Success Story: ದೃಷ್ಟಿ ವಿಶೇಷ ಚೇತನ ವ್ಯಕ್ತಿ ಕ್ಯಾಂಡಲ್ ಕಂಪನಿ ಕಟ್ಟಿದ ಕಥನ, ಆನಂದ್ ಮಹೀಂದ್ರ ಹಂಚಿಕೊಂಡ ಸ್ಪೂರ್ತಿದಾಯಕ ಸತ್ಯಕತೆ
Jan 09, 2024 07:33 PM IST
Success Story: ದೃಷ್ಟಿ ವಿಶೇಷ ಚೇತನ ವ್ಯಕ್ತಿ ಕ್ಯಾಂಡಲ್ ಕಂಪನಿ ಕಟ್ಟಿದ ಕತೆ
Bhavesh Bhatia Sunrise Candles: ಆನಂದ್ ಮಹೀಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಸ್ಪೂರ್ತಿದಾಯಕ ವಿಷಯಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಇವರು ಭಾವೇಶ್ ಭಾಟಿಯಾ ಎಂಬ ದೃಷ್ಟಿ ವಿಶೇಷ ಚೇತನ ವ್ಯಕ್ತಿಯು ಉದ್ಯಮಿಯಾದ ಕತೆ ವಿಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರು: ಮಹೀಂದ್ರ ಗ್ರೂಪ್‌ನ ಆನಂದ್ ಮಹೀಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಏನಾದರೂ ವಿಶೇಷವಾದ ಮಾಹಿತಿ, ಸ್ಪೂರ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಭಾವೇಶ್ ಭಾಟಿಯ ಎಂಬ ದೃಷ್ಟಿ ವಿಶೇಷ ಚೇತನ ವ್ಯಕ್ತಿ ಸನ್‌ರೈಸ್ ಕ್ಯಾಂಡಲ್ಸ್ ಎಂಬ ಉದ್ದಿಮೆ ಕಟ್ಟಿದ ಕಥನವನ್ನು ಹಂಚಿಕೊಂಡಿದ್ದಾರೆ. ಕಳೆದ 28 ವರ್ಷಗಳಲ್ಲಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಈ ಕ್ಯಾಂಡಲ್ ಕಂಪನಿಯಲ್ಲಿ ಈಗ 9000ಕ್ಕೂ ಹೆಚ್ಚು ದೃಷ್ಟಿ ವಿಶೇಷ ಚೇತನರು ಕೆಲಸ ಮಾಡುತ್ತಿದ್ದಾರೆ.
ಆನಂದ್ ಮಹೀಂದ್ರ ಹಂಚಿಕೊಂಡಿರುವ ವಿಡಿಯೋವನ್ನು ರಾಜೀವ್ ತಲ್‌ರೇಜಾ ಅವರು ಎಂಬ ಬಿಸ್ನೆಸ್ ಕೋಚ್ ಶೂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಲ್‌ರೇಜಾ ಅವರು ಭಾಟಿಯಾ ಅವರ ಸಕ್ಸಸ್ ಸ್ಟೋರಿಯನ್ನು ವಿವರಿಸಿದ್ದಾರೆ. "ನೀವು ಜಗತ್ತನ್ನು ನೋಡಲಾಗುತ್ತಿಲ್ಲವೇ, ಜಗತ್ತೇ ನಿಮ್ಮನ್ನು ನೋಡುವಂತಹ ಕೆಲಸ ಮಾಡಿ" ಎಂದು ಆನಂದ್ ಮಹೀಂದ್ರ ಅವರು ಟ್ವಿಟ್ಟರ್/ಎಕ್ಸ್‌ನಲ್ಲಿ ಕ್ಯಾಪ್ಷನ್ ಬರೆದಿದ್ದಾರೆ. ನೀವು ಜಗತ್ತನ್ನು ನೋಡಲಾಗುತ್ತಿಲ್ಲವೇ, ಜಗತ್ತೇ ನಿಮ್ಮನ್ನು ನೋಡುವಂತಹ ಕೆಲಸ ಮಾಡಿ ಎನ್ನುವುದು ನನಗೆ ಅತ್ಯಂತ ಸ್ಪೂರ್ತಿದಾಯಕವಾದ ಸಂದೇಶವಾಗಿದೆ. ಈ ವಿಡಿಯೋವನ್ನು ನೋಡುವ ತನಕ ನನಗೆ ಭಾವೇಶ್ ಬಗ್ಗೆ ತಿಳಿದಿರಲಿಲ್ಲ. ಅವರ ಸ್ಟಾರ್ಟ್‌ಅಪ್ ಉದ್ಯಮ ಶೀಲರಿಗೆ ಸ್ಪೂರ್ತಿ ನೀಡುವಂತದ್ದು" ಎಂದು ಆನಂದ್ ಮಹೀಂದ್ರ ಬರೆದಿದ್ದಾರೆ.
ಅಂದಹಾಗೆ ಕನ್ನಡಲ್ಲಿಯೂ ಭಾವೇಶ್ ಭಾಟಿಯಾ ಯಶೋಗಾಥೆ ಕುರಿತು ಪುಸ್ತಕ ಬಂದಿದೆ. ನೇಮಿಚಂದ್ರ ಅವರು ಭಾವೇಶ್ ಭಾಟಿಯಾ- ಅಂಧ ಉದ್ಯೋಗ ಜನಕನ ಸಾಹಸಗಾಥೆ ಎಂಬ ಪುಸ್ತಕ ಬರೆದಿದ್ದಾರೆ. ಇದು ರುಖ್ ಜನಾ ನಹಿ ಪುಸ್ತಕದ ಕನ್ನಡ ಅವತರಣಿಕೆ.
ಭವೀಶ್ ಭಾಟಿಯಾ ಅವರ ವಿಡಿಯೋ ವೀಕ್ಷಿಸಿ
ಭಾವೇಶ್ ಭಾಟಿಯಾ ಅವರ ಯಶಸ್ಸಿನ ಕತೆ
ಭಾವೇಶ್ ಚಾಂದುಭಾಯಿ ಭಾಟಿಯಾ (Bhavesh Chandubhai Bhatia) ಅವರು 1970ರ ಡಿಸೆಂಬರ್ 29ರಂದು ಮಹತಾಷ್ಟ್ರದ ಮಹಬಲೇಶ್ವರ ಎಂಬಲ್ಲಿ ಜನಿಸಿದರು. ಇವರು ಈಗ ಡಾ. ಭಾವೇಶ್ ಭಾಟಿಯಾ ಎಂದೇ ಜನಪ್ರಿಯತೆ ಪಡೆದಿದ್ದಾರೆ. ದೃಷ್ಟಿ ವಿಶೇಷ ಚೇತನರಾದ ಇವರು ಸನ್‌ರೈಸ್ ಕ್ಯಾಂಡಲ್ಸ್ ಎಮಬ ಕಂಪನಿಯನ್ನು ಸ್ಥಾಪಕರು. ಸಾವಿರಾರು ದೃಷ್ಟಿ ವಿಶೇಷ ಚೇತನರಿಗೆ ಉದ್ಯೋಗ ನೀಡಿದ್ದಾರೆ.
ಭಾವೇಶ್ ಹುಟ್ಟಿದಾಗ ರೆಟಿನಾ ಮಕ್ಯೂಲರ್ ಡಿಜೆನೆರೇಷನ್ ಎಂಬ ಕಣ್ಣಿನ ತೊಂದರೆಯನ್ನು ಅನುಭವಿಸುತ್ತಿದ್ದರು. ಆರಂಭದಲ್ಲಿ ಅವರಿಗೆ ತುಸು ದೃಷ್ಟಿಯಿತ್ತು. ಬಳಿಕ ಅವರು ಸಂಪೂರ್ಣವಾಗಿ ಅಂಧರಾದರು. ಇವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡರು. ತಾಯಿಗೆ ಕ್ಯಾನ್ಸರ್ ಇತ್ತು. ತಂದೆಯ ಪಾಲನೆಯಲ್ಲಿ ಬೆಳೆದ ಇವರು ಸನ್‌ರೈಸ್ ಕ್ಯಾಂಡಲ್ಸ್ ಕಂಪನಿಯನ್ನು ಆರಂಭಿಸುವ ಮೊದಲು ಹೋಟೆಲ್‌ನಲ್ಲಿ ಟೆಲಿಫೋನ್ ಆಪರೇಟರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ತನ್ನ 23ನೇ ವಯಸ್ಸಿನಲ್ಲಿ ಈ ಉದ್ಯೋಗವನ್ನೂ ಕಳೆದುಕೊಂಡರು.
ಕ್ಯಾಂಡಲ್ ಕಂಪನಿ ಆರಂಭದ ಸಂಕಷ್ಟ
ಡಾ. ಭಾವೇಶ್ ಭಾಟಿಯಾ ಅವರು ದೃಷ್ಟಿ ವಿಶೇಷ ಚೇತನರ ರಾಷ್ಟ್ರೀಯ ಸಂಸ್ಥೆ ಎನ್‌ಎಬಿಗೆ ಸೇರಿದ್ದರು. ಕ್ಯಾಂಡಲ್ ಮೇಕಿಂಗ್ ತರಬೇತಿ ಪಡೆದರು. 4 ತಿಂಗಳ ಈ ಕೋರ್ಸ್‌ನಲ್ಲಿ ಕ್ಯಾಂಡಲ್ ತಯಾರಿಸುವುದನ್ನು ಕಲಿತರು. ಆಕ್ಯುಪ್ರೆಸರ್, ಬ್ರೈಲಿ ಇತ್ಯಾದಿ ತರಬೇತಿಯನ್ನೂ ಪಡೆದರು. ಇವರು ಸ್ವಂತ ಕ್ಯಾಂಡಲ್ ಉದ್ಯಮ ಆರಂಭಿಸಬೇಕೆಂದು ಬಯಸಿದರು. ಆದರೆ, ಕ್ಯಾಂಡಲ್ ತಯಾರಿಸಲು ಬಳಸುವ ಮೌಲ್ಡ್ ತುಂಬಾ ದುಬಾರಿ. ಅವರು ಹೋಟೆಲ್‌ನಲ್ಲಿ ಮಸಾಜ್ ಮತ್ತು ಆಕ್ಯುಪ್ರೆಸರ್ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದರು. ಇದರಿಂದ ಉಳಿದ ಹಣದಲ್ಲಿ ಐದು ಕೆಜಿ ಮೇಣ ಖರೀದಿಸದರು. ಆರಂಭದಲ್ಲಿ ಪ್ಲೈನ್ ಕ್ಯಾಂಡಲ್ ತಯಾರಿಸಿ ಹೋಲಿ ಕ್ರಾಸ್ ಚರ್ಚ್ ಮುಂದೆ ಮಾರಾಟಕ್ಕೆ ಪ್ರಯತ್ನಿಸಿದರು. ದಿನಕ್ಕೆ 25 ರೂಪಾಯಿ ಗಳಿಸುತ್ತಿದ್ದರು. ಅದು ಮರುದಿನದ ಕಚ್ಚಾ ಸಾಮಾಗ್ರಿಗೆ ಬೇಕಾಗುತ್ತಿತ್ತು.
ಭಾವೇಶ್ ಭಾಟಿಯಾ ಪ್ರೇಮಕತೆ
ಈ ರೀತಿ ಚರ್ಚ್ ಮುಂದೆ ಕ್ಯಾಂಡಲ್ ಮಾರಾಟ ಮಾಡುತ್ತಿದ್ದ ಭಾಟಿಯಾರನ್ನು ಮುಂಬೈ ನಿವಾಸಿ ನೀತಾ ಗಮನಿಸುತ್ತಿದ್ದರು. ಅವರಿಗೆ ಭಾಟಿಯಾ ಮೇಲೆ ಪ್ರೀತಿ ಉಂಟಾಯಿತು. ಕುಟುಂಬದ ವಿರೋಧ ಕಟ್ಟಿ ಇವರನ್ನೇ ಮದುವೆಯಾದರು.
ಸ್ವಂತ ಕ್ಯಾಂಡಲ್ ಕಂಪನಿ ಕಟ್ಟಿದ ಭಾಟಿಯಾ
ಸ್ವಂತ ಉದ್ಯಮ ಆರಂಭಿಸುವ ಕನಸಿಗೆ ಆರಂಭದಲ್ಲಿ ಯಾರಿಂದಲೂ ಪ್ರೋತ್ಸಾಹ ದೊರಕಲಿಲ್ಲ. ತಾಂತ್ರಿಕ ಮತ್ತು ವೃತ್ತಿಪರ ಸಹಾಯ ಬೇಡಿದರೂ ಯಾರೂ ನೆರವು ನೀಡಲಿಲ್ಲ. ಬಹುತೇಕರು ಕನಿಕರ ತೋರುತ್ತಿದ್ದರೇ ವಿನಃ ಸಹಾಯ ಮಾಡಲಿಲ್ಲ. ಬ್ಯಾಂಕ್‌ನಿಂದ ಸಾಲವೂ ದೊರಕಲಿಲ್ಲ. ಕ್ಯಾಂಡಲ್ ತಯಾರಕ ಕಂಪನಿಗಳೂ ನೆರವು ನೀಡಲಿಲ್ಲ. ಕ್ಯಾಂಡಲ್ ತಯಾರಿಕೆ ಕುರಿತು ತಜ್ಞರ ಮಾರ್ಗದರ್ಶನವೂ ದೊರಕಲಿಲ್ಲ. ಇಂತಹ ಸಂದರ್ಭದಲ್ಲಿ ತನ್ನ ಪತ್ನಿ ಜತೆ ಇವರು ಶಾಪಿಂಗ್ ಮಾಲ್‌ಗೆ ಹೋಗುತ್ತಿದ್ದರು. ಅಲ್ಲಿರುವ ಕ್ಯಾಂಡಲ್‌ಗಳನ್ನು ಟಚ್ ಮಾಡಿ ಫೀಲ್ ಮಾಡಿ ಅದರ ವಿನ್ಯಾಸದ ಕುರಿತು ತಿಳಿಯುತ್ತಿದ್ದರು.
ಬಳಿಕ ಇವರಿಗೆ ಎನ್‌ಎಬಿ ಅಥವಾ ದೃಷ್ಟಿ ವಿಶೇಷ ಚೇತನರ ಸಂಸ್ಥೆಯಿಂದ ಸಾಲ ಪಡೆಯಲು ನೆರವು ದೊರಕಿತು. ಸತಾರ ಬ್ಯಾಂಕ್‌ನಿಂದ 15 ಸಾವಿರ ಸಾಲ ದೊರಕಿತು. ಈ ಹಣದಲ್ಲಿ 15 ಕೆ.ಜಿ. ಮೇಣ ಖರೀದಿಸಿದರು. ಎರಡು ಡೈ ಮತ್ತು ಹ್ಯಾಂಡ್ ಕಾರ್ಟ್ ಖರೀದಿಸಿದರು. ಅವರಿಗೆ ಸ್ನೇಹಿತ ನೀರಜ್ ಚಂದನ್ ನೆರವು ದೊರಕಿತು. ಆರಂಭದಲ್ಲಿ ಭವಿಶ್ ಅವರು ಚರ್ಚ್ ಮುಂದೆ ಅಂಗಡಿ ಹಾಕಿ ಕ್ಯಾಂಡಲ್ ಮಾರುತ್ತಿದ್ದರು. ನಂಬ್ತಿರೋ ಬಿಡ್ತಿರೋ ಭಾಟಿಯಾ ಅವರು ತುಂಬಾ ಚೆನ್ನಾಗಿ ಕ್ಯಾಂಡಲ್ ತಯಾರಿಸುತ್ತಿದ್ದರು. ನಾನು ಡಿಜಿಟಲ್ ಕ್ಯಾಮೆರಾ ಬಳಸಿ ಇದರ ಫೋಟೊ ತೆಗೆಯುತ್ತಿದ್ದೆ. ಬಳಿಕ www.sunrisecandles.in ಎಂಬ ಪುಟ್ಟ ವೆಬ್‌ಸೈಟ್ ಆರಂಭಿಸಿದೆವು. ಗೂಗಲ್‌ನಲ್ಲಿ ಕ್ಯಾಂಡಲ್ ಕುರಿತು ಜಾಹೀರಾತು ನೀಡಲು ಆರಂಭಿಸಿದೆವು. ಬಳಿಕ ಪರಿಸ್ಥಿತಿ ಬದಲಾಯಿತು. ಹಚ್ಚು ಆರ್ಡರ್ ದೊರಕಲು ಆರಂಭಿಸಿತು. ಬಳಿಕ ಸ್ನೇಹಿತರಿಂದ ಒಂದು ಪುಟ್ಟ ಜಾಗ ಖರೀದಿಸಿದ ಭಾವೇಶ್ ಅವರು ಕ್ಯಾಂಡಲ್ ತಯಾರಿಸುವ ಕಂಪನಿಯನ್ನು ಆರಂಭಿಸಿದರು.
ಬಳಿಕ ದೃಷ್ಟಿ ವಿಶೇಷ ಚೇತನರಿಗೆ ಇಲ್ಲಿ ಉದ್ಯೋಗ ನೀಡಲಾಯಿತು. ಭಾರತದ ಹಲವು ರಾಜ್ಯಗಳಲ್ಲಿ ಸನ್ ರೈಸ್ ಕ್ಯಾಂಡಲ್‌ಗಳು ಮಾರಾಟವಾಗುತ್ತಿವೆ. ಈಗ ಇಂಗ್ಲೆಂಡ್‌ನಿಂದ ಮೇಣ ಆಂದು ಮಾಡಿಕೊಳ್ಳುತ್ತಾರೆ. ರಿಲಯೆನ್ಸ್ ಇಂಡಸ್ಟ್ರಿ, ರಾನ್‌ಬಾಕ್ಸಿ, ನರೊಡಾ ಇಂಡಸ್ಟ್ರಿ, ರೋಟರಿ ಕ್ಲಬ್, ಹಲವು ಹೋಟೆಲ್ ಕ್ಲಬ್‌ಗಳು ಇವರ ಕಾಯಂ ಗ್ರಾಹಕರು. ದೃಷ್ಟಿ ವಿಶೇಷ ಚೇತನ ವ್ಯಕ್ತಿಯೊಬ್ಬರ ಇಂತಹ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು.