Travel: ಎಡಕಲ್ಲು ಗುಹೆ ನೋಡಿದ್ದೀರಾ? ಪುಟ್ಟಣ್ಣ ಕಣಗಾಲ್ ಸಿನಿಮಾ ಚಿತ್ರೀಕರಣವಾಗಿದ್ದು ಇಲ್ಲೇ!
Jan 16, 2024 02:47 PM IST
ಕೇರಳದ ವಯನಾಡಿನಲ್ಲಿರುವ ಎಡಕಲ್ಲು ಗುಡ್ಡ ಗುಹೆಗಳು
Edakkal Caves: ಕೇರಳದ ವಯನಾಡಿನ ಬಳಿ ಇರುವ ಎಡಕಲ್ ಗುಹೆಗಳು ಚಾರಣಿಗರಿಗೆ ಹೇಳಿ ಮಾಡಿಸಿದಂಥ ಸ್ಥಳ. ಪ್ರತಿದಿನ ನೂರಾರು ಪ್ರವಾಸಿಗಳು ಈ ಸ್ಥಳಕ್ಕೆ ಬಂದು ಹೋಗುತ್ತಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲು ಗುಡ್ಡದ ಮೇಲೆ ಸಿನಿಮಾ ಚಿತ್ರೀಕರಣವಾಗಿದ್ದು ಇದೇ ಸ್ಥಳದಲ್ಲಿ.
Edakkal Caves: ಸಂತೋಷ ಹಾ ಹ ಸಂಗೀತ ಹೊ ಹೊ.. ರಸಮಯ ಸಂಗೀತ.. ಈ ಹಾಡು ಕೇಳಿದ ಕೂಡಲೇ ನಮಗೆ ನೆನಪಾಗುವುದು ಎಡಕಲು ಗುಡ್ಡದ ಮೇಲೆ ಸಿನಿಮಾ. ಜಯಂತಿ ಹಾಗೂ ಚಂದ್ರಶೇಖರ್ ಸ್ಕೂಟರ್‌ನಲ್ಲಿ ಟ್ರಾವೆಲ್ ಮಾಡುವಾಗ ಹಾಡುವ ಹಾಡಿದು. ಅಷ್ಟಕ್ಕೂ ಸಿನಿಮಾದ ಕೆಲವೊಂದು ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆದಿರುವುದು ಎಡಕಲ್ಲು ಬೆಟ್ಟದ ಬಳಿ.
ವೈಯನಾಡಿನಲ್ಲಿರುವ ಎಡಕಲ್ಲು ಗುಹೆ
ಈ ಎಡಕಲ್ಲು ಗುಡ್ಡ ಇರುವುದು ಕೇರಳ ವೈಯನಾಡಿನಲ್ಲಿ. ಕೇರಳದ ಅಂಬಲವಲಯಾಲ್‌ನಿಂದ 6 ಕಿಮೀ ಹಾಗೂ ಸುಲ್ತಾನ್ ಬತ್ತೇರಿಯಿಂದ 14 ಕಿಮೀ ದೂರದಲ್ಲಿದೆ. ವಯನಾಡಿನ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಎಡಕಲ್ಲು ಗುಡ್ಡ ಪ್ರಮುಖವಾದುದು. ಕೇರಳಕ್ಕೆ ಹೋಗುವವರು ತಪ್ಪದೆ ಈ ಸ್ಥಳಕ್ಕೆ ಹೋಗಿ ಬರುತ್ತಾರೆ. ಈ ಗುಹೆ ಸುಮಾರು 4000 ಅಡಿಗಳಷ್ಟು ಎತ್ತರದಲ್ಲಿದೆ. ಮಲಬಾರ್ ಜಿಲ್ಲೆಯ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಫ್ರೆಡ್ ಫಾಸೆಟ್, ಈ ಸ್ಥಳವನ್ನು ಕಂಡುಹಿಡಿದರು. ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದಂಥ ಸ್ಥಳ. ಸುಂದರ ಪ್ರಕೃತಿ ನಡುವೆ ಅಡ್ಡಾಡುತ್ತಿದ್ದರೆ ಇಲ್ಲಿಂದ ವಾಪಸ್ ಹೊರಡಲು ಮನಸ್ಸಾಗುವುದೇ ಇಲ್ಲ.
ಪೌರಾಣಿಕ ಕಥೆ
ಈ ಸ್ಥಳದ ಬಗ್ಗೆ ಒಂದು ಪೌರಾಣಿಕ ಕಥೆ ಇದೆ. ಶ್ರೀರಾಮ ಹಾಗೂ ಸೀತಾಮಾತೆಯ ಮಕ್ಕಳಾದ ಲವ ಹಾಗೂ ಕುಶರು ಎಸೆದ ಬಾಣಗಳಿಂದ ಇಲ್ಲಿನ ಗುಹೆಗಳು ನಿರ್ಮಾಣವಾದವು ಎಂದು ನಂಬಲಾಗಿದೆ. ಮತ್ತೊಂದು ಕಥೆಯ ಪ್ರಕಾರ ಇಲ್ಲಿ ಕುಟ್ಟಿ ಚಾಥನ್ ಹಾಗೂ ಮುಡಿಯಂಪಿಲ್ಲಿ ದೇವಿಯರು ಈ ಸ್ಥಳದಲ್ಲಿ ನೆಲೆಸಿದ್ದು ಇದಕ್ಕೂ ಮುನ್ನ ಇದು ಜನರ ತೀರ್ಥಸ್ಥಳವಾಗಿತ್ತು. ಸ್ವಂತ ವಾಹನಗಳಲ್ಲಿ ಹೋದರೂ, ಒಂದಿಷ್ಟು ದೂರ ನೀವು ಸುಮಾರು 1.5 ಕಿ.ಮೀ ದೂರದವರೆಗೂ ಕಾಲ್ನಡಿಗೆಯಲ್ಲೇ ಹೋಗಬೇಕು. ಇಲ್ಲಿನ ಗುಹೆಗಳು ನೈಸರ್ಗಿಕ ಶಿಲಾ ರಚನೆಗಳಾಗಿದ್ದು ಬೃಹತ್ ಬಂಡೆಯಿಂದ ವಿಭಜನೆ ಆಗಿರುವಂಥವು. ಕೆಲವೆಡೆ ಸುಮಾರು 6000 ವರ್ಷಗಳ ಹಿಂದಿನ ನವಶಿಲಾಯುಕ್ಕೆ ಸೇರಿದ ರೇಖಾ ಚಿತ್ರಗಳಿವೆ. ಪ್ರವೇಶ ದ್ವಾರದ ಬಳಿ ಬೈಬಲ್‌ನ ಕೆಲವೊಂದು ಶಿಲಾಕೆತ್ತನೆಗಳನ್ನು ಕೂಡಾ ಕಾಣಬಹುದು. ಈ ಸ್ಥಳ ಸಿಂಧೂ ಕಣಿವೆ ನಾಗರೀಕತೆಯೊಂದಿಗೆ ಸಂಬಂಧಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಇದಕ್ಕೆ ಪುರಾವೆ ಎಂಬಂತೆ ಸುಮಾರು 400 ಚಿಹ್ನೆಗಳು ಇತ್ತೀಚೆಗೆ ಪತ್ತೆಯಾಗಿತ್ತು.
ಚಾರಣಿಗರಿಗೆ ಹೇಳಿ ಮಾಡಿಸಿದಂಥ ಸ್ಥಳ
ಮುಖ್ಯರಸ್ತೆಯಿಂದ ಗುಹೆಗಳನ್ನು ತಲುಪಲು ಸುಮಾರು 45 ನಿಮಿಷ ಸಮಯ ಬೇಕು. ಮೈಸೂರು, ಬೆಂಗಳೂರಿನಿಂದ ವಯನಾಡಿಗೆ ತೆರಳಿ ಅಲ್ಲಿಂದ ಸುಲ್ತಾನ್ ಬತೇರಿ, ಅಂಬಾಲವಾಯರ್ ಕಡೆಗೆ ತೆರಳಬೇಕು. ಅಲ್ಲಿಂದ ನಿಮಗೆ ಖಾಸಗಿ ಬಸ್‌ಗಳು, ಆಟೋರಿಕ್ಷಾಗಳು ದೊರೆಯುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಎಡಕಲ್ಲು ಗುಡ್ಡಕ್ಕೆ ತೆರಳಿದರೆ ನಿಮಗೆ ದೊರೆಯುವ ಅನುಭವವೇ ಬೇರೆ. ಆದರೆ ಮಳೆಗಾಲದಲ್ಲಿ ಟ್ರಾವೆಲ್ ಮಾಡುವವರು ಬಹಳ ಜಾಗರೂಕರಾಗಿರಬೇಕು. ಇಲ್ಲಿನ ಬಂಡೆಗಳು, ಕಲ್ಲಿನ ಮೆಟ್ಟಿಲುಗಳು ಜಾರುವುದರಿಂದ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದ ಇರಬೇಕು. ಚಾರಣಿಗರಿಗೆ ಇದು ಹೇಳಿ ಮಾಡಿಸಿದಂಥ ಶ ಸದ್ಯದಲ್ಲೇ ಟ್ರಿಪ್ ಪ್ಲಾನ್ ಮಾಡುವವರು ಒಮ್ಮೆ ಇಲ್ಲಿಗೆ ಹೋಗಿ ಬನ್ನಿ.