logo
ಕನ್ನಡ ಸುದ್ದಿ  /  ಜೀವನಶೈಲಿ  /  ದೇಹಕ್ಕೆ ಪ್ರೊಟೀನ ಮತ್ತು ಶಕ್ತಿ ಒದಗಿಸುವ ಗೋಡಂಬಿ–ಬೆಲ್ಲದ ಲಡ್ಡು; ಸಿಹಿತಿನಿಸಾದರೂ ಆರೋಗ್ಯ ಕಾಪಾಡಲು ಇದು ಬೆಸ್ಟ್‌

ದೇಹಕ್ಕೆ ಪ್ರೊಟೀನ ಮತ್ತು ಶಕ್ತಿ ಒದಗಿಸುವ ಗೋಡಂಬಿ–ಬೆಲ್ಲದ ಲಡ್ಡು; ಸಿಹಿತಿನಿಸಾದರೂ ಆರೋಗ್ಯ ಕಾಪಾಡಲು ಇದು ಬೆಸ್ಟ್‌

HT Kannada Desk HT Kannada

Sep 10, 2024 06:42 AM IST

google News

ಗೋಡಂಬಿ–ಬೆಲ್ಲದ ಲಡ್ಡು

    • Kaju Jaggery Laddu: ಗೋಡಂಬಿ–ಬೆಲ್ಲ ಸೇರಿಸಿ ತಯಾರಿಸುವ ಈ ಲಡ್ಡು ಸಿಹಿ ತಿನಿಸಾದರೂ ಆರೋಗ್ಯಕ್ಕೂ ಉತ್ತಮವಾಗಿದೆ. ಗೌರಿ–ಗಣೇಶ ಹಬ್ಬ ಪ್ರಾರಂಭವಾಗಿದೆ. ಈ ಹಬ್ಬದಲ್ಲಿ ಗಣೇಶನ ನೈವೇದ್ಯಕ್ಕೆ ಬಗೆಬಗೆಯ ತಿನಿಸುಗಳನ್ನು ಮಾಡಲಾಗುತ್ತದೆ. ನೀವೂ ಹೊಸ ರುಚಿ ಹುಡುಕುತ್ತಿದ್ದರೆ ಸುಲಭದ ಗೋಡಂಬಿ–ಬೆಲ್ಲದ ಲಡ್ಡು ತಯಾರಿಸಬಹುದು.
ಗೋಡಂಬಿ–ಬೆಲ್ಲದ ಲಡ್ಡು
ಗೋಡಂಬಿ–ಬೆಲ್ಲದ ಲಡ್ಡು (PC: https://www.youtube.com/watch?v=KMbyWqsIQIY)

ಈ ವರ್ಷದ ಗೌರಿ–ಗಣೇಶ ಹಬ್ಬ ಪ್ರಾರಂಭವಾಗಿದೆ. ಬಹಳ ಸಂಭ್ರಮದಿಂದ ಗೌರಿ–ಗಣೇಶನನ್ನು ಮನೆಗೆ ಕರೆತರಲಾಗಿದೆ. ಗಣೇಶನನ್ನು ಒಂದು, ಎರಡು, ಮೂರು, ಐದು, ಏಳು, ಒಂಬತ್ತು, ಹತ್ತು ದಿನಗಳವರೆಗೆ ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತದೆ. ಮನೆಯಲ್ಲಿ ನಡೆದುಕೊಂಡು ಬಂದ ಪದ್ಧತಿಗೆ ಅನುಗುಣವಾಗಿ ಗಣಪತಿಯನ್ನು ಮೂರ್ತಿಯನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ. ಆ ಎಲ್ಲಾ ದಿನಗಳಲ್ಲಿ ಗಣಪತಿಯ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆಗಳನ್ನು ಮಾಡಲಾಗುತ್ತದೆ. ಪ್ರತಿದಿನ ಒಂದೇ ರೀತಿಯ ನೈವೇದ್ಯ ಇಡಲು ಯಾರಿಗೂ ಮನಸಾಗುವುದಿಲ್ಲ. ಹಾಗಾಗಿ ಎಲ್ಲರೂ ಹೊಸ ರುಚಿಯನ್ನು ಹುಡುಕುತ್ತಿರುತ್ತಾರೆ.

ಅದೇ ರೀತಿ ನೀವೂ ವಿನಾಯಕನ ನೈವೇದ್ಯಕ್ಕೆ ಹೊಸ ಬಗೆಯ ಸಿಹಿ ತಿನಿಸು ಮಾಡಬೇಕೆಂದಿದ್ದರೆ ಗೋಡಂಬಿ–ಬೆಲ್ಲದ ಲಡ್ಡು ತಯಾರಿಸಬಹುದು. ಸಕ್ಕರೆಯ ಸಿಹಿ ತಿನಿಸಿಗಿಂತ ಇದು ಬೆಸ್ಟ್‌ ಸಿಹಿ ತಿನಿಸಾಗಿದೆ. ಗೋಡಂಬಿ–ಬೆಲ್ಲದ ಲಡ್ಡು ಆರೋಗ್ಯಕ್ಕೂ ಉತ್ತಮವಾಗಿದೆ. ಕಾಜು, ಕ್ಯಾಶ್ಯೂ ಎಂದೂ ಕರೆಯುವ ಗೋಡಂಬಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಪ್ರೊಟೀನ್‌ ಅಧಿಕವಾಗಿದ್ದು, ಆರೋಗ್ಯಕರ ಕೊಬ್ಬು ಮತ್ತು ಆಂಟಿಒಕ್ಸಿಡೆಂಟ್‌ಗಳನ್ನು ಹೊಂದಿದೆ.

ಇದು ಹೃದಯ, ಎಲುಬು ಮತ್ತು ಮಿದುಳಿನ ಆರೋಗ್ಯ ಕಾಪಾಡುತ್ತದೆ. ಅಷ್ಟೇ ಅಲ್ಲದೇ ಈ ಒಣ ಬೀಜವು ತೂಕ ನಿರ್ವಹಣೆಯಿಂದ ಹಿಡಿದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಹ ನಿಯಂತ್ರಿಸುತ್ತದೆ. ಬೆಲ್ಲವು ಅಗಾಧ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿದೆ. ಇದು ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ತೂಕ ಇಳಿಕೆಯ ಜೊತೆಗೆ ಡಯಾಬಿಟಿಸ್‌ಗೂ ಇದು ಉತ್ತಮವಾಗಿದೆ. ಗೋಡಂಬಿ ಮತ್ತು ಬೆಲ್ಲ ಸೇರಿಸಿ ತಯಾರಿಸುವ ಈ ಲಡ್ಡುವಿನಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ಆರೋಗ್ಯಕ್ಕೆ ಉತ್ತಮವಾದ ಗೋಡಂಬಿ–ಬೆಲ್ಲದ ಲಡ್ಡುವನ್ನು ಸುಲಭವಾಗಿ ಹೀಗೆ ತಯಾರಿಸಿ.

ಗೋಡಂಬಿ–ಬೆಲ್ಲದ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳು

ಗೋಡಂಬಿ ಒಂದು ಕಪ್‌

ಬೆಲ್ಲದ ಪುಡಿ ಅರ್ಧ ಕಪ್‌

ತುಪ್ಪ ಎರಡು ಚಮಚ

ಏಲಕ್ಕಿ ಪುಡಿ ಕಾಲು ಚಮಚ

ತಯಾರಿಸುವ ವಿಧಾನ

1) ಮೊದಲಿಗೆ ಪ್ಯಾನ್‌ಗೆ ಒಂದು ಕಪ್‌ ಗೋಡಂಬಿ ಹಾಕಿ. ಸಣ್ಣ ಉರಿಯಲ್ಲಿ 2 ರಿಂದ 3 ನಿಮಷಗಳವರೆಗೆ ಅದನ್ನು ಡ್ರೈ ಆಗಿಯೇ ಹುರಿದುಕೊಳ್ಳಿ. ಅದಕ್ಕೆ ತುಪ್ಪ ಅಥವಾ ಎಣ್ಣೆ ಏನನ್ನೂ ಸೇರಿಸಬೇಡಿ.

2) ಗೋಡಂಬಿ ಬಿಸಿ ಆರಿದ ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.

3) ಈಗ ಒಂದು ದಪ್ಪ ತಳದ ಪಾತ್ರೆಗೆ ಎರಡು ಚಮಚ ತುಪ್ಪ ಹಾಕಿ. ಅದಕ್ಕೆ ಬೆಲ್ಲದ ಪುಡಿ ಸೇರಿಸಿ. ಸಣ್ಣ ಉರಿಯಲ್ಲಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ. ಸುಮಾರು 6 ರಿಂದ 7 ನಿಮಿಷಗಳವರೆಗೆ ತಿರುವುತ್ತಾ ಇರಿ.

4) ಈಗ ಒಂದು ಚಿಕ್ಕ ನೀರು ತುಂಬಿದ ಪಾತ್ರೆಯಲ್ಲಿ ಬೆಲ್ಲದ ಮಿಶ್ರಣ ಹಾಕಿ. ಅದು ಉಂಡೆ ಕಟ್ಟುವ ಹದದಲ್ಲಿದೆಯೇ ಎಂದು ಪರೀಕ್ಷಿಸಿ. ಸರಿಯಾಗಿದ್ದರೆ ಸ್ಟವ್‌ ಆಫ್‌ ಮಾಡಿ.

5) ಈಗ ಅದಕ್ಕೆ ಏಲಕ್ಕಿ ಪುಡಿ ಹಾಕಿ.

6) ಏಲಕ್ಕಿ ಪುಡಿ ಚೆನ್ನಾಗಿ ಬೆರೆಸಿದ ನಂತರ ಅದಕ್ಕೆ ಗೋಡಂಬಿಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್‌ ಮಾಡಿ.

7) ಸ್ವಲ್ಪ ಬಿಸಿ ಇರುವಾಗಲೇ ಲಡ್ಡು ಕಟ್ಟಲು ಪ್ರಾರಂಭಿಸಿ. ಸ್ವಲ್ಪ ಮಿಶ್ರಣ ತೆಗೆದುಕೊಂಡು ಕೈಯಲ್ಲಿ ನಿಧಾನವಾಗಿ ಒತ್ತಿ ದುಂಡಗಿನ ಆಕಾರಕ್ಕೆ ತನ್ನಿ.

8) ಗೋಡಂಬಿ–ಬೆಲ್ಲದ ಲಡ್ಡು ರೆಡಿ.

ನೋಡಿದ್ರಲ್ಲ, ಸುಲಭದ ಗೋಡಂಬಿ–ಬೆಲ್ಲದ ಲಡ್ಡು ತಯಾರಿಸುವ ವಿಧಾನ. ಆರೋಗ್ಯಕ್ಕೆ ಉತ್ತಮವಾದ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಲಡ್ಡುವನ್ನು ಗಣೇಶನ ನೈವೇದ್ಯಕ್ಕೂ ಇಡಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ