Snack Recipe For Kids: ಮಕ್ಕಳಿಗೆ ಇಡ್ಲಿ ಇಷ್ಟ ಅಲ್ವಾ, ಈ ಎಮೋಜಿ ಇಡ್ಲಿ ಮಾಡಿ ಕೊಟ್ಟು ಅವರ ಎಮೋಷನ್ ನೋಡಿ
Jul 24, 2023 08:00 AM IST
ಎಮೋಜಿ ಮತ್ತು ಎಮೋಜಿ ಇಡ್ಲಿ (ಸಾಂಕೇತಿಕ ಚಿತ್ರ)
Snack Recipe For Kids: ಇಡ್ಲಿಯು ಪೌಷ್ಟಿಕಾಂಶವುಳ್ಳ ಆಹಾರ. ಮಕ್ಕಳಿಗೇನು ಬಹುತೇಕರಿಗೆ ಅಚ್ಚುಮೆಚ್ಚಿನದ್ದು. ಇದು ಲಘು ಮತ್ತು ಆರೋಗ್ಯಕರ ಉಪಹಾರವಾಗಿದ್ದು, ಮಕ್ಕಳಿಗೂ ಇಷ್ಟವಾಗುವಂಥದ್ದು. ಸಹಜವಾಗಿಯೆ ಮಕ್ಕಳಿಗೆ ಚಿತ್ರವಿಚಿತ್ರ ತಿನಿಸುಗಳೆಂದರೆ ಆಕರ್ಷಣೆ. ಇಡ್ಲಿಯಲ್ಲೂ ಅಂತಹ ಆಕರ್ಷಣೆ ಹುಟ್ಟಿಸಬಹುದು. ಅದಕ್ಕಾಗಿಯೇ ಈ ಸಿಂಪಲ್ ಆಗಿರುವ ಎಮೋಜಿ ಇಡ್ಲಿ ರೆಸಿಪಿ.
ಇಡ್ಲಿ ಹೆಸರು ಕೇಳಿದರೆ ಸಾಕು ನಮ್ಮಲ್ಲಿ ಬಹುತೇಕರ ಕಣ್ಣು ಅರಳುತ್ತೆ, ಕಿವಿ ನೆಟ್ಟಗಾಗುತ್ತೆ. ಬಾಯಿ ಕೂಡ ಇಡ್ಲಿ ತಿನ್ನೋದಕ್ಕೆ ರೆಡಿಯಾಗಿಬಿಡುತ್ತೆ. ಹೌದು, ಇಡ್ಲಿ ದಕ್ಷಿಣ ಭಾರತದ ಜನಪ್ರಿಯ ಉಪಹಾರ. ಮಕ್ಕಳಿಗೂ ಇದು ಅಚ್ಚುಮೆಚ್ಚು. ಅವರಿಗೂ ಸೂಕ್ತವಾದ ಆರೋಗ್ಯಕರ, ಪೌಷ್ಟಿಕ ಮತ್ತು ಬಹುಮುಖ್ಯ ಭಕ್ಷ್ಯ. ಏಕೆಂದರೆ ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆ ಉಪಯೋಗಿ ಮಾಡುತ್ತಾರೆ. ಇದು ಶರೀರಕ್ಕೆ ಅಗತ್ಯ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ. ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಬೆಳೆಯುತ್ತಿರುವ ಮಕ್ಕಳಿಗೆ ಇದು ಅತ್ಯುತ್ತಮ ಪೌಷ್ಟಿಕಾಂಶದ ಆಹಾರ. ಇಡ್ಲಿ ತಯಾರಿಸಲು ಹಿಟ್ಟು ಮಾಡಿ ಹುದುಗುವಿಕೆಗೆ ಬಿಡುವ ಪ್ರಕ್ರಿಯೆಯು ಪಿಷ್ಟ ಮತ್ತು ಪ್ರೋಟೀನ್‌ಗಳನ್ನು ಒಡೆಯುವಂತೆ ಮಾಡುತ್ತದೆ. ಈ ರೀತಿ ಆಹಾರವು ಮಕ್ಕಳು ಜೀರ್ಣಿಸಿಕೊಳ್ಳುವುದು ಸುಲಭ.
ಮಕ್ಕಳ ಅಚ್ಚುಮೆಚ್ಚಿನ ಆಹಾರ ಇಡ್ಲಿ
ಇದು ಎಲ್ಲ ವಯಸ್ಸಿನವರ ಹೊಟ್ಟೆಗೆ ಹಿತವಾದ ಆಹಾರ. ವಿಶೇಷವಾಗಿ ಇದು ಸೂಕ್ಷ್ಮ ಜೀರ್ಣಕಾರಿ ವ್ಯವಸ್ಥೆಯನ್ನು ಹೊಂದಿರುವ ಮಕ್ಕಳ ಹೊಟ್ಟೆಗೂ ಸೂಕ್ತ. ಆಹಾರದ ಫೈಬರ್‌ನ ಉತ್ತಮ ಮೂಲ ಕೂಡ ಹೌದು. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಇಡ್ಲಿಯಲ್ಲಿರುವ ಫೈಬರ್ ಅಂಶವು ಮಕ್ಕಳಿಗೆ ಉತ್ತಮ ಕರುಳಿನ ಚಲನೆ ಮತ್ತು ಒಟ್ಟಾರೆ ಜೀರ್ಣಕಾರಿ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಸಂಯೋಜನೆಯು ನಿರಂತರ ಶಕ್ತಿಯನ್ನು ಒದಗಿಸುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಮಗುವಿನ ಜಗಿಯುವ ಸಾಮರ್ಥ್ಯವನ್ನು ಪರಿಗಣಿಸಿ ವಯಸ್ಸಿಗೆ ಸೂಕ್ತವಾದ ಗಾತ್ರ ಮತ್ತು ವಿನ್ಯಾಸದಲ್ಲಿ ಇಡ್ಲಿಯನ್ನು ಮಾಡಿ ಬಡಿಸಲು ಮರೆಯದಿರಿ ಮತ್ತು ಯಾವುದೇ ಸಂಭಾವ್ಯ ಅಲರ್ಜಿಗಳು ಅಥವಾ ಸೂಕ್ಷ್ಮತೆಗಳನ್ನು ಗಮನಿಸುತ್ತ. ಕ್ರಮೇಣ ಇಡ್ಲಿಯನ್ನು ಮಗುವಿಗೆ ಪರಿಚಯಿಸಿ. ನಿಮ್ಮ ಮಕ್ಕಳನ್ನು ಆರೋಗ್ಯಕರ ಆಹಾರದತ್ತ ಆಕರ್ಷಿಸುವ ಮಾರ್ಗಗಳನ್ನು ಅರಿಯದೇ ಕಂಗೆಟ್ಟಿದ್ದರೆ, ಷೆಫ್ ರಣವೀರ್ ಬ್ರಾರ್ ಅವರ ಈ ಎಮೋಜಿ ಇಡ್ಲಿಯ ಪಾಕವಿಧಾನ ಅಥವಾ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.
ಎಮೋಜಿ ಇಡ್ಲಿ ಮಾಡಲು ಬೇಕಾಗುವ ಇಂಗ್ರೀಡಿಯೆಂಟ್ಸ್
½ ಕಪ್ ಸ್ಟ್ರಾಬೆರಿ ಸುವಾಸನೆಯ ಸಿರಪ್
½ ಕಪ್ ಚಾಕೊಲೇಟ್ ರುಚಿಯ ಸಿರಪ್
1 ಬೌಲ್ ಸಿದ್ಧ ಇಡ್ಲಿ ಬ್ಯಾಟರ್
1 ಕಪ್ ಅಕ್ಕಿ ಹಿಟ್ಟು
1 ಚಮಚ ಎಣ್ಣೆ
½ ಕಪ್ ಬೀಟ್ರೂಟ್ ರಸ
ಅಗತ್ಯ ಸಲಕರಣೆಗಳು
ಇಡ್ಲಿ ಸ್ಟೀಮರ್
ಪೈಪಿಂಗ್ ಬ್ಯಾಗ್
ಎಮೋಜಿ ಇಡ್ಲಿ ಮಾಡುವ ವಿಧಾನ
ಬಹುಪಾಲು ಇಡ್ಲಿ ಹಿಟ್ಟನ್ನು ಪ್ರತ್ಯೇಕಿಸಿ ಮತ್ತು ಎರಡು ಬೇರೆ ಬೇರೆ ಪಾತ್ರೆಗಳಲ್ಲಿ ಬೇರ್ಪಡಿಸಿ ಇಡಿ. ಒಂದು ಪಾತ್ರೆಯಲ್ಲಿ, ಚಾಕೊಲೇಟ್ ರುಚಿಯ ಸಿರಪ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಪಾತ್ರೆಯಲ್ಲಿ, ಬೀಟ್ರೂಟ್ ರಸವನ್ನು ಸೇರಿಸಿ, ನಂತರ ಅಕ್ಕಿ ಹಿಟ್ಟು ಮತ್ತು ಸ್ಟ್ರಾಬೆರಿ ರುಚಿಯ ಸಿರಪ್ ಅನ್ನು ಸೇರಿಸಿ.
ಉಳಿದ ಸ್ವಲ್ಪ ಇಡ್ಲಿ ಹಿಟ್ಟನ್ನು ಎರಡು ಚಿಕ್ಕ ಬಟ್ಟಲುಗಳಲ್ಲಿ ಭಾಗಿಸಿ (ಇವುಗಳನ್ನು ಎಮೋಜಿ ಮುಖಗಳನ್ನು ಪೈಪ್ ಮಾಡಲು ಬಳಸಲಾಗುತ್ತದೆ). ಮತ್ತೆ, ಇವುಗಳಿಗೆ ಒಂದು ಬಟ್ಟಲಿನಲ್ಲಿ ಚಾಕೊಲೇಟ್ ಸುವಾಸನೆಯ ಸಿರಪ್ ಮತ್ತು ಇನ್ನೊಂದಕ್ಕೆ ಸ್ಟ್ರಾಬೆರಿ ರುಚಿಯ ಸಿರಪ್ ಸೇರಿಸಿ.
ಹಬೆಯಲ್ಲಿ ನೀರನ್ನು ಬಿಸಿ ಮಾಡಿ. ಇಡ್ಲಿ ಟ್ರೇಗಳಿಗೆ ಸ್ವಲ್ಪ ಎಣ್ಣೆ ಹಾಕಿ ಉಜ್ಜಿಬಿಡಿ. ಸಿದ್ಧಪಡಿಸಿದ ಸ್ಟ್ರಾಬೆರಿ ಮತ್ತು ಚಾಕೊಲೇಟ್ ಇಡ್ಲಿ ಹಿಟ್ಟನ್ನು ಆ ಟ್ರೇಗೆ ತುಂಬಿಸಿ. ಆ ಟ್ರೇಯನ್ನು ಸ್ಟೀಮರ್‌ನಲ್ಲಿ ಇರಿಸಿ. ಇಡ್ಲಿ ಶೇಕಡ 70ರಷ್ಟು ಬೆಂದಿದೆ ಎಂದೆನಿಸಿದಾಗ, ಅದರ ಮೇಲೆ ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡ ಚಾಕೊಲೇಟ್ ಸುವಾಸನೆಯ ಸಿರಪ್ ಮತ್ತು ಸ್ಟ್ರಾಬೆರಿ ಸಿರಪ್ ಸೇರಿಸಿದ ಇಡ್ಲಿ ಹಿಟ್ಟಿನ ಮಿಶ್ರಣವನ್ನು ಪೈಪ್ ಮಾಡುತ್ತ ಆ ಇಡ್ಲಿಗಳ ಮೇಲೆ ಎಮೋಜಿಗಳನ್ನು ಬಿಡಿಸಿ. ಮತ್ತೆ ಅದನ್ನು ಸ್ಟೀಮರ್‌ನಲ್ಲಿ ಒಂದರಿಂದ ಎರಡು ನಿಮಿಷ ಬೇಯಿಸಿ. ಬೆಂದಿದೆ ಎಂದು ಸ್ಪಷ್ಟವಾದ ಕೂಡಲೇ ಹೊರ ತೆಗೆದು, ಸ್ವಲ್ಪ ಆರುತ್ತಲೇ ಟ್ರೇಯಿಂದ ಅವುಗಳನ್ನು ಬಿಡಿಸಿ ಸರ್ವ್ ಮಾಡಿ.
ಆಹಾರಕ್ಕೆ ಸಂಬಂಧಿಸಿದ ರೆಸಿಪಿ, ಸ್ಟೋರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ವಿಭಾಗ