logo
ಕನ್ನಡ ಸುದ್ದಿ  /  ಜೀವನಶೈಲಿ  /  Saturday Motivation: ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲು ಬೇಡಿ; ಬದುಕನ್ನು ಶಪಿಸುವ ಬದಲು ಈ ರೀತಿ ಸಂತೋಷ ಕಂಡುಕೊಳ್ಳಿ

Saturday Motivation: ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲು ಬೇಡಿ; ಬದುಕನ್ನು ಶಪಿಸುವ ಬದಲು ಈ ರೀತಿ ಸಂತೋಷ ಕಂಡುಕೊಳ್ಳಿ

Rakshitha Sowmya HT Kannada

Mar 16, 2024 07:01 AM IST

google News

ಜೀವನಕ್ಕೊಂದು ಸ್ಫೂರ್ತಿಮಾತು

  • Saturday Motivation:  ನಾನು ಮನುಷ್ಯನಾಗಿ ಹುಟ್ಟಬಾರದಿತ್ತು, ನನಗೆ ಕಷ್ಟ ಹೆಚ್ಚು, ನಾನು ಬದುಕಿದ್ದೂ ವ್ಯರ್ಥ ಎಂದು ಕೆಲವರು ತಮ್ಮ ಜೀವನವನ್ನು ತಾವೇ ಶಪಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಮನುಷ್ಯ ಜನ್ಮ ಎನ್ನುವುದು ಬಹಳ ದೊಡ್ಡದು. ನಿಮಗಿಂಥ ಕಷ್ಟ ಪಡುವವರನ್ನು ನೋಡಿ ನೀವೇ ಅದೃಷ್ಟವಂತರು ಎಂದು ಖುಷಿ ಪಡಬೇಕು. 

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು (PC: Unsplash)

Saturday Motivation: ಭೂಮಿಯಲ್ಲಿನ ಎಲ್ಲಾ ಜೀವಿಗಳಿಗೂ ಮನುಷ್ಯನ ಜನ್ಮ ಸಿಗುವುದಿಲ್ಲ. ಆದ್ದರಿಂದ ನಮಗೆ ದೊರೆತ ಈ ಜೀವನವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು. ನಿಮ್ಮನ್ನು ನೀವು ಪ್ರೀತಿಸಿಕೊಳ್ಳಬೇಕು. ನೀವು ನಿಮ್ಮನ್ನು ಪ್ರೀತಿಸಿದಷ್ಟು ಬೇರೆ ಯಾರೂ ಪ್ರೀತಿಸುವುದಿಲ್ಲ. ಜೀವನವನ್ನು ಪ್ರೀತಿಸುವ ವ್ಯಕ್ತಿ ಬಹಳ ಸಂತೋಷವಾಗಿರುತ್ತಾನೆ ಎಂದು ಅನೇಕ ಅಧ್ಯಯನಗಳಿಂದ ಕೂಡಾ ಸಾಬೀತಾಗಿದೆ.

ಆದರೆ ಕೆಲವರು ಮಾತ್ರ ತಮ್ಮ ಜೀವನವನ್ನು ಶಪಿಸಿಕೊಂಡೇ ಬದುಕುತ್ತಾರೆ. ನನ್ನದೂ ಒಂದು ಜೀವನವಾ? ಈ ರೀತಿ ಕಷ್ಟ ಪಡಲು ನಾನು ಹುಟ್ಟಬೇಕಾಯ್ತಾ? ಅವರೇ ವಾಸಿ, ದೇವರು ಎಲ್ಲವೂ ಕೊಟ್ಟಿದ್ಧಾನೆ, ಸುಖವಾಗಿ ಬದುಕುತ್ತಿದ್ಧಾರೆ, ಎಲ್ಲದಕ್ಕೂ ಕೇಳಿಕೊಂಡು ಬರಬೇಕು, ನನ್ನ ಜನ್ಮವಂತೂ ನರಕ ಎಂದು ಕೆಲವರು ತಮ್ಮ ಬದುಕನ್ನು ಶಪಿಸಿಕೊಂಡು ಗೋಳಾಡುತ್ತಾರೆ. ಆದರೆ ಒಂದು ಮಾತನ್ನು ನೆನಪಿಡಿ, ಹುಟ್ಟಿದ ಎಲ್ಲರಿಗೂ ಒಂದಲ್ಲಾ ಒಂದು ಕಷ್ಟ ಇದ್ದೇ ಇರುತ್ತದೆ. ಕೋಟಿ ಸಂಪಾದನೆ ಮಾಡುವವರಿಗೂ ಏನಾದರೊಂದು ಸಮಸ್ಯೆ ಇರುತ್ತದೆ. ಪ್ರತಿದಿನವೂ ಬದುಕನ್ನು ಶಪಿಸುತ್ತಿರುವವರು ಎಲ್ಲದರಲ್ಲೂ ಅತೃಪ್ತರಾಗುತ್ತಾರೆ. ಆದ್ದರಿಂದ ಮೊದಲು ಜೀವನವನ್ನು ಪ್ರೀತಿಸುವುದನ್ನು ಕಲಿಯಿರಿ. ನಿಮ್ಮ ಎಲ್ಲಾ ತೊಂದರೆಗಳು, ಕಣ್ಣೀರು ಮತ್ತು ಸಮಸ್ಯೆಗಳು ಮೋಡದಂತೆ ಕರಗಿ ಹೋಗುತ್ತದೆ.

ನಿಮಗೆ ಖುಷಿ ಎನಿಸಿದ್ದನ್ನು ಮಾಡಿ

ಪ್ರಪಂಚದಾದ್ಯಂತ ಅನೇಕ ಮಹಾನ್ ವ್ಯಕ್ತಿಗಳು ಮನುಷ್ಯನ ಜೀವನವನ್ನು ಸಂತೋಷಪಡಿಸಲು ಹಲವಾರು ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ವಿಚಾರದಲ್ಲಿ ಖುಷಿ ಸಿಗುತ್ತದೆ. ಕೆಲವರಿಗೆ ತಾವು ಇಷ್ಟಪಟ್ಟು ತಿನ್ನುವ ಆಹಾರದಲ್ಲಿ ಖುಷಿ ಸಿಗಬಹುದು, ಕೆಲವರಿಗೆ ತಾವು ಇಷ್ಟಪಟ್ಟ ಸ್ಥಳಕ್ಕೆ ಹೋಗಿ ಬರುವಲ್ಲಿ ಖುಷಿ ದೊರೆಯಬಹುದು. ಮತ್ತು ಜ್ಞಾನದ ವಿಷಯದಲ್ಲಿ, ಕೆಲವರಿಗೆ ಮತ್ತೊಬ್ಬರಿಗೆ ಸಹಾಯ ಮಾಡುವ ವಿಚಾರದಲ್ಲಿ ಖುಷಿ ಸಿಗುತ್ತದೆ. ಆದ್ದರಿಂದ ನಿಮಗೆ ಯಾವ ವಿಚಾರದಲ್ಲಿ ಸಂತೋಷ ಸಿಗುವುದೋ ಆ ವಿಚಾರದ ಬಗ್ಗೆ ನೀವು ಹೆಚ್ಚಿನ ಗಮನ ಹರಿಸಬಹುದು. ಹಾಗೂ ಅದನ್ನು ಮಾಡುತ್ತಲೇ ಖುಷಿ ಕಾಣಬಹುದು. ಜೀವನದಲ್ಲಿ ನಿಮಗೆ ಇಷ್ಟವಾದದ್ದನ್ನು ಮಾಡಿ. ನಿಮಗೆ ಇಷ್ಟವಿಲ್ಲದ್ದನ್ನು ತಕ್ಷಣ ತ್ಯಜಿಸಿ. ಅದನ್ನು ಬಿಟ್ಟು ಬದುಕನ್ನು ಶಪಿಸುತ್ತಾ ಕೂರಬೇಡಿ.

ಜೀವನವು ಅದ್ಭುತ ಕೊಡುಗೆಯಾಗಿದೆ. ನಿಮಗೆ ಮಾನವ ಜನ್ಮ ನೀಡಿದ ದೇವರಿಗೆ ನೀವು ಧನ್ಯವಾದ ಅರ್ಪಿಸಬೇಕು. ನೀವು ಇರುವೆ ಅಥವಾ ಹುಳುವಾಗಿ ಜನಿಸಿದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಜೀವನ ಬಹಳ ಚಿಕ್ಕದು, ಇಂದು ನಿಮ್ಮೊಂದಿಗೆ ಖುಷಿಯಾಗಿ ಮಾತನಾಡಿದ್ದ ಯಾರೋ ಒಬ್ಬರು ನಾಳೆ ಇಲ್ಲ ಎಂಬ ಸುದ್ದಿ ನಿಮಗೆ ತಿಳಿಯಬಹುದು. ನಿಮಗೆ ತಿಳಿದಿರುವ ಯಾರೋ ಒಬ್ಬರು ಯಾವುದೋ ಆರೋಗ್ಯ ಸಮಸ್ಯೆಯಿಂದ ಬದುಕುವುದೇ ಇನ್ನು 2-3 ತಿಂಗಳು ಎಂದು ವೈದ್ಯರು ಹೇಳಬಹುದು. ನಿಮಗೆ ಇರುವ ಬ್ಯಾಂಕ್‌ ಬ್ಯಾಲೆನ್ಸ್‌ ನಿಮ್ಮ ಪರಿಚಯದವರಿಗೆ ಇಲ್ಲದೆ ಇರಬಹುದು. ಇದರಲ್ಲೇ ಯೋಚಿಸಿ, ನೀವು ಅವರಿಗಿಂತ ಎಷ್ಟು ಅದೃಷ್ಟಶಾಲಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಇಂದು ಕೊನೆಯ ದಿನ ಎಂದುಕೊಂಡು ಸಂತೋಷದಿಂದ ಬದುಕಿ

ಇಂದೇ ನಮ್ಮ ಕೊನೆಯ ದಿನ, ಇಂದು ನಾವು ಸಂತೋಷವಾಗಿದ್ದುಬಿಡಬೇಕು, ಇತರರಿಗೂ ಸಂತೋಷ ಕೊಡಬೇಕು ಎಂದುಕೊಂಡು ಬದುಕಿ. ಆ ರೀತಿ ಇದ್ದರೆ ಮಾತ್ರ ನಿಮ್ಮ ಜೀವನದಲ್ಲಿ ನೀವು ಖುಷಿಯಿಂದ ಇರಲು ಸಾಧ್ಯ. ಸಂತೋಷದಿಂದ ಬದುಕಲು ಆರೋಗ್ಯವಾಗಿರಬೇಕು. ಮೊದಲು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಸುಖವಾಗಿ ಬಾಳುವ ಅಭ್ಯಾಸ ಮಾಡಿಕೊಳ್ಳಿ. ಒಮ್ಮೆ ಮಕ್ಕಳನ್ನು ನೋಡಿ, ಅವರಿಗೆ ಯಾವುದೇ ಕಷ್ಟ ಸುಖ ಗೊತ್ತಿರುವುದಿಲ್ಲ, ಎಷ್ಟು ಖುಷಿಯಾಗಿ ಆಡುತ್ತಾ ಬದುಕುತ್ತವೆ. ನೀವೂ ಮಕ್ಕಳಂತೆ ಬದುಕಿ, ಜೀವನವನ್ನು ಪೂರ್ಣವಾಗಿ ಆನಂದಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ