Summer and food: ಬೇಸಿಗೆಯಲ್ಲಿ ಕರುಳಿನ ಆರೋಗ್ಯ ರಕ್ಷಿಸಿ, ದೇಹ ತಣಿಯಲು ಈ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಿ
Apr 10, 2023 11:42 AM IST
ಬೇಸಿಗೆ ಮತ್ತು ಆಹಾರ
- Summer and food: ಬೇಸಿಗೆಯಲ್ಲಿ ದೇಹದ ತಾಪವನ್ನು ನೀಗಿಸಿಕೊಳ್ಳುವ ಜೊತೆಗೆ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಬಹಳ ಮುಖ್ಯವಾಗುತ್ತದೆ. ಕರುಳಿನ ಆರೋಗ್ಯ ರಕ್ಷಣೆಗೆ ಈ ಕೆಲವು ಪದಾರ್ಥಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಈ ಮೂಲಕ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಿ.
ಬೇಸಿಗೆಯ ದಿನಗಳಲ್ಲಿ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಹಾಗೂ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಡಯೆಟ್ ಕ್ರಮ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇದರೊಂದಿಗೆ ಜೀರ್ಣಕ್ರಿಯೆ ಸುಧಾರಿಸುವ ಆಹಾರ ಪದಾರ್ಥಗಳನ್ನು ಸೇವಿಸುವುದೂ ಅವಶ್ಯ. ಸಾಕಷ್ಟು ನೀರು ಕುಡಿಯುವ ಮೂಲಕ ನಿರ್ಜಲೀಕರಣ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬೇಕು.
ಬೇಸಿಗೆಯಲ್ಲಿ ಕರುಳಿನ ಉರಿಯೂತಕ್ಕೆ ಕಾರಣವಾಗುವ ಹಾಗೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟು ಮಾಡುವ ಸಕ್ಕರೆ ಅಥವಾ ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕೆ ಕಡಿವಾಣ ಹಾಕುವುದು ಉತ್ತಮ ಎನ್ನುವುದು ಆರೋಗ್ಯ ತಜ್ಞರ ಸಲಹೆ.
ʼಬೇಸಿಗೆಯಲ್ಲಿ ಜನರು ದೈಹಿಕ ಚಟುವಟಿಕೆ, ಸಮರ್ಪಕ ಆಹಾರಪದ್ಧತಿ, ರಾಸಾಯನಿಕ ಮುಕ್ತ ಆಹಾರ ಸೇವನೆ ಹಾಗೂ ತಾಜಾ ಡೇರಿ ಉತ್ಪನ್ನಗಳ ಸೇವನೆ ಸೇರಿದಂತೆ ಕೆಲವೊಂದು ಜೀವನಶೈಲಿಯ ವಿಧಾನವನ್ನು ಬದಲಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಣ್ಣು, ತರಕಾರಿ, ಆರೋಗ್ಯಕರ ಕೊಬ್ಬು, ನಾರಿನಂಶ, ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳಿರುವ ಆಹಾರ ಸೇವೆನೆಗೆ ಒತ್ತು ನೀಡಬೇಕು. ಇದರೊಂದಿಗೆ ಧಾನ್ಯಗಳು, ಒಣಹಣ್ಣುಗಳು, ಹಸಿರು ಸೊಪ್ಪು ಹಾಗೂ ಹಣ್ಣುಗಳು ನಮ್ಮ ಆರೋಗ್ಯದಲ್ಲಿ ಸಮ ಪ್ರಮಾಣದಲ್ಲಿರಬೇಕು. ಈ ಮೂಲಕ ದೇಹದ ತಾಪವನ್ನು ತಣಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದುʼ ಎಂಬುದು ತಜ್ಞರ ಸಲಹೆ.
ಬೇಸಿಗೆಯಲ್ಲಿ ದಿನವಿಡೀ ಚೈತನ್ಯದಿಂದಿರಲು ಹಾಗೂ ಕರುಳಿನ ಆರೋಗ್ಯ ಸುಧಾರಿಸಿ, ದೇಹವನ್ನು ತಂಪಾಗಿಸಲು ಈ ಪದಾರ್ಥಗಳು ನೆರವಾಗುತ್ತವೆ.
ನೀರಿನಾಂಶ ಹೆಚ್ಚಿಸುವ ಆಹಾರ ಪದಾರ್ಥಗಳು
ದೇಹದಲ್ಲಿ ನೀರಿನಾಂಶ ಹೆಚ್ಚಲು ನೀರು ಕುಡಿಯುವುದು ಉತ್ತಮ ಮಾರ್ಗ. ಆದರೆ ಕೆಲವೊಮ್ಮೆ ಸಾಕಷ್ಟು ನೀರು ಕುಡಿಯುವುದು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ನೀರಿನಾಂಶ ಅಧಿಕವಾಗಿರುವ ಕಲ್ಲಂಗಡಿ, ಕರ್ಬೂಜ, ಅನಾನಸ್, ದ್ರಾಕ್ಷಿ ಇಂತಹ ಹಣ್ಣುಗಳನ್ನು ಸೇವಿಸಬಹುದು. ಇವು ದೇಹದಲ್ಲಿ ನೀರಿನಾಂಶ ಹೆಚ್ಚುವಂತೆ ಮಾಡುವುದು ಮಾತ್ರವಲ್ಲ, ಚೈತನ್ಯ ಮೂಡಿಸಲು ಸಹಕಾರಿಯಾಗುತ್ತವೆ.
ದೇಹ ತಣಿಸುವ ತರಕಾರಿಗಳು
ತಂಪು ಪಾನೀಯಗಳು ಹಾಗೂ ಫ್ರೊಜೆನ್ ಡೆಸರ್ಟ್‌ಗಳು ನಾಲಿಗೆಯ ರುಚಿಮೊಗ್ಗುಗಳನ್ನು ಅರಳಿಸಿ, ಆ ಕ್ಷಣಕ್ಕೆ ದೇಹ ತಾಪವನ್ನು ನೀಗಿಸಬಹುದು. ಆದರೆ ಇದರಿಂದ ಯಾವುದೇ ರೀತಿಯ ಆರೋಗ್ಯ ಪ್ರಯೋಜನಗಳಿಲ್ಲ. ಸೌತೆಕಾಯಿ, ಸೆಲರಿ, ಲೆಟಿಸ್‌ನಂತಹ ಸೊಪ್ಪು ತರಕಾರಿಯಲ್ಲಿ ನೀರಿನಾಂಶ ಹೆಚ್ಚಿದ್ದು, ಇವು ದೇಹದ ತಾಪವನ್ನು ತಣಿಸುತ್ತವೆ. ಇದರಲ್ಲಿ ಸಲಾಡ್ ಹಾಗೂ ಸ್ಮೂಥಿ ತಯಾರಿಸಿ ಸೇವಿಸಬಹುದು. ಇವು ದೇಹಕ್ಕೆ ಚೈತನ್ಯ ನೀಡಲು ಸಹಕಾರಿ.
ಪ್ರೊಬಯೊಟಿಕ್ ಸಮೃದ್ಧ ಪದಾರ್ಥಗಳು
ಮೊಸರು, ಕಿಮ್ಚಿ, ಸೌರ್‌ಕ್ರಾಟ್, ಕೊಂಬುಚಾದಂತಹ ಪದಾರ್ಥಗಳು ರುಚಿ ಮಾತ್ರವಲ್ಲ ಇವುಗಳಲ್ಲಿ ಪ್ರೊಬಯೊಟಿಕ್ ಅಂಶ ಸಮೃದ್ಧವಾಗಿದೆ. ಇವುಗಳಲ್ಲಿ ಕರುಳಿನ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಬ್ಯಾಕ್ಟೀರಿಯಾಗಳಿವೆ. ಈ ಆಹಾರಗಳು ನಿಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಲೀನ್ ಪ್ರೊಟೀನ್
ಗ್ರಿಲ್ಡ್ ಚಿಕನ್, ಫಿಶ್ ಹಾಗೂ ಮೊಟ್ಟೆಯಂತಹ ಪೋಷಕಾಂಶ ಸಮೃದ್ಧ ಆಹಾರ ಪದಾರ್ಥಗಳ ಸೇವನೆ ಬೇಸಿಗೆಗೆ ಉತ್ತಮ. ಇವು ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕುವುದು ಮಾತ್ರವಲ್ಲ, ಜೀರ್ಣಕ್ರಿಯೆಯ ಅಸ್ವಸ್ಥತೆಯ ನಿವಾರಣೆಗೂ ಸಹಕಾರಿ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ತೂಕ ಹೆಚ್ಚಳವಾಗುವುದನ್ನು ನಿಯಂತ್ರಿಸುತ್ತವೆ.
ಗಿಡಮೂಲಿಕೆಯ ಟೀಗಳು
ಪೆಪ್ಪರ್‌ಮಿಂಟ್ ಟೀ, ಕ್ಯಾಮೊಮಾಯಿಲ್ ಟೀ, ಶುಂಠಿ ಟೀಯಂತಹ ಗಿಡಮೂಲಿಕೆಯಿಂದ ತಯಾರಿಸಿದ ಟೀಗಳು ಕರುಳಿನ ಉರಿಯೂತವನ್ನು ಶಮನಗೊಳಿಸುತ್ತವೆ, ಅಲ್ಲದೆ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಯನ್ನು ನಿವಾರಿಸುತ್ತವೆ. ಇವು ಉರಿಯೂತ ವಿರೋಧಿ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ದೇಹ ತಣಿಸುವ ಅಂಶಗಳಿದ್ದು, ಇವು ಕರುಳಿನ ಆರೋಗ್ಯವನ್ನು ಸುಧಾರಿಸಿ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತವೆ.
ಬಾದಾಮಿ
ಬಾದಾಮಿಯಲ್ಲಿ ನಾರಿನಾಂಶ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಅಧಿಕವಾಗಿದೆ. ಇದು ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಇ ಅಂಶ ಹಾಗೂ ಆಂಟಿ ಆಕ್ಸಿಡೆಂಟ್ ಅಂಶವಿದ್ದು, ಇದು ಕರುಳಿನ ಉರಿಯೂತ ನಿವಾರಿಸಲು ಸಹಾಯ ಮಾಡುತ್ತದೆ.
ಕರ್ಜೂರ
ಕರ್ಜೂರದಲ್ಲಿ ನಾರಿನಂಶ ಅಧಿಕವಾಗಿದೆ. ಇದು ಜೀರ್ಣಕ್ರಿಯೆಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಶಿಯಂ ಅಂಶವಿದ್ದು, ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.
ಅಂಜೂರ
ಇದರಲ್ಲೂ ನಾರಿನಾಂಶ ಸಮೃದ್ಧವಾಗಿದ್ದು, ಇದು ಸೇವನೆ ಕರುಳಿನ ಆರೋಗ್ಯಕ್ಕೆ ಉತ್ತಮ, ಇದರಲ್ಲಿ ಪ್ರೊಬಯೋಟಿಕ್ ಅಂಶ ಸಮೃದ್ಧವಾಗಿದ್ದು, ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಪಿಸ್ತಾ
ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶ ಹಾಗೂ ನಾರಿನಂಶ ಅಧಿಕವಾಗಿದೆ. ಇದು ಕರುಳಿನ ಆರೋಗ್ಯ ಸುಧಾರಿಸಲು ಸಹಕಾರಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಅಂಶ ಕರುಳಿನ ಉರಿಯೂತವನ್ನು ನಿವಾರಿಸಲು ಸಹಕರಿಸುತ್ತದೆ.
ವಿಭಾಗ