ಸಿಡಿಲು-ಮಿಂಚು ಬಂದಾಗ ಸ್ಮಾರ್ಟ್‌ಫೋನ್ ಆಫ್ ಮಾಡಬೇಕೇ? ಸಿಡಿಲನ್ನು ಆಕರ್ಷಿಸುತ್ತಾ ಮೊಬೈಲ್ ಡೇಟಾ? ಮಳೆಗಾಲದಲ್ಲಿ ತಿಳಿದಿರಬೇಕಾದ ಮಾಹಿತಿ ಇದು
Jun 30, 2024 06:00 AM IST
ಸಿಡಿಲಿನ ಅಪಾಯ ಹೆಚ್ಚಿಸುತ್ತಾ ಸ್ಮಾರ್ಟ್‌ಫೋನ್? ಇಲ್ಲಿದೆ ವಿವರ
- ಕರ್ನಾಟಕದ ಕರಾವಳಿಯಲ್ಲಿ ಈ ಬಾರಿ ಮಳೆಯ ಜೊತೆ ಗುಡುಗು, ಮಿಂಚಿನ ಪ್ರಮಾಣ ಕೂಡ ಹೆಚ್ಚಿದೆ. ಈಗಾಗಲೇ ಅನೇಕ ಹಾನಿಗಳು ಸಂಭವಿಸಿವೆ. ಹೀಗೆ ಗುಡುಗು- ಮಿಂಚು ಜೋರಿದ್ದಾಗ ಸ್ಮಾರ್ಟ್‌ಫೋನ್ ಉಪಯೋಗಿಸಬಹುದಾ? ಮೊಬೈಲ್ ಡೇಟಾ ಆನ್ ಇದ್ದರೆ ಏನಾದರು ತೊಂದರೆ ಇದೆಯೇ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. (ಬರಹ: ವಿನಯ್ ಭಟ್)
ಕರ್ನಾಟಕದಲ್ಲಿ ಇದೀಗ ಮಳೆಯ ಆರ್ಭಟ ಜೋರಾಗಿದೆ. ಇನ್ನು ಕೆಲದಿನಗಳಲ್ಲಿ ಇಡೀತ ರಾಜ್ಯದಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ. ಈ ನಡುವೆ ಸಿಡಿಲು ಬಡಿದು ಸಾವನ್ನಪ್ಪುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ನೆರೆ ರಾಜ್ಯದಲ್ಲಿ ಭಾರೀ ಮಳೆ, ಗುಡುಗು-ಮಿಂಚಿನ ಮಧ್ಯೆ 4 ಮಂದಿ ಮರವೊಂದರ ಅಡಿಯಲ್ಲಿ ಕುಳಿತಿದ್ದಾಗ, ಸಿಡಿಲು ಬಡಿದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಐಪಿಎಸ್ ಅಧಿಕಾರಿಯೊಬ್ಬರು ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಇವರಿಗೆ ಸಿಡಿಲು ಬಡಿಯಲು ಕಾರಣ ಮೊಬೈಲ್ ಫೋನ್ ಕಾರಣ ಎಂದು ಹೇಳಿದ್ದರು.
ಐಪಿಎಸ್ ಅಧಿಕಾರಿ ಜುಗಲ್ ಕಿಶೋರ್ ಟ್ವೀಟ್ ಮಾಡಿರುವ ಪ್ರಕಾರ, 'ಮೃತರ ಫೋನ್‌ಗಳಲ್ಲಿ ಇಂಟರ್ನೆಟ್ ಆನ್ ಆಗಿತ್ತು, ಆದ್ದರಿಂದ ಈ ಅಪಘಾತ ಸಂಭವಿಸಿದೆ. ಹೀಗಾಗಿ ಗುಡುಗು-ಮಿಂಚು ಇದ್ದಾಗ ಫೋನ್ ಅನ್ನು ತಕ್ಷಣವೇ ಏರ್‌ಪ್ಲೇನ್ ಮೋಡ್‌ಗೆ ಹಾಕಬೇಕು. ಏಕೆಂದರೆ ಮಿಂಚು 10 ಸಾವಿರ ವೋಲ್ಟ್‌ಗಳಿಗಿಂತ ಹೆಚ್ಚು ಎಂಬುದನ್ನು ನೆನಪಿಡಿ' ಎಂದು ಬರೆದುಕೊಂಡಿದ್ದರು. ನಂತರ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದರು. ಇದೀಗ ಕಿಶೋರ್ ಅವರು ಮಾಡಿರುವ ಟ್ವೀಟ್ ನಿಜವೇ ಎಂಬ ಪ್ರಶ್ನೆ ಎದ್ದಿದೆ. ಜೋರು ಮಳೆ, ಗುಡುಗು- ಮಿಂಚಿನ ಸಂದರ್ಭ ಫೋನ್ ಬಳಸುವುದರಿಂದ ನಿಜವಾಗಿಯೂ ಅಪಾಯವಿದೆಯೇ? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿಯ ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ಈ ಮಾಹಿತಿಯನ್ನು ವಾಟ್ಸ್ಆ್ಯಪ್ ವಿಶ್ವವಿದ್ಯಾಲಯದ ಜ್ಞಾನ ಎಂದು ಕರೆಯುತ್ತಿದ್ದಾರೆ. ಕೆಲ ಬಳಕೆದಾರರು ಈ ಮಾಹಿತಿಯು ನಿಜವಲ್ಲ ಎಂದು ಬರೆದಿದ್ದಾರೆ. ಸ್ಮಾರ್ಟ್‌ಫೋನ್‌ಗಳು ವಿದ್ಯುಚ್ಛಕ್ತಿಯನ್ನು ಆಕರ್ಷಿಸುತ್ತವೆ ಅಥವಾ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಇಂತಹ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದಿದ್ದಾರೆ.
ಮಳೆಗಾಲದಲ್ಲಿ ಫೋನ್‌ನಿಂದ ವಿದ್ಯುತ್ ಅಪಘಾತ ಸಂಭವಿಸುತ್ತಾ?
ಪ್ರಸ್ತುತ, ಇದರ ಬಗ್ಗೆ ಯಾವುದೇ ಅಧ್ಯಯನಗಳ ನಡೆದ ಬಗ್ಗೆ ಮಾಹಿತಿಯಿಲ್ಲ. ಆದರೆ, ಮಳೆ ಬರುತ್ತಿರುವಾಗ ಫೋನ್ ಬಳಸುವುದು ಅಪಾಯಕಾರಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈಗ ಬರುವ ಮೊಬೈಲ್ ಫೋನ್‌ಗಳಲ್ಲಿ ವಿದ್ಯುತ್‌ನ ಪ್ರಭಾವದಿಂದ ರಕ್ಷಿಸಲು ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್‌ಫರೆನ್ಸ್ ನೀಡಲಾಗಿದೆ. ಹೀಗಾಗಿ ಮೊಬೈಲ್ ಘಟಕಗಳು ವಿದ್ಯುತ್ ಆಕರ್ಷಿಸುವುದಿಲ್ಲ. ಫೋನ್‌ಗಳು ರೇಡಿಯೊವೆಬ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಮಿಂಚಿನ ಸಮಯದಲ್ಲಿ ಸೆಲ್ ಫೋನ್ ಬಳಸಬಹುದು ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ, ಗುಡುಗು-ಮಿಂಚಿನ ಸಂದರ್ಭ ಮೊಬೈಲ್ ಚಾರ್ಜರ್‌ಗೆ ಕನೆಕ್ಟ್ ಆಗಿರಬಾರದು.
ಮಿಂಚಿನ ಸಮಯದಲ್ಲಿ ಏನು ಮಾಡಬೇಕು?
ನಿಮ್ಮ ಬಳಿ ಫೋನ್ ಇದೆಯೋ ಇಲ್ಲವೊ ಅದು ಮುಖ್ಯವಲ್ಲ, ಆದರೆ ನೀವು ತೆರೆದ ಜಾಗದಲ್ಲಿ ಇದ್ದರೆ ಮತ್ತು ಸಮೀಪದಲ್ಲಿ ಯಾವುದೇ ಅರ್ಥಿಂಗ್ ಇಲ್ಲದಿದ್ದರೆ ಖಂಡಿತವಾಗಿಯೂ ಸಿಡಿಲು ಬಡಿತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಮಳೆ ಮತ್ತು ಮಿಂಚಿನ ಸಮಯದಲ್ಲಿ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ಆಫ್ ಮಾಡುವುದು ಅನಿವಾರ್ಯವಲ್ಲ, ಆದರೆ ಸುರಕ್ಷಿತವಾಗಿರಲು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮುಖ್ಯ. ಇದಕ್ಕಾಗಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಮಳೆಗಾಲದಲ್ಲಿ ಮೊಬೈಲ್ ಬಳಸುವಾಗ ಈ ಅಂಶಗಳನ್ನು ನೆನಪಿಡಿ
1) ಭಾರೀ ಮಳೆ, ಗುಡುಗು ಅಥವಾ ಮಿಂಚು ಬಂದಾಗ, ಫೋನ್ ಅನ್ನು ಚಾರ್ಜ್ ಮಾಡಬೇಡಿ. ವಿದ್ಯುತ್ ಆಘಾತದ ಅಪಾಯವಿರುತ್ತದೆ, ಇದು ಫೋನ್ ಮತ್ತು ಚಾರ್ಜರ್ ಎರಡನ್ನೂ ಹಾನಿಗೊಳಿಸುತ್ತದೆ.
2) ಮಳೆಯ ಸಮಯದಲ್ಲಿ, ಫೋನ್ ಅನ್ನು ಒಣಗಿದ ಸ್ಥಳದಲ್ಲಿ ಇರಿಸಿ ಮತ್ತು ಒದ್ದೆಯಾಗದಂತೆ ನೋಡಿಕೊಳ್ಳಿ. ನೀರಿನಿಂದ ಫೋನ್ ಹಾಳಾಗಬಹುದು.
3) ಮಿಂಚಿನ ಸಮಯದಲ್ಲಿ ಫೋಟೊ ಅಥವಾ ವಿಡಿಯೊ ತೆಗೆಯಲು ಹೋಗಬೇಡಿ. ಇದು ಅಪಾಯಕಾರಿಯಾಗಬಹುದು.
4) ಮಳೆ ಮತ್ತು ಮಿಂಚಿನ ಸಮಯದಲ್ಲಿ ಲೋಹದ ತಂತಿಯಿಂದ ಸಂಪರ್ಕ ಹೊಂದಿದ ಯಾವುದೇ ಸಾಧನಗಳನ್ನು ಬಳಸಬಾರದು.