Egg Bonda: ಭಾನುವಾರ ಬಾಯಿ ಚಪ್ಪರಿಸಲು ರೆಡಿನಾ? ಹಾಗಿದ್ರೆ ಎಗ್ ಬೋಂಡಾ ಮಾಡಿ; ಊಟದ ಜೊತೆ ಸೈಡ್ಸ್, ಸಂಜೆ ಸ್ನಾಕ್ಸ್‌ಗಾದರೂ ತಿನ್ನಬಹುದು
Aug 06, 2023 08:00 AM IST
ಭಾನುವಾರದ ಸ್ಪೆಷಲ್ ಎಗ್ ಬೋಂಡಾ ರೆಸಿಪಿ
ಭಾನುವಾರ, ನಾನ್‌ವೆಜಿಟೆರಿಯನ್‌ಗಳಿಗೆ ಚಿಕನ್, ಮಟನ್ ಅಥವಾ ಸೀಫುಡ್ ಏನಾದರೂ ಇರಲೇಬೇಕು. ಕನಿಷ್ಠ ಪಕ್ಷ ಮೊಟ್ಟೆ ಆದರೂ ಇರಬೇಕು. ಇಲ್ಲದಿದ್ದರೆ ಅದು ಸಂಡೇ ಎನಿಸುವುದೇ ಇಲ್ಲ. ಎಗ್ ಬುರ್ಜಿ, ಆಮ್ಲೆಟ್, ಬೇಯಿಸಿದ ಮೊಟ್ಟೆ ಬದಲಿಗೆ ಈ ದಿನ ಎಗ್ ಬೋಂಡಾ ತಯಾರಿಸಿ. ಇದನ್ನು ನೀವು ಸ್ನಾಕ್ಸ್ ಆಗಿ ಆದರೂ ತಿನ್ನಬಹುದು. ಊಟಕ್ಕೆ ನಂಚಿಕೊಳ್ಳಲೂಬಹುದು.
ಎಗ್ ಬೋಂಡಾ ತಯಾರಿಸುವುದು ಕಷ್ಟದ ಮಾತೇನಲ್ಲ. ಬೇಯಿಸಿದ ಮೊಟ್ಟೆ ರೆಡಿ ಇದ್ದರೆ ಸಾಕು ಕೆಲವೇ ನಿಮಿಷದಲ್ಲಿ ರುಚಿಯಾದ ಮೊಟ್ಟೆ ಬೋಂಡಾ ತಯಾರಾಗುತ್ತದೆ. ಬನ್ನಿ ಎಗ್ ಬೋಂಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಎಗ್ ಬೋಂಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು - 10
ಕಡ್ಲೆಹಿಟ್ಟು - 2 ಕಪ್
ಅಕ್ಕಿಹಿಟ್ಟು - 1 ಸ್ಪೂನ್
ಅಚ್ಚ ಖಾರದ ಪುಡಿ - 1 ಸ್ಪೂನ್
ಅಜ್ವಾಯಿನ್ - 1/4 ಸ್ಪೂನ್
ಸೋಡಾ - ಚಿಟಿಕೆ
ಕೊತ್ತಂಬರಿ ಸೊಪ್ಪು - 1 ಕಟ್ಟು
ಈರುಳ್ಳಿ - 3
ಪೆಪ್ಪರ್ ಪೌಡರ್ - 1/4 ಚಿಟಿಕೆ
ನಿಂಬೆ ರಸ - 1 ಸ್ಪೂನ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ ತಕ್ಕಷ್ಟು
ಎಗ್ ಬೋಂಡಾ ತಯಾರಿಸುವ ವಿಧಾನ
ಬಾಣಲೆಗೆ ಒಂದೆರಡು ಸ್ಪೂನ್ ಎಣ್ಣೆ ಸೇರಿಸಿ, ಅದಕ್ಕೆ ಚಿಟಿಕೆ ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಸೇರಿಸಿ ಮೊಟ್ಟೆಯನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಂಡು ಪ್ಲೇಟ್‌ಗೆ ತೆಗೆದಿಡಿ
ಒಂದು ಬೌಲ್‌ನಲ್ಲಿ ಕಡ್ಲೆಹಿಟ್ಟು, ಚಿಲ್ಲಿ ಪೌಡರ್, ಅಜ್ವಾಯಿನ್, ಉಪ್ಪು, ಅಕ್ಕಿಹಿಟ್ಟು ಸೇರಿಸಿ
ಇದರೊಂದಿಗೆ ಚಿಟಿಕೆ ಸೋಡಾ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ
ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ
ಕಡ್ಲಹಿಟ್ಟಿನ ಮಿಶ್ರಣ ಬಹಳ ತೆಳ್ಳಗೂ ಇರಬಾರದು, ಗಟ್ಟಿಯೂ ಇರಬಾರದು
ಬೇಯಿಸಿದ ಮೊಟ್ಟೆಗಳನ್ನು ಸುತ್ತಲೂ ಚಾಕುವಿನ ಸಹಾಯದಿಂದ ಸ್ಪ್ಲಿಟ್ ಮಾಡಿ
ಸ್ಪ್ಲಿಟ್ ಮಾಡಿದ ಮೊಟ್ಟೆಗಳನ್ನು ಕಡ್ಲೆಹಿಟ್ಟಿನ ಮಿಶ್ರಣದೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಮ್ಯಾರಿನೇಟ್ ಆಗಲು 5 ನಿಮಿಷ ಬಿಡಿ
ನಂತರ ಒಂದು ಚಾಕುವಿನ ಸಹಾಯದಿಂದ ಮೊಟ್ಟೆಯನ್ನು ಚುಚ್ಚಿ ನಿಧಾನವಾಗಿ ಬಿಸಿ ಎಣ್ಣೆಯೊಳಗೆ ಬಿಟ್ಟು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.
ಒಂದು ಬೌಲ್‌ನಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಅಚ್ಚಖಾರದ ಪುಡಿ, ಪೆಪ್ಪರ್ ಪೌಡರ್, 1 ಸ್ಪೂನ್ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.
ಎಣ್ಣೆಯಲ್ಲಿ ಕರಿದ ಎಗ್ ಬೋಂಡಾವನ್ನು ಮಧ್ಯದಲ್ಲಿ ಸೀಳಿಕೊಂಡು ( ಎರಡು ಭಾಗ ಮಾಡಬೇಡಿ) ಈರುಳ್ಳಿ ಸ್ಟಫಿಂಗ್ ತುಂಬಿ.
ರುಚಿ ರುಚಿಯಾದ ಎಗ್ ಬೋಂಡಾ ತಿನ್ನಲು ರೆಡಿ
ಗಮನಿಸಿ: ಮೊಟ್ಟೆಯನ್ನು ಕಡ್ಲೆಹಿಟ್ಟಿಗೆ ಹಾಕುವ ಮುನ್ನ ಸ್ಪ್ಲಿಟ್ ಮಾಡಲು ಮರೆಯಬೇಡಿ. ಇಲ್ಲದಿದ್ದರೆ ಎಣ್ಣೆಗೆ ಹಾಕಿದಾಗ ಮೊಟ್ಟೆ ಸಿಡಿಯುತ್ತದೆ.
ವಿಭಾಗ