logo
ಕನ್ನಡ ಸುದ್ದಿ  /  ಜೀವನಶೈಲಿ  /  Temples In India: ಆಶ್ಚರ್ಯ ಎನಿಸಿದ್ರೂ ಇದು ಸತ್ಯ; ಭಾರತದ ಈ 6 ದೇವಸ್ಥಾನಗಳಿಗೆ ಪುರುಷರಿಗೆ ಪ್ರವೇಶವಿಲ್ಲ

Temples In India: ಆಶ್ಚರ್ಯ ಎನಿಸಿದ್ರೂ ಇದು ಸತ್ಯ; ಭಾರತದ ಈ 6 ದೇವಸ್ಥಾನಗಳಿಗೆ ಪುರುಷರಿಗೆ ಪ್ರವೇಶವಿಲ್ಲ

HT Kannada Desk HT Kannada

Jan 09, 2024 05:45 AM IST

google News

ಸಾಂದರ್ಭಿಕ ಚಿತ್ರ.

    • Temples In India: ದೇವಸ್ಥಾನವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಪ್ರವೇಶಾವಕಾಶ ಇರುತ್ತದೆ. ಆದರೆ ಕೆಲವು ದೇವಾಲಯಗಳಲ್ಲಿ ಹಾಗಿಲ್ಲ, ಭಾರತದಲ್ಲಿನ ಈ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಇದನ್ನು ಕೇಳಿ ಆಶ್ಚರ್ಯವಾಗುವುದಂತೂ ಖಂಡಿತ. ಹಾಗಾದ್ರೆ ಆ ದೇವಾಲಯಗಳು ಎಲ್ಲಿವೆ? ವಿವರ ಇಲ್ಲಿದೆ. 
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ. (HT File Photo)

ಭಾರತದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲದ ದೇವಾಲಯಗಳ ಬಗ್ಗೆ ನಾವು ಕೇಳಿದ್ದೇವೆ. ಹಲವು ಕಾರಣಗಳಿಂದ ಇಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದರಲ್ಲಿ ಕೇರಳದ ಪ್ರಸಿದ್ಧ ಶಬರಿಮಲೆ ಕೂಡ ಒಂದು. ಈ ಹಿಂದೆ ಸುಪ್ರೀಂ ಕೋರ್ಟ್ ಶಬರಿಮಲೆ ದೇಗುಲದೊಳಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೀರ್ಪು ನೀಡಿತ್ತು. ದೇವಸ್ಥಾನದಲ್ಲಿ ಎಲ್ಲರೂ ಸಮಾನರು, ಗಂಡು ಹೆಣ್ಣು ಎಂಬ ಭೇದವಿಲ್ಲ ಎಂಬ ವಾದಗಳು ಆಗಾಗ ಕೇಳಿ ಬರುತ್ತದೆ. ಅದೇನೆ ಇದ್ದರೂ ಈಗಲೂ ಕೆಲವು ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ ಭಾರತದಲ್ಲಿ ಪುರುಷರಿಗೂ ಪ್ರವೇಶಾವಕಾಶ ಇಲ್ಲದ ದೇವಸ್ಥಾನಗಳಿವೆ. ಹಾಗಾದ್ರೆ ಆ ದೇವಸ್ಥಾನಗಳು ಯಾವವು ಮತ್ತು ಎಲ್ಲಿವೆ? ಅಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ? ಮಾಹಿತಿ ತಿಳಿಯಲು ಈ ಪೂರ್ತಿ ಲೇಖನ ಓದಿ.

1. ಅಟ್ಟುಕಲ್ ಭಗವತಿ ದೇವಸ್ಥಾನ, ಕೇರಳ

ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಕಲ್ ಭಗವತಿ ದೇವಸ್ಥಾನವು ಅಟ್ಟುಕಲ್ ಪೊಂಗಲ್ ಹಬ್ಬಕ್ಕೆ ಪ್ರಸಿದ್ಧವಾಗಿದೆ. ಈ ಹಬ್ಬದ ಸಂದರ್ಭದಲ್ಲಿ, ಲಕ್ಷಾಂತರ ಮಹಿಳೆಯರು ಈ ದೇವಾಲಯಕ್ಕೆ ಭಗವತಿ ದೇವಿಗೆ ಕಾಣಿಕೆಗಳನ್ನು ಅರ್ಪಿಸಲು ಬರುತ್ತಾರೆ. ದೇವಿಯ ಆರಾಧನೆಯಿಂದ ಐಶ್ವರ್ಯ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಈ ಹಬ್ಬದಲ್ಲಿ ಪುರುಷರು ದೇವಾಲಯದ ಆವರಣಕ್ಕೆ ಪ್ರವೇಶಿಸುವಂತಿಲ್ಲ. ಈ ಪವಿತ್ರ ಆಚರಣೆಯಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಾರೆ.

2. ಚಕ್ಕುಲತುಕಾವು ದೇವಸ್ಥಾನ, ಕೇರಳ

ಚಕ್ಕುಲತುಕಾವು ದೇವಾಲಯವೂ ಕೇರಳದಲ್ಲಿದೆ. ದುರ್ಗಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ನಾರಿ ಪೂಜೆ ವಿಶೇಷ ಕಾರ್ಯಕ್ರಮ. ಹೆಣ್ಣನ್ನು ಪೂಜಿಸುವುದು ಎಂದರ್ಥ. ವಾರ್ಷಿಕ ನಾರಿ ಪೂಜೆ ಉತ್ಸವದಲ್ಲಿ ಪುರುಷರು ದೇವಾಲಯದ ಪ್ರದೇಶವನ್ನು ಪ್ರವೇಶಿಸುವುದಿಲ್ಲ. ಇದು ಮಹಿಳೆಯರಿಗೆ ಮಾತ್ರ. ಭಾರತದಾದ್ಯಂತ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಇಲ್ಲಿ ಪೂಜೆ ಮಾಡುವುದರಿಂದ ಅದೃಷ್ಟ ಮತ್ತು ಆರೋಗ್ಯ ಬರುತ್ತದೆ ಎಂಬ ನಂಬಿಕೆಯಿದೆ.

3. ಕಾಮಾಕ್ಯ ದೇವಾಲಯ, ಅಸ್ಸಾಂ

ಭಾರತದ ಅತ್ಯಂತ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಕಾಮಾಖ್ಯ ದೇವಾಲಯವು ಒಂದಾಗಿದೆ. ವಿಷ್ಣುವಿನ ಸುದರ್ಶನ ಚಕ್ರದ ಮೇಲೆ ತನ್ನ ದೇಹದ ಭಾಗ ಬಿದ್ದಾಗ ಶಿವನ ಪತ್ನಿ ಸತಿ ಇಲ್ಲಿ ಬಿದ್ದಳು ಎಂದು ಹೇಳಲಾಗುತ್ತದೆ. ಈ ದೇವಾಲಯವು ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟದಲ್ಲಿದೆ. ಋತುಮತಿಯಾಗುವ ಮಹಿಳೆಯರು ಕೂಡ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಪ್ರತಿ ವರ್ಷ ಅಂಬುಬಾಚಿ ಮೇಳದ ಸಮಯದಲ್ಲಿ ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಪುರುಷರಿಗೆ ಪ್ರವೇಶವಿಲ್ಲ.

4. ಕುಮಾರಿ ಅಮ್ಮನ್ ದೇವಸ್ಥಾನ, ತಮಿಳುನಾಡು

ತಮಿಳುನಾಡಿನ ಕನ್ಯಾಕುಮಾರಿ ದೇವಾಲಯವು ಪಾರ್ವತಿ ದೇವಿಯ ಅವತಾರವಾದ ಕನ್ಯಾಕುಮಾರಿ ದೇವಿಗೆ ಸಮರ್ಪಿತವಾಗಿದೆ. ಕುಮಾರಿ ಅಮ್ಮನ್‌ ನೆಲೆಸಿರುವ ಗರ್ಭಗುಡಿಗೆ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರು ಮಾತ್ರ ಅಲ್ಲಿ ದೇವಿಯನ್ನು ನೇರವಾಗಿ ಪೂಜಿಸುತ್ತಾರೆ. ಸನ್ಯಾಸಿಗಳು ದೇವಸ್ಥಾನದ ದ್ವಾರದವರೆಗೆ ಬಂದು ದರ್ಶನ ಮಾಡಬಹುದು. ವಿವಾಹಿತ ಪುರುಷರು ದೇವಾಲಯದ ಸಂಪ್ರದಾಯಗಳನ್ನು ವೀಕ್ಷಿಸಬಹುದು ಮತ್ತು ದೂರದಿಂದ ಪೂಜೆ ಮಾಡಬಹುದು.

5. ಬ್ರಹ್ಮ ದೇವಾಲಯ, ರಾಜಾಸ್ಥಾನ

ರಾಜಸ್ಥಾನದ ಪುಷ್ಕರ್‌ನಲ್ಲಿ ಬ್ರಹ್ಮ ದೇವಾಲಯವಿದೆ. ಪುರಾಣದ ಪ್ರಕಾರ ವಿವಾಹಿತ ಪುರುಷರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದು ಬ್ರಹ್ಮದೇವನ ಏಕೈಕ ದೇವಾಲಯವಾಗಿದೆ. ಬ್ರಹ್ಮದೇವನ ಪತ್ನಿ ಸರಸ್ವತಿ ಯಜ್ಞಕ್ಕೆ ತಡವಾಗಿ ಬರುತ್ತಾಳೆ. ಯಜ್ಞವನ್ನು ಪೂರ್ಣಗೊಳಿಸಲು ಬ್ರಹ್ಮ ಗಾಯತ್ರಿಯನ್ನು ಮದುವೆಯಾಗುತ್ತಾನೆ. ಸರಸ್ವತಿ ದೇವಿಯು ಕೋಪಗೊಂಡು ವಿವಾಹಿತ ಪುರುಷರನ್ನು ಇಲ್ಲಿಗೆ ಪ್ರವೇಶಿಸದಂತೆ ಶಾಪ ನೀಡಿದಳು ಎಂಬ ಐತಿಹ್ಯವಿದೆ. ವಿವಾಹಿತ ಪುರುಷರು ಗರ್ಭಗುಡಿ ಪ್ರವೇಶಿಸಿದರೆ ಅವರ ದಾಂಪತ್ಯ ಜೀವನಕ್ಕೆ ತೊಂದರೆಯಾಗುತ್ತದೆ ಎಂಬ ನಂಬಿಕೆ ಇದೆ.

6. ಸಂತೋಷಿ ಮಾತಾ ದೇವಾಲಯ, ರಾಜಾಸ್ಥಾನ

ರಾಜಸ್ಥಾನದ ಜೋಧಪುರದಲ್ಲಿರುವ ಸಂತೋಷಿ ಮಾತಾ ದೇವಾಲಯದೊಳಗೆ ಪುರುಷರಿಗೆ ಪ್ರವೇಶವಿಲ್ಲ. ಇದು ಸಂತೋಷಿ ದೇವಿಗೆ ಅರ್ಪಿತವಾದ ದೇವಾಲಯವಾಗಿದೆ. ಇದು ಭಕ್ತರ ಜೀವನದಲ್ಲಿ ತೃಪ್ತಿ ತರುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಶುಕ್ರವಾರವನ್ನು ಸಂತೋಷಿಮಾತಾ ದಿನ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ಈ ದೇವಾಲಯದ ಶಕ್ತಿಯು ಶುಕ್ರವಾರ ಹೆಚ್ಚಾಗುತ್ತದೆ. ದೂರದ ಊರುಗಳಿಂದ ಮಹಿಳೆಯರು ಸುಖ-ಶಾಂತಿ ಅರಸಿ ಇಲ್ಲಿಗೆ ಬರುತ್ತಾರೆ. ಈ ದೇವಾಲಯದ ಗರ್ಭಗುಡಿಯೊಳಗೆ ಪುರುಷರಿಗೆ ಪ್ರವೇಶವಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ