Devanahalli: ದೇವನಹಳ್ಳಿ ಕೋಟೆಯೊಳಗಿನ ದೇಗುಲದ ಮಹಿಮೆ, ಮಾಡದ ಅಪರಾಧದಿಂದ ಕಾಪಾಡುವ ಶ್ರೀ ವೇಣುಗೋಪಾಲ ಸ್ವಾಮಿ
Jul 26, 2023 06:00 PM IST
Devanahalli: ದೇವನಹಳ್ಳಿ ಕೋಟೆ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ
- Devanahalli Temples: ಬೆಂಗಳೂರು ಸಮೀಪದ ದೇವನಹಳ್ಳಿಯು ದೇವರ ಊರು ಕೂಡ ಹೌದು. ಇಲ್ಲಿ ಅನೇಕ ಧಾರ್ಮಿಕ ಐತಿಹ್ಯಗಳು, ದೇಗುಲಗಳು ಇವೆ. ಇಲ್ಲಿನ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದ ಕುರಿತು ತಿಳಿದುಕೊಳ್ಳೋಣ ಬನ್ನಿ.
ಇಂದು ದೇವನ ಹಳ್ಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಆದರೆ ನಮಗೆ ಅರಿವಿಲ್ಲದಂತಹ ಅನೇಕ ರಹಸ್ಯದ ವಿಚಾರಗಳು ದೇವನ ಹಳ್ಳಿಯ ಗರ್ಭದಲ್ಲಿ ನೆಲೆಸಿದೆ. ಬೆಂಗಳೂರಿನ ಗ್ರಾಮಾಂತರದ ಪಟ್ಟಣ ದೇವನಹಳ್ಳಿ. ದೇವನಹಳ್ಳಿಯನ್ನು ದೇವನಪುರ ಎಂದು ಕರೆಯುತ್ತಾರೆ. ಊರಿನ ಹಿರಿಯರ ಪ್ರಕಾರ ಊರಿಗೆ ದೇವನ ದೊಡ್ಡಿ ಎಂಬ ಹೆಸರು ಸಹ ಬಹಳ ಹಿಂದೆ ಇತ್ತೆನ್ನಬಹುದು. ಅನೇಕ ಕಲಾವಿದರು, ಕವಿಗಳು ,ಲೇಖಕರು ಮುಂತಾದವರ ತವರೂರು ದೇವನಹಳ್ಳಿ .ಇದು ಬೆಂಗಳೂರಿನಿಂದ ಸುಮಾರು ಮೂವತ್ತೈದು ಕಿಲೋಮೀಟರ್ ದೂರದಲ್ಲಿದೆ.
ದೇವನಹಳ್ಳಿಯ ಕರಗ ಜಗತ್ಪ್ರಸಿದ್ಧಿ. ಈ ಊರಿನಲ್ಲಿ ಅನೇಕ ದೇವಾಲಯಗಳು ಇವೆ ಅದರಲ್ಲಿ ಮುಖ್ಯವಾದದ್ದು ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನ,ಮಾರಮ್ಮನ ದೇವಸ್ಥಾನ ಮತ್ತು ವೇಣುಗೋಪಾಲ ಸ್ವಾಮಿ ದೇವಸ್ಥಾನ. ಇದಲ್ಲದೆ ಧರ್ಮರಾಯನ ದೇವಸ್ಥಾನವು ಇದೆ.
ಮುಖ್ಯವಾಗಿ ಪಾಳೇಗಾರನೊಬ್ಬನು ನಿರ್ಮಿಸಿದ ಕೋಟೆ ಈ ಪಟ್ಟಣವನ್ನು ಸುತ್ತುವರೆದಿದೆ. ಕೋಟೆ ಕಟ್ಟಿರುವ ಮಾದರಿಯನ್ನು ನೋಡಿದರೆ ಇಂದಿಗೂ ಅಚ್ಚರಿಯಾಗುತ್ತದೆ. ಶ್ರೀ ವೇಣುಗೋಪಾಲಸ್ವಾಮಿ ದೇವಾಲಯವು ಶೈಲಿಯನ್ನು ಹೊಂದಿದೆ ಇದರ ಮೇಲೆ ವಿಜಯನಗರ ಸಾಮ್ರಾಜ್ಯದ ಪ್ರಭಾವವು ಸಾಕಷ್ಟಿವೆ. ಇಂದಿಗೂ ತೇಲಿನ ದಿನ ಹೈದರಾಲಿ ನೀಡಿರುವ ಒಡವೆಗಳಿಂದ ಜಯವನ್ನು ಸಿಂಗರಿಸುತ್ತಾರೆ.
ಒಮ್ಮೆ ವೇಣುಗೋಪಾಲಸ್ವಾಮಿ ದೇವರ ಪೂಜೆ ಮಾಡುವ ಅರ್ಚಕರ ಬಟ್ಟೆಯಲ್ಲಿ ಹೆಣ್ಣಿನ ಉದ್ದನಯ ಕೂದಲು ಸಿಗುತ್ತದೆ. ಆಗ ಪುರದ ಒಡೆಯರು ಅವರನ್ನು ಅನುಮಾನಿಸುತ್ತಾರೆ. ಅವರು ಇರುವ ವಿಚಾರವನ್ನೆಲ್ಲ ಹೇಳಿದರು ಯಾರೊಬ್ಬರೂ ನಂಬುವುದಿಲ್ಲ. ಆಗ ಅರ್ಚಕನು ನಾಲಿಗೆ ತಪ್ಪಿ ಈ ಕೂದಲು ಹೆಣ್ಣಿನ ಹೆಣ್ಣಿನದಲ್ಲ, ಈ ಕೂದಲು ದೇವರ ಮುಡಿಯದ್ದು ಹೇಳುತ್ತಾನೆ. ದೇವರಿಗೆ ಉದ್ದನೆಯ ಕೂದಲಿದೆ ಎಂಬ ಮಾತನ್ನು ಹೇಳುತ್ತಾನೆ. ಈ ವಿಚಾರವನ್ನು ಊರಿನ ಮುಖ್ಯಸ್ಥರು ಪರೀಕ್ಷೆ ಮಾಡಲೆಂದು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅರ್ಚಕರನ್ನು ಪರೀಕ್ಷಿಸಲು ಹೇಳಿದಾಗ ಗಾಬರಿಗೊಳ್ಳುತ್ತಾರೆ. ಆದರೆ ಆ ದೇವರ ಮೇಲೆ ನಂಬಿಕೆ ಇಟ್ಟು ಮುಡಿದರೆ ಕೈ ಹಾಕಿದಾಗ ಹೆಣ್ಣಿನ ತಲೆಯಲ್ಲಿ ಇರುವಂತೆ ಕೈಗೆ ಉದ್ದನಯ ಕೂದಲು ಕೈಗೆ ಸಿಗುತ್ತದೆ. ಅದನ್ನು ನೋಡಿದ ಪುರದ ಹಿರಿಯರು ಅರ್ಚಕರಲ್ಲಿ ಕ್ಷಮೆಯನ್ನು ಯಾಚಿಸಿ ಹೊರಟು ಹೋಗುತ್ತಾರೆ.
ಈ ಕಾರಣದಿಂದಾಗಿ ಇಂದಿಗೂ ಸಹ ಮಾಡದ ಅಪರಾಧಕ್ಕೆ ಕಷ್ಟ ಅನುಭವಿಸುತ್ತಿರುವವರು ಈ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಅಪರಾಧದಿಂದ ಮುಕ್ತರಾಗುತ್ತಾರೆ. ಇಂತಹ ಅನುಭವವು ಅನೇಕರಿಗೆ ಆಗಿದೆ. ತಿರುಪತಿಯಲ್ಲಿ ಪೂಜೆ ಸಲ್ಲಿಸುವವರ ಮನೆತನದವರು ಈ ದೇಗುಲದಲ್ಲಿ ಪೂಜೆಯನ್ನು ಮಾಡುತ್ತಾರೆ. ರಥೋತ್ಸವದ ವೇಳೆ ಜನರಿಗೆ ಅನ್ನದಾನ ಮಾಡಿದಲ್ಲಿ ಹಣದ ತೊಂದರೆ ದೂರಾಗುತ್ತದೆ. ಬುಧವಾರ ಮತ್ತು ಶನಿವಾರಗಳಂದು ವಿಶೇಷವಾದ ಪೂಜೆ ಸಲ್ಲಿಸಿದಲ್ಲಿ ಕಷ್ಟ ನಷ್ಟಗಳು ದೂರವಾಗುವುದೆಂಬ ಪ್ರತೀತಿಇದೆ.
ಕರಗದ ವೇಳೆ ರಥೋತ್ಸವದ ವೇಳೆ ಇಲ್ಲಿನ ಜನರ ಸಂತಸದ ಮತ್ತು ಇಡೀ ಪಟ್ಟಣವೇ ಅಲಂಕಾರದಿಂದ ಹೊಳೆಯುವುದನ್ನು ಕಣ್ತುಂಬಿಸಿಕೊಳ್ಳಬಹುದು. ಲಕ್ಷ ದೀಪೋತ್ಸವದ ವೇಳೆ ಇಡಿ ಪಟ್ಟಣದಲ್ಲಿ ಜನರು ದೀಪಗಳನ್ನು ಅಂಟಿಸಿ ಸಂಭ್ರಮವನ್ನು ಪಡುತ್ತಾರೆ. ಎಲ್ಲಾ ರೀತಿಯ ಜಾತಿಯವರು ಎಲ್ಲಾ ರಾಜಕೀಯ ಪಕ್ಷದವರು ಇಲ್ಲಿದ್ದರೂ ಸಹ ಒಗ್ಗಟ್ಟಿನಿಂದ ಪುರದ ಅಭಿವೃದ್ಧಿಗೆ ಶ್ರಮಿಸುವುದು ನಿಜಕ್ಕೂ ಸಂತಸದಾಯಕ. ಈ ದೇವಾಲಯದಲ್ಲಿ ಪೂಜೆಯನ್ನು ಮಾಡಿಸಿದಲ್ಲಿ ಅಥವಾ ವಿಶೇಷ ಸೇವೆಯನ್ನು ಮಾಡುತ್ತಿದ್ದಲ್ಲಿ ಕೌಟುಂಬಿಕ ಕಲಹಗಳು ಸಹ ಮರೆಯಾಗುತ್ತದೆ .ರಥೋತ್ಸವದ ಮಾರನೆಯ ದಿನ ಮರತೆ ಜನರು ಮರೆತೆ ಹೋಗಿರುವ ಪರಿಷೆ ನಡೆಯುತ್ತದೆ. ಆಗ ಬರುವ ಪಾನಕದ ಬಂಡಿಗಳು ನಿಜಕ್ಕೂ ಆನಂದವನ್ನು ಉಂಟುಮಾಡುತ್ತವೆ. ಒಟ್ಟಾರೆ ಕಣ್ಮರೆಯಾಗುತ್ತಿರುವ ಆಚಾರ ವಿಚಾರಗಳನ್ನು ಇಲ್ಲಿ ನಾವು ಕಾಣಬಹುದು.
- ಲೇಖನ: ಎಚ್. ಸತೀಶ್, ಜ್ಯೋತಿಷಿ