ಡಿಜಿಟಲ್ ಜಗತ್ತು: ಪ್ರೇಮಕಥೆಗಳಿಗೆ ಕೊನೆಯುಂಟೆ ಈ ಮೊಬೈಲ್ ಇರೋತನಕ; ವ್ಯಾಲೆಂಟಿನ್ ದಿನ ಸ್ಮಾರ್ಟ್‌ಫೋನ್‌ಗೆ ಥ್ಯಾಂಕ್ಸ್ ಹೇಳೋಣ ಬನ್ನಿ
Feb 14, 2024 06:00 AM IST
ವ್ಯಾಲೆಂಟಿನ್ ದಿನ ಸ್ಮಾರ್ಟ್‌ಫೋನ್‌ಗೆ ಥ್ಯಾಂಕ್ಸ್ ಹೇಳೋಣ ಬನ್ನಿ
- ಈ ಡಿಜಿಟಲ್ ಜಗತ್ತಿನಲ್ಲಿ ಪ್ರೇಮಕಥೆಗಳು ಹೆಚ್ಚಲು ಮೊಬೈಲ್, ಸ್ಮಾರ್ಟ್‌ಫೋನ್‌ಗಳ ಕೊಡುಗೆ ಸಾಮಾನ್ಯದ್ದಲ್ಲ. ಪ್ರೇಮಿಗಳ ಪಿಸುಮಾತುಗಳಿಗೆ ಕಿವಿಯಾದ, ಎರಡು ಹೃದಯಗಳ ನಡುವಿನ ಕೊಂಡಿಯಾದ ಸ್ಮಾರ್ಟ್‌ಫೋನ್ ನಿಜಕ್ಕೂ ಪ್ರೇಮಿಗಳ ಬೆಸ್ಟ್‌ಫ್ರೆಂಡ್. ವ್ಯಾಲೆಂಟಿನ್ ದಿನದಂದು ಸ್ಮಾರ್ಟ್‌ಫೋನ್‌ಗೆ ಥ್ಯಾಂಕ್ಸ್ ಹೇಳುವ ಮೊದಲು ಒಂದಿಷ್ಟು ವಿಚಾರಗಳನ್ನು ನೆನಪಿಸಿಕೊಳ್ಳೋಣ.
ಈ ಪ್ರೇಮಿಗಳ ದಿನದಂದು ಡಿಜಿಟಲ್ ಜಗತ್ತಿನಲ್ಲಿರುವ ಎಲ್ಲರೂ ಮೊದಲು ಥ್ಯಾಂಕ್ಸ್ ಹೇಳಬೇಕಿರುವುದು ಮೊಬೈಲ್ ಫೋನ್‌ಗೆ. ಅದು ಪುಟ್ಟ ಕೀಬೋರ್ಡ್ ಹ್ಯಾಂಡ್‌ಸೆಟ್ ಆಗಿರಲಿ, ಸ್ಮಾರ್ಟ್‌ಫೋನ್ ಆಗಿರಲಿ. ಈ ಜಗತ್ತಿನಲ್ಲಿ ಇತ್ತೀಚಿನ ದಶಕಗಳಲ್ಲಿ ಹಲವು ಹೃದಯಗಳನ್ನು ಬೆಸೆದ ಕೀರ್ತಿ ಸ್ಮಾರ್ಟ್‌ಫೋನ್‌ಗಳದ್ದು. ಪುಟ್ಟ ಮೊಬೈಲ್‌ನಲ್ಲಿ ಎಷ್ಟೋ ಪ್ರೇಮಿಗಳ ಹೃದಯದ ಮಾತುಗಳು ರವಾನೆಯಾಗಿವೆ. ಲೊಚಕ್ ಲೊಚಕ್ ಮುತ್ತುಗಳಿಗೆ ಕಿವಿಯಾಗಿವೆ. ಪ್ರೇಮಿಗಳು ಗಂಟೆಗಟ್ಟಲೆ ಮಾತನಾಡುವಾಗ ಈ ಮೊಬೈಲ್‌ಗಳು "ಬಿಸಿ"ಯಾಗಿವೆ. ವಿರಹದ ತಾಪಕ್ಕೆ, ಕೋಪಕ್ಕೆ ಪುಡಿಯಾದ ಮೊಬೈಲ್‌ಗಳ ಲೆಕ್ಕ ಇಟ್ಟವರಾರು. ಪ್ರೇಮಿಗಳ ಬಿಕ್ಕಳಿಕೆ, ಕಣ್ಣಿರು, ಬಿಸಿಯುಸಿರು, ನಿಟ್ಟುಸಿರಿಗೆ ಈ ಪುಟ್ಟ ಸಾಧನ ಸಾಕ್ಷಿಯಾಗಿದೆ
ಹತ್ತು ಹದಿನೈದು ವರ್ಷಗಳ ಹಿಂದೆ ಲವ್ ಲೆಟರ್ ತುಂಬಾ ಫೇಮಸ್. ಕಾಗದವೊಂದರಲ್ಲಿ ಮನದ ಮಾತುಗಳನ್ನು ಪೋಣಿಸಿ ಹೇಗೋ ತನ್ನ ಪ್ರೀತಿಯ ಹುಡುಗಿಗೆ ಅಥವಾ ಹುಡುಗನಿಗೆ ತಲುಪಿಸುವ "ಕಷ್ಟ"ವಿತ್ತು. ಆ ಪತ್ರ ಪ್ರೇಮಿಗೆ ತಲುಪುವ ಬದಲು ಇನ್ಯಾರಿಗೋ ತಲುಪಿ ಏನೇನೋ ಆಗುತ್ತಿತ್ತು. ರವಿಚಂದ್ರನ್‌ರ ಯಾರೇ ನೀನು ಚೆಲುವೆ ಸಿನಿಮಾದಂತೆಯೇ ಸಾಕಷ್ಟು ಜನರು ಪತ್ರಮುಖೇನ ಪ್ರೇಮಿಸುತ್ತಿದ್ದರು. ಅಂಚೆಯಣ್ಣ ಪ್ರೇಮ ಸಂದೇಶ ವಾಹಕನಾಗಿದ್ದ. ಈ ಸಮಯದಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳಲ್ಲಿಯೂ ಪ್ರೇಮದ ಪಿಸುಮಾತುಗಳು ಕೇಳುತ್ತಿದ್ದವು. ಲ್ಯಾಂಡ್‌ಫೋನ್‌ನ ಟ್ರಿನ್ ಟ್ರಿನ್ ಸದ್ದು ಪ್ರೀತಿಗೆ ಅಷ್ಟೊಂದು ಖಾಸಗಿತನ ನೀಡುತ್ತಿರಲಿಲ್ಲ.
ಕೀಬೋರ್ಡ್ ಮೊಬೈಲ್ ಬಂದಾಗ ಈ ಲವ್‌ಲೆಟರ್‌ಗಳು ಕಡಿಮೆಯಾದವು. ದಿನಕ್ಕೆ ಉಚಿತವಾಗಿ (ಕೆಲವೊಮ್ಮೆ ಉಚಿತ ಇಲ್ಲದ) ದೊರಕುವ 100 ಎಸ್‌ಎಂಎಸ್ ಮುಗಿಸಿಯೇ ಪ್ರೇಮಿಗಳು ನಿದ್ದೆಗೆ ಜಾರುತ್ತಿದ್ದರು. ಲವ್‌ಲೆಟರ್‌ನಲ್ಲಿ ಪುಟಗಟ್ಟಲೆ ಬರೆದು ಪ್ರೇಮನಿವೇದನೆ ಮಾಡುವವರಿಗೆ ಎಸ್‌ಎಂಎಸ್‌ನಲ್ಲಿ ಐ ಲವ್ ಯು ಎಂಬ ಮೂರು ಪದ ಬರೆದು ಸೆಂಡ್ ಬಟನ್ ಒತ್ತುವಾಗ ಹೃದಯ ಬಾಯಿಗೆ ಬರುತ್ತಿತ್ತು. ಆ ಕಡೆಯಿಂದ ಮಾರುತ್ತರ ತಡವಾದರೆ ಹಾರ್ಟ್‌ನೊಳಗಿನ ಡಬಕ್ ಡಬಕ್ ಹೊರಗಿನವರಿಗೆ ಕೇಳುತ್ತಿತ್ತು.
ಈ ಹ್ಯಾಂಡ್‌ಸೆಟ್ ಕಾಲದಲ್ಲಿ ತಪ್ಪಿ ಬಂದ ಮಿಸ್‌ಕಾಲ್‌ಗಳು ಪ್ರೇಮಿಗಳನ್ನು ಸೃಷ್ಟಿಸುತ್ತಿದ್ದವು. ಫೋನ್‌ನಲ್ಲಿಯೇ ಲವ್ ಆಗಿ ಓಡಿಹೋದವರಿಗೆ ಲೆಕ್ಕವಿಲ್ಲ. ಅಂದದ ಧ್ವನಿ ಕೇಳಿ ಅಂದದ ಹುಡುಗಿಯಾಗಿರಬಹುದು ಎಂದುಕೊಂಡು ಭೇಟಿಯಾದಾಗ ಭ್ರಮನಿರಸನಗೊಂಡವರೂ ಇದ್ದಾರೆ. ನಯವಿನಯ ಮಾತುಕೇಳಿ ಹರೆಯದ ಹುಡುಗ ಎಂದುಕೊಂಡು ಅಂಕಲ್‌ಗಳನ್ನ ಭೇಟಿಯಾದ ಯುವತಿಯರಿಗೂ ಲೆಕ್ಕವಿಲ್ಲ. ಮನಸ್ಸು ಬಿಚ್ಚಿ ಮಾತನಾಡಲು, ಪ್ರೀತಿಯ ಎಸ್‌ಎಂಎಸ್ ಕಳುಹಿಸಲು ಈ ಪುಟ್ಟಹ್ಯಾಂಡ್ ಸೆಟ್‌ಗಳು ನೆರವಾಗಿದ್ದವು. ಆ ಕಾಲದಲ್ಲಿ "ಎಂಎಂಎಸ್"ಗಳೂ ಸುದ್ದಿಯಾಗುತ್ತಿದ್ದವು.
ಸ್ಮಾರ್ಟ್‌ಫೋನ್ ಕಾಲದ ಪ್ರೀತಿ
ಸ್ಮಾರ್ಟ್‌ಫೋನ್ ಮತ್ತು ಕಡಿಮೆ ದರದ ಇಂಟರ್‌ನೆಟ್ "ಪ್ರೀತಿಯ ವೇಗವನ್ನು" ಹೆಚ್ಚಿಸಿದ್ದು ಸುಳ್ಳಲ್ಲ. ಯುವಕ ಮತ್ತು ಯುವತಿಯ ನಡುವೆ ವಾಟ್ಸಪ್, ಫೇಸ್‌ಬುಕ್ ಮುಂತಾದ ಕಡೆ ಒಂದು ಹಾಯ್ ಸಂದೇಶಕ್ಕೆ ಮಾರುತ್ತರ ಬಂತೆಂದರೆ ಬಳಿಕ ಲೆಕ್ಕವಿಲ್ಲದ ಸಂದೇಶಗಳ ಮಹಾಪೂರ ಬರುತ್ತದೆ. ನಿಂತ ಫೋಟೋ, ಕೂತ ಫೋಟೋ, ಸೆಲ್ಫಿ ಫೋಟೋ ಬಗೆಬಗೆಯ ಫೋಟೋಗಳು ರವಾನೆಯಾಗುತ್ತವೆ. ಮೆಸೆಜ್ ಮಾಡಿ ಸಾಕಾದರೆ ವಿಡಿಯೋ ಕಾಲ್, ಆಡಿಯೋ ಕಾಲ್ ಮುಖಾಂತರವೂ "ಪ್ರೇಮಕಥೆ" ಮುಂದುವರೆಯುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಲವ್ ಪ್ರಪೋಸ್ ಮಾಡುವುದು ತುಂಬಾ ಸುಲಭ ಎನ್ನುವುದು ಈಗಿನ ಹುಡುಗರ ಅಭಿಪ್ರಾಯ. ಮೊದಲಿಗೆ ಒಂದು ಸ್ಮೈಲಿ ಕಳುಹಿಸುವುದು, ಬಳಿಕ ಕಣ್ಣಲ್ಲಿ ಪ್ರೀತಿ ತುಂಬಿದ ಇಮೋಜಿಗಳನ್ನು ಕಳುಹಿಸುವುದು... ಆ ಕಡೆಯಿಂದಲೂ ಅಂತಹದ್ದೇ ಇಮೋಜಿಗಳು ಬರತೊಡಗಿದರೆ "ಕಿಸ್" ಇಮೋಜಿಗಳನ್ನು ಕಳುಹಿಸಲು ಈಗಿನ ಹುಡುಗರು ಭಯಪಡುವುದಿಲ್ಲ. ಕಿಸ್ ಇಮೋಜಿ ಹಂತ ದಾಟಿದ ಬಳಿಕ "ಲಿಪ್ಸ್" ಇತ್ಯಾದಿ ಇಮೋಜಿಗಳ ರವಾನೆಯಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ತುಂಬಾ ಸ್ಪೀಡ್ ಆಗಿ ಲವ್ ಮಾಡಬಹುದು.
ಮೊಬೈಲ್, ಸ್ಮಾರ್ಟ್‌ಫೋನ್ ಕಾಲದ ಪ್ರೀತಿ "ಸರಿ" ಇಲ್ಲ. ಆ ಲವ್‌ಲೆಟರ್ ಕಾಲವೇ ಸೊಗಸಾಗಿತ್ತು ಎಂದು ಹೇಳುವವರು ಇರಬಹುದು. ಆದರೆ, ಅಂಚೆಯಣ್ಣನಂತೆ ಮೊಬೈಲ್ ಫೋನ್‌ಗಳು ಕೂಡ ಪ್ರೇಮಿಗಳ ನಡುವಿನ ಸಂಪರ್ಕ ಸೇತುವೆ ಅಷ್ಟೇ. ಪ್ರೀತಿಸುವ ಮನಸ್ಸುಗಳ ಪರಿಶುದ್ಧತೆ, ಒಬ್ಬರೊಬ್ಬರ ಮೇಲಿನ ನಂಬಿಕೆ ಇತ್ಯಾದಿಗಳು ಎಂದೆಂದಿಗೂ ಪ್ರೇಮಕಥೆಗಳ ಹೃದಯವಾಗಿರುತ್ತವೆ. ಈ ಸ್ಮಾರ್ಟ್‌ಫೋನ್ ಒಬ್ಬರ ಮಾತುಗಳನ್ನು ಇನ್ನೊಬ್ಬರಿಗೆ ದಾಟಿಸುವ, ಒಬ್ಬರ ಸಂದೇಶಗಳನ್ನು ಇನ್ನೊಬ್ಬರಿಗೆ ಕಳುಹಿಸುವ, ಒಬ್ಬರ ಫೋಟೋ, ವಿಡಿಯೋಗಳನ್ನು ಇನ್ನೊಬ್ಬರಿಗೆ ಕಳುಹಿಸುವ ಸಂವಹನ ಸಾಧನವಷ್ಟೇ. ಎಲ್ಲಾದರೂ ಅದಕ್ಕೂ ಹೃದಯ ಇರುತ್ತಿದ್ದರೆ, ಅದಕ್ಕೂ ಬಾಯಿ ಬರುತ್ತಿದ್ದರೆ ನೈಜ ಪ್ರೀತಿಯ ಕಥೆಗಳನ್ನು ನೋಡಿ ಮನ್ಮಥನಂತೆ ಸಂಭ್ರಮಿಸುತ್ತಿತ್ತು. ಅದೇ ಸಮಯದಲ್ಲಿ ಹಲವು ಜನರಲ್ಲಿ ಪ್ರೀತಿಯ ಚಾಟಿಂಗ್ ಮಾಡುತ್ತ, ಮಲ್ಟಿ ಟಾಸ್ಕಿಂಗ್ ಪ್ರೇಮಿಗಳ "ನೈಜ ಪ್ರೇಮ"ವನ್ನು ಬಿಚ್ಚಿಡುತ್ತಿತ್ತು. ಇದೇ ಸಮಯದಲ್ಲಿ ಮೊಬೈಲ್ ಮೇಲೆ ಪ್ರೀತಿ ಹೆಚ್ಚಾಗಿ ಸಂಬಂಧಗಳು ದೂರವಾಗುತ್ತಿರುವುದು ಸುಳ್ಳಲ್ಲ. ಏನೇ ಇರಲಿ, ನಮ್ಮ ಪ್ರೇಮಿಯನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಿಸಿದ "ಮೊಬೈಲ್‌ಗೆ" ಈ ವ್ಯಾಲೆಂಟಿನ್ ದಿನದಂದು ಥ್ಯಾಂಕ್ಸ್ ಹೇಳೋಣ. ಉಳಿದ ವಿಚಾರಗಳ ಕುರಿತು ಇನ್ನೊಂದು ದಿನ ಮಾತನಾಡೋಣ.
ಬರಹ: ಪ್ರವೀಣ್ ಚಂದ್ರ ಪುತ್ತೂರು
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in