ಆತಂಕ ಹುಟ್ಟಿಸಿದ ಆನ್‌ಲೈನ್ ಅಪಹರಣ, ಏನಿದು ಸೈಬರ್ ಕಿಡ್ನ್ಯಾಪಿಂಗ್? ಬಲಿಪಶು ಆಗದಂತೆ ಎಚ್ಚರವಹಿಸಿ
Jan 05, 2024 10:51 AM IST
ಸೈಬರ್ ಕಿಡ್ನ್ಯಾಪಿಂಗ್
- What is cyber kidnapping?: ಡಿಜಿಟಲ್ ಜಗತ್ತಿನಲ್ಲಿ ಹಿಂದೆಂದೂ ನೋಡಿರದ, ಕೇಳಿರದ ಅಪರಾಧಗಳು ಚಿಗುರಿಕೊಳ್ಳುತ್ತಿವೆ. ಇದೀಗ ಡಿಜಿಟಲ್ ಕಿಡ್ನ್ಯಾಪಿಂಗ್ ಎಂಬ ಹೊಸ ಅಪರಾಧ ಹುಟ್ಟಿಕೊಂಡಿದೆ. ಚೀನಾದ ಬಾಲಕನೊಬ್ಬ ಸೈಬರ್ ಅಪಹರಣಕ್ಕೆ ಈಡಾದ ಸುದ್ದಿ ಬಂದಿದೆ. ಸದ್ಯ ಆ ಬಾಲಕ ಸುರಕ್ಷಿತವಾಗಿದ್ದಾನೆ. ಆದ್ರೆ, ಡಿಜಿಟಲ್ ಜಗತ್ತಿನಲ್ಲಿ ನಾವೆಷ್ಟು ಸುರಕ್ಷಿತವಾಗಿದ್ದೇವೆ?
ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ. ಆತನನ್ನು ಬಿಡುಗಡೆ ಮಾಡಬೇಕಿದ್ದರೆ, ಆತ ಸುರಕ್ಷಿತವಾಗಿ ನಿಮಗೆ ದೊರಕಬೇಕಿದ್ದರೆ ತಕ್ಷಣ 80,000 ಡಾಲರ್ ನೀಡಿ ಹೀಗೆ ಅಪಹರಣಕಾರರಿಂದ ಸಂದೇಶವೊಂದು ಬಂದರೆ ಹೆತ್ತವರು ಅದುರಿಬಿಡುತ್ತಾರೆ. ಇದು ಸುಳ್ಳಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ತಕ್ಷಣ ಮಗನಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆಯಿಲ್ಲ. ಹೆತ್ತವರಿಗೆ ಇದೇ ಸಮಯದಲ್ಲಿ ಮಗನ ಫೋಟೋಗಳು ಬರುತ್ತವೆ. ಯಾವುದೋ ನಿಗೂಢ ಪ್ರದೇಶ. ಅಲ್ಲಿ ಬಂಧನಕ್ಕೆ ಒಳಗಾದಂತೆ ಅವರ ಮಗ ಕುಳಿತುಕೊಂಡಿದ್ದಾನೆ. ಇದು ಸೈಬರ್ ಕಿಡ್ನ್ಯಾಪಿಂಗ್. ಡಿಜಿಟಲ್ ಜಗತ್ತಿನಲ್ಲಿ ತಲ್ಲಣ ಹುಟ್ಟಿಸಿರುವ ಆನ್‌ಲೈನ್ ಅಪಹರಣ.
ಈ ರೀತಿ ಅಪಹರಣಕಾರರಿಂದ ಸಂದೇಶ ಬಂದಾಗ ಚೀನಾದ 17 ವರ್ಷ ವಯಸ್ಸಿನ ವಿದ್ಯಾರ್ಥಿಯ ಹೆತ್ತವರು ಆತ ಓದುತ್ತಿರುವ ಶಾಲೆಯನ್ನು ಸಂಪರ್ಕಿಸುತ್ತಾರೆ. ಉಟಾಹದ ರಿವರ್‌ಡೇಲ್‌ನಲ್ಲಿರುವ ಶಾಲೆಗೆ ಈ ಮಾಹಿತಿ ದೊರಕಿತು. ತಕ್ಷಣ ಸ್ಕೂಲ್‌ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾಣೆಯಾದ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ. ಬ್ರಿಂಗಮ್ ನಗರದ ಉತ್ತರದಲ್ಲಿ ಸುಮಾರು 40 ಕಿ.ಮೀ. ದೂರದಲ್ಲಿ ನಿಗೂಢ ದುರ್ಗಮ ಪ್ರದೇಶದಲ್ಲಿ ಟೆಂಟ್‌ವೊಂದರಲ್ಲಿ ಆ ಬಾಲಕ ಪ್ರತ್ಯೇಕವಾಗಿ ಸ್ವಯಂ ಬಂಧನಕ್ಕೆ ಒಳಗಾಗಿದ್ದ. ಅಸಲಿಗೆ ಆತನನ್ನು ಯಾವ ದುಷ್ಕರ್ಮಿಗಳೂ ಹೊತ್ತೊಯ್ದು ಅಲ್ಲಿ ಇಟ್ಟಿರಲಿಲ್ಲ. ಆ ಬಾಲಕನೇ ಸ್ವಯಂ ಐಸೋಲೇಟ್ ಆಗಿದ್ದ.
ಏನಿದು ಸೈಬರ್ ಕಿಡ್ನ್ಯಾಪಿಂಗ್?
ಅಪಹರಣಕಾರರು ಬಲಿಪಶುವನ್ನು ಸ್ವತಃ ಅಡಗಿಕೊಳ್ಳುವಂತೆ ಸೂಚಿಸುವ ಹೊಸ ಬಗೆಯ ಅಪರಾಧವಿದು. ಇಲ್ಲಿ ಬಲಿಪಶು ಯಾವುದೋ ರೀತಿಯಲ್ಲಿ ಸೈಬರ್ ಅಪರಾಧಿಗಳ ಹಿಡಿತಕ್ಕೆ ಸಿಲುಕಿರುತ್ತಾರೆ. ಆನ್‌ಲೈನ್ ಗೇಮ್, ಆನ್‌ಲೈನ್ ಬ್ಲ್ಯಾಕ್‌ಮೇಲ್ ಅಥವಾ ಇನ್ಯಾವುದೋ ವಿಧಾನದ ಮೂಲಕ ಆನ್‌ಲೈನ್ ಅಪರಾಧಿಗಳು ಹೇಳಿದಂತೆ ಕೇಳುವ ಒತ್ತಡಕ್ಕೆ ಬಲಿಪಶು ಒಳಗಾಗಿರುತ್ತಾನೆ. ಇಂತಹ ಸಮಯದಲ್ಲಿ "ಕಿಡ್ನ್ಯಾಪ್ ಆದಂತೆ ಎಲ್ಲಾದರೂ ಇರು" ಎಂದು ಅಪರಾಧಿಗಳು ಸೂಚಿಸುತ್ತಾರೆ. ಬಲಿಪಶುಗಳು ಅದೇ ರೀತಿ ಮಾಡುತ್ತಾರೆ. ಇದಾದ ಬಳಿಕ ಅಪರಾಧಿಗಳಿಗೆ ತಾವು ಅಪಹರಣಕ್ಕೆ ಒಳಗಾದಂತೆ ಇರುವ ಫೋಟೋಗಳನ್ನು ಕಳುಹಿಸುತ್ತಾರೆ. ಆ ಫೋಟೋಗಳನ್ನು ಮಕ್ಕಳ (ಬಲಿಪಶುಗಳು ದೊಡ್ಡವರೂ ಆಗಬಹುದು) ಹೆತ್ತವರಿಗೆ, ಪೋಷಕರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತದೆ.
ಎಲ್ಲಾದರೂ ಸೈಬರ್ ಅಪರಾಧಿಗಳು ಹೇಳಿದಂತೆ ಕೇಳದೆ ಇದ್ದರೆ ಹೆತ್ತವರಿಗೆ ಅಪಾಯ ಮಾಡಿಬಿಡುತ್ತಾರೆ ಎಂದು ಬಲಿಪಶು ಭಯಪಡುತ್ತಾನೆ/ಳೆ. ಇದೇ ಸಮಯದಲ್ಲಿ ಹಣ ನೀಡದೆ ಇದ್ದರೆ ತಮ್ಮ ಮಗಳು/ಮಗನಿಗೆ ತೊಂದರೆ ಉಂಟು ಮಾಡಬಹುದು ಎಂಬ ಭಯದಲ್ಲಿ ಹೆತ್ತವರು ಇರುತ್ತಾರೆ. ಸೈಬರ್ ಅಪರಾಧಿಗಳಿಗೆ ಬಲಿಪಶುಗಳ ಭಯವೇ ಬಂಡವಾಳ. ಈ ಚೀನಾದ ಸೈಬರ್ ಕಿಡ್ನ್ಯಾಪಿಂಗ್ ಘಟನೆಯಲ್ಲಿ ತಮ್ಮ ಮಗನನ್ನು ಕಾಪಾಡಲು ಹೆತ್ತವರು 80 ಸಾವಿರ ಡಾಲರ್ ಕಳೆದುಕೊಳ್ಳಬೇಕಾಯಿತು.
ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ
ಇಲ್ಲಿ ಅಪಹರಣಕಾರರು ಆ ಬಾಲಕನ ಜತೆ ಅಥವಾ ಬಲಿಪಶು ಮುಂದೆ ನೇರವಾಗಿ ಹಾಜರಿರುವುದಿಲ್ಲ. ಆತನ ಮುಂದೆ ಗನ್ ಹಿಡಿದು ನಿಂತಿರುವುದಿಲ್ಲ. ಆತ ಕೈ ಕಾಲು ಬಾಯಿ ಕಟ್ಟಿ ಇರುವುದಿಲ್ಲ. ಆದರೆ, ಆ ಬಲಿಪಶುವನ್ನು ವಿಡಿಯೋ ಕಾಲ್ ಮೂಲಕ ನಿಗಾವಹಿಸುತ್ತಾರೆ. ಈ ಚೀನಾದ ಬಾಲಕನನ್ನು ಹಲವು ದಿನಗಳಿಂದ ಆನ್‌ಲೈನ್‌ನಲ್ಲಿ ಈ ಸೈಬರ್ ಖದೀಮರು ಹಿಂಬಾಲಿಸುತ್ತಿದ್ದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಆತನ ಮೊಬೈಲ್, ಆನ್‌ಲೈನ್ ಲಾಗಿನ್ ಎಲ್ಲವೂ ಇವರ ಹಿಡಿತದಲ್ಲಿದ್ದಿರಬಹುದು. ಈತ ಯಾರಿಗೆ ಕರೆ ಮಾಡುತ್ತಾನೆ? ಈತನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ? ಇತ್ಯಾದಿ ಎಲ್ಲಾ ವಿಚಾರಗಳನ್ನು ಅಪರಾಧಿಗಳು ಅವಲೋಕಿಸುತ್ತ ಇರುತ್ತಾರೆ.
ಸೈಬರ್ ಕಿಡ್ನ್ಯಾಪಿಂಗ್ ಯಾವುದೇ ರೀತಿಯಲ್ಲಿ ನಡೆಯಬಹುದು. ಕಳೆದ ಒಂದೆರಡು ವರ್ಷಗಳಲ್ಲಿ ಡಿಜಿಟಲ್ ಜಗತ್ತು ಸಾಕಷ್ಟು ಬದಲಾವಣೆಯಾಗಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನೆರವಿನಿಂದ ನಿಮ್ಮ ಮಗ/ಮಗಳ ಧ್ವನಿಯನ್ನೇ ನಿಮಗೆ ಕೇಳಿಸುವ ಶಕ್ತಿ ಸೈಬರ್ ವಂಚಕರಿಗಿದೆ. "ಅಮ್ಮಾ... ನನ್ನನ್ನು ಯಾರೋ ಕೆಟ್ಟ ಜನರು ಹಿಡಿದುಕೊಂಡಿದ್ದಾರೆ. ಕಾಪಾಡು" ಎಂದು ವಿದೇಶಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಮಗಳ/ಮಗನ ಧ್ವನಿಯಲ್ಲಿ ಫೋನ್ ಕರೆಗಳು ಬರಲು ಆರಂಭವಾಗಿವೆ.
ಚೀನಾದಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಾಗ ಅದು ಭಾರತಕ್ಕೆ ಬರದು ಎಂದುಕೊಂಡಿದ್ದೇವು. ಅಲ್ಲಿ ಮಾಸ್ಕ್ ಧರಿಸಿರುವವರನ್ನು, ಮೈ ತುಂಬಾ ಪ್ಲಾಸ್ಟಿಕ್‌ನಿಂದ ಕವರ್ ಮಾಡಿಕೊಂಡಿರುವವರನ್ನು ನೋಡಿ ಸಾಕಷ್ಟು ಜನರು ನಕ್ಕಿದ್ದರು, ಉಡಾಫೆಯ ಮಾತುಗಳನ್ನಾಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಭಾರತವೂ ಸಂಪೂರ್ಣ ಮಾಸ್ಕ್ ಧರಿಸಿರುವುದನ್ನು ನೋಡಿದ್ದೇವೆ. ಇದೇ ರೀತಿ ಚೀನಾದಲ್ಲಿ ಕಾಣಿಸಿಕೊಂಡ ಈ ಸೈಬರ್ ಕಿಡ್ನ್ಯಾಪಿಂಗ್ ಭಾರತಕ್ಕೆ ಬಾರದು ಅನ್ನುವಿರಾ?
ಡಿಜಿಟಲ್ ಜಗತ್ತಿನಲ್ಲಿ ನೀವು ಓದಬೇಕಾದ ಲೇಖನಗಳು