Chanakya Niti: ಮದುವೆಗೂ ಮುನ್ನ ಈ 4 ವಿಚಾರಗಳಲ್ಲಿ ಸ್ಪಷ್ಟನೆ ಇದ್ರೆ ಒಳ್ಳೆಯದು ಅಂತಾರೆ ಆಚಾರ್ಯ ಚಾಣಕ್ಯ
Jan 12, 2024 02:26 PM IST
ಚಾಣಕ್ಯ ನೀತಿ
- Chanakya Niti in Kannada: ಆಚಾರ್ಯ ಚಾಣಕ್ಯರು ಬೋಧಿಸಿದ ವಿಷಯಗಳು ಇಂದಿಗೂ ಅನ್ವಯಿಸುತ್ತವೆ. ಮದುವೆಗೂ ಮುನ್ನ ಕೆಲವು ವಿಚಾರಗಳ ಬಗ್ಗೆ ಯೋಚಿಸಿ ನಿರ್ಧರಿಸಬೇಕು ಎನ್ನುತ್ತಾರೆ ಚಾಣಕ್ಯ. ಅವು ಯಾವುದು ಎಂದು ನೋಡೋಣ..
ಸುಖ-ದುಃಖ, ನೋವು-ನಲಿವು, ಹಣ, ಆಸೆ, ಸೇರಿದಂತೆ ಜೀವನದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ತಮ್ಮ ನೀತಿಯಲ್ಲಿ ಹೇಳಿರುವ ಆಚಾರ್ಯ, ಜೀವನದ ಅತಿದೊಡ್ಡ ಹೆಜ್ಜೆಯಾದ ಮದುವೆ ಬಗ್ಗೆಯೂ ಸಲಹೆ ನೀಡಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ವಿವಾಹವು ಒಂದು ಪ್ರಮುಖ ಘಟನೆಯಾಗಿದೆ. ಅದು ಹುಡುಗಿಯಾಗಿರಲಿ ಅಥವಾ ಹುಡುಗನಾಗಿರಲಿ, ಅವರು ತಮ್ಮ ಜೀವನ ಸಂಗಾತಿಯ ಕೈಹಿಡಿದು, ಜೀವನ ಪರ್ಯಂತ ಅವರೊಂದಿಗೆ ಸುಖವಾಗಿರುವ ಕನಸು ಕಾಣುತ್ತಾರೆ.
ಆದರೆ ಹೆಚ್ಚಿನವರ ಜೀವನ ಮದುವೆಯ ಮೊದಲು ಮತ್ತು ಮದುವೆಯ ನಂತರ ಬದಲಾಗುತ್ತದೆ. ಸಂತೋಷ ಮತ್ತು ಸುಂದರ ಜೀವನದ ಕನಸು ಕಂಡಿದ್ದ ದಂಪತಿಗಳಿಗೆ ಸಣ್ಣ ಘಟನೆಗಳು ತೊಂದರೆ ನೀಡುತ್ತವೆ. ಆರಂಭದಲ್ಲಿನ ಸಣ್ಣ ಜಗಳಗಳು ದೊಡ್ಡದಾಗಿ ಬೆಳೆದು ಅವರು ಪ್ರತ್ಯೇಕಗೊಳ್ಳುವವರೆಗೆ ಹೋಗುತ್ತಾರೆ. ಆದುದರಿಂದಲೇ ಆಚಾರ್ಯ ಚಾಣಕ್ಯರು ಮದುವೆಯಾಗುವ ಮುನ್ನ ನಾಲ್ಕು ವಿಚಾರಗಳಲ್ಲಿ ಸ್ಪಷ್ಟನೆ ಇರಬೇಕು ಎಂದು ಹೇಳಿದ್ದಾರೆ. ಅವು ಹೀಗಿವೆ..
1) ಚಾಣಕ್ಯ ನೀತಿ ಪ್ರಕಾರ ಮದುವೆಯಾಗುವ ಮೊದಲು ಗುಣವನ್ನು ನೋಡಬೇಕೇ ಹೊರತು ಅಂದ-ಚಂದವನ್ನು ನೋಡಬಾರದು. ಸೌಂದರ್ಯ ನೋಡುವ ಬದಲು ಗುಣ ನೋಡಿದರೆ ಅವರು ಕುಟುಂಬವು ತೊಂದರೆಯಲ್ಲಿರುವಾಗ ಸಹಾಯಕ್ಕೆ ಬರುತ್ತಾರೆ, ಸಂಸಾರದಲ್ಲಿ ಹೊಂದಿಕೊಂಡು ಹೋಗುತ್ತಾರೆ. ಕೊನೆಯ ವರೆಗೂ ಸಂತೋಷವಾಗಿರುತ್ತಾರೆ.
2) ಕುಟುಂಬವನ್ನು ನಡೆಸುವವರಿಗೆ ಮೊದಲು ತಾಳ್ಮೆ ಇರಬೇಕು. ಹೀಗಾಗಿ ನೀವು ಮದುವೆಯಾಗುವವರಿಗೆ ತಾಳ್ಮೆ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಅವರು ಮಾತನಾಡುವ ರೀತಿ, ಕೆಲವು ವಿಷಯಗಳಿಗೆ ಪ್ರತಿಕ್ರಿಯಿಸುವ ರೀತಿ ಮತ್ತು ಅವರ ನಡವಳಿಕೆ ಗಮನಿಸಬೇಕು.
3) ನೀವು ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದೀರಿ ಎಂದ ಮಾತ್ರಕ್ಕೆ ನೀವು ಎಲ್ಲವನ್ನೂ ಅನುಸರಿಸುತ್ತೀರಿ ಎಂದು ಅರ್ಥವಲ್ಲ. ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಬೆಳೆದ ಕುಟುಂಬದ ವಾತಾವರಣವನ್ನು ಗಮನಿಸುವ ಜೊತೆಗೆ ಅವರು ವ್ಯಯಕ್ತಿಯವಾಗಿ ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾರೆಯೇ ಎಂಬುದನ್ನು ತಿಳಿಯಬೇಕು. ಹಾಗೆಯೇ ಅವರಿಗೆ ಹೇಗೆ ಬದುಕಲು ಇಷ್ಟ ಎಂಬುದನ್ನು ಅರಿಯಬೇಕು.
4) ಕೋಪ ಪ್ರತಿಯೊಬ್ಬರ ಮೊದಲ ಶತ್ರು. ಕ್ರೋಧವೇ ಶತ್ರು, ಶಾಂತತೆಯೇ ರಕ್ಷಣೆ ಎಂಬ ಮಾತಿದೆ. ಯಾವಾಗಲೂ ಸಣ್ಣ,ಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳುವ, ಸಿಡಿ ಸಿಡಿ ಮಾಡುವವರು ಸುಖ ಸಂಸಾರ ನಡೆಸಲಾರರು. ಹೀಗಾಗಿ ಕೋಪ ಕಡಿಮೆ ಇರುವ ಸಂಗಾತಿಯನ್ನು ಆರಿಸಿಕೊಳ್ಳಿ.