ಈ ದೀಪಾವಳಿಗೆ ಕೊನೆ ಕ್ಷಣದಲ್ಲಿ ಟ್ರಿಪ್ ಪ್ಲಾನ್ ಮಾಡಿದ್ರೆ ಜೇಬಿಗೆ ಕತ್ತರಿ ಖಂಡಿತ; ಶೇ 30ರಷ್ಟು ಏರಿಕೆಯಾಗಿದೆ ಹೋಟೆಲ್, ಫ್ಲೈಟ್ ದರ
Nov 09, 2023 07:45 AM IST
ಈ ದೀಪಾವಳಿಗೆ ಕೊನೆಯ ಕ್ಷಣದಲ್ಲಿ ಟ್ರಿಪ್ ಪ್ಲಾನ್ ಮಾಡಿದ್ರೆ ಜೇಬಿಗೆ ಕತ್ತರಿ ಖಂಡಿತ
- ದೀಪವಾಳಿಗೆ ಮೂರ್ನಾಲ್ಕು ದಿನ ರಜೆ ಇದೆ, ವೀಕೆಂಡ್ ಬೇರೆ ಈ ಬಾರಿ ಎಲ್ಲಾದ್ರೂ ಟ್ರಿಪ್‌ಗೆ ಹೋಗೋಣ ಅಂತ ಪ್ಲಾನ್ ಮಾಡಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಂಡಿತ. ಈ ವರ್ಷ ದೀಪಾವಳಿಗೆ ಪ್ರವಾಸಿಗರ ಬೇಡಿಕೆ ಹೆಚ್ಚಿದಂತೆ ಬೆಲೆಯೂ ಏರಿಕೆಯಾಗಿದೆ. ಶೇ 20 ರಿಂದ 30 ರಷ್ಟು ವಿಮಾನ ಹಾಗೂ ಹೋಟೆಲ್ ದರಗಳಲ್ಲಿ ಏರಿಕೆಯಾಗಿದೆ.
ದೇಶದಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ವೀಕೆಂಡ್‌ನಲ್ಲಿ ಹಬ್ಬದ ಬಂದಿರುವುದು ಖುಷಿ ಹೆಚ್ಚಲು ಇನ್ನೊಂದು ಕಾರಣವಾಗಿದೆ. ಹಬ್ಬದ ದಿನಗಳು, ರಜೆ ಎಂದಾಕ್ಷಣ ಊರಿಗೆ ಹೊರಡುವವರು, ಪ್ರವಾಸಕ್ಕೆ ಹೊರಡುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ದೀಪಾವಳಿ ಹಬ್ಬ ಭಾರತದ ಸಾಂಪ್ರದಾಯಿಕ ಹಬ್ಬ, ಪ್ರತಿ ಮನೆ ಮನೆಯಲ್ಲೂ ದೀಪಾವಳಿ ಆಚರಿಸುತ್ತಾರೆ, ಆದರೂ ಕೂಡ ಪ್ರವಾಸ ಆಯೋಜಿಸುವವರ ಸಂಖ್ಯೆ ಕಡಿಮೆ ಇರುವುದಿಲ್ಲ. ಇದು ಟ್ರಾವೆಲ್ ಇಂಡಸ್ಟ್ರಿಯವರಿಗೆ ಮಹತ್ವದ ಸಂಗತಿಯಾಗುವುದರಲ್ಲಿ ಅನುಮಾನವಿಲ್ಲ. ಆ ಕಾರಣಗಳಿಂದ ಟ್ರಾವೆಲ್‌ಗಳಿಗೆ ಬೇಡಿಕೆ ಹೆಚ್ಚುವುದು ಮಾತ್ರವಲ್ಲ, ಇದರಿಂದ ಎಲ್ಲೆಡೆ ಬೆಲೆ ಹೆಚ್ಚಳವಾಗುವುದನ್ನೂ ಗಮನಿಸಬಹುದು.
ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥ ರಾಜೀವ್ ಕಲೆ ʼಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 100 ರಷ್ಟು ಗ್ರಾಹಕರ ಬೇಡಿಕೆ ಹೆಚ್ಚಿದೆʼ ಎನ್ನುತ್ತಾರೆ.
ಇಕ್ಸಿಗೊದ ಅಲೋಕ್ ಬಾಜಪೇಯಿ ಅವರು ಎಕನಾಮಿಕ್ ಟೈಮ್ಸ್‌ಗೆ ನೀಡಿದ ಹೇಳಿಕೆಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 12ರಷ್ಟು ಅಡ್ವಾನ್ಸ್ ಬುಕ್ಕಿಂಗ್ ಪ್ರಮಾಣದಲ್ಲಿ ಏರಿಕೆಯಾಗಿದೆ.
ಕೊನೆ ಕ್ಷಣದಲ್ಲಿ ಪ್ಲಾನ್ ಮಾಡುವವರ ಜೇಬಿಗೆ ಕತ್ತರಿ
ಈ ದೀಪಾವಳಿಯಲ್ಲಿ ಎಲ್ಲೆಡೆ ಟ್ರಾವೆಲಿಂಗ್‌ಗೆ ಬೇಡಿಕೆ ಹೆಚ್ಚಿರುವ ಕಾರಣ ಕೊನೆ ಕ್ಷಣದಲ್ಲಿ ಪ್ರವಾಸ ಅಥವಾ ಊರಿಗೆ ಹೊರಡಲು ಪ್ಲಾನ್ ಮಾಡುವವರ ಜೇಬಿಗೆ ಕತ್ತರಿ ಬೀಳುವುದು ಖಂಡಿತ.
ʼ15 ದಿನಗಳ ಹಿಂದೆ ಬುಕ್ ಮಾಡಿರುವವರಿಗೆ ಹೋಲಿಸಿದರೆ ಕೊನೆಯ ಕ್ಷಣದಲ್ಲಿ ಬುಕ್ ಮಾಡುವವರು ಶೇ 30 ರಷ್ಟು ಅಧಿಕ ವೆಚ್ಚ ಪಾವತಿಸಬೇಕಾಗುವುದು ಖಂಡಿತ ಎಂದು ಯಾತ್ರಾ ಆನ್‌ಲೈನ್‌ನ ಭರತ್ ಮಲ್ಲಿಕ್ ಹೇಳುತ್ತಾರೆ. ಇವರ ಪ್ರಕಾರ ಈ ವರ್ಷ ವಿಮಾನ ಹಾಗೂ ಹೋಟೆಲ್ ಎರಡರ ದರದಲ್ಲೂ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಶೇ 20 ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ.
ಅದರಲ್ಲೂ ಕೆಲವೊಂದು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಬೆಲೆ ಏರಿಕೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಗುವಾಹಟಿ, ಬೆಂಗಳೂರು, ಹೈದ್ರಾಬಾದ್, ಮುಂಬೈ, ದೆಹಲಿ, ಗೋವಾ, ಮೈಸೂರು, ಉದಯ್‌ಪುರ ಹಾಗೂ ಕಾಶ್ಮೀರ ಈ ಸ್ಥಳಗಳಲ್ಲಿ ಬೆಲೆ ಏರಿಕೆ ಗಮನಿಸಬಹುದು.
ದೀಪಾವಳಿ ಸಮಯದಲ್ಲಿ ಪ್ರವಾಸಿಗರು 3 ದಿನಗಳ ಕಾಲ ತಂಗುವ ಪ್ಲಾನ್ ಮಾಡಿರುವುದನ್ನು ಗಮನಿಸಬಹುದು. ಈ ಸಮಯದಲ್ಲಿ ಒಬ್ಬರಿಗೆ 30,000 ದಷ್ಟು ಖರ್ಚಾಗಬಹುದು.
ಭಾರತದ ಪ್ರವಾಸಿಗರು
ಬೆಲೆ ಏರಿಕೆ ಹೆಚ್ಚಿದಂತೆ ಇನ್ನೊಂದು ಮುಖ್ಯವಾದ ವಿಷಯವನ್ನು ಗಮನಿಸಬೇಕಿದೆ. ಥಾಮಸ್ ಕುಕ್ ಅವರ ಡೇಟಾ ವರದಿಯ ಪ್ರಕಾರ ಭಾರತಿಯ ಪ್ರವಾಸಿಗರು ಉಳಿತಾಯದಿಂದ ಖರ್ಚಿನತ್ತ ಮುಖ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲಿನ ದಿನಗಳಿಗೆ ಹೋಲಿಸಿದರೆ ಈಗ ಶೇ 20 ರಿಂದ 30 ರಷ್ಟು ಮಂದಿ ತಮ್ಮ ರಜಾದಿನಗಳಲ್ಲಿ ಪ್ರವಾಸಕ್ಕೆ ಹಣ ಖರ್ಚು ಮಾಡುವ ಮನೋಭಾವ ಹೊಂದಿದ್ದಾರೆ.
ವಿದೇಶ ಪ್ರವಾಸಕ್ಕೂ ಬೇಡಿಕೆ
ದೀಪಾವಳಿ ಸಮಯದಲ್ಲಿ ಕೇವಲ ಭಾರತ ಮಾತ್ರವಲ್ಲ ಹೊರದೇಶಕ್ಕೂ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಅಗೋಡಾದವರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 13 ರಷ್ಟು ವಿದೇಶಕ್ಕೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಹಬ್ಬದ ಸಂಭ್ರಮದ ನಡುವೆ ಅಮೆರಿಕೆ, ಇಂಗ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್‌ನಂತಹ ದೇಶಗಳಿಗೂ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ.