logo
ಕನ್ನಡ ಸುದ್ದಿ  /  ಮನರಂಜನೆ  /  ಅಯೋಧ್ಯೆ ರಾಮನ ಕುರಿತು ತಪ್ಪು ಮಾಹಿತಿ ನೀಡಿದ ಡಾ ಬ್ರೋ; ವಾಲ್ಮಿಕಿ ರಾಮಾಯಣ ಬದಲು ಗೂಗಲ್‌ ರಾಮಾಯಣದ ವಿವರ ನೀಡಿದ ಗಗನ್‌ ಶ್ರೀನಿವಾಸ್‌

ಅಯೋಧ್ಯೆ ರಾಮನ ಕುರಿತು ತಪ್ಪು ಮಾಹಿತಿ ನೀಡಿದ ಡಾ ಬ್ರೋ; ವಾಲ್ಮಿಕಿ ರಾಮಾಯಣ ಬದಲು ಗೂಗಲ್‌ ರಾಮಾಯಣದ ವಿವರ ನೀಡಿದ ಗಗನ್‌ ಶ್ರೀನಿವಾಸ್‌

HT Kannada Desk HT Kannada

Jan 17, 2024 09:39 PM IST

google News

ಅಯೋಧ್ಯೆ ರಾಮನ ಕುರಿತು ತಪ್ಪು ಮಾಹಿತಿ ನೀಡಿದ ಯೂಟ್ಯೂಬರ್‌ ಡಾ ಬ್ರೋ

    • ಕನ್ನಡದ ಜನಪ್ರಿಯ ಯೂಟ್ಯೂಬರ್‌ ಡಾ. ಬ್ರೊ ಅವರು ಇತ್ತೀಚೆಗೆ ಅಯೋಧ್ಯೆ ಕುರಿತು ಮಾಡಿರುವ ವಿಡಿಯೋ ಸಾಕಷ್ಟು ಜನಪ್ರಿಯತೆ ಪಡೆದಿದೆ. ಆದರೆ, ಆ ವಿಡಿಯೋದಲ್ಲಿ ರಾಮನ ರಾಜವಂಶದ ಕುರಿತು ಜೈನ ರಾಮಾಯಣದ ಆಧಾರದಲ್ಲಿ ನೀಡಿದ್ದಾರೆ. ವಾಲ್ಮಿಕಿ ರಾಮಾಯಣವೇ ನಮಗೆ ಮಹತ್ವದ್ದು ಎಂದು ಬರಹಗಾರ ಶ್ರೀನಿವಾಸ ಮಠ ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆ ರಾಮನ ಕುರಿತು ತಪ್ಪು ಮಾಹಿತಿ ನೀಡಿದ ಯೂಟ್ಯೂಬರ್‌ ಡಾ ಬ್ರೋ
ಅಯೋಧ್ಯೆ ರಾಮನ ಕುರಿತು ತಪ್ಪು ಮಾಹಿತಿ ನೀಡಿದ ಯೂಟ್ಯೂಬರ್‌ ಡಾ ಬ್ರೋ

ಯೂಟ್ಯೂಬರ್‌ ಡಾ. ಬ್ರೋ ಇತ್ತೀಚೆಗೆ ಅಯೋಧ್ಯೆಯ ಕುರಿತು ಯೂಟ್ಯೂಬ್‌ನಲ್ಲಿ ಬಹಳ ಸುಂದರ ದೃಶ್ಯಗಳು, ವಿವರಗಳನ್ನು ಒಳಗೊಂಡ ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ. ಈ ವಿಡಿಯೋ ಹಲವು ಲಕ್ಷ ವೀಕ್ಷಣೆ ಪಡೆದಿದೆ. ಇದೇ ವಿಡಿಯೋದಲ್ಲಿ ಒಂದು ಕಡೆ ಡಾ. ಬ್ರೋ ಅವರು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಆ ವಿಡಿಯೋದಲ್ಲಿ ರಾಮನ ರಾಜವಂಶದ ಕುರಿತು ಅವರು ನೀಡುವ ವಿವರಣೆ ಹೀಗಿದೆ. "ಶ್ರೀರಾಮ ಸೂರ್ಯವಂಶಕ್ಕೆ ಸೇರುತ್ತಾರೆ. ಇಕ್ಷ್ವಾಕು ರಾಜವಂಶದ 81ನೇ ಜನರೇಷನ್‌ನಲ್ಲಿ ಜನಿಸ್ತಾರೆ. ಇಕ್ಷ್ವಾಕು ರಾಜವಂಶದ ಸ್ಥಾಪಕ ರಿಷಬ್‌ದೇವು, ಇವರು ಜೈನಿಸಂನ ಮೊದಲ ತೀರ್ಥಂಕರರು. 81ನೇ ಜನರೇಷನ್‌ನಲ್ಲಿ ರಾಮ ಹುಟ್ಟುತ್ತಾರೆ. ಇದೇ ಇಕ್ಷ್ವಾಕು ರಾಜವಂಶದ 130ನೇ ಜನರೇಷನ್‌ನಲ್ಲಿ ಇನ್ನೊಬ್ಬ ಮಹಾತ್ಮ ಹುಟ್ಟುತ್ತಾರೆ. ಅವರೇ ಗೌತಮ ಬುದ್ಧ. ಏನು ಆಶ್ಚರ್ಯ ಅಲ್ವ. ಜೈನಿಸಂನ ಮೊದಲ ತೀರ್ಥಂಕರರಾದ ರಿಷಬ್‌ ದೇವು ಅವರು, ಶ್ರೀರಾಮ, ಗೌತಮ ಬುದ್ಧ, ಎಲ್ಲರೂ ಸಹ ಒಂದೇ ಇಕ್ಷ್ವಾಕು ವಂಶದಲ್ಲಿ ಜನಿಸುತ್ತಾರೆ" ಎಂದು ಅವರು ವಿವರಣೆ ನೀಡಿದ್ದರು.

ರಾಮಾಯಣದಲ್ಲಿ ಬೇಕಾದಷ್ಟು ಇವೆ. ಕಂಬನ್ ರಾಮಾಯಣ, ಜೈನ ರಾಮಾಯಣ ಹೀಗೆ ಅದೆಷ್ಟೋ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ರಾಮಾಯಣದ ಕಥೆ ಇದ್ದು, ಅದು ಸಹ ನಾನಾ ರೀತಿಯಲ್ಲಿ ಇವೆ. ಜೈನ ರಾಮಾಯಣದಲ್ಲಿ ರಾವಣನನ್ನು ಕೊಲ್ಲುವುದು ಲಕ್ಷ್ಮಣನೇ ಹೊರತು ರಾಮನಲ್ಲ. ಇನ್ನು ಅಲ್ಲಿ ಬರುವ ರಾಮ ಅಹಿಂಸಾವಾದಿ. ಆದರೆ ಹಿಂದೂಗಳು ಅನುಸರಿಸುವುದು ಹಾಗೂ ಬಲವಾಗಿ ನಂಬುವುದು ಮೂಲ ವಾಲ್ಮೀಕಿ ರಾಮಾಯಣವನ್ನು. ಅದರ ಪ್ರಕಾರ ರಾಮ ಸೂರ್ಯ ವಂಶದವನು. ಇನ್ನು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸತ್ಯಯುಗದ ವೈವಸ್ವತ ಮನುವಿನ ಸಂತತಿಯೇ ಇಡೀ ಮನುಕುಲದ ಮೂಲಪುರುಷನಾಗಿದ್ದು, ಹಾಗೆ ಸತ್ರಾಜಿತ ರಾಜನ ಮಗನಾದವನು ಇಕ್ಷ್ವಾಕು. ಮತ್ತು ಇದೇ ಸೂರ್ಯವಂಶದ ರಾಜನಾದ ದಶರಥನ ಪುತ್ರ ಶ್ರೀರಾಮ. ಆತ ತ್ರೇತಾ ಯುಗದ ಮಹಾಪುರುಷ. ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಎಲ್ಲಿಯೂ ವೃಷಭದೇವನ ಹೆಸರಾಗಲಿ, ಜೈನ ಮತ- ಪಂಗಡಗಳ ಯಾವುದೇ ವ್ಯಾಖ್ಯಾನವಾಗಲಿ ಈ ಗ್ರಂಥದಲ್ಲಿ ಉಲ್ಲೇಖ ಇಲ್ಲ. ರಾಮನ ವಂಶದ ಮೂಲ ಪುರುಷನ ಹೆಸರೇ ಇಕ್ಷ್ವಾಕು. ಆತನಿಂದ ಬಂದಿದ್ದೇ ಈ ಹೆಸರು.

ಈಗ ನೀವೇನಾದರೂ ಗೂಗಲ್ ನಲ್ಲಿ ಇಕ್ಷ್ವಾಕು ಅಂತ ಟೈಪ್ ಮಾಡಿದಲ್ಲಿ ಆಗ ರಿಷಭನಾಥ ಅಥವಾ ವೃಷಭನಾಥ ಎಂಬ ಹೆಸರು ಮೊದಲನೆಯದಾಗಿ ಬರುತ್ತದೆ. ನಾನು ಮೊದಲನೇ ಬಾರಿಗೆ ಅದನ್ನು ನೋಡಿದಾಗ ಆಶ್ಚರ್ಯ ಪಟ್ಟಿದ್ದೆ. ಆಮೇಲೆ ಸಾವರಿಸಿಕೊಂಡು ಯೋಚಿಸುವ ಹೊತ್ತಿಗೆ ವಿಕಿಪಿಡಿಯಾವನ್ನು ಅಧಿಕೃತ ಮಾಹಿತಿಯ ಮೂಲವನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ, ಮತ್ತು ಇದು ಆಯಾ ಧರ್ಮದ ನಂಬಿಕೆ ಎಂದೆನಿಸಿ ಸುಮ್ಮನಾದೆ. ಹಿಂದೂಗಳ ಆದರ್ಶನಾದ ರಾಮನಿಗೆ ವಾಲ್ಮೀಕಿ ರಾಮಾಯಣದಲ್ಲಿ ಬರುವ ವಿವರಣೆ ಏನಿದೆ ಅದನ್ನು ಕೇಳುತ್ತಾ, ಓದುತ್ತಾ ಹಾಗೂ ಇಂದಿಗೂ ನಾಟಕ- ಸಿನಿಮಾ, ತೊಗಲುಗೊಂಬೆಯಾಟ ಮೊದಲಾದ ರೂಪದಲ್ಲಿ ನೋಡುತ್ತಾ ಬರುತ್ತಿರುವವರು ನಾವು.

ನೀವು ಜೈನ ರಾಮಾಯಣದ ಬಗ್ಗೆ ಉಲ್ಲೇಖ ಮಾಡುತ್ತಾ, ಅದರ ಪ್ರಕಾರ ಹೀಗಿದೆ ಎಂದು ಹೇಳಿದಲ್ಲಿ ಅದಕ್ಕೆ ಯಾವ ಆಕ್ಷೇಪವೂ ಇಲ್ಲ. ಆದರೆ ನಮ್ಮ, ಅಂದರೆ ಹಿಂದೂಗಳ ನಂಬಿಕೆ ಅದಲ್ಲ. ಈಗ ಕಂಬನ್ ರಾಮಾಯಣದಲ್ಲಿ ಹೀಗೆ, ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಹೀಗಿದೆ ಎಂದು ರೆಫರೆನ್ಸ್ ಕೊಟ್ಟು ಹೇಳಬೇಕಾಗುತ್ತದೆ. ಆದರೆ ನಾವು ರಾಮಾಯಣವನ್ನು ಓದಿರುವುದು ವಾಲ್ಮೀಕಿ ಮಹರ್ಷಿ ರಚಿಸಿರುವಂಥದ್ದನ್ನು. ರಾಮ ಹುಟ್ಟಿದ್ದು ಪುತ್ರಕಾಮೇಷ್ಟಿ ಯಾಗ ಮಾಡಿದ ನಂತರದಲ್ಲಿ ಹಾಗೂ ಸ್ವತಃ ರಾಮ ಅಶ್ವಮೇಧ ಯಾಗ ಮಾಡಿದ್ದಾನೆ. ರಾಮಾಶ್ವಮೇಧ ಅಂತಲೇ ಕೆಲವು ಅದ್ಭುತ ಕಾವ್ಯಗಳ ರಚನೆ ಆಗಿದೆ. ರಾಮನನ್ನು ವಿಷ್ಣುವಿನ ಅವತಾರ ಅಂತ ನಾವು ನಂಬಿದ್ದೇವೆ. ಹೀಗೆ ಯಜ್ಞ- ಯಾಗವನ್ನು ಮಾಡುವ- ನಂಬುವ, ಪುನರ್ ಜನ್ಮವನ್ನು ನಂಬುವ ರಾಮನು ವಾಲ್ಮೀಕಿ ರಾಮಾಯಣದಲ್ಲಿ ಸಿಗುತ್ತಾನೆ. ಉಳಿದಂತೆ ಬೇರೆ ಧರ್ಮದಲ್ಲಿ ಇವುಗಳ ಮೇಲೆ, ಅಂದರೆ ಅವತಾರ, ಪುನರ್ಜನ್ಮ, ಯಜ್ಞ- ಯಾಗಾದಿಗಳಲ್ಲಿ ನಂಬಿಕೆ- ವಿಶ್ವಾಸ ಎಷ್ಟಿದೆ ಎಂಬುದನ್ನು ಕೇಳಿಕೊಂಡರೆ ಸಾಕು.

ಇವೆಲ್ಲಕ್ಕಿಂತ ಮುಖ್ಯವಾಗಿ, ವಾಲ್ಮೀಕಿ ಮಹರ್ಷಿಗಳು ರಾಮನ ಕಾಲದಲ್ಲಿ ಇದ್ದವರು. ಸೀತೆಗೆ ಲವ- ಕುಶರು ಹುಟ್ಟಿದ್ದು, ಅವರು ಬೆಳೆದಿದ್ದು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ. ಆದ್ದರಿಂದ ವಾಲ್ಮೀಕಿ ರಾಮಾಯಣದಲ್ಲಿ ಇರುವಂಥದ್ದೇ ನಮಗೆ ಪ್ರಮಾಣ.

ಬರಹ: ಶ್ರೀನಿವಾಸ ಮಠ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ