logo
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಮೆಟಾವರ್ಸ್‌ ಲೋಕಕ್ಕೆ ಹೋದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಇದು ವರ್ಚ್ಯುವಲ್‌ ಜಗತ್ತಿನ ಕ್ರೈಂ ಸ್ಟೋರಿ

Digital Jagathu: ಮೆಟಾವರ್ಸ್‌ ಲೋಕಕ್ಕೆ ಹೋದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಇದು ವರ್ಚ್ಯುವಲ್‌ ಜಗತ್ತಿನ ಕ್ರೈಂ ಸ್ಟೋರಿ

Praveen Chandra B HT Kannada

Jan 04, 2024 01:02 PM IST

google News

ಮೆಟಾವರ್ಸ್‌ ಎಂದರೇನು- ಹೊಸ ತಂತ್ರಜ್ಞಾನದ ಪರಿಚಯ

    • Metaverse and Virtual Assault: ಮೆಟಾವರ್ಸ್‌ ಎಂದರೇನು? ಮೆಟಾವರ್ಸ್‌ನಲ್ಲಿ ವರ್ಚ್ಯುಯಲ್‌ ಸಾಮೂಹಿಕ ಅತ್ಯಾಚರ ನಡೆದದ್ದು ಹೇಗೆ? ಭವಿಷ್ಯದ ಅಪಾಯಗಳೇನು? ಡಿಜಿಟಲ್‌ ಜಗತ್ತಿನ ಹೊಸ ತಂತ್ರಜ್ಞಾನದ ಕುರಿತು ಇಲ್ಲೊಂದಿಷ್ಟು ವಿವರ ಇದೆ
ಮೆಟಾವರ್ಸ್‌ ಎಂದರೇನು- ಹೊಸ ತಂತ್ರಜ್ಞಾನದ ಪರಿಚಯ
ಮೆಟಾವರ್ಸ್‌ ಎಂದರೇನು- ಹೊಸ ತಂತ್ರಜ್ಞಾನದ ಪರಿಚಯ

ಮೆಟಾವರ್ಸ್‌ ಗೇಮ್‌ ಆಡುತ್ತಿದ್ದ ಇಂಗ್ಲೆಂಡ್‌ನ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ವರ್ಚ್ಯುಯಲ್‌ ಅತ್ಯಾಚಾರ ನಡೆದಿದೆ. ಇಂಗ್ಲೆಂಡ್‌ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಲ್ಲಿ ಯುವತಿ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆದಿರಲಿಲ್ಲ. ಆದರೆ, ಇಂತಹ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಅನುಭವಿಸುವ ಎಲ್ಲಾ ಮಾನಸಿಕ, ಭಾವನಾತ್ಮಕ ನೋವು ಇವಳಿಗೆ ಆಗಿತ್ತು. ಈ ಘಟನೆಯಿಂದ ಆಕೆ ಆಘಾತಕ್ಕೆ ಒಳಗಾಗಿದ್ದಾಳೆ. ಇಂತಹ ಮೊದಲ ವರ್ಚ್ಯುಯಲ್‌ ಜಗತ್ತಿನ ಕ್ರೈಂ ಸ್ಟೋರಿ ಕುರಿತು ತನಿಖೆ ಆರಂಭವಾಗಿದೆ.

ಇಂತಹ ದೌರ್ಜನ್ಯ ನಡೆಯಲು ಹೇಗೆ ಸಾಧ್ಯ?

ಫೇಸ್‌ಬುಕ್‌ನಲ್ಲಿ ನಮ್ಮ ಫೋಟೋದ ಬದಲು ಡಿಜಿಟಲ್‌ ಅವತಾರ್‌ ಬಳಸಲು ಸಾಧ್ಯವಿದೆ. ಆ ಫೋಟೋದ ಮೇಲೆ ಯಾರಾದರೂ ಚುಚ್ಚಿದರೆ ಅಥವಾ ಕಚ್ಚಿದರೆ ನಮಗೆ ನೋವಾಗದು. ಯಾಕೆಂದರೆ, ಅಲ್ಲಿರೋದೇ ನಮ್ಮ ಕಾಲ್ಪನಿಕ ಡಿಜಿಟಲ್‌ ಫೋಟೋ ಅಷ್ಟೇ. ಆ ಡಿಜಿಟಲ್‌ ಅವತಾರ್‌ಗೂ ನಮ್ಮ ದೇಹಕ್ಕೂ ಯಾವುದೇ ನೇರ ಕನೆಕ್ಷನ್‌ ಇಲ್ಲ. ಆದರೆ, ಮೆಟಾವರ್ಸ್‌ ಅವತಾರ್‌ ಮೇಲೆ ನಡೆದ ದೌರ್ಜನ್ಯಕ್ಕೆ ಯುವತಿ ಕೇಸ್‌ ನೀಡಿರುವುದೇಕೆ? ಇಂತಹ ಪ್ರಶ್ನೆ ನಿಮ್ಮಲ್ಲಿರಬಹುದು.

ಒಂದು ಕನ್ನಡಕ ಧರಿಸುವ ಮೂಲಕ ನೀವು 3ಡಿ ಸಿನಿಮಾದಲ್ಲಿ ಬೇರೆಯದ್ದೇ ಲೋಕಕ್ಕೆ ಹೋಗುವಿರಿ. ಇದಕ್ಕಿಂತ ಸುಧಾರಿತ 7ಡಿ, 9ಡಿ ಸಿನಿಮಾ ನೋಡಿದರೆ ಈ ಅನುಭವ ಇನ್ನೂ ರೋಚಕವಾಗಿರುತ್ತದೆ. ವರ್ಚ್ಯುಯಲ್‌ ರಿಯಾಲ್ಟಿ, ಆಗ್ಯುಮೆಂಟೆಡ್‌ ರಿಯಾಲಿಟಿಯ ಹಲವು ಗೇಮ್‌ಗಳು ಈಗ ಲಭ್ಯ ಇವೆ. ಮಾಲ್‌ಗಳಲ್ಲಿ ಕಣ್ಣಿಗೆ ವಿಶೇಷ ಸಾಧನ ಧರಿಸಿ ಮಕ್ಕಳು ಶೂಟಿಂಗ್‌, ಫೈಟಿಂಗ್‌ ಗೇಮ್‌ ಆಡುವುದನ್ನು ನೀವು ನೋಡಿರುತ್ತೀರಿ. ಇಲ್ಲಿ ಆಟ ಆಡುವವರು ಆ ಹೊಸ ಡಿಜಿಟಲ್‌ ಜಗತ್ತಿನಲ್ಲೇ ಇರುವಂತಹ ಫೀಲ್‌ನಲ್ಲಿರುತ್ತಾರೆ. ಇದೇ ರೀತಿ ವರ್ಚ್ಯುಯಲ್‌ ಜಗತ್ತಿನಲ್ಲಿ ಹೆಚ್ಚು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಅದೇ ಮೆಟಾವರ್ಸ್‌ ಜಗತ್ತು.

ಘಟನೆಯ ವಿವರ

ಈ ಇಂಗ್ಲೆಂಡ್‌ ಯುವತಿಯು ಮೆಟಾವರ್ಸ್‌ ಗೇಮ್‌ಗಾಗಿ ಹೆಡ್‌ಸೆಟ್‌ ಧರಿಸಿದ್ದಳು. ಈ ಮೂಲಕ ಮೆಟಾವರ್ಸ್‌ ಜಗತ್ತಿನಲ್ಲಿ ತನ್ನಂತೆಯೇ ಇರುವ ಇತರೆ ಅವತಾರ್‌ಗಳ ಜತೆ ತಾನು ಒಬ್ಬಳಾಗಿದ್ದಳು. ದೇಹ ಮಾತ್ರ ಇಲ್ಲಿರುತ್ತದೆ, ಮನಸ್ಸು, ಭಾವನೆ ಆ ಮೆಟಾವರ್ಸ್‌ ಲೋಕದಲ್ಲಿರುತ್ತದೆ. ಈಕೆಯ ಮೆಟಾವರ್ಸ್‌ ಅವತಾರ್‌ನ ಕೆನ್ನೆಗೆ ಯಾರಾದರೂ ಒಂದು ಏಟು ನೀಡಿದರೆ ಹೆಡ್‌ಸೆಟ್‌ ಧರಿಸಿರುವ ಈಕೆಗೆ ಪೆಟ್ಟು ಬಿದ್ದಂತೆ ಆಗುತ್ತದೆ. ಅಲ್ಲಿ ವೈರಿಗಳಿಗೆ ಶೂಟ್‌ ಮಾಡುವಾಗ ತಾನು ಹೀರೋಯಿನ್‌ ರೀತಿ ಫೀಲ್‌ ಮಾಡಬಹುದು. ಆದರೆ, ಅಲ್ಲಿ ನಡೆದಿರುವುದೇ ಬೇರೆ. ಇತರೆ ಆಟಗಾರರು (ಅವತಾರ್‌ಗಳು) ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ಡಿಜಿಟಲ್‌ ಜಗತ್ತಿನೊಳಗೆ ನಡೆದ ಪ್ರತಿಯೊಂದು ಘಟನೆಗಳು ಇವಳ ಮನಸ್ಸು, ಭಾವನೆಗಳನ್ನು ಘಾಸಿಗೊಳಿಸಿವೆ. ಮೆಟಾವರ್ಸ್‌ ಹೆಡ್‌ಸೆಟ್‌ ತೆಗೆದು ಪಕ್ಕಕ್ಕೆ ಇಟ್ಟರೂ ಆ ಘಟನೆ ಮನಸ್ಸಿನಿಂದ ಮರೆಯಾಗದು.

ಭವಿಷ್ಯದ ಅಪಾಯದ ಮುನ್ನೋಟ

ಪ್ರತಿಯೊಂದು ತಂತ್ರಜ್ಞಾನವೂ ಒಳಿತಿನ ಜತೆ ಕೆಡುಕುಗಳನ್ನೂ ಜತೆಯಾಗಿ ತರುತ್ತವೆ. ಭವಿಷ್ಯದಲ್ಲಿ ಮೆಟಾವರ್ಸ್‌ ಜಗತ್ತು ಈಗಿನ ಫೇಸ್‌ಬುಕ್‌, ವಾಟ್ಸಪ್‌ನಂತೆಯೇ ಇನ್ನೊಂದು ತಂತ್ರಜ್ಞಾನವಾಗಿ ನಮ್ಮೆಲ್ಲರ ಕೈ ಸೇರಬಹುದು. ನಮ್ಮ ಮನೆಯ ಮಕ್ಕಳು ಸೇರಿದಂತೆ ಎಲ್ಲರೂ ಇಂತಹ ತಂತ್ರಜ್ಞಾನ ಬಳಸಬಹುದು. ಆಗಲೂ ಇಂಗ್ಲೆಂಡ್‌ ಯುವತಿ ಮೇಲೆ ನಡೆದ ದೌರ್ಜನ್ಯ ಲಕ್ಷಾಂತರ ಎಳೆಯ ಮಕ್ಕಳ ಮೇಲೆ, ಮಹಿಳೆಯರ ಮೇಲೆ, ಗಂಡು ಮಕ್ಕಳ ಮೇಲೆ ನಡೆಯಬಹುದು. ಹೇ ಅದು ಡಿಜಿಟಲ್‌ ಅತ್ಯಾಚಾರ ಎಂದು ಕಡೆಗಣಿಸುವಂತೆ ಇಲ್ಲ. ಯಾಕೆಂದರೆ, ದೇಹ ಮತ್ತು ಮನಸ್ಸು ಬೇರೆಬೇರೆ ಅಲ್ವಲ್ಲ.

ಏನಿದು ಮೆಟಾವರ್ಸ್‌?

ಮೆಟಾವರ್ಸ್‌ ಕಲ್ಪನೆಯಲ್ಲ, ಅದೊಂದು ತಂತ್ರಜ್ಞಾನ. ಡಿಜಿಟಲ್‌ ಜಗತ್ತಿನ ಮೆಟಾವರ್ಸ್‌ ಲೋಕದಲ್ಲಿ ನೀವು ಸದಸ್ಯತ್ವ ಪಡೆಯಬಹುದು. ಅಲ್ಲಿ ಆಸ್ತಿ ಖರೀದಿಸಬಹುದು. ಎನ್‌ಎಫ್‌ಟಿ ಖರೀದಿಸಬಹುದು. ಕ್ರಿಪ್ಟೊಕರೆನ್ಸಿ ವಹಿವಾಟು ಮಾಡಬಹುದು. ಅಲ್ಲಿ ಶಾಪಿಂಗ್‌ ಮಾಡಬಹುದು. ಸೈಟ್‌ ಖರೀದಿಸಿ ಮನೆ ಕಟ್ಟಬಹುದು. ಆದರೆ, ಇವೆಲ್ಲ ಡಿಜಿಟಲ್‌ ಮನೆಗಳು. ವಾಸ್ತವದಲ್ಲಿ ಅಥವಾ ನಿಜ ಜಗತ್ತಿನಲ್ಲಿ ಅಂತಹ ಊರು ಇರುವುದಿಲ್ಲ. ಆದರೆ, ಡಿಜಿಟಲ್‌ ಜಗತ್ತಿನೊಳಗೆ ಇಂತಹ ಒಂದು ಲೋಕವನ್ನು ಸೃಷ್ಟಿ ಮಾಡಲಾಗಿರುತ್ತದೆ. ಅಲ್ಲಿ ನೀವು ನಿಮ್ಮ ಒಂದು ಅವತಾರ್‌ ಮೂಲಕ ವ್ಯವಹಾರ ನಡೆಸುವಿರಿ. ಆ ಲೋಕದಲ್ಲಿ ಆ ಅವತಾರ್‌ ನೀವೇ. ನಿಮ್ಮಂತೆಯೇ ಇತರರೂ ಅಲ್ಲಿ ಇರುತ್ತಾರೆ.

ಮೆಟಾವರ್ಸ್‌ ಅನ್ನು 2ಡಿ ಮೂಲಕವೂ ನೋಡಬಹುದು. ಸಾಧನ ಧರಿಸಿ 3ಡಿ ಜಗತ್ತನ್ನೂ ನೋಡಬಹುದು. ವಿಶೇಷ ಗ್ಲೌಸ್‌ ಧರಿಸಿ ಮೆಟಾವರ್ಸ್‌ ಲೋಕ ಪ್ರವೇಶಿಸಿದರೆ ಅಲ್ಲಿರುವ ವಸ್ತುಗಳನ್ನು ಮುಟ್ಟಿದಾಗ ನಿಮಗೆ ಸ್ವತಃ ಮುಟ್ಟಿದಂತೆ ಭಾಸವಾಗುತ್ತದೆ. ಒಟ್ಟಾರೆ, ಇದು ಹೊಸ ಹೈಬ್ರಿಡ್‌ ಲೋಕ. ಫೇಸ್‌ಬುಕ್‌ (ಕಂಪನಿಯ ಹೆಸರೇ ಈಗ ಮೆಟಾ ಆಗಿದೆ), ಗೂಗಲ್‌, ಮೈಕ್ರೊಸಾಫ್ಟ್‌ ಸೇರಿದಂತೆ ಪ್ರಮುಖ ಕಂಪನಿಗಳು ದೊಡ್ಡ ಮಟ್ಟದಲ್ಲಿ ಈ ಮೆಟಾವರ್ಸ್‌ ಕ್ಷೇತ್ರಕ್ಕೆ ಹೂಡಿಕೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಒಂದು ಕಡೆ ಎಐ, ಮೆಷಿನ್‌ ಲರ್ನಿಂಗ್‌ ಇತ್ಯಾದಿಗಳು ನಮ್ಮನ್ನು ಸುತ್ತುವರೆಯಲಿವೆ. ಇನ್ನೊಂದು ಕಡೆ ಮೆಟಾವರ್ಸ್‌ ಇತ್ಯಾದಿಗಳು ಭೂಮಿಯಲ್ಲಿ ಹೊಸ ಯೂನಿವರ್ಸ್‌ ಅಥವಾ ಬ್ರಹ್ಮಾಂಡ ಸೃಷ್ಟಿಸಲಿವೆ. ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಮರಿಮರಿ.. ಮಕ್ಕಳು.. ಮೊಮ್ಮಕ್ಕಳು ಈ ಭೂಮಿಯಲ್ಲಿ ನಾವು ನೋಡದ ಕೇಳದ ಅನುಭವಿಸದ ಹಲವು ಸಂಗತಿಗಳಿಗೆ ಸಾಕ್ಷಿಯಾಗಲಿದ್ದಾರೆ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ