ಇದು ರಾಮ ಮಾರ್ಗ; ಭಾವನೆಗಳ ನಿರ್ವಹಣೆ, ಜೀವನ ಕೌಶಲ ಹೆಚ್ಚಿಸಿಕೊಳ್ಳಲು ಶ್ರೀರಾಮನ ಗುಣಗಳು ಅನುಕರಣೀಯ
Jan 22, 2024 02:48 PM IST
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ವಿಗ್ರಹ
ಶ್ರೀರಾಮಚಂದ್ರನ 5 ಗುಣಗಳನ್ನ ಕಲಿತರೆ ಮನುಷ್ಯನ ಜೀವನದ ಕೌಶಲ್ಯ, ಭಾವನೆಗಳ ನಿರ್ವಹಣೆ ಸುಲಭವಾಗುತ್ತದೆ. ಯಶಸ್ಸಿಗಾಗಿ ರಾಮನಲ್ಲಿದ್ದ ಆ 5 ಗುಣಗಳನ್ನು ತಿಳಿಯಿರಿ.
ಅಯೋಧ್ಯೆಯ ರಾಮಮಂದಿರಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಇಂದು (ಜನವರಿ 22, ಸೋಮವಾರ) ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗಿದೆ. ಅಭಿಜಿತ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು, ಇದೀಗ ರಾಮಮಂದಿರದಲ್ಲಿ ಬಾಲ ರಾಮ ವಿರಾಜಮಾನವಾಗಿದ್ದಾನೆ. ಈ ಇತಿಹಾಸಕ ಸಂದರ್ಭದಲ್ಲಿ ರಾಮನು ನಮಗೆಷ್ಟು ಮುಖ್ಯ ಎಂಬುದನ್ನು ತಿಳಿಯೋಣ. ರಾಮನ ಜೀವನದ ಪ್ರತಿ ಕ್ಷಣವೂ ಮನುಷ್ಯನ ಜೀವನಕ್ಕೆ ಸ್ಪೂರ್ತಿ ತುಂಬುತ್ತದೆ.
ಶ್ರೀರಾಮನ 5 ಗುಣಗಳನ್ನು ಅಳವಡಿಸಿಕೊಂಡರೆ ಭಾವನೆಗಳ ನಿರ್ವಹಣೆ ಮತ್ತು ಜೀವನ ಕೌಶಲ್ಯವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಬಹುದು. ಶ್ರೀರಾಮಚಂದ್ರನಲ್ಲಿದ್ದ ಆ ಐದು ಗುಣಗಳನ್ನು ಇಲ್ಲಿ ನೀಡಲಾಗಿದೆ.
ಮನಃಶಾಂತಿಯನ್ನು ಕಳೆದುಕೊಳ್ಳಬೇಡಿ
ರಾಮನು ದೇವರಾದರೂ ಭೂಮಿಯ ಮೇಲೆ ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಬದುಕಿನ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡಿದ್ದ. ಮನಸ್ಸಿನ ಶಾಂತಿಯನ್ನು ಎಂದಿಗೂ ಕಳೆದುಕೊಳ್ಳಬಾರದೆಂದು ರಾಮನ ಜೀವನವು ನಮಗೆ ಕಲಿಸುತ್ತದೆ. ಎಂತಹ ಕಷ್ಟದ ಸಂದರ್ಭ ಬಂದಾಗಲೂ ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಕೋಪವನ್ನು ನಿಯಂತ್ರಿಸಿ
ನಮ್ಮ ಇಷ್ಟದಂತೆ ಏನಾದರೂ ನಡೆಯದಿದ್ದರೆ ತಕ್ಷಣಕ್ಕೆ ಕೋಪ ಮಾಡಿಕೊಳ್ಳುತ್ತೇವೆ. ಆದರೆ ಕೋಪ ಎಲ್ಲಕ್ಕೂ ಪರಿಹಾರವಲ್ಲ, ಎಲ್ಲವನ್ನು ಸರಿ ಮಾಡುವುದಿಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಶ್ರೀರಾಮನ ಜೀವನದಿಂದ ಕಲಿಯಬೇಕಾದ ಪಾಠವೆಂದರೆ ಪ್ರತಿ ವ್ಯಕ್ತಿಯೂ ತನ್ನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು. ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿದಾಗ ಯಶಸ್ಸು ನಿಮ್ಮದಾಗುತ್ತದೆ.
ಗುರಿಯಿಂದ ಹಿಂದೆ ಸರಿಯಬೇಡಿ
ಜೀವನದ ಗುರಿಯಿಂದ ಎಂದಿಗೂ ಹಿಂದೆ ಸರಿಯಬಾರದೆಂದು ಶ್ರೀರಾಮನ ಜೀವನ ನಮಗೆ ಕಲಿಸುತ್ತದೆ. ಒಂದು ಮಾರ್ಗ ಮುಚ್ಚಿದರೆ ಇನ್ನೊಂದು ಮಾರ್ಗ ನಮಗಾಗಿ ತೆರೆಯುತ್ತದೆ. ಸಹಾಯಕ್ಕಾಗಿ ಯಾರನ್ನಾದರೂ ಕಳುಹಿಸುತ್ತಾನೆ ಎಂದು ರಾಮನ ಸಂಪೂರ್ಣ ಕಥೆಯಿಂದ ತಿಳಿಯುತ್ತೇವೆ. ಆದ್ದರಿಂದ ಜೀವನದಲ್ಲಿ ಗುರಿಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಖಂಡಿತವಾಗಿ ನೀವು ಸಾಧನೆಯನ್ನು ಮಾಡುತ್ತೀರಿ.
ಸರಿಯಾದ ದಾರಿಯಲ್ಲಿ ನಡೆಯಿರಿ
ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ನೀವು ಯಾವಾಗಲೂ ಸರಿಯಾದ ಮಾರ್ಗದಲ್ಲೇ ಸಾಗಬೇಕು. ಶ್ರೀರಾಮನ ಜೀವನಕ್ಕೆ ಸಂಬಂಧಿಸಿದಂತೆ ಈ ಗುಣವನ್ನು ನೀವು ಅಳವಡಿಸಿಕೊಂಡರೆ ಯಶಸ್ಸು ಪಡೆಯುವುದು ಸುಲಭವಾಗುತ್ತದೆ.
ಅನಾವಶ್ಯಕ ಮಾತು ನಿಲ್ಲಿಸಿ
ಅರ್ಥವಿಲ್ಲದ ನಿಮ್ಮ ಮಾತಿಗೆ ನೀವು ಅಂಟಿಕೊಳ್ಳಬೇಡಿ. ಅನಾವಶ್ಯಕ ಮಾತುಗಳಿಂದ ಸಮಯ ವ್ಯರ್ಥವಾಗುತ್ತದೆಯೇ ಹೊರತು ಅದರಿಂದ ಯಾವ ಲಾಭವಾಗುವುದಿಲ್ಲ. ಇದಕ್ಕೆ ಭಾರಿ ಬೆಲೆ ತೆರೆಬೇಕಾಗುತ್ತದೆ. ದಶರಥ ಮಹಾರಾಜನು ತನ್ನ ವಾಗ್ದಾನಗಳನ್ನು ಪೂರೈಸಲು ರಾಮನನ್ನು 14 ವರ್ಷಗಳ ಕಾಲ ವನವಾಸಕ್ಕೆ ಹೋಗಲು ಆದೇಶಿಸಿದ್ದನು.