ಸ್ಮಾರ್ಟ್‌ಫೋನ್ ಕೆಳಭಾಗದಲ್ಲಿ ಈ ರಂಧ್ರ ಯಾಕಿದೆ ಗೊತ್ತೇ, ಇದರ ಉಪಯೋಗವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ
Jul 17, 2024 10:06 AM IST
ಸ್ಮಾರ್ಟ್‌ಫೋನ್ ಕೆಳಭಾಗದಲ್ಲಿ ಈ ರಂಧ್ರ ಯಾಕಿದೆ ಗೊತ್ತೇ, ಇದರ ಉಪಯೋಗವೇನು
- ಸ್ಮಾರ್ಟ್‌ಫೋನ್‌ನಲ್ಲಿ, ನೀವು ಚಾರ್ಜಿಂಗ್ ಪೋರ್ಟ್ ಮತ್ತು ಆಡಿಯೋ ಜ್ಯಾಕ್ ಜೊತೆಗೆ ಸ್ಪೀಕರ್ ಗ್ರಿಲ್ ಅನ್ನು ಕೆಳಭಾಗದಲ್ಲಿ ನೋಡುತ್ತೀರಿ. ಅದರೊಂದಿಗೆ ಸಣ್ಣ ರಂಧ್ರವೂ ಇರುತ್ತದೆ. ಆದರೆ, ನಮ್ಮಲ್ಲಿ ಹೆಚ್ಚಿನವರಿಗೆ ಇದು ಏಕಿದೆ, ಇದರ ಉಪಯೋಗವೇನು? ಎಂಬುದು ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಳಸದೆ ಇರುವ ಜನರು ತೀರಾ ಕಡಿಮೆ. ಇದು ನಮ್ಮ ದೈನಂದಿನ ಜೀವನದಲ್ಲಿ ಮುಖ್ಯ ಮತ್ತು ಅನಿವಾರ್ಯವಾಗಿದೆ. ಆದರೆ ನಾವು ಬಳಸುವ ಫೋನಿನಲ್ಲಿ ನಮಗೇ ಗೊತ್ತಿಲ್ಲದ ಹಲವು ಫೀಚರ್ಗಳಿವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ನಾವು ಬಳಸುವ ಎಲ್ಲಾ ಸ್ಮಾರ್ಟ್ಫೋನ್ಗಳು ಕೆಳಭಾಗದಲ್ಲಿ ಸಣ್ಣ ರಂಧ್ರವನ್ನು ಹೊಂದಿರುತ್ತವೆ. ಆದರೆ, ನಮ್ಮಲ್ಲಿ ಹೆಚ್ಚಿನವರಿಗೆ ಇದು ಏಕಿದೆ, ಇದರ ಉಪಯೋಗವೇನು? ಎಂಬುದು ತಿಳಿದಿಲ್ಲ. ನಿಮಗೂ ಇದರ ಬಗ್ಗೆ ಮಾಹಿತಿ ಗೊತ್ತಿಲ್ಲದಿದ್ದರೆ ಈ ಸ್ಟೋರಿ ಓದಿ.
ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿರುವ ಸಣ್ಣ ರಂಧ್ರವನ್ನು ಹೆಚ್ಚಿನವರು ಮೈಕ್ರೊಫೋನ್ ಎಂದು ಕರೆಯುತ್ತಾರೆ. ಆದರೆ, ಇದು ವಾಸ್ತವವಾಗಿ ಮೈಕ್ರೊಫೋನ್ ಗ್ರಿಲ್ ಆಗಿದೆ. ಈ ರಂಧ್ರವು ಶಬ್ದ ರದ್ದತಿ ಮೈಕ್ರೊಫೋನ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ನಾವು ಕರೆಗಳಲ್ಲಿ ಮಾತನಾಡುವಾಗ ಸುತ್ತಮುತ್ತಲಿನ ಶಬ್ದಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಈ ಮೈಕ್ರೊಫೋನ್ ನಮ್ಮಲ್ಲಿರುವ ಮೈನ್ ಮೈಕ್ರೊಫೋನ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ನೀವು ಯಾರಿಗಾದರೂ ಕರೆ ಮಾಡಿದಾಗ, ಈ ನಾಯ್ಸ್ ಕ್ಯಾನ್ಸಲೇಷನ್ ಮೈಕ್ರೊಫೋನ್ ಸುತ್ತಮುತ್ತಲಿನ ಶಬ್ದಗಳನ್ನು ಎತ್ತಿಕೊಳ್ಳುತ್ತದೆ. ಇದು ನಾವು ಮುಖ್ಯ ಮೈಕ್ರೊಫೋನ್ ಮೂಲಕ ಕರೆಯಲ್ಲಿದ್ದಾಗ ಹೊರಗಿನ ಧ್ವನಿಯನ್ನು ಅಥವಾ ಹಿನ್ನೆಲೆ ಧ್ವನಿಯನ್ನು ಕಡಿಮೆ ಮಾಡಿ ಕರೆಯಲ್ಲಿರುವ ವ್ಯಕ್ತಿಗೆ ಸ್ಪಷ್ಟವಾಗಿ ಕೇಳಲು ಅನುವು ಮಾಡಿಕೊಡುತ್ತದೆ. ಇದರಿಂದ ನೀವು ಆಡುವ ಮಾತುಗಳು ಇತರರಿಗೆ ಚೆನ್ನಾಗಿ ಕೇಳುತ್ತದೆ.
ಈ ವಾಯ್ಸ್ ಕ್ಯಾನ್ಸಲೇಷನ್ ಇಲ್ಲದಿದ್ದರೆ, ಕರೆಗಳಲ್ಲಿ ಮಾತನಾಡುವಾಗ ತೊಂದರೆಗಳು ಉಂಟಾಗಬಹುದು. ಸುತ್ತಮುತ್ತಲಿನ ಶಬ್ದಗಳಿಂದಾಗಿ ಕರೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಧ್ವನಿ ಗುಣಮಟ್ಟವನ್ನು ಸುಧಾರಿಸಲು ಇದು ಸಹಕಾರಿ ಆಗಿದೆ. ಈ ರಂಧ್ರವನ್ನು ಹೆಚ್ಚಾಗಿ ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ನೀಡಲಾಗುತ್ತದೆ. ಚಾರ್ಜಿಂಗ್ ಪೋರ್ಟ್‌ಗೆ ಸಮನಾಗಿರುತ್ತದೆ. ಅಥವಾ ಮೊಬೈಲ್‌ನ ಹಿಂಬದಿಯ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್‌ನ ಪಕ್ಕದಲ್ಲಿ ಇರುತ್ತದೆ. ಐಫೋನ್‌ನಲ್ಲಿ ಹಿಂಭಾಗದಲ್ಲಿ ನೀವು ಗಮನಿಸಿರಬಹುದು.
ಏನಿದರ ಉಪಯೋಗ?
ಒಂದು ವೇಳೆ ಸ್ಮಾರ್ಟ್‌ಫೋನ್‌ನಲ್ಲಿ ಈ ಶಬ್ದ ರದ್ದತಿ ಮೈಕ್ರೊಫೋನ್ ಇಲ್ಲದಿದ್ದರೆ, ನೀವು ಗದ್ದಲದ ಅಥವಾ ಕಿಕ್ಕಿರಿದ ಪ್ರದೇಶಗಳಲ್ಲಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸ್ಥಳಗಳಲ್ಲಿ ನೀವು ಕರೆ ಮಾಡಿದರೆ, ಇನ್ನೊಂದು ತುದಿಯಲ್ಲಿರುವ ವ್ಯಕ್ತಿಗೆ ನಿಮ್ಮ ಧ್ವನಿ ಕೇಳುವುದಿಲ್ಲ ಕೇವಲ ಶಬ್ದವನ್ನು ಮಾತ್ರ ಅವರು ಕೇಳುತ್ತಾರೆ. ಹೀಗಾಗಿ ಈ ಸಣ್ಣ ರಂಧ್ರವು ನಿಜಕ್ಕೂ ಹೆಚ್ಚು ಉಪಯುಕ್ತವಾಗಿದೆ.
ಕೆಲವು ಹಳೆಯ ಫೋನ್‌ಗಳು ಈ ವೈಶಿಷ್ಟ್ಯವನ್ನು ಹೊಂದಿಲ್ಲ. ಆದರೆ, ಕಳೆದ ಕೆಲವು ವರ್ಷಗಳಿಂದ ಬರುತ್ತಿರುವ ಬಹುತೇಕ ಎಲ್ಲಾ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗಿದೆ. ಪ್ರಸ್ತುತ ಲಭ್ಯವಿರುವ ಇಯರ್ ಬಡ್‌ಗಳಲ್ಲಿ ಕಂಪನಿಗಳು ಇದೇ ರೀತಿಯ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿವೆ.
ವರದಿ: ವಿನಯ್ ಭಟ್.
ಇನ್ನಷ್ಟು ಟೆಕ್ನಾಲಜಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ