logo
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು

Digital Jagathu: ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು

Praveen Chandra B HT Kannada

Nov 08, 2023 05:12 PM IST

google News

Digital Jagathu: ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು

    • Deepfake advantages disadvantages: ನಟಿ ರಶ್ಮಿಕಾ ಮಂದಣ್ಣ- ಝರಾ ಪಟೇಲ್‌ ಡೀಪ್‌ಫೇಕ್‌ ವಿಡಿಯೋ ವೈರಲ್‌ ಆದ ಬಳಿಕ ಜನರಲ್ಲಿ ಈ ತಂತ್ರಜ್ಞಾನದ ಕುರಿತು ಆತಂಕ ಮೂಡಿದೆ. ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತುಗಳು, ಕೆಡಕುಗಳು ಮತ್ತು ಈ ತಂತ್ರಜ್ಞಾನದ ಭವಿಷ್ಯದ ಸಂಭಾವ್ಯ ಸಾಧ್ಯತೆಗಳ ಕುರಿತು ಇಂದಿನ ಡಿಜಿಟಲ್‌ ಜಗತ್ತು ಅಂಕಣದಲ್ಲಿ ತುಸು ವಿವರ ಪಡೆಯೋಣ.
Digital Jagathu: ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು
Digital Jagathu: ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತು, ಕೆಡುಕು ಮತ್ತು ಭವಿಷ್ಯದ ಆತಂಕಗಳು

ಮೆಷಿನ್‌ ಲರ್ನಿಂಗ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಡೀಪ್‌ಫೇಕ್‌ ಇತ್ಯಾದಿಗಳು ಈಗಾಗಲೇ ಉದಯವಾಗಿರುವ ಭವಿಷ್ಯದಲ್ಲಿ ಸಾಕಷ್ಟು ಬದಲಾವಣೆ ತರುವ ತಂತ್ರಜ್ಞಾನಗಳು. ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಡೀಪ್‌ಪೇಕ್‌ ಕುರಿತು ಹಲವು ತಿಂಗಳ ಹಿಂದೆಯೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿವರವಾದ ಮಾಹಿತಿ ನೀಡಿತ್ತು. ನಮ್ಮ ಮಕ್ಕಳ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬಹುದೇ? ಡೀಪ್‌ಫೇಕ್‌ ಎಂದರೇನು? ಇದರ ಬಳಕೆ ಹೇಗಿದೆ? ಇದರ ಅಪಾಯಗಳೇನು? ಇತ್ಯಾದಿ ವಿಷಯಗಳನ್ನು ವಿವರವಾಗಿ ಚರ್ಚಿಸಲಾಗಿತ್ತು. ಇಂದಿನ ಲೇಖನದಲ್ಲಿ ಇದೇ ವಿಷಯದ ಕುರಿತು ಇನ್ನಷ್ಟು ವಿವರ ಪಡೆದುಕೊಳ್ಳೋಣ.

ಡೀಪ್‌ಫೇಕ್‌ ಎಂದರೇನು?

ಇದಕ್ಕೆ ಸರಿಯಾದ ವ್ಯಾಖ್ಯಾನವನ್ನು ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಬಹುದು. ಈ ತಂತ್ರಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಫೋಟೋಶಾಪ್‌ ಉದಾಹರಣೆ ತೆಗೆದುಕೊಳ್ಳೋಣ. ಒಬ್ಬ ವ್ಯಕ್ತಿಯ ಬ್ಯಾಕ್‌ಗ್ರೌಂಡ್‌ ಎಲ್ಲಾ ಬಿಟ್ಟು ದೇಹವನ್ನಷ್ಟೇ ಕಟೌಟ್‌ ಮಾಡಬಹುದು. ಕೇವಲ ತಲೆಯನ್ನು ಮಾತ್ರ ಫೋಟೋಶಾಪ್‌ನಲ್ಲಿ ಕತ್ತರಿಸಿ ಬೇರೆಯವರ ತಲೆಯ ಸ್ಥಳಕ್ಕೆ ಇಡಬಹುದು. ಈ ರೀತಿ ಮಾಡಲು ಫೋಟೋ ಎಡಿಟಿಂಗ್‌ ಕೌಶಲ ಬೇಕು. ಸಾಕಷ್ಟು ಕೌಶಲ ಇರುವವರು ಈ ರೀತಿ ಕಟೌಟ್‌ ಮಾಡಿದರೂ ಎಲ್ಲೋ ಸಣ್ಣ ಲೋಪ ಉಳಿದುಬಿಡುತ್ತದೆ. ಇದರಲ್ಲಿ ಅಸಲಿ ಯಾವುದು ನಕಲಿ ಯಾವುದು ಎಂದು ಸೂಕ್ಷ್ಮವಾಗಿ ನೋಡಿದಾಗ ತಿಳಿದುಬರುತ್ತದೆ.

ಡೀಪ್‌ಫೇಕ್‌ ಇದೇ ರೀತಿ ವಿಡಿಯೋ, ಆಡಿಯೋಗಳಲ್ಲಿ ಪರಿವರ್ತನೆ ಮಾಡುತ್ತದೆ. ಇಲ್ಲಿ ಈ ರೀತಿ ಮುಖ ಬದಲಾಯಿಸಲು, ದೇಹ ಬದಲಾಯಿಸಲು, ದೃಶ್ಯಗಳನ್ನು ಬದಲಾಯಿಸಲು ವಿಡಿಯೋ ಎಡಿಟರ್‌ ವ್ಯಕ್ತಿ ಬೇಕಾಗಿಲ್ಲ. ಈ ಕೆಲಸವನ್ನು ಸ್ವಯಂಚಾಲಿತವಾಗಿ ಡೀಪ್‌ಫೇಕ್‌ ತಂತ್ರಜ್ಞಾನ ಮಾಡುತ್ತದೆ. ಆಳವಾದ ಕಲಿಕಾ ತಂತ್ರಜ್ಞಾನದ ಮೂಲಕ ಅಂದರೆ ಡೀಪ್‌ ಲರ್ನಿಂಗ್‌ ಅಲ್ಗಾರಿದಂ ಮೂಲಕ ಈ ಕೆಲಸ ಮಾಡುತ್ತದೆ. ಈಗಿನ ಮೆಷಿನ್‌ ಲರ್ನಿಂಗ್‌ ತಂತ್ರಜ್ಞಾನವು ಮನುಷ್ಯರು ಮಾಡುವ ಎಲ್ಲಾ ಕೆಲಸವನ್ನು ಕಲಿಯುತ್ತಿದ್ದು, ಈ ನಕಲಿ ರೂಪ ಸೃಷ್ಟಿಸುವ ಕಲೆಯನ್ನು ತುಸು ಬೇಗನೇ ಕಲಿತುಕೊಂಡಿದೆ. ನೋಡಲು ನಕಲಿ ಎಂದೆನಿಸದಷ್ಟು ಅತ್ಯುತ್ತಮವಾಗಿ ಈ ತಂತ್ರಜ್ಞಾನ ಇಂತಹ ವಿಡಿಯೋಗಳನ್ನು ಸೃಷ್ಟಿಸುತ್ತದೆ.

ಡೀಪ್‌ಫೇಕ್‌ ವಿಡಿಯೋ ಸೃಷ್ಟಿ ಹೇಗೆ?

ಇದಕ್ಕೆ ಮೆಷಿನ್‌ ಲರ್ನಿಂಗ್‌ನ ಎರಡು ಮಾದರಿಗಳು ಬೇಕಾಗುತ್ತದೆ. ಸ್ಯಾಂಪಲ್‌ ವಿಡಿಯೋ ಮತ್ತು ರಿಯಲ್‌/ಫೇಕ್‌ ವಿಡಿಯೋ ಸೃಷ್ಟಿಸುವ ಮಾದರಿ ಅಗತ್ಯವಿರುತ್ತದೆ. ಇವೆರಡನ್ನು ಬಳಸಿ ಇನ್ನೊಂದು ವಿಡಿಯೋ/ಆಡಿಯೋವನ್ನು ಈ ಡೀಪ್‌ಫೇಕ್‌ ಸೃಷ್ಟಿಸುತ್ತದೆ. ಇದಕ್ಕೆ ಜನರೇಟಿವ್‌ ಅಡ್ವರ್ಸಿಯಲ್‌ ನೆಟ್‌ವರ್ಕ್‌ ಎಂಬ ಮೆಷಿನ್‌ ಲರ್ನಿಂಗ್‌ನ ಇನ್ನೊಂದು ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ.

ಡೀಪ್‌ಫೇಕ್‌ ತಂತ್ರಜ್ಞಾನದ ಒಳಿತುಗಳು

ತಂತ್ರಜ್ಞಾನ ಇರುವುದು ಜಗತ್ತಿನ ಕಲ್ಯಾಣಕ್ಕಾಗಿ. ಆದರೆ, ಅದು ಕೆಟ್ಟ ಉದ್ದೇಶಕ್ಕೆ ಬಳಕೆಯಾಗುತ್ತದೆ. ಶೈಕ್ಷಣಿಕ ಅಪ್ಲಿಕೇಷನ್‌ಗಳಿಗೆ ಡೀಪ್‌ಫೇಕ್‌ ತಂತ್ರಜ್ಞಾನದ ಕೊಡುಗೆ ಸಾಕಷ್ಟು ಇದೆ. ಶೈಕ್ಷಣಿಕ ವಿಡಿಯೋ ಅಥವಾ ಸಿಮ್ಯುಲೇಷನ್‌ಗಳಿಗೆ ಈ ತಂತ್ರಜ್ಞಾನ ಬಳಕೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ವಿಷಯವೊಂದನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಿನಿಮಾ, ಟೆಲಿವಿಷನ್‌ ಶೋಗಳು ಅಥವಾ ಇತರೆ ಮಾಧ್ಯಮಗಳಲ್ಲಿ ಹೆಚ್ಚು ನೈಜ್ಯವಾಗಿ ಕಾಣಿಸುವ ದೃಶ್ಯಗಳನ್ನು ಮೂಡಿಸಲು ಈ ತಂತ್ರಜ್ಞಾನ ನೆರವಾಗುತ್ತದೆ.

ಪೈಲಟ್‌ಗಳಿಗೆ ವಿಮಾನ ಹಾರಾಟ ಕಿಸಲು, ಮಿಲಿಟರಿ ಮತ್ತು ಆರೋಗ್ಯ ಸೇವೆ ತರಬೇತಿಗಳಿಗೆ ಸೇರಿದಂತೆ ವೃತ್ತಿಪರರಿಗೆ ಡೀಪ್‌ಫೇಕ್‌ ತಂತ್ರಜ್ಞಾನದ ಮೂಕ ಅತ್ಯುತ್ತಮ ಸಿಮ್ಯುಲೇಷನ್‌ ಒದಗಿಸಲು ಸಾಧ್ಯವಿದೆ.

ಆಡಿಯೋ ಮತ್ತು ವಿಡಿಯೋಗಳಿಗೆ ಸ್ವಯಂಚಾಲಿತವಾಗಿ ಸಬ್‌ ಟೈಟಲ್‌ಗಳನ್ನು ಈ ತಂತ್ರಜ್ಞಾನ ನೀಡಬಹುದು. ಈಗ ಚಾಟ್‌ ಜಿಪಿಟಿಯಲ್ಲಿ ಏನಾದರೂ ಪ್ರಬಂಧ ಬರೆದುಕೊಡು ಎಂದಾಗ ಬರೆದು ಕೊಡುತ್ತದೆ ಅಲ್ವ? ಅದೇ ರೀತಿ ಈ ತಂತ್ರಜ್ಞಾನದ ಮೂಲಕ ಭವಿಷ್ಯದಲ್ಲಿ ಸಾಕಷ್ಟು ಸೃಷ್ಟಿ ಸಾಧ್ಯವಿದೆ.

ಡೀಪ್‌ಫೇಕ್‌ ಕೆಡುಕುಗಳು

ಡೀಪ್‌ಫೇಕ್‌ ವಿಡಿಯೋ ಅಥವಾ ಆಡಿಯೋದ ಮೂಲಕ ಸುಳ್ಳು ಮಾಹಿತಿ ಹರಡಲು, ತಮ್ಮ ಪ್ರೊಪಗಾಂಡ ಹರಡಲು ಬಳಸಬಹುದು. ವಿಶೇಷವಾಗಿ ರಾಜಕೀಯ ಪಕ್ಷಗಳಿಗೆ ಇದು ಅಸ್ತ್ರವಾಗಬಹುದು. ಜನರ ಖಾಸಗಿತನಕ್ಕೆ ಭಂಗವಾಗಬಹುದು. ಜನರ ಒಪ್ಪಿಗೆ ಇಲ್ಲದೆ ಈ ರೀತಿ ಸೋಷಿಯಲ್‌ ಮೀಡಿಯಾ, ಇಂಟರ್‌ನೆಟ್‌ನಿಂದ ಫೋಟೋ, ವಿಡಿಯೋ ಬಳಸಿಕೊಂಡು ಅದನ್ನು ಕೆಟ್ಟ ಉದ್ದೇಶಗಳಿಗೆ ಬಳಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಈ ತಂತ್ರಜ್ಞಾನದಿಂದ ವ್ಯಕ್ತಿಗಳ ವಿಡಿಯೋ, ಆಡಿಯೋ ಸೃಷ್ಟಿಸಿ ಬ್ಲ್ಯಾಕ್‌ಮೇಲ್‌, ಸುಲಿಗೆ ಇತ್ಯಾದಿ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೈತಿಕ ಪ್ರಶ್ನೆಯೂ ಉಂಟಾಗುತ್ತದೆ.

ಡೀಪ್‌ಫೇಕ್‌ ತಂತ್ರಜ್ಞಾನ: ಭವಿಷ್ಯದ ಆತಂಕ

ಈಗ ಜನರಿಂದ ಹಣ ಸುಲಿಗೆ ಮಾಡಲು ಸೋಷಿಯಲ್‌ ಮೀಡಿಯಾದಲ್ಲಿ ಲಿಂಕ್‌ ಕಳುಹಿಸಿ ನಮ್ಮ ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡುವ ತಂತ್ರ ಬಳಸಲಾಗುತ್ತದೆ. ಲೋನ್‌ ಆಪ್‌ ಮೂಲಕ ಸಾಲ ನೀಡಿ ಬಳಿಕ ನಮ್ಮ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಜನರಿಂದ ಹಣ ಸುಲಿಗೆ ಮಾಡಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲ್‌ ತಂತ್ರಜ್ಞಾನ ಪ್ರೇರಿತ ಇಂತಹ ಹಲವು ಅಪರಾಧಗಳನ್ನು ನಾವು ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಡೀಪ್‌ಫೇಕ್‌ ತಂತ್ರಜ್ಞಾನವು ಇಂತಹ ವಂಚನೆಗೆ, ಸುಲಿಗೆಗೆ ಕಾರಣವಾಗಬಹುದು. ಈಗ ಆಪ್‌ಗಳ ಮೂಲಕವೇ ಈ ರೀತಿ ನಕಲಿ ಮುಖಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದ್ದು, ಈ ತಂತ್ರಜ್ಞಾನ ವಂಚಕರ ಕೈಗೆ ತಲುಪುವುದು ಕಷ್ಟವಲ್ಲ.

ಇದೇ ರೀತಿ ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಲು ಇಂತಹ ನಕಲಿ ವಿಡಿಯೋಗಳನ್ನು ಬಳಸುವ ಸಾಧ್ಯತೆ ಇದೆ. ಗಂಡಸರ ಮೇಲೂ ಇಂತಹ ವಿಡಿಯೋಗಳನ್ನು ಬಳಸಿ ದೌರ್ಜನ್ಯ ಎಸಗಬಹುದು. ಗಂಡ ಹೆಂಡತಿ ಸಂಬಂಧ ಕೆಡಿಸಲು ಇಂತಹ ಡೀಪ್‌ಫೇಕ್‌ ನಕಲಿ ಫೋಟೋ, ವಿಡಿಯೋಗಳನ್ನು ಭವಿಷ್ಯದಲ್ಲಿ ಬಳಸಬಹುದು. ಹೀಗಾಗಿ, ಡೀಪ್‌ಫೇಕ್‌ ಕುರಿತು ಜನಸಾಮಾನ್ಯರಿಂದ ಸೆಲೆಬ್ರೆಟಿಗಳವರೆಗೆ ಎಲ್ಲರಿಗೂ ಆತಂಕವಿದೆ.

ಡೀಪ್‌ಫೇಕ್‌ ಕಡೆಗಣಿಸುವ ತಂತ್ರಜ್ಞಾನವಲ್ಲ

ಒಂದು ಅಂಕ ಕಡಿಮೆ ಬಂತು, ಮೊಬೈಲ್‌ ಕೊಡಲಿಲ್ಲ ಎಂದೆಲ್ಲ ಜೀವ ಕಳೆದುಕೊಳ್ಳುವ ಮಕ್ಕಳು ಇರುವ ದೇಶ ನಮ್ಮದು. ಲೋನ್‌ ಆಪ್‌ನಿಂದ ಸಾಲ ಪಡೆದು ಆ ಆಪ್‌ನವರು ನೀಡುವ ಕಿರುಕುಳ ಸಹಿಸಲಾಗದೆ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬಂದಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ ಎಂದು ತಿಳಿಸಿದರೂ ಪ್ರತಿನಿತ್ಯ ಇಂತಹ ಜಾಲದಿಂದ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಡೀಪ್‌ಫೇಕ್‌ ಮೂಲಕ ತಮ್ಮ ಅಶ್ಲೀಲ ಫೋಟೋ ವಿಡಿಯೋ ಸೃಷ್ಟಿಯಾದಗ ಎಷ್ಟು ಜನರು ಅದನ್ನು ದಿಟ್ಟವಾಗಿ ಎದುರಿಸಬಹುದು? ಶಾಲಾ ವಿದ್ಯಾರ್ಥಿನಿಯೊಬ್ಬರ ಇಂತಹ ವಿಡಿಯೋ ಬಂತು ಎಂದುಕೊಳ್ಳಿ. ಆ ವಿಡಿಯೋ ವೈರಲ್‌ ಆದಾಗ ಆಕೆಯ ಸಹಪಾಠಿಗಳು ಹೇಗೆ ನಡೆಸಿಕೊಳ್ಳಬಹುದು. ಆಕೆಯ ಮನೆಯವರು ಹೇಗೆ ಸ್ವೀಕರಿಸಬಹುದು. ಇನ್ಯಾರದ್ದೋ ಗಂಡಸಿನ/ಹೆಂಗಸಿನ ಅಶ್ಲೀಲ ವಿಡಿಯೋದ ಜತೆ ತನ್ನ ಮುಖ ಕಂಡರೆ ಭಾರತೀಯ ಕುಟುಂಬದ ಗಂಡಸರು/ಹೆಂಗಸರು ಹೇಗೆ ಸ್ವೀಕರಿಸಬಹುದು?

ಹೀಗಾಗಿ ಡೀಪ್‌ಫೇಕ್‌ ಎನ್ನುವುದು ಕಡೆಗಣಿಸಬಹುದಾದ ತಂತ್ರಜ್ಞಾನವಲ್ಲ. ಸರಕಾರ ಈ ಕುರಿತು ಕಠಿಣ ಕ್ರಮ, ನಿಯಮ ರೂಪಿಸಲು ಬದ್ಧರಾಗಿರಬೇಕು. ತಮ್ಮ ರಾಜಕೀಯ ಪ್ರಚಾರದ ಜಾಹೀರಾತುಗಳು, ಸದ್ಯ ಅಗತ್ಯವಿಲ್ಲದ ಜಾಹೀರಾತುಗಳು ಇತ್ಯಾದಿಗಳನ್ನು ಬಿಟ್ಟು ಡೀಪ್‌ಫೇಕ್‌ ತಂತ್ರಜ್ಞಾನ ಇತ್ಯಾದಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಜಾಹೀರಾತುಗಳನ್ನು ಸರಕಾರಗಳು ಪ್ರಕಟಿಸಲು ಆದ್ಯತೆ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ವಿಡಿಯೋ/ಆಡಿಯೋ/ಫೋಟೋಗಳು ಬಂದಾಗ ಜನರು ಧೈರ್ಯ ತಂದುಕೊಳ್ಳಬೇಕು. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ