logo
ಕನ್ನಡ ಸುದ್ದಿ  /  ಜೀವನಶೈಲಿ  /  Refurbished Old Phone: ಹಳೆ ಫೋನ್‌ ಖರೀದಿಸುವಿರಾ? ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಈ 6 ವಿಷಯ ಗಮನಿಸಿ

Refurbished old phone: ಹಳೆ ಫೋನ್‌ ಖರೀದಿಸುವಿರಾ? ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಈ 6 ವಿಷಯ ಗಮನಿಸಿ

Praveen Chandra B HT Kannada

Sep 30, 2024 01:03 PM IST

google News

ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಈ 6 ವಿಷಯ ಗಮನಿಸಿ

    • Refurbished phone buy tips: ಹಳೆಯ, ನವೀಕೃತ ಸ್ಮಾರ್ಟ್‌ಫೋನ್‌ನಲ್ಲಿ ಗೋಚರವಾಗುವ, ಗೋಚರವಾಗದ ಅನೇಕ ದೋಷಗಳು ಇವೆ. ಹಳೆ ಫೋನ್‌ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಈ 6 ವಿಷಯ ಗಮನಿಸಿ
ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ಈ 6 ವಿಷಯ ಗಮನಿಸಿ

ಆಪಲ್‌, ಸ್ಯಾಮ್‌ಸಂಗ್‌, ವಿವೋ, ಒನ್‌ಪ್ಲಸ್‌ ಸೇರಿದಂತೆ ವಿವಿಧ ಕಂಪನಿಗಳ ಸ್ಮಾರ್ಟ್‌ಫೋನ್‌ ಖರೀದಿಸಲು ಹೆಚ್ಚಿನವರು ಆದ್ಯತೆ ನೀಡುತ್ತಾರೆ. ಎಲ್ಲರಿಗೂ ಹೊಸತು ಖರೀದಿಸುವ ಶಕ್ತಿ ಇರುವುದಿಲ್ಲ. ಹಳೆಯ ಫೋನ್‌ ಆದ್ರೂ ಸರಿ ಸ್ಮಾರ್ಟ್‌ಫೋನ್‌ ಕೈಯಲ್ಲಿರಬೇಕು ಎಂದುಕೊಳ್ಳುತ್ತಾರೆ. ಹೊಸ ಸ್ಮಾರ್ಟ್‌ಫೋನ್‌ ಹೆಚ್ಚಿನವರು ಎರಡು ಮೂರು ಹೆಚ್ಚೆಂದರೆ ನಾಲ್ಕೈದು ವರ್ಷ ಬಳಸುತ್ತಾರೆ. ಬಳಿಕ ಆ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಮಾಡಿ ಹೊಸ ಸ್ಮಾರ್ಟ್‌ಫೋನ್‌, ಐಫೋನ್‌ ಖರೀದಿಸುತ್ತಾರೆ.

ಈಗ ಮಾರುಕಟ್ಟೆಯಲ್ಲಿ ವಿವಿಧ ಬಜೆಟ್‌ಗೆ ತಕ್ಕಂತೆ ಸ್ಮಾರ್ಟ್‌ಫೋನ್‌ಗಳು ದೊರಕುತ್ತವೆ. ಎಲ್ಲರ ಕೈಯಲ್ಲೂ ಮೊಬೈಲ್‌ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ರಿಫರ್ಬಿಷ್ಡ್‌ ಅಥವಾ ನವೀಕೃತ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯೂ ವಿಸ್ತಾರಗೊಳ್ಳುತ್ತಿದೆ. ಹೊಸ ಫೋನ್‌ ಖರೀದಿಸುವ ಸಮಯದಲ್ಲಿ ನಿಮ್ಮ ಹಳೆಯ ಫೋನ್‌ ಎಕ್ಸ್‌ಚೇಂಜ್‌ ಮಾಡಿದ್ರೆ ಇಂತಿಷ್ಟು ಮೊತ್ತ ಕಡಿತ ಎಂಬ ಆಫರ್‌ ದೊರಕುತ್ತದೆ. ಈ ರೀತಿ ನಿಮ್ಮಿಂದ ಸೆಕೆಂಡ್‌ ಹ್ಯಾಂಡ್‌ ಆಗಿ ವಿನಿಮಯ ಮಾಡಿಕೊಂಡ ಫೋನ್‌ ಅನ್ನೇ ಮತ್ತೆ ತುಸು ಪರಿಶೀಲನೆ ನಡೆಸಿ ಮರುಮಾರಾಟ ಮಾಡಲಾಗುತ್ತದೆ.

ಹಳೆಯ ಫೋನ್‌ ಎಂದರೆ ಈಗಾಗಲೇ ಅದನ್ನು ಒಬ್ಬರು ಸಾಕಷ್ಟು ಸಮಯದಿಂದ ಬಳಸಿರುತ್ತಾರೆ. ಅವರಿಗೆ ಸಾಕೆನಿಸಿದಾಗ ಇನ್ನೊಬ್ಬರಿಗೆ ನೀಡುತ್ತಾರೆ. ಹೊಸ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಇವುಗಳನ್ನು ಖರೀದಿಸಬಹುದು. ಅದರಲ್ಲಿ ಗೋಚರವಾಗುವಂತಹ ಗೀರುಗಳು ಇರಬಹುದು. ಸುಲಭವಾಗಿ ಗೋಚರವಾಗದ ಅನೇಕ ತೊಂದರೆಗಳು ಇರಬಹುದು. ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಫೋನ್‌ಗಳನ್ನು ಖರೀದಿಸುವ ಸಮಯದಲ್ಲಿ ಪ್ರಮುಖವಾಗಿ ಆರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮಾರಾಟಗಾರರ ಬಗ್ಗೆ ತಿಳಿದುಕೊಳ್ಳಿ

ಈಗಾಗಲೇ ಹಲವು ಕಂಪನಿಗಳು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿವೆ. ಇಬ್ಬರಿಂದ ಪಡೆದು ಇನ್ನೊಬ್ಬರಿಗೆ ನೀಡುವ ಸೆಕೆಂಡ್‌ ಹ್ಯಾಂಡ್‌ ಫೋನ್‌ಗಳ ಬದಲು ಹಳೆಯ ಫೋನ್‌ ಅನ್ನು ಸಾಕಷ್ಟು ಪರಿಶೀಲನೆ ನಡೆಸಿ ರಿಪೇರಿ ಮಾಡಿ ಮಾರಾಟ ಮಾಡುವ ಟ್ರಸ್ಟೆಡ್‌ ಸಂಸ್ಥೆಗಳಿಂದ ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಸಿ. ಈ ರೀತಿ ಮಾರಾಟ ಮಾಡುವ ಸೆಲ್ಲರ್‌ಗಳ ಕುರಿತು ಬಳಕೆದಾರರು ನೀಡಿರುವ ರಿವ್ಯೂಗಳನ್ನು ಗಮನಿಸಿ.

ವಾರೆಂಟಿ ಪರಿಶೀಲನೆ ನಡೆಸಿ

ರಿಫರ್ಬಿಷ್ಡ್‌ ಫೋನ್‌ ಖರೀದಿಸುವ ಸಮಯದಲ್ಲಿ ಅದಕ್ಕೆ ನೀಡಲಾದ ವ್ಯಾರೆಂಟಿ ಗಮನಿಸುವುದು ಅತ್ಯಂತ ಅಗತ್ಯವಾಗಿದೆ. ವಾರೆಂಟಿ ಇಲ್ಲದ ಇಂತಹ ಸೆಕೆಂಡ್‌ ಹ್ಯಾಂಡ್‌ಗಳಲ್ಲಿ ಗಂಭೀರ ದೋಷಗಳು ಇರಬಹುದು. ಹಳೆಯ ಫೋನ್‌ ಅನ್ನು ಒರಿಜಿನಲ್‌ ಕಂಡಿಷನ್‌ಗೆ ರಿಸ್ಟೋರ್‌ ಮಾಡಿರುವುದಕ್ಕೆ ಗ್ಯಾರಂಟಿಯಾಗಿ ವಾರೆಂಟಿ ನೀಡಲಾಗುತ್ತದೆ. ಇವುಗಳನ್ನು ನಿರ್ದಿಷ್ಟ ಅವಧಿಗೆ ನಿಶ್ಚಿಂತೆಯಿಂದ ಬಳಸಬಹುದು.

ಫೋನ್‌ನ ಸ್ಥಿತಿ ಪರಿಶೀಲಿಸಿ

ಆನ್‌ಲೈನ್‌ನಲ್ಲಿ ಖರೀದಿಸುವುದಾದರೆ ನಿರ್ದಿಷ್ಟ ಫೋನ್‌ನ ಸ್ಥಿತಿಯ ಕುರಿತು ಎಲ್ಲಾ ಆಂಗಲ್‌ನಿಂದ ಚಿತ್ರಗಳನ್ನು ನೀಡಿರುವುದನ್ನು ಖಚಿತಪಡಿಸಿಕೊಳ್ಳಿ. ಈ ಸಂದರ್ಭದಲ್ಲಿ ಫೋನ್‌ನಲ್ಲಿ ಏನಾದರೂ ಹಾನಿ, ತೊಂದರೆಗಳು ಇರುವುದೇ ಎಂದು ಅವಲೋಕಿಸಿ. ಕ್ಯಾಮೆರಾ ಬಟನ್‌, ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಪರಿಶೀಲನೆ ನಡೆಸಿ.

ಬ್ಯಾಟರಿ ಲೈಫ್‌ ಗಮನಿಸಿ

ಹಳೆ ಫೋನ್‌ನಲ್ಲಿ ಬ್ಯಾಟರಿಯೇ ಪ್ರಮುಖ ಸಮಸ್ಯೆಯ ಅಂಶವಾಗಿರುತ್ತದೆ. ಬ್ಯಾಟರಿ ಲೈಫ್‌ ಶೇಕಡ 80ಕ್ಕಿಂತ ಕಡಿಮೆ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಹಳೆಯ ಬ್ಯಾಟರಿಯನ್ನು ಮುಂದುವರೆಸಲಾಗಿರುವುದೇ ಅಥವಾ ಹೊಸ ಬ್ಯಾಟರಿ ಹಾಕಲಾಗಿದೆಯೇ ಎಂದು ಮಾರಾಟಗಾರರಲ್ಲಿ ಕೇಳಿ ಖಚಿತಪಡಿಸಿಕೊಳ್ಳಿ.

ಆಕ್ಸೆಸರಿಗಳನ್ನು ಗಮನಿಸಿ

ರಿಫರ್ಬಿಷ್ಡ್‌ ಫೋನ್‌ ಖರೀದಿ ಸಂದರ್ಭದಲ್ಲಿ ಒರಿಜಿನಲ್‌ ಆಕ್ಸೆಸರಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. ಅಂದರೆ, ಚಾರ್ಜರ್‌, ಇಯರ್‌ ಫೋನ್‌ಗಳು, ಯೂಸರ್‌ ಮ್ಯಾನುಯಲ್‌ಗಳು ಇದ್ದರೆ ಖರೀದಿಸಿ. ಇವು ಇಲ್ಲದೆ ಇದ್ದರೆ ಖರೀದಿಸುವುದು ಉತ್ತಮವಲ್ಲ.

ದರ ಹೋಲಿಕೆ ಮಾಡಿ

ಹಳೆ ಫೋನ್‌ ದರ ತುಂಬಾ ಕಡಿಮೆ ಇದ್ದರೆ ಖರೀದಿಸಬಹುದು. ಹೊಸ ಫೋನ್‌ಗೂ ಹಳೆ ಫೋನ್‌ಗೂ ಕೆಲವು ಸಾವಿರ ರೂಪಾಯಿ ವ್ಯತ್ಯಾಸ ಇದ್ದರೆ ಹೊಸತೇ ಖರೀದಿ ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ