logo
ಕನ್ನಡ ಸುದ್ದಿ  /  ಜೀವನಶೈಲಿ  /  Breastfeeding Week 2022: ಇಂದಿನಿಂದ ಸ್ತನ್ಯಪಾನ ಸಪ್ತಾಹ, ಅಮ್ಮನ ಅಮೃತವೇ ಜೀವಾಧಾರ

Breastfeeding Week 2022: ಇಂದಿನಿಂದ ಸ್ತನ್ಯಪಾನ ಸಪ್ತಾಹ, ಅಮ್ಮನ ಅಮೃತವೇ ಜೀವಾಧಾರ

Jayaraj HT Kannada

Aug 01, 2022 05:00 AM IST

google News

ಸಾಂದರ್ಭಿಕ ಚಿತ್ರ

    • ಪ್ರತಿವರ್ಷದಂತೆ ಈ ವರ್ಷವೂ ಸ್ತನ್ಯಪಾನಕ್ಕೆ ಸಂಬಂಧಿಸಿದಂತೆ ಥೀಮ್‌ ಒಂದನ್ನು ಮಾಡಲಾಗಿದೆ. ‘ಸ್ತನ್ಯಪಾನದತ್ತ ಒಂದು ಹೆಜ್ಜೆ ಮುಂದೆ; ಸುಶಿಕ್ಷಿತರನ್ನಾಗಿಸಿ ಮತ್ತು ಬೆಂಬಲಿಸಿ’ ಎಂಬುದು ಈ ವರ್ಷದ ಸಪ್ತಾಹದ ವಿಷಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (freepik)

‘ಅಮ್ಮಾ, ನಿನ್ನ ಎದೆಯಾಳದಲ್ಲಿ...’ ಹಾಡು ಕೇಳಿದಾಕ್ಷಣ ಒಂದು ರೀತಿಯ ರೋಮಾಂಚನ. ಬಾಲ್ಯದಲ್ಲಿ ಅಮ್ಮನ ಸೆರಗಿನಡಿ ಸೇರಿಕೊಂಡು ಬೆಚ್ಚನೆ ನಿದ್ರಿಸುವಾಗ ಸಿಗುವ ಸ್ವರ್ಗಸುಖ, ದುಬಾರಿ ಹಾಸಿಗೆ ಕೊಂಡರೂ ಸಿಗಲು ಸಾಧ್ಯವಿಲ್ಲ. ಅಮ್ಮನ ಮಡಿಲೇ ಮಗುವಿಗೆ ಸುರಕ್ಷಿತ ತಾಣ. ಅಮ್ಮನ ಎದೆಹಾಲೇ ಭೂಲೋಕದ ಅಮೃತ. ಅಮ್ಮನ ಗರ್ಭದೊಳಗೆ ಆರಂಭವಾಗುವ ಅಮ್ಮ-ಮಗುವಿನ ನಂಟು ಏಳೇಳು ಜನ್ಮದಲ್ಲೂ ಮುರಿಯದ ಬಂಧ. ಮಮತೆ, ವಾತ್ಸಲ್ಯ, ಅಕ್ಕರೆ ತೋರುವ ಅಮ್ಮನ ಪ್ರೀತಿಯೇ ಪವಿತ್ರ ಅನುಭೂತಿ.

ತಾಯಿ ಗರ್ಭದಿಂದ ಆರಂಭವಾಗುವ ಅಮ್ಮನ ನಂಟು, ಭೂಮಿಗೆ ಕಾಲಿಡುತ್ತಿದ್ದಂತೆಯೇ ಸ್ತನ್ಯಪಾನದೊಂದಿಗೆ ಆರಂಭವಾಗುತ್ತದೆ. ಸಣ್ಣ ಮಗುವಿಗೆ ಇದೇ ಅಮೃತ, ಇದೇ ಆಹಾರ, ಸಕಲ ರೋಗಗಳಿಗೂ ಇದೇ ಔಷಧ. ಅನಾದಿ ಕಾಲದಿಂದಲೂ ತಾಯಿಯು ಮಗುವಿಗೆ ಹಾಲುಣಿಸುವ ಪ್ರಕೃತಿದತ್ತವಾದ ಕ್ರಿಯೆ ನಡೆಯುತ್ತಾ ಬಂದಿದೆ. ಕಾಲ ಕಾಲಕ್ಕೆ ಈ ಕ್ರಮದಲ್ಲೂ ಬದಲಾವಣೆಯೂ ನಡೆದಿದೆ. ಕೆಲ ಆಧುನಿಕ ತಾಯಂದಿರು, ತಮ್ಮ ಸೌಂದರ್ಯ ಕಳೆಗುಂದುತ್ತದೆಯೆಂದು, ಮಗುವಿಗೆ ಎದೆಹಾಲನ್ನು ಉಣಿಸುವುದನ್ನು ಬಿಟ್ಟು ಬಿಟ್ಟ ಉದಾಹರಣೆಗಳೂ ನಡೆದಿವೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಕೆಲ ಅಸ್ವಾಭಾವಿಕ ಕ್ರಮಗಳು ನಡೆಯದಂತೆ, ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮದ ಅಗತ್ಯವಿತ್ತು. ಇದಕ್ಕಾಗಿಯೇ ಮಗುವಿಗೆ ಹಾಲುಣಿಸುವುದರ ಮಹತ್ವದ ಕುರಿತು ಜನರಿಗೆ ಮಾಹಿತಿ ನೀಡಲು ವಿಶೇಷ ದಿನವೊಂದನ್ನು ಜಾರಿಗೆ ತರಲಾಗಿದೆ.

ಪ್ರತಿವರ್ಷವೂ ಆಗಸ್ಟ್‌ 1ರಿಂದ 7ರವರೆಗೆ, ಅಂದರೆ ಒಂದು ವಾರಗಳ ಕಾಲ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಈ ಪ್ರಮುಖ ದಿನದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತದೆ. ಈ ಜಾಗತಿಕ ಅಭಿಯಾನದ ಮೂಲಕ ಸ್ತನ್ಯಪಾನದ ಮಹತ್ವ ಮತ್ತು ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಿಶ್ವದ ಸುಮಾರು 120 ಕ್ಕೂ ಹೆಚ್ಚು ದೇಶಗಳಲ್ಲಿ ಈ ಅರ್ಥಪೂರ್ಣ ದಿನವನ್ನು ಸಪ್ತಾಹವಾಗಿ ಆಚರಿಸಲಾಗುತ್ತದೆ.

ಸ್ತನ್ಯಪಾನ ಮಗುವಿನ ಆರೋಗ್ಯಕ್ಕೆ ಮಾತ್ರವಲ್ಲ, ತಾಯಿ ಆರೋಗ್ಯಕ್ಕೂ ಉತ್ತಮ. ಹೆಚ್ಚಿನ ತಾಯಂದಿರಲ್ಲಿ, ಮಗುವಿಗೆ ತನ್ನ ಎದೆ ಹಾಲು ಕುಡಿಸಿದರೆ, ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಮಗುವಿಗೆ ತಾಯಿಯಾದವಳು ತನ್ನ ಎದೆ ಹಾಲು ನೀಡುವುದರಿಂದ ಶರೀರದ ಕೊಬ್ಬಿನಂಶ ಕರಗಿ ತಾಯಿಯ ಸೌಂದರ್ಯವೂ ಹೆಚ್ಚುತ್ತದೆ. ಆದ್ದರಿಂದ ಇಂಥ ತಪ್ಪು ಕಲ್ಪನೆಯಿಂದ ಮಹಿಳೆಯರು ಹೊರಬರಬೇಕಾಗಿದೆ.

ಸ್ತನ್ಯಪಾನ ಸಪ್ತಾಹದ ಈ ವರ್ಷದ ಥೀಮ್‌ ಅಥವಾ ವಿಷಯ

ಪ್ರತಿವರ್ಷದಂತೆ ಈ ವರ್ಷವೂ ಸ್ತನ್ಯಪಾನಕ್ಕೆ ಸಂಬಂಧಿಸಿದಂತೆ ಥೀಮ್‌ ಒಂದನ್ನು ಮಾಡಲಾಗಿದೆ. ‘ಸ್ತನ್ಯಪಾನದತ್ತ ಒಂದು ಹೆಜ್ಜೆ ಮುಂದೆ; ಸುಶಿಕ್ಷಿತರನ್ನಾಗಿಸಿ ಮತ್ತು ಬೆಂಬಲಿಸಿ’ ಎಂಬುದು ಈ ವರ್ಷದ ಸ್ತನ್ಯಪಾನ ಸಪ್ತಾಹದ ವಿಷಯವಾಗಿದೆ.

ಎದೆ ಹಾಲಿನಲ್ಲಿರುವ ಪ್ರೋಟಿನ್‌ ಅಂಶಗಳು, ಮಗುವಿನ ಬೆಳವಣಿಗೆಗೆ ಸಹಕಾರಿ. ಇದರಲ್ಲಿರುವ ಕೊಬ್ಬಿನಾಂಶವು ಮಗುವಿನ ನರಮಂಡಲ ಬೆಳವಣಿಗೆಗೆ ನೆರವಾಗುತ್ತದೆ. ಮಗು ಬೆಳೆದು ಸದೃಢ ವಯಸ್ಸಿಗೆ ಬಂದ ಬಳಿಕ ಕಬ್ಬಿಣಾಂಶ ಕೊರತೆಯಿಂದುಂಟಾಗುವ ರಕ್ತಹೀನತೆ, ಕ್ಯಾಲ್ಷಿಯಂ ಕೊರತೆ, ಅಲರ್ಜಿ, ರಿಕೆಟ್ಸ್‌, ಬೇಧಿ, ಉಸಿರಾಟ ಸಮಸ್ಯೆ, ಕಾಮಾಲೆ, ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಜಠರ ರೋಗಗಳನ್ನು ತಡೆಗಟ್ಟಬಹುದು. ಅಲ್ಲದೆ ಭವಿಷ್ಯದಲ್ಲಿ ಶರೀರದಲ್ಲಿ ಉಂಟಾಗುವ ರಕ್ತನಾಳ ಸಂಬಂಧಿತ ರೋಗಗಳ ವಿರುದ್ಧ ಹೋರಾಡಲು ಇದು ಸಹಾಯಕ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಯಥೇಚ್ಚವಾಗಿ ಎದೆಹಾಲು ಕುಡಿದ ಮಗುವಿನ ಬೆಳವಣಿಗೆ ಕೂಡಾ ಸರಿಯಾದ ಕ್ರಮದಲ್ಲಿ ಆಗುತ್ತದೆ.

ಸ್ತನ್ಯಪಾನದ ಬಗ್ಗೆ ತಾಯಂದಿರು ಗಮನಿಸಬೇಕಾದ ಪ್ರಮುಖ ಅಂಶಗಳು

-ಮಗು ಹುಟ್ಟಿದ ಒಂದು ಗಂಟೆಯೊಳಗೆ ಮೊದಲ ಬಾರಿಗೆ ಮಗುವಿಗೆ ಹಾಲುಣಿಸಬೇಕು.

-ಮೊದಲ ಮೂರು ದಿನ ಉತ್ಪತ್ತಿಯಾಗುವ ಹಳದಿ ಬಣ್ಣದ ಗಟ್ಟಿ ಹಾಲನ್ನು, ಯಾವುದೇ ಕಾರಣಕ್ಕೂ ಹಿಂಡಿ ಹೊರಚೆಲ್ಲಬಾರದು. ಇದರಲ್ಲಿ ಹೆಚ್ಚು ಪ್ರೋಟಿನ್‌, ಖನಿಜಾಂಶಗಳು, ಎ ಜೀವಸತ್ವಗಳು ಹೇರಳವಾಗಿರುತ್ತದೆ. ಈ ಹಾಲನ್ನು ಮಗುವಿಗೆ ಉಣಿಸಲೇಬೇಕು. ಇದು ಮಗುವಿಗೆ ಮೊದಲ ಲಸಿಕೆ ಇದ್ದಂತೆ ಎನ್ನುತ್ತಾರೆ ತಜ್ಞರು.

-ಮಗುವಿಗೆ ಆರು ತಿಂಗಳು ತುಂಬುವವರೆಗೂ, ಎದೆ ಹಾಲನ್ನು ಮಾತ್ರ ಕುಡಿಸಬೇಕು. ಬಿರು ಬಿಸಿಲಿನ ಬೇಸಿಗೆಯಿದ್ದರೂ, ನೀರು ಕುಡಿಸುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆ ಮೇರೆಗೆ ಮಾತ್ರವೇ ಔಷಧಗಳನ್ನು ನೀಡಬೇಕು. ಇತರ ಯಾವುದೇ ಪೂರಕ ಆಹಾರಗಳನ್ನು 6 ತಿಂಗಳ ಬಳಿಕವೇ ನೀಡಬೇಕು.

-ಮಗುವಿಗೆ 2 ವರ್ಷ ತುಂಬುವವರೆಗೆ ಕಡ್ಡಾಯವಾಗಿ ಹಾಲುಣಿಸಬೇಕು. ಅದನ್ನು 2 ವರ್ಷ 6 ತಿಂಗಳವರೆಗೂ ಮುಂದುವರೆಸಬಹುದು.

-ಪೌಡರ್‌ ಹಾಲು ಮತ್ತು ಬಾಟಲಿ ಹಾಲುಗಳಿಂದ ದೂರವಿರಬೇಕು.

ಮಗುವಿಗೆ ಹಾಲುಣಿಸುವ ತಾಯಿಯ ಆಹಾರಕ್ರಮವೂ ಶಿಸ್ತಿನಿಂದ ಇರಬೇಕು. ಬೆಳ್ಳುಳ್ಳಿ, ಹಾಲು ಹಾಗೂ ಹಾಲಿನ ಉತ್ಪನ್ನಗಳು, ತುಪ್ಪ, ಮೆಂತೆಬೀಜ, ಈರುಳ್ಳಿ, ಸೊಪ್ಪು ತರಕಾರಿ, ಮೀನು ಮತ್ತು ಮಾಂಸವನ್ನು ಹೇರಳವಾಗಿ ಸೇವಿಸಬೇಕು. ಆಮ್ಲ ಹಾಗೂ ಲವಣರಸಾತ್ಮಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ