CMF Phone 1: ಸಿಎಮ್ಎಫ್ ಬ್ರ್ಯಾಂಡ್ನ ಚೊಚ್ಚಲ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ; ಖರೀದಿಗೆ ಕ್ಯೂ ಗ್ಯಾರಂಟಿ
Jul 09, 2024 10:48 AM IST
ಸಿಎಮ್ಎಫ್ ಬ್ರ್ಯಾಂಡ್ನ ಚೊಚ್ಚಲ ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
- ನಥಿಂಗ್ ಕಂಪನಿಯ ಉಪ-ಬ್ರಾಂಡ್ ಸಿಎಮ್ಎಫ್ ತನ್ನ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆಕರ್ಷಕ ಫೀಚರ್‌ಗಳಿರುವ ಈ ಫೋನ್, ಕೈಗೆಟಕುವ ಬೆಲೆಯಿಂದ ಕೂಡಿರುವುದು ವಿಶೇಷ. ಈ ಫೋನ್ ಖರೀದಿಗೆ ಜನರು ಕ್ಯೂ ನಿಲ್ಲುವುದು ಗ್ಯಾರಂಟಿ ಎನ್ನುತ್ತಿದೆ ಟೆಕ್ ಲೋಕ.
ಭಾರತೀಯ ಟೆಕ್ ಮಾರುಕಟ್ಟೆಗೆ ಹೊಸ ಬ್ರ್ಯಾಂಡ್ನ ಸ್ಮಾರ್ಟ್‌ಫೋನ್ ಒಂದು ಪ್ರವೇಶ ಪಡೆದಿದೆ. ಪ್ರಸಿದ್ಧ ನಥಿಂಗ್ ಕಂಪನಿಯ ಉಪ-ಬ್ರಾಂಡ್ ಸಿಎಮ್ಎಫ್ ತನ್ನ ಚೊಚ್ಚಲ ಫೋನ್ ಸಿಎಮ್ಎಫ್ ಫೋನ್ 1 (CMF Phone 1) ಅನ್ನು ಬಿಡುಗಡೆ ಮಾಡಿದೆ. ವಿಶಿಷ್ಟ ವಿನ್ಯಾಸದೊಂದಿಗೆ ಅನಾವರಣಗೊಂಡಿರುವ ಈ ಫೋನ್ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 5G SoC, ಹಿಂಭಾಗದಲ್ಲಿ ಡ್ಯುಯಲ್ 50-ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ ಬಲಿಷ್ಠ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಹಾಗಾದರೆ, ಈ ಫೋನಿನ ಬೆಲೆ ಎಷ್ಟು, ಏನೆಲ್ಲ ಫೀಚರ್ಸ್ ಇವೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾರತದಲ್ಲಿ ಸಿಎಮ್ಎಫ್ ಫೋನ್ 1 ಬೆಲೆ ಹಾಗೂ ಲಭ್ಯತೆ:
ಭಾರತದಲ್ಲಿ ಸಿಎಮ್ಎಫ್ ಫೋನ್ 1 ನ 6GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 15,999 ರೂಪಾಯಿ ಇದೆ. ಅಂತೆಯೆ 8GB RAM + 128GB ರೂಪಾಂತರದ ಬೆಲೆ ರೂಪಾಯಿ 17,999 ಆಗಿದೆ. ಈ ಫೋನ್ ಕಪ್ಪು, ನೀಲಿ, ತಿಳಿ ಹಸಿರು ಮತ್ತು ಕಿತ್ತಳೆ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಜುಲೈ 12ರಂದು ಮಧ್ಯಾಹ್ನ 12:00 ಗಂಟೆಯಿಂದ CMF ಇಂಡಿಯಾ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಮೊದಲ ಸೇಲ್ ಪ್ರಯುಕ್ತ ಎರಡೂ ಮಾದರಿಯ ಮೇಲೆ 1,000 ರೂ. ರಿಯಾಯಿತಿ ಘೋಷಿಸಲಾಗಿದೆ.
ಸಿಎಮ್ಎಫ್ ಫೋನ್ 1 ಫೀಚರ್ಸ್
ಡ್ಯುಯಲ್-ಸಿಮ್ (ನ್ಯಾನೋ) ಆಯ್ಕೆ ಹೊಂದಿರುವ ಸಿಎಮ್ಎಫ್ ಫೋನ್ 1 ಆಂಡ್ರಾಯ್ಡ್ 14-ಆಧಾರಿತ ನಥಿಂಗ್ ಓಎಸ್ 2.6 ಮೂಲಕ ರನ್ ಆಗುತ್ತಿದೆ. ಇದು 6.7-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್‌ಗಳು) AMOLED LTPS ಡಿಸ್ಪ್ಲೇ ಜೊತೆಗೆ 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 395ppi ಪಿಕ್ಸೆಲ್ ಸಾಂದ್ರತೆ, 240Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ.
ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಯಾಮರಾ ವಿಚಾರಕ್ಕೆ ಬಂದರೆ, ಸಿಎಮ್ಎಫ್ ಫೋನ್ 1 ಸೋನಿ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದೆ. ಜೊತೆಗೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಮತ್ತು 2x ಜೂಮ್‌ನೊಂದಿಗೆ ಪೋಟ್ರೇಟ್ ಲೆನ್ಸ್ ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.
ಈ ಫೋನ್ 256GB ವರೆಗಿನ ಅಂತರ್ಗತ ಸಂಗ್ರಹಣೆಯನ್ನು (ಇಂಟರ್ನಲ್ ಸ್ಟೋರೇಜ್) ಹೊಂದಿದ್ದು 2TB ವರೆಗೆ ವಿಸ್ತರಣೆ ಮಾಡಬಹುದು. ಸ್ಮಾರ್ಟ್‌ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.3 ಮತ್ತು USB ಟೈಪ್-C ಪೋರ್ಟ್ ಸೇರಿವೆ. ದೃಢೀಕರಣಕ್ಕಾಗಿ ಆಪ್ಟಿಕಲ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಕಂಪನಿಯು ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು 5,000mAh ಬ್ಯಾಟರಿಯೊಂದಿಗೆ ನೀಡಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಕಂಪನಿಯ ಪ್ರಕಾರ ಇದನ್ನು 20 ನಿಮಿಷಗಳಲ್ಲಿ 50 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.
ವರದಿ: ವಿನಯ್ ಭಟ್
ಇನ್ನಷ್ಟು ಟೆಕ್ನಾಲಜಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತದಲ್ಲಿ ಬಿಡುಗಡೆ ಆಯಿತು 1 ಲಕ್ಷ ರೂಪಾಯಿಯ ಹೊಸ ಸ್ಮಾರ್ಟ್‌ಫೋನ್: ಅಂಥದ್ದೇನಿದೆ ಇದರಲ್ಲಿ -Motorola Razr 50 Ultra