ವಿರಹವೇ ರಾಮಾಯಣದ ಸ್ಥಾಯಿ, ಅದಕ್ಕೆ ಅದು ಮಹಾಕಾವ್ಯ: ಪುರುಷೋತ್ತಮ ಬಿಳಿಮಲೆ ಬರಹ
Jan 21, 2024 11:45 AM IST
ಖ್ಯಾತ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ನಾಗಚಂದ್ರನ ಕನ್ನಡ ರಾಮಾಯಣದ ಸೊಗಸಿನ ಬಗ್ಗೆ ಬರೆದಿದ್ದಾರೆ.
ದಂಡಕಾರಣ್ಯದಲ್ಲಿ ಸೀತೆಯನ್ನು ಕಳಕೊಂಡ ರಾಮ ಆಕೆಯನ್ನು ಹುಡುಕುತ್ತಾ ಹೋಗಿ ಹಂಸ, ಚಿಗುರು, ತಾವರೆ, ದುಂಬಿಗಳನ್ನ ನೀವು ಸೀತೆಯನ್ನು ಕಂಡಿರೇ? ಎಂದು ಕೇಳುತ್ತಾ ಮುಂದುವರಿಯುತ್ತಾನೆ. ಪುರುಷೋತ್ತಮ ಬಿಳಿಮಲೆ ಅವರ ಬರಹ ಓದಿ.
ಕಂಡಿರೇ ಸೀತೆಯಂ?
ಕನ್ನಡಕ್ಕೆ ರಾಮಾಯಣವನ್ನು ಮೊದಲು ತಂದವರು ಜೈನ ಕವಿಗಳು. ಕ್ರಿಸ್ತಶಕ 1100ರ ಸುಮಾರಿನಲ್ಲಿ ಬಿಜಾಪುರ ಪರಿಸರದಲ್ಲಿ ಬದುಕಿದ್ದ ನಾಗಚಂದ್ರನು ಬರೆದ ‘ರಾಮಚಂದ್ರ ಚರಿತ ಪುರಾಣ’ ಕನ್ನಡದ ಸೊಗಸಾದ ಕಾವ್ಯಗಳಲ್ಲಿ ಒಂದು. ಇದು ಪಂಪ ರಾಮಾಯಣವೆಂದೇ ಪ್ರಸಿದ್ಧ. ವಿಮಲ ಸೂರಿ ಎಂಬ ಕವಿ ( 4ನೇಶತಮಾನ) ಪ್ರಾಕೃತದಲ್ಲಿ ಬರೆದ ಉಮಚರಿಯ ನಾಗಚಂದ್ರನ ಕಾವ್ಯಕ್ಕೆ ಮೂಲ. ಈ ಕಾವ್ಯದ ರಾವಣ ದುಷ್ಟನಲ್ಲ. ಆಕಾಶದಲ್ಲಿ ಹೋಗುವಾಗ, ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಸೀತೆಯ ಚೆಲುವಿಗೆ ಮರುಳಾಗಿ, ಅವಳ ಮೋಹದಿಂದ ಬಿಡುಗಡೆ ಪಡೆಯಲು ಪ್ರಯತ್ನಿಸಿದಷ್ಟೂ ಆಕೆಗೇ ಸೆರೆಯಾಗಿ ಕೊನೆಗೆ ದಾರುಣವಾಗಿ ಸತ್ತು ಹೋಗುತ್ತಾನೆ. ಅವನ ಬದುಕಿನ ದುರಂತ ಓಟವನ್ನು ಗ್ರಹಿಸಿದ ನಾಗಚಂದ್ರನು ‘ಅಬ್ದಿಯುಂ ಓರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ’ (ಕಡಲು ಕೂಡಾ ಒಮ್ಮೊಮ್ಮೆ ಕಾಲವಶದಿಂದ ತನ್ನ ಮೇರೆಯನ್ನು ದಾಟುವುದಿಲ್ಲವೇ?) ಎಂದು ಉದ್ಗರಿಸುತ್ತಾನೆ.
ನಾಗಚಂದ್ರ ರಾಮಾಯಣದ ಸೊಗಸನ್ನು ಅರಿಯಲು ಈ ಕೆಳಗಿನ ಪ್ರಸಿದ್ಧ ಪದ್ಯವನ್ನು ಓದಬೇಕು. ದಂಡಕಾರಣ್ಯದಲ್ಲಿ ಸೀತೆಯನ್ನು ಕಳಕೊಂಡ ರಾಮ ಆಕೆಯನ್ನು ಹುಡುಕುತ್ತಾ ಹೋಗುವಾದ ಅರಣ್ಯದಲ್ಲಿ ಕಂಡ ಹಂಸ, ಚಿಗುರು, ತಾವರೆ, ದುಂಬಿ, ನೈದಿಲೆ, ಕೋಗಿಲೆ, ಮೊದಲಾದುವುಗಳನ್ನು ʼ ನೀವು ಸೀತೆಯನ್ನು ಕಂಡಿರೇ?ʼ ಎಂದು ಹುಚ್ಚನಂತೆ ಕೇಳುತ್ತಾ ಮುಂದರಿಯುತ್ತಾನೆ-
ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯ ನಿಶ್ವಾಸೆಯಂ
ತಳಿರೇ ತಾವರೆಯೈ ಮದಾಳಿಕುಲಮೇ ಕರ್ನೆಯ್ದಿಲೇ ಮತ್ತ ಕೋ
ಕಿಳಮೇ ಕಂಡಿರೆ ಪಲ್ಲವಿಧರೆಯನಂಭೋಜಾಸ್ಯೆಯಂ ಭೃಂಗ ಕುಂ
ತಳೆಯಂ ಕೈರವನೇತ್ರೆಯಂ ಪಿಕರವಪ್ರಖ್ಯಾತೆಯಂ ಸೀತೆಯಂ
(ಕಲಕಲ ನಿನಾದವ ಮಾಡುತ್ತಾ ಸಾಗುವ ರಾಜಹಂಸದ ಗಂಭೀರ ನಡಿಗೆಯಳನ್ನು, ಕಸ್ತೂರಿಯ ಸುವಾಸನೆಯ ಮೊಗದ ಉಸಿರಿನವಳನ್ನು, ಚಿಗುರುಗಳೇ, ತಾವರೆಯೇ ಮದಭರಿತ ದುಂಬಿಗಳೇ, ಕನ್ನೈದಿಲೆಯೇ, ಅಮಲೇರಿದ ಕೋಗಿಲೆಯೇ, ನೀವು ಕಂಡಿರೇ, ಚಿಗುರು ತುಟಿಯವಳನ್ನು, ತಾವರೆ ಮೊಗದವಳನ್ನು, ದುಂಬಿಯಂತಹ ಮುಂಗುರುಳಿನವಳನ್ನು, ತಾವರೆ ಕಣ್ಣವಳನ್ನು, ಕೋಗಿಲೆಯ ಕಂಠಸಿರಿಯವಳನ್ನು, ನನ್ನ ಸೀತೆಯನ್ನು).
ರಾಜಸ್ಥಾನದಲ್ಲಿ 1680ರ ಸುಮಾರಿಗೆ ಬರೆದ ಈ ಕೆಳಗಿನ ಚಿತ್ರವು ಕರ್ನಾಟಕದ ನಾಗಚಂದ್ರನ ಪದ್ಯಕ್ಕೆ ಮಾಡಿದ ವ್ಯಾಖ್ಯಾನದಂತಿದೆ. ಚಿತ್ರದಲ್ಲಿ ರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕುತ್ತಾ ಗಿಡ ಮರಗಳ ನಡುವೆ ನಡಯುತ್ತಿದ್ದಾರೆ. ಹಂಸಗಳು ದಡದಲ್ಲಿ ನಿಂತ ಕೆರೆಯಲ್ಲಿ ದಣಿವಾರಿಸಲು ಯೋಚಿಸುತ್ತಾರೆ, ಮುಂದುವರಿದು, ಗುಹೆಯೆದುರು ನಿಂತು, ಎಲ್ಲಿ ನನ್ನ ಸೀತೆ ಎಂದು ಅನಂತವಾದ ಆಕಾಶದೆಡೆಗೆ ಮುಖ ಮಾಡಿದ್ದಾರೆ.
ಕ್ರೌಂಚ ಪಕ್ಷಿಗಳು ಪರಸ್ಪರ ಪ್ರೇಮಿಸುತ್ತಿದ್ದಾಗ ಬೇಡನೊಬ್ಬ ಗಂಡು ಹಕ್ಕಿಯನ್ನು ಕೊಂದದ್ದನ್ನು ನೋಡಿ ದಿಗ್ಭ್ರಮೆಗೆ ಒಳಗಾದ ವಾಲ್ಮೀಕಿಯು
ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ
ಯತ್‌ಕ್ರೌಂಚಮಿಥುನಾದೇಕಮವಧೀ ಕಾಮಮೋಹಿತಮ್
ಎಂದು ಉದ್ಘರಿಸಿದ್ದೇ ರಾಮಾಯಣದ ಆದಿ ತಾನೇ?
ವಿರಹ ಅದರ ಸ್ಥಾಯಿ
ಅದಕ್ಕೆ ಅದು ಮಹಾಕಾವ್ಯ!
ವಾಲ್ಮೀಕಿ ಎಂಥ ಪ್ರತಿಭಾವಂತ ಆಗಿದ್ದನೆಂದರೆ ‘ಆತ ರಾಮಾಯಣ ಬರೆಯುವಾಗ ಪಾಣಿನಿಯ ವ್ಯಾಕರಣ ನಿಯಮಗಳನ್ನು ಮೀರುತ್ತಿದ್ದ’ ಎಂದು ಪಿ ವಿ ಕಾಣೆಯವರು ಹೇಳಿದ್ದಾರೆ. ಮುಖ್ಯವಾಗಿ ರಾಮಾಯಣ ಒಂದು ಕಾವ್ಯವಾಗಿರುವುದರಿಂದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಅದರ ಹೆಸರು ಹೆಚ್ಚು ಸಲ ಕಾಣಿಸಿಕೊಂಡಿಲ್ಲ. ಪವಿತ್ರವಾದ ಧಾರ್ಮಿಕ ಭಾಷೆಯೊಳಗೆ ಅದು ಬಂಧಿಯಾಗಲೂ ಇಲ್ಲ. ರಾಮನ ಬಗ್ಗೆ ಯಾರೂ ದೊಡ್ಡ ದೊಡ್ಡ ದೇವಸ್ಥಾನಗಳನ್ನೂ ಕಟ್ಟಲಿಲ್ಲ. ಹಾಗಾಗಿ ಸಾಮಾನ್ಯ ಜನರು, ಕವಿಗಳು, ಪಂಡಿತರು, ಹರಿದಾಸರು, ಯಕ್ಷಗಾನದವರು, ಗಮಕಿಗಳು ಆ ಕಾವ್ಯವನ್ನು ತಮಗೆ ಬೇಕಾದಂತೆ ಬರೆದುಕೊಂಡರು, ಹಾಡಿಕೊಂಡರು.
ಮುಘಲ್ ಅರಸ ಅಕ್ಬರನ ಇಷ್ಟದ ಕಾವ್ಯಗಳಲ್ಲಿ ರಾಮಾಯಣವೂ ಒಂದು. ಆತ ಅದನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಲು ಕ್ರಮ ಕೈಗೊಂಡ. ದೇವ ಮಿಶ್ರಾ ಎಂಬ ಸ್ಥಳೀಯ ಪಂಡಿತನು ಸಂಸ್ಕೃತ ಪಠ್ಯವನ್ನು ಓದಲು ಸಹಕರಿಸಿದ್ದ. 1588ರಲ್ಲಿ ಅನುವಾದ ಪೂರ್ಣಗೊಂಡು ಮಧ್ಯಪ್ರಾಚ್ಯ ದೇಶಗಳ ಬೇರೆ ಬೇರೆ ಅರಸರುಗಳ ಆಸ್ಥಾನಗಳಲ್ಲಿ ಪ್ರಸಿದ್ಧಿ ಪಡೆಯಿತು. 1593ರಲ್ಲಿ ಅಕ್ಬರನ ತಾಯಿ ಹಮೀದಾ ಬಾನು ಅದನ್ನು ಪ್ರತಿ ಮಾಡಿಸಿದಳು. ಅನೇಕ ಕಲಾವಿದರು ಆ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ರಾಮಾಯಣದ ಅನೇಕ ಘಟನೆಗಳಿಗೆ ಸುಂದರವಾದ ಒಟ್ಟು 176 ವರ್ಣ ಚಿತ್ರಗಳನ್ನು ಬರೆದರು. ಈ ಚಿತ್ರಗಳು ಇವತ್ತು ರಾಮಾಯಣ ಪರಂಪರೆಯ ಅಮೂಲ್ಯ ಸೊತ್ತುಗಳಾಗಿದ್ದು ಹೆಚ್ಚಿನವುಗಳು ನ್ಯೂಯೋರ್ಕಿನ ಮೆಟ್ರೋಪಾಲಿಟನ್ ಮ್ಯೂಸಿಯಂನಲ್ಲಿ ಸುರಕ್ಷಿತವಾಗುಳಿದಿವೆ. ಒಂದಷ್ಟನ್ನು ಜೈಪುರದ ಸವಾಯಿ ಮಾನ್ ಸಿಂಗ್ ಅರಮನೆಯಲ್ಲೂ ನೋಡಬಹುದು. 24 ಮಿನಿಯೇಚರ್ ಚಿತ್ರಗಳಿರುವ 1605ರ ಅಪೂರ್ಣ ಪ್ರತಿಯೊಂದು ದೆಹಲಿಯ ನ್ಯಾಶನಲ್ ಮ್ಯೂಸಿಯಂನಲ್ಲಿ ಸುರಕ್ಷಿತವಾಗಿದೆ.
ಅಕ್ಬರನ ಈ ಅನುವಾದ ಕೆಲಸ ಅರಮನೆಯಲ್ಲಿ ಸಾಗುತ್ತಿರುವಾಗ ತುಳಸೀದಾಸನು ಸಾಮಾನ್ಯ ಜನಗಳಿಗಾಗಿ ಅವಧಿ ಭಾಷೆಯಲ್ಲಿ ರಾಮಚರಿತ ಮಾನಸ ಬರೆದದ್ದು ರಾಮಾಯಣದ ಇನ್ನೊಂದು ವಿಶೇಷ. (ಚಿತ್ರಗಳಿಗೆ ಕ್ಲಿಕ್ ಮಾಡಿದರೆ ಅದರ ವಿವರ ಸಿಗುತ್ತದೆ) (ಬರಹ: ಪುರುಷೋತ್ತಮ ಬಿಳಿಮಲೆ)
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in