೊಟ್ಟು ಯಾರೂ ತಗೊಳೋದು ಇಲ್ಲ, ನಮಗೆ ಅಷ್ಟು ರೇಟಿಗೆ ಕೊಡೊಕೆ ಮನಸ್ಸೂ ಬರಲ್ಲ. ಬೆಂಗಳೂರಿನಂತ ನಗರಗಳಲ್ಲಿ ಆದ್ರೆ ಇದು ನಡಿಯತ್ತೆ ಎಂಬುದು ವಾಣಿಶ್ರೀ ಅವರ ಮಾತು.

2. ಹಸುವಿನ ಸಗಣಿ ಮತ್ತು ಗೋಮೂತ್ರದಲ್ಲೇ ನಾವು ಲಕ್ಷ್ಮಿಯನ್ನ ಕಾಣ್ತೀವಿ. ಇದರಿಂದ ನಾವು ಸಾಬೂನು ತಯಾರಿಸ್ತೀವಿ. ಬೆರಣಿಯನ್ನು ಸುಟ್ಟಾಗ ಸಿಗುವ ಕರಿಭಸ್ಮದಿಂದ ತಯಾರಿಸಿದ ಸೋಪು ಚರ್ಮರೋಗಗಳಿಗೆ ಒಳ್ಳೆಯದು.

3. ಅಗ್ನಿಹೋತ್ರ ಅಂತ ಮಾಡ್ತೀವಲ ಅದಕ್ಕೆ ಮಲೆನಾಡು ಗಿಡ್ಡದ್ದೇ ತುಪ್ಪ, ಮಲೆನಾಡು ಗಿಡ್ಡದ್ದೇ ಬೆರಣಿ ಬಳಸಿ ಮಾಡಿದ್ರೆ ಅದರಿಂದ ಸಿಗುವ ಭಸ್ಮ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. (ಅಗ್ನಿಹೋತ್ರ ಎಂದರೆ ಸಾಂಪ್ರದಾಯಿಕ ಹಿಂದೂ ಸಮುದಾಯಗಳಲ್ಲಿ ನಿರ್ವಹಿಸಲಾಗುವ ಒಂದು ವೈದಿಕ ಯಜ್ಞ)

4. ಇದರಿಂದ ಸಾಬೂನುಗಳನ್ನ ತಯಾರು ಮಾಡಬಹುದು. ಫಾರ್ಮಾಸಿಟಿಕಲ್​ ಕಂಪನಿಯವರು ಈ ಭಸ್ಮವನ್ನ ಮತ್ತೆ ಮತ್ತೆ ಪ್ರೊಸೆಸ್​ ಮಾಡಿ ಅದನ್ನ ಆಯುರ್ವೇದ ಮಾತ್ರೆಗಳ ತಯಾರಿಕೆಗೆ ಬಳಸ್ತಾರೆ.

5. ಇದರ ಸಗಣಿಯನ್ನು ಬಳಸಿ ನೋವು ನಿವಾರಕ ಎಣ್ಣೆಗಳನ್ನ ಮಾಡಬಹುದು. ಮೂಗಿಗೆ ಬಿಡುವ ಡ್ರಾಪ್​ ತಯಾರಿಸಬಹುದು, ಇದರಿಂದ ತಲೆನೋವು ಮತ್ತೆ ಗ್ಯಾಸ್ಟ್ರೈಟಿಸ್​ ಇಂದ ಬರುವ ಬೇರೆ ಬೇರೆ ಸಮಸ್ಯೆಗಳನ್ನ ಕಡಿಮೆ ಮಾಡುತ್ತದೆ.

6. ಅದಲ್ಲದೇ ಸೊಳ್ಳೆ ಬತ್ತಿಯನ್ನ ತಯಾರಿಸಬಹುದು. ಕರಿಭಸ್ಮದ ಜೊತೆ ಕೆಲವು ಗಿಡಗಳ ಸೊಪ್ಪನ್ನ ಸೇರಿಸಿ ಮಾಡಿದ ಸೊಳ್ಳೆ ಬತ್ತಿಗಳಿಂದ 8 ಗಂಟೆಗಳ ಕಾಲ ಸೊಳ್ಳೆ ಬರದಂತೆ ತಡೆಯಬಹುದು. ಅಂತಹ ವಾತಾವರಣವನ್ನು ಈ ಸೊಳ್ಳೆ ಬತ್ತಿ ಕ್ರಿಯೇಟ್​ ಮಾಡುತ್ತೆ.

7. ನೀವು ಈ ಸಗಣಿಯನ್ನ ಯಾವುದೇ ರೂಪದಲ್ಲಿ ದಹಿಸಿದ್ರೂ, ಅದು ವಾತಾವರಣ ಶುದ್ಧೀಕರಣ ಮಾಡುತ್ತೆ. ಹೀಗಾಗಿ ನಾವು ದೀಪಾವಳಿ ಸಮಯದಲ್ಲಿ ಮಲೆನಾಡು ಗಿಡ್ಡದ ಸಗಣಿಯಿಂದ ತಯಾರಿಸಿದ ಹಣತೆಯನ್ನ ಮಾಡ್ತೀವಿ. ಕಾರ್ತಿಕದ ವೇಳೆ ಅದಕ್ಕೆ ಎಣ್ಣೆ,ಬತ್ತಿ ಹಾಕಿ ಉರಿಸಿದಾಗ ಅದು ವಾತಾವರಣವನ್ನ ಶುದ್ಧೀಕರಣ ಮಾಡುತ್ತೆ. ಮಲೆನಾಡುವಿನಲ್ಲಿರುವವರಿಗೆ ಅರ್ರೆ, ವಾತಾವರಣ ಶುದ್ಧಿ ಮಾಡೋದೇ ಅಂದ್ರೇನು, ನಮ್ಮ ವಾತಾವರಣ ಚೆನ್ನಾಗೇ ಇದಿಯಲಾ ಅಂತ ಅನಿಸುತ್ತೆ. ಆದರೆ ಪೇಟೆಯಲ್ಲಿ ಇದ್ದೋರಿಗೆ ಇದು ಅರ್ಥ ಆಗಬಹುದು ಎನ್ನುತ್ತಾರೆ ವಾಣಿಶ್ರೀ.

8. ಗೋಮೂತ್ರದಿಂದ ತಯಾರಿಸುವ ಆರ್ಕ ಕೂಡ ಕ್ಯಾನ್ಸರ್​ ರೋಗಕ್ಕೆ ಒಂದು ಔಷಧಿಯಾಗಿದೆ.

9. ಉತ್ತಮ ಗುಣಮಟ್ಟದ ಗೊಬ್ಬರ

10. ಅದರ ಹಾಲು ತುಪ್ಪದಲ್ಲಿ ಔಷಧೀಯ ಗುಣದ ಜೊತೆಗೆ ಅದರ ಮೊಸರನ್ನು ತಿಂದ್ರೆ ಐಸ್​ಕ್ರೀಂ ತಿಂದಹಾಗೆ ಆಗುತ್ತೆ. ಅಷ್ಟು ಗಟ್ಟಿಯಾಗಿ, ರುಚಿಯಾಗಿರುತ್ತದೆ.

ಮಲೆನಾಡು ಗಿಡ್ಡಗಳ ಅವನತಿಗೆ ವಾಣಿಶ್ರೀ ನೀಡಿದ ಕಾರಣಗಳು

- ಮಿಶ್ರತಳಿ ಹಸುಗಳಿಗೆ, ಎಮ್ಮೆಗಳಿಗೆ ಹೋಲಿಸಿಕೊಂಡ್ರೆ ಇವು ಹಾಲು ಕಡಿಮೆ ಕೊಡೋದ್ರಿಂದ ಆರ್ಥಿಕವಾಗಿ ಲಾಭದಾಯಕ ಅಲ್ಲ ಅಂತ ಜನರು ಪರಿಗಣಿಸಿದ್ದಾರೆ. ಆಧುನೀಕರಣ, ಜಾಗತೀಕರಣವೂ ಮಲೆನಾಡು ಗಿಡ್ಡಗಳ ಅವನತಿಗೆ ಕಾರಣ ಆಗ್ತಾ ಇದೆ. ಬೇರೆ ತಳಿಯ ಹಸುಗಳು ಜಾಸ್ತಿ ಹಾಲು ಕೊಡತ್ತೆ ಅಂತ ಎಲ್ಲರೂ ಅವುಗಳನ್ನೇ ಹೆಚ್ಚು ಸಾಗ್ತಾ ಇದ್ದಾರೆ. ಆದರೆ ಅವುಗಳ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ನಮ್ಮ ರೈತರು ಕೊಟ್ಟಿಗೆಲಿ ಸುಪ್ಪು, ದರ್ಕು (ಒಣ ಎಲೆಗಳು) ಹಾಕಿ ಅದರ ಮೇಲೆ ದನ ಸಾಕೋದು. ಅದರಿಂದ ಬರೋದನ್ನೇ ಗೊಬ್ಬರ ಅಂತ ಮಾಡ್ತಾರೆ. ಆದರೆ ನಾವು ವೈಜ್ಞಾನಿಕವಾಗಿ ಜಪಾನ್​ ಮಾಡೆಲ್​ ಅನ್ನು ಅಳವಡಿಸಿಕೊಳ್ಳಬೇಕು. ಈ ಮಲೆನಾಡು ಗಿಡ್ಡ ತಳಿಯ ಗೊಬ್ಬರವನ್ನೂ ಹಾಗೇ ಮಾಡಬೇಕು. ಸಗಣಿಯನ್ನು ಕಲಸಿ, ಒಂದು ಹಾಸು ಸಗಣಿ ಹಾಗೂ ಇನ್ನೊಂದು ಹಾಸು ಸೊಪ್ಪು, ಈ ತರಹ ಎರಡೂವರೆ ಅಷ್ಟು ಅಗಲ, ಎರಡೂವರೆ ಅಡಿಯಷ್ಟು ಎತ್ತರದ ಬೆಡ್​ ಮಾಡಿ, ಅದಕ್ಕೆ ಎರೆಹುಳವನ್ನ ಬಿಡ್ತೀವಿ. ಹೀಗೆ ಮಾಡೋದ್ರಿಂದ ನಮಗೆ ಒಳ್ಳೆ ಎರೆಗೊಬ್ಬರ ಸಿಗುತ್ತೆ. ನಾನು ಒಂದು ವರ್ಷದಲ್ಲಿ 2 ಟನ್​ ಅಷ್ಟು ಗೊಬ್ಬರ ಮಾಡ್​ಕೊಂಡಿದೀನಿ ಅಂದ್ರು ವಾಣಿಶ್ರೀ.

- ಮಳೆಗಾಲದಲ್ಲಿ ಹಸಿರು (ಸೊಪ್ಪುಸದೆ) ಸಿಗತ್ತೆ ಓಕೆ. ಆದರೆ ಹಸಿರು ಇಲ್ಲದ ವೇಳೆಯಲ್ಲೂ ನಾವು ಬರೀ ಹೊರಗಡೆ ಮೆಂದ್​ಕೋ ಬಂದು ಇಲ್ಲಿ ಹಾಗೆ ಇರು ಅಂದ್ರೆ ಆಗಲ್ಲ, ನಾವೂ ಅವುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು. ಹೀಗೆ ಮಾಡಿದಲ್ಲಿ ಮಲೆನಾಡಿನಲ್ಲಿ ಮಲೆನಾಡು ಗಿಡ್ಡವನ್ನ ಚೆನ್ನಾಗಿ ಉಳಿಸಿಕೊಳ್ಳಬಹುದು.

- ಅವುಗಳು ಮೇಯುತ್ತಿದ್ದ ಜಾಗವನ್ನೂ ಕಸಿದುಕೊಂಡಿರೋ ನಾವು ಈಗ ಅವುಗಳನ್ನ ಸಾಕೋಕು ಜಾಗ ಕೊಡ್ತಾ ಇಲ್ಲ. ಈಗ ಎಲ್ಲರೂ ಪೇಟೆಯಲ್ಲಿ ಕೆಲಸ ಮಾಡೋದೇ ಪ್ರತಿಷ್ಠೆ ಅನ್​ಕೊಳ್ತಿದ್ದಾರೆ, ಅದೇ ಮನೋಭಾವನೆ ಮಲೆನಾಡು ಗಿಡ್ಡದ ಮೇಲೆ ಕೂಡ ಇದೆ.

- ಗೋಮಾಳಗಳು ಬರಿದಾಗಿ, ಆ ಜಾಗದಲ್ಲಿ ಈಗ ಎಲ್ಲರೂ ಮನೆಗಳನ್ನ ಕಟ್ಟಿಕೊಂಡು ಬಿಟ್ಟಿದ್ದಾರೆ. ಕಾಡಿನಲ್ಲಿ ಸೊಪ್ಪು ಸಿಗದೆ ಪಟ್ಟಣಗಳಿಗೆ ಹಸುಗಳು ಮೇಯಲು ಹೋಗ್ತಾ ಇವೆ, ಅಲ್ಲಿ ಸಿಗುವ ಪ್ಲಾಸ್ಟಿಕ್​ಗಳನ್ನ ತಿಂದು ರೋಗಗಳಿಗೆ ತುತ್ತಾಗುತ್ತಾ ಇವೆ.

- ರೈತನಿಗೂ ಕಷ್ಟ ಆಗ್ತಿದೆ, ಹುಲ್ಲು, ಎರೆಗೊಬ್ಬರದ ಬೆಲೆ ಜಾಸ್ತಿ ಆಗ್ತಾ ಇದೆ. ಮೊದಲು ಕೇವಲ ಮೂರು ರೂಪಾಯಿಗೆ ಒಂದು ಕಟ್ಟು ಹುಲ್ಲು ಸಿಗ್ತಾ ಇತ್ತು, ಈಗ 40 ರೂಪಾಯಿ ಆಗಿದೆ ಎನ್ನುತ್ತಾರೆ ಅವರು.

"ಕೊರೊನಾ ಬಂದಾಗ ಮತ್ತೆ ಮಲೆನಾಡು ಗಿಡ್ಡಗಳ ಹಾಲು, ತುಪ್ಪ, ಬೆಣ್ಣೆಗೆ ಬೇಡಿಕೆ ಜಾಸ್ತಿ ಆಯ್ತು. ನಾವು ಎಲ್ಲಿ ಹೋದ್ರೂ ಏನೇ ಮಾಡಿದ್ರೂ ಸಾವಯವದ​ ಕಡೆಗೇ ಮುಖ ಮಾಡಬೇಕು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಭೂಮಿ ನಾವು ಹೇಳಿದ ಹಾಗೆ ಕೇಳಲ್ಲ, ಅದು ಹೇಗಿದೆಯೋ ಅದಕ್ಕೆ ನಾವು ಅಡ್ಜಸ್ಟ್​ ಆಗಬೇಕು" ಎಂಬ ವಾಣಿಶ್ರೀ ಅವರ ಮಾತಿನೊಂದಿಗೆ ಈ ಅಂಕಣಕ್ಕೆ ಪೂರ್ಣವಿರಾಮ ಇಡ್ತಾ ಇದ್ದೇನೆ. ಮುಂದಿನ ಶನಿವಾರ ಮತ್ತೊಂದು ಅಂಕಣದೊಂದಿಗೆ ಬರುವೆ..

- ಮೇಘನಾ ಬಿ. ಸಾಗರ

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.inಗೆ ಮೇಲ್​ ಮಾಡಿ

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ