Sagara ಊರುಬದಿ: 50 ವರ್ಷಗಳೇ ಬೇಕಾಯಿತು ಸಾಗರದ ಇಕ್ಕೇರಿ ಅಘೋರೇಶ್ವರ ದೇಗುಲ ಕಟ್ಟಿಸಲು; ಇತಿಹಾಸ, ವೈಶಿಷ್ಟ್ಯ ತಿಳಿಯಿರಿ
Jun 24, 2023 07:00 PM IST
ಈ ವಾರದ ಊರುಬದಿ ಅಂಕಣದಲ್ಲಿ ಇಕ್ಕೇರಿ ಅಘೋರೇಶ್ವರ ದೇಗುಲ ದರ್ಶನ
- Urubadi -Sagara- Ikkeri Aghoreshwara temple : 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು-ಸಂಸ್ಕೃತಿ-ಪರಂಪರೆ ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಪ್ರಕಟವಾಗಲಿದೆ. ಈ ಬಾರಿ ಸಾಗರದ ಇಕ್ಕೇರಿ ಅಘೋರೇಶ್ವರ ದೇಗುಲದ ವೈಭವವನ್ನ ನಿಮಗೆ ಪರಿಚಯಿಸುತ್ತಿದ್ದೇನೆ.
ಇಕ್ಕೇರಿ, ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಇದು ಸಾಗರ ಪಟ್ಟಣದಿಂದ 4 ಕಿಲೋ ಮೀಟರ್ ದೂರದಲ್ಲಿದೆ. ಇಕ್ಕೇರಿಯು 16ನೇ ಶತಮಾನದಲ್ಲಿ ಅಂದಿನ ಅರಸರಾದ ಕೆಳದಿ ನಾಯಕರ ರಾಜವಂಶದ ರಾಜಧಾನಿಯಾಗಿತ್ತು. ಇಕ್ಕೇರಿಯ ಅಘೋರೇಶ್ವರ ದೇವಸ್ಥಾನವು ಮಲೆನಾಡಿನ ಸುಪ್ರಸಿದ್ಧ ಪುರಾತನ ದೇಗುಲಗಳಲ್ಲೊಂದು. ಇದು ಭಗವಾನ್ ಶಿವನ ದೇಗುಲ. ದೇವಸ್ಥಾನದ ಪ್ರತಿಯೊಂದು ಕಂಬಗಳು, ಗೋಡೆಗಳು, ಮೂಲೆ ಮೂಲೆಗಳು ಸಹ ಅಂದಿನ ಕಾಲದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುತ್ತವೆ. ಈ ದೇವಸ್ಥಾನದ ಆವರಣದಲ್ಲಿಯೇ ಅಘೋರೇಶ್ವರ ದೇಗುಲದ ಎದುರು ನಂದಿಕೇಶ್ವರನ ಗುಡಿ (ನಂದಿಮಂಟಪ) ಇದ್ದರೆ, ಪಶ್ಚಿಮಕ್ಕೆ ಅಖಿಲಾಂಡೇಶ್ವರಿ ಅಮ್ಮನವರ ದೇವಾಲಯವೂ ಇದೆ.
ಇಕ್ಕೇರಿ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು.
50 ವರ್ಷಗಳ ಕಾಲ ನಡೆಯಿತು ದೇಗುಲ ನಿರ್ಮಾಣ ಕಾರ್ಯ
ವಿಜಯನಗರ ಅರಸರ ಕಾಲದಲ್ಲಿ ಕೆಳದಿಯನ್ನು ರಾಜಧಾನಿಯನ್ನಾಗಿರಿಸಿಕೊಂಡು ಇಕ್ಕೇರಿಯು ಬಹುಶಕ್ತಿಶಾಲಿ ಸ್ವತಂತ್ರ ರಾಜ್ಯವಾಗಿ ಹೊರಹೊಮ್ಮಿತ್ತು. ಚೌಡಪ್ಪನಾಯಕ (ಕ್ರಿಸ್ತ ಶಕ 1499-1544)ನ ಕಾಲದಲ್ಲಿ ಇಕ್ಕೇರಿಯು ಕೆಳದಿ ಅರಸರ ರಾಜಧಾನಿಯಾಯಿತು. ಅಂದಿನಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿ ಇಕ್ಕೇರಿ ಮೆರೆಯಿತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ಕೆಳದಿ ಅರಸರು ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು.
ಕೆಳದಿ ಅರಸರಾದ ಸದಾಶಿವ ನಾಯಕನ ಕಾಲದಲ್ಲಿ ಆರಂಭವಾದ ಇಕ್ಕೇರಿ ಅಘೋರೇಶ್ವರ ದೇಗುಲದ ನಿರ್ಮಾಣ ಕಾರ್ಯ ವೆಂಕಟಪ್ಪ ನಾಯಕನ ಕಾಲದಲ್ಲಿ ಅಂತ್ಯಗೊಂಡಿದೆ. ಕ್ರಿ.ಶ 1547ರ ವೇಳೆಗೆ ದೇವಸ್ಥಾನದಲ್ಲಿ ಅಘೋರೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇವಸ್ಥಾನವನ್ನು ಹೊಂಬುಚದ ವೆಂಕಟಯ್ಯ ಎಂಬ ಶಿಲ್ಪಿ ಕಟ್ಟಿದನೆಂದು ದೇಗುಲದಲ್ಲಿನ ಕಲ್ಲಿನ ಮೇಲಿರುವ ಹಳೆಗನ್ನಡದ ಬರಹವೊಂದು ಹೇಳುತ್ತದೆ. ಈ ಶಿಲ್ಪಿಯ ನೇತೃತ್ವದಲ್ಲಿ ಸಾವಿರಾರು ಜನರು ಕೆಲಸ ಮಾಡಿ ಸೇರಿ ದೇಗುಲ ನಿರ್ಮಿಸಿದ್ದಾರೆ. ಸುಮಾರು 50 ವರ್ಷಗಳೇ ಬೇಕಾಯಿತು ಅಘೋರೇಶ್ವರ ದೇಗುಲ ಕಟ್ಟಿಸಲು ಎನ್ನುತ್ತಾರೆ ಅಘೋರೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಾಯ ಭಟ್ಟರು.
ಉಳಿದಂತೆ ಸುಬ್ರಾಯ ಭಟ್ಟರು ಹೇಳಿದ್ದಿಷ್ಟು - “ಇಕ್ಕೇರಿ ಇದು ಕೆಳದಿಯ ಎರಡನೇ ಸಂಸ್ಥಾನ. ಗರ್ಭಗುಡಿ ಒಳಗಡೆ ಶಕ್ತಿಪೀಠವಿದ್ದು, ಅದರಲ್ಲಿ 32 ಸ್ರ್ರೀಶಕ್ತಿ ವಿಗ್ರಹಗಳಿವೆ. ಅದರ ಮೇಲ್ಭಾಗದಲ್ಲಿ ಅಘೋರೇಶ್ವರ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ರು, 1547ರಲ್ಲಿ. ಈ ಪೀಠದ ಮೇಲ್ಭಾಗದಲ್ಲಿ ಸುಮಾರು ಆರುವರೆ ಅಡಿ ಎತ್ತರದ ಅಘೋರೇಶ್ವರ ಮೂರ್ತಿ ಇತ್ತು. ಒಂದೇ ಮುಖ 32 ಕೈಗಳಲ್ಲಿ 32 ಆಯುಧಗಳನ್ನು ಹಿಡಿದಿರುವ ಮೂರ್ತಿ. ಅದನ್ನ ಮೊಘಲರು ದಾಳಿ ನಡೆಸಿ ನಾಶಪಡಿಸಿದ್ದು, ಇದನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಗರ್ಭಗುಡಿ ಮುಂಭಾಗದಲ್ಲಿರುವ ನಂದಿ ವಿಗ್ರಹವನ್ನ ಆಗಮನ ಶಾಸ್ತ್ರದ ಪ್ರಕಾರ ಮಾಡಲಾಗಿದೆ. ದೇವಸ್ಥಾನದ ಒಳಗೆ ನವರಂಗ ಮಂಠಪವಿದ್ದು, ರಾಜರ ಕಾಲದಲ್ಲಿ ನೃತ್ಯ, ಸಂಗೀತ, ನಾಟ್ಯಗಳು ಸೇರಿದಂತೆ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿತ್ತು”.
“ಪೂರ್ತಿ ದೇವಸ್ಥಾನವನ್ನ ಗ್ರಾನೈಟ್ನಿಂದ ಕಟ್ಟಲಾಗಿದೆ. ಹೀಗಾಗಿ ದೇಗುಲದ ಮುಂಭಾಗದಲ್ಲಿ ನಂದಿ ಮಂಟಪವಿದೆ. ಈಶ್ವರ ಮತ್ತು ನಂದಿಯ ಮಧ್ಯದಲ್ಲಿ ದರ್ಶನವನ್ನ ಮಾಡಬಾರದು. ಹೀಗಾಗಿ ಗರ್ಭಗೃಹದ ಎದುರು ಮತ್ತೊಂದು ನಂದಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನ ಕಟ್ಟುವ ವೇಳೆ ಈ ಪ್ರದೇಶದಲ್ಲಿ ಒಟ್ಟು ನಾಲ್ಕು ಕೆರೆಗಳಿತ್ತು. ದೇಗುವ ಕಟ್ಟುವಾಗ ಫೌಂಡೇಶನ್ನಲ್ಲಿ ನೀರು ಬಂದಿತ್ತು. ಆಗ ಕೆರೆಯ ನೀರನ್ನು ಬತ್ತಿಸಿ, ಇಲ್ಲಿ ನೀರು ಕಡಿಮೆ ಮಾಡಿಕೊಂಡು ಫೌಂಡೇಶನ್ ಮಾಡ್ತಾರೆ. ಸುತ್ತಲೂ ಕೆರೆಗಳಿದ್ದ ಕಾರಣ ಇಕ್ಕೆರೆ ಎಂದು ಅದಕ್ಕೆ ಮುಂದೆ ಇಕ್ಕೇರಿ ಎಂಬ ಹೆಸರು ಬಂದಿತು. ಶಿವರಾತ್ರಿ ಬಳಿಕ ಬರುವ ನವಮಿ ಅಥವಾ ದಶಮಿಯಲ್ಲಿ ಪ್ರತಿವರ್ಷ ಇಕ್ಕೇರಿ ರಥೋತ್ಸವ ಮತ್ತು ಎರಡು ದಿನಗಳ ಜಾತ್ರೆ ನಡೆಯುತ್ತದೆ”.
“ಹೊಯ್ಸಳ, ಗ್ರೀಕ್, ಪರ್ಶಿಯನ್, ದ್ರಾವಿಡ ಸೇರಿದಂತೆ ಒಟ್ಟು ಐದು ಶೈಲಿಗಳಲ್ಲಿ ಅಘೋರೇಶ್ವರ ದೇಗುಲ ನಿರ್ಮಾಣ ಮಾಡಲಾಗಿದೆ. ಬಿಜಾಪುರ ಸುಲ್ತಾನರ ದಾಳಿಯಲ್ಲಿ ದೇಗುಲದ ಅನೇಕ ವಿಗ್ರಹಗಳು ನಾಶವಾದವು. ಈಗಲೂ ನಾಶವಾದ ವಿಗ್ರಹಗಳು ದೇಗುಲದ ಆವರಣದಲ್ಲಿದೆ. ನಂದಿ ಮಂಟಪದಲ್ಲಿರುವ ಬಸವಣ್ಱನ ವಿಗ್ರಹದ ಬಾಲದ ಭಾಗವೂ ಈ ವೇಳೆ ಧ್ವಂಸವಾಯಿತು. ಭಟ್ಕಳದ ಮಸೀದಿಯಲ್ಲಿ ನಮ್ಮ ದೇವಸ್ಥಾನದ ಬಂಗಾರದ ಕಳಸವಿದೆ”.
‘ಭಕ್ತಿ ಇದ್ದಲ್ಲಿ ಶಕ್ತಿ’
“ಕೊರೊನಾ ಸಮಯದಲ್ಲಿ ಒಬ್ಬ ವ್ಯಕ್ತಿಯ ಅಳಿಯ, ಮಗಳು ಬದುಕಲ್ಲ ಅಂತ ಡಾಕ್ಟರ್ ಹೇಳಿದ್ರು, ಆದರೆ ಅವರು ಇಲ್ಲಿ ಬಂದು ಪೂಜೆ ಮಾಡಿಸಿಕೊಂಡ ಹೋದ ಬಳಿಕ ಗುಣಮುಖರಾದರು. ಮದುವೆಯಾಗಿ ಸುಮಾರು 15 ವರ್ಷ ಆದ್ರೂ ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗಿದೆ. ಮದುವೆ ಆಗದೇ ಇದ್ದೋರು ಹರಕೆ ಮಾಡಿಕೊಂಡ ಬಳಿಕ ಅವರಿಗೆ ಮದುವೆ ಆಗಿದೆ. ಹೀಗೆ ಅಘೋರೇಶ್ವರನಲ್ಲಿ ಬೇಡಿಕೊಂಡು ಜನರ ಅನೇಕ ಸಮಸ್ಯೆಗಳು ಬಗೆಹರಿದಿರುವ ನಿದರ್ಶನಗಳಿವೆ. ನೂರಾರು ವರ್ಷಗಳ ಹಳೆಯ ದೇವಸ್ಥಾನವಾಗಿದ್ದರಿಂದ ಇಲ್ಲಿ ಶಕ್ತಿ ಇದ್ದೇ ಇರುತ್ತೆ. ಎಲ್ಲಕ್ಕಿಂತ ಹೊರತಾಗಿ ಭಕ್ತಿ ಇದ್ದಲ್ಲಿ ಶಕ್ತಿ ಇರತ್ತೆ. ಭಕ್ತಿಯಿಂದ ಬೇಡಿಕೊಂಡದ್ದು ಆಗತ್ತೆ. ಸುಮ್ಮನೇ ಚಾಲೆಂಜ್ಗೆ ಮಾಡ್ತಾ ಹೋದ್ರೆ ಯಾವುದೂ ಆಗಲ್ಲ” ಅಂತಾರೆ ಸುಬ್ರಾಯ ಭಟ್ಟರು.
ಅಘೋರೇಶ್ವರ ದೇವಾಲಯದ ವೈಶಿಷ್ಟ್ಯ
ಅಘೋರೇಶ್ವರ ದೇವಾಲಯವು 16ನೇ ಶತಮಾನದಲ್ಲಿನ ಕೆಳದಿ ನಾಯಕ ವಾಸ್ತುಶಿಲ್ಪ ಮೇರುಕೃತಿಯಾಗಿದ್ದು, ಕಣಶಿಲೆಶಿಲೆಯಲ್ಲಿ ದಕ್ಷಿಣಾಭಿಮುಖವಾಗಿ ಕಟ್ಟಲ್ಪಟ್ಟಿದೆ. ತಲವಿನ್ಯಾಸದಲ್ಲಿ ಗರ್ಭಗೃಹ, ಅರ್ಧಮಂಟಪ ಮತ್ತು ಹಿರಿದಾದ ಮುಖಮಂಟಪವನ್ನೊಳಗೊಂಡ ಈ ದೇಗುಲಕ್ಕೆ ತನ್ನದೇ ಆದ ನಂದಿ ಮಂಟಪವಿದೆ. ಗುಡಿಯ ಮುಂಭಾಗದ ನೆಲಹಾಸಿನ ಮೇಲೆ ಮೂವರು ಕೆಳದಿ ಅರಸರ ಚಿತ್ರಣವಿದೆ. ಗರ್ಭಗೃಹದಲ್ಲಿ ಒಂದು ದೊಡ್ಡ ವೇದಿಕೆಯಿದ್ದು, ಅದರ ಮುಕ್ಕಾಲು ಭಾಗದಲ್ಲಿ 32 ದೇವಿಯ ವಿಗ್ರಹಗಳಿವೆ. ಇವುಗಳನ್ನು ಶಕ್ತಿ ಪೀಠಗಳು ಎಂದೂ ಕರೆಯಲಾಗುತ್ತದೆ. ಹಾಗೆಯೇ 32 ಬಾಹುಗಳುಳ್ಳ ಲೋಹದ ಶಿವನ ಮೂರ್ತಿಯೂ ಇದೆ. ಸುಖನಾಸಿಯಲ್ಲಿ ಒಂದು ಚಿಕ್ಕ ಬಿಳಿ ಕಲ್ಲಿನ ಅಪಾರದರ್ಶಕ ನಂದಿ ವಿಗ್ರಹವಿದೆ. ಅರ್ಧಮಂಟಪ ಪ್ರವೇಶದ್ವಾರದ ಎರಡು ಬದಿಯಲ್ಲಿ ದೇವಕೋಷ್ಠಕಗಳಿದ್ದು, ಅವುಗಳಲ್ಲಿ ಬಲಬದಿಗೆ ಗಣೇಶ ಮತ್ತು ಕಾರ್ತಿಕೇಯ ವಿಗ್ರಹ ಹಾಗೂ ಎಡಬದಿಗೆ ಮಹಿಷಮರ್ಧಿನಿ ಮತ್ತು ಭೈರವಮೂರ್ತಿಗಳನ್ನು ಅಳವಡಿಸಲಾಗಿದೆ.
ಮುಂಭಾಗದಲ್ಲಿರುವ ಮುಖಮಂಟಪವು ಸುಂದರವಾರ ಕೆತ್ತನೆಯುಳ್ಳ ಸ್ತಂಭಗಳಿಂದ ಆಧರಿಸಲ್ಪಟ್ಟಿದೆ. ಗರ್ಭಗೃಹವು ದ್ರಾವಿಡಶೈಲಿಯ ಬೃಹತ್ತಾದ ಶಿಖರವನ್ನು ಹೊಂದಿದ್ದು, ಅದರ ಭಿತ್ತಿಯು ಗೂಢಸ್ತಂಭಗಳನ್ನಾಧರಿಸಿದ ಕೂಟಗಳಿಂದ ಅಲಂಕರಿಸಲ್ಪಟ್ಟಿದೆ. ಮುಖಮಂಟಪಕ್ಕೆ ಮೂರು ಕಟಾಂಜನ ಸಹಿತ ಪಾವಟಿಕೆಗಳ ಪ್ರವೇಶದ್ವಾರವಿದ್ದು, ಅದರಲ್ಲಿ ಉತ್ತರ ಭಾಗದ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಅಲಂಕೃತ ಆನೆಗಳಿವೆ. ಗೋಡೆಗಳಲ್ಲಿ ಸುಮಾರು 20 ಜಾಲಂದ್ರ ಕಿಟಕಿಗಳಿದ್ದು, ಅವುಗಳನ್ನು ಅಲಂಕೃತ ತೋರಣಗಳಿಂದ ಸಿಂಗರಿಸಲಾಗಿರುವುದರ ಜೊತೆಗೆ ಅನೇಕ ಶಿಲ್ಪಗಳನ್ನು ಕೆತ್ತಲಾಗಿದೆ. ನಂದಿಮಂಟಪದಲ್ಲಿ ಕುಳಿತ ಬೃಹತ್ ನಂದಿ ವಿಗ್ರಹವಿದ್ದು, ಅದಕ್ಕೆ ದಕ್ಷಿಣ ದಿಕ್ಕಿನಲ್ಲಿ ಯಾಳಿ ಕಟಾಂಜನಗಳ ಪಾವಟಿಗಳಿವೆ. ಈ ಮಂಟಪದಲ್ಲಿ ಸಿಂಹಾಧಾರಿತ ಸ್ತಂಭಗಳಿವೆ. ದೇವಾಲಯದ ಪಶ್ಚಿಮಕ್ಕೆ ಪಾರ್ವತಿ (ಅಖಿಲಾಂಡೇಶ್ವರಿ) ಗುಡಿಯಿದ್ದು, ಮೂಲ ಗುಡಿಯ ರೀತಿಯಲ್ಲಿಯೇ ಚಿಕ್ಕ ಅಳತೆಯಲ್ಲಿ ನಿರ್ಮಾಣಗೊಂಡಿದೆ.
ದೇಗುಲಕ್ಕೆ ಭೇಟಿ
ನೀವು ಇಕ್ಕೇರಿ ಅಘೋರೇಶ್ವರ ದೇವಾಲಯಕ್ಕೆ ಯಾವುದೇ ದಿನವಾದರೂ ಭೇಟಿ ನೀಡಬಹುದು. ಮಹಾಶಿವರಾತ್ರಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಿಂದ ಶಿವಮೊಗ್ಗ ಪ್ರವಾಸಕ್ಕೆಂದು ಬರುವ ಜನರು ಸಾಗರದ ಈ ದೇಗುಲಕ್ಕೆ ಭೇಟಿ ನೀಡದೆ ಹೋಗುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆಯವರಿಗೂ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ದೇವಾಲಯ ಮತ್ತು ಆವರಣದ ಒಳಗೆ ಫೋಟೋಗ್ರಫಿ ಅನುಮತಿಸಲಾಗಿದೆ. ದೇವಸ್ಥಾನವನ್ನು ಗ್ರಾನೈಟ್‌ನಲ್ಲಿ ನಿರ್ಮಿಸಲಾಗಿರುವುದರಿಂದ ದೇಗುಲದೊಳಗೆ ಸದಾ ತಂಪು ವಾತಾವರಣ ಇರುತ್ತದೆ.
ಸಂರಕ್ಷಿತ ಸ್ಮಾರಕ
ಪ್ರಾಚೀನ ಸ್ಮಾರಕ, ಪುರಾತತ್ವೀಯ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ, 1958 (1958 ರ 24) ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಯಾರಾದರೂ ಇದನ್ನು ನಾಶಮಾಡಿದರೆ, ಸ್ಥಳಾಂತರಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದರೆ, ವಿಕೃತಗೊಳಿಸಿದರೆ, ಗಂಡಾಂತರಗೊಳಿಸಿದರೆ ಅಥವಾ ದುರುಪಯೋಗಪಡಿಸಿದರೆ ಅಂಥವರನ್ನು ಮೂರು ತಿಂಗಳವರೆಗೆ ಹೆಚ್ಚಿಸಬಹುದಾದ ಕಾರಾಗೃಹವಾಸಕ್ಕೆ ಒಳಪಡಿಸಲಾಗುವುದು. ಅಥವಾ 5 ಸಾವಿರ ರೂಪಾಯಿಗಳವರೆಗೆ ಹೆಚ್ಚಿಸಬಹುದಾದ ದಂಡ ಅಥವಾ ಎರಡೂ ರೀತಿಯ ಶಿಕ್ಷೆಗೆ ಒಳಪಡಿಸಲಾಗುವುದು.
ನಿಷೇಧಿತ ಹಾಗೂ ನಿಯಂತ್ರಿತ ಪ್ರದೇಶ
ಪ್ರಾಚೀನ ಸ್ಮಾರಕ, ಪುರಾತತ್ವೀಯ ಸ್ಥಳ ಹಾಗೂ ಅವಶೇಷಗಳ ನಿಯಮಾವಳಿ 1959ರ 32 ನೇ ನಿಯಮದ ಪ್ರಕಾರ ಸಂರಕ್ಷಿತ ಸ್ಮಾರಕದ ಸಮೀಪವಿರುವ ಅಥವಾ ಅದಕ್ಕೆ ಹೊಂದಿಕೊಂಡಂತಿರುವ ಸಂರಕ್ಷಿತ ಪ್ರದೇಶದ ಗಡಿಯಿಂದ 100 ಮೀಟರ್ವರೆಗಿನ ಪ್ರದೇಶವನ್ನು ಮತ್ತು ಅದರಿಂದಾಚೆಗಿನ 200 ಮೀಟರ್ವರೆಗಿನ ಪ್ರದೇಶವನ್ನು ಗಣಿಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ನಿಷೇಧಿತ ಹಾಗೂ ಪ್ರದೇಶಗಳೆಂದು ಘೋಷಿಸಲಾಗಿದೆ.
-ಮೇಘನಾ ಬಿ. ಸಾಗರ
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.inಗೆ ಮೇಲ್ ಮಾಡಿ
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.