logo
ಕನ್ನಡ ಸುದ್ದಿ  /  ಜೀವನಶೈಲಿ  /  Summer Holidays: ಬೇಸಿಗೆ ರಜೆಗೆ ಪ್ರವಾಸ ಹೊರಡಲು ಸಜ್ಜಾಗಿದ್ದೀರಾ, ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ ಈ 6 ಅಂಶ ಗಮನಿಸಿ

Summer Holidays: ಬೇಸಿಗೆ ರಜೆಗೆ ಪ್ರವಾಸ ಹೊರಡಲು ಸಜ್ಜಾಗಿದ್ದೀರಾ, ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ ಈ 6 ಅಂಶ ಗಮನಿಸಿ

Reshma HT Kannada

Mar 29, 2024 04:06 PM IST

google News

ಬೇಸಿಗೆ ರಜೆಗೆ ಪ್ರವಾಸ ಹೊರಡಲು ಸಜ್ಜಾಗಿದ್ದೀರಾ, ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ ಈ 6 ಅಂಶ ಗಮನಿಸಿ

    • ಪ್ರತಿ ವರ್ಷ ಬೇಸಿಗೆ ರಜೆ ಬಂತು ಎಂದಾಗ ಪೋಷಕರು ಪ್ರವಾಸ ಆಯೋಜಿಸುತ್ತಾರೆ. ಮಕ್ಕಳಿಗೆ ಒಂದೆರಡು ತಿಂಗಳ ರಜೆ ಇರುವ ಕಾರಣ ಎಲ್ಲಾದ್ರು ತಿರುಗಾಡಿ ಬರೋಣ ಎಂದುಕೊಳ್ಳುವುದು ಸಹಜ. ಬೇಸಿಗೆ ರಜೆಗೆ ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ 6 ಅಂಶಗಳನ್ನು ತಪ್ಪದೇ ಗಮನಿಸಬೇಕು.
ಬೇಸಿಗೆ ರಜೆಗೆ ಪ್ರವಾಸ ಹೊರಡಲು ಸಜ್ಜಾಗಿದ್ದೀರಾ, ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ ಈ 6 ಅಂಶ ಗಮನಿಸಿ
ಬೇಸಿಗೆ ರಜೆಗೆ ಪ್ರವಾಸ ಹೊರಡಲು ಸಜ್ಜಾಗಿದ್ದೀರಾ, ಟೂರ್‌ ಪ್ಯಾಕೇಜ್‌ ಆಯ್ಕೆ ಮಾಡುವ ಮುನ್ನ ಈ 6 ಅಂಶ ಗಮನಿಸಿ

ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಟ್ರಾವೆಲಿಂಗ್‌ ಸಂಸ್ಥೆಗಳು ವಿಶೇಷ ಟೂರ್‌ ಪ್ಯಾಕೇಜ್‌ಗಳನ್ನು ಘೋಷಿಸುತ್ತವೆ. ಆ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತವೆ. ಇದರೊಂದಿಗೆ ಒಂದಕ್ಕಿಂತ ಒಂದು ವಿಭಿನ್ನ ಪ್ಯಾಕೇಜ್‌ ಘೋಷಿಸುವ ಸಂಸ್ಥೆಗಳು ಅಗ್ಗ ಪ್ಯಾಕೇಜ್‌ಗಳನ್ನು ಇಟ್ಟಿರುತ್ತವೆ. ಇತ್ತೀಚಿನ ದಿನಗಳಲ್ಲಿ ಆಫ್‌ಲೈನ್‌ ಚಾನೆಲ್‌ಗಳಿಗಿಂತ ಆನ್‌ಲೈನ್‌ ಬುಕ್ಕಿಂಗ್‌ ಪ್ರಮಾಣ ಜಾಸ್ತಿ. ನೀವು ಕೂಡ ಆನ್‌ಲೈನ್‌ನಲ್ಲಿ ಟೂರ್‌ ಪ್ಯಾಕೇಜ್‌ ಬುಕ್‌ ಮಾಡುವ ಪ್ಲಾನ್‌ ಮಾಡಿದ್ದರೆ ಈ 6 ಅಂಶಗಳನ್ನು ಗಮನಿಸಿ.

ನಿಮ್ಮ ಬಜೆಟ್‌ನ ತಾಣವನ್ನು ಆಯ್ಕೆ ಮಾಡಿ

ಪ್ರವಾಸ ಆಯೋಜಿಸುವ ಮೊದಲು ಯಾವ ರೀತಿ ಸ್ಥಳಗಳಿಗೆ ಹೋಗಲು ಬಯಸುತ್ತೀರಿ ಎಂಬುದನ್ನು ಮೊದಲು ನಿರ್ಧಾರ ಮಾಡಿ. ಬೀಚ್‌, ರೆಸಾರ್ಟ್‌, ಆಧ್ಯಾತ್ಮಿಕ ತಾಣಗಳು, ಗಿರಿಧಾಮ ಹೀಗೆ ಯಾವ ರೀತಿ ತಾಣಗಳಿಗೆ ಪ್ರವಾಸ ಮಾಡಲು ಬಯಸುತ್ತೀರಿ ಎಂಬುದನ್ನು ಮೊದಲು ನಿರ್ಧಾರ ಮಾಡಿ. ನಂತರ ಆನ್‌ಲೈನ್‌ ಟೂರ್‌ ಪ್ಯಾಕೇಜ್‌ ಆಯೋಜಿಸುವ ಸಂಸ್ಥೆಗಳನ್ನು ಸಂರ್ಪಕಿಸಿ. ಇದರೊಂದಿಗೆ ನಿಮ್ಮ ಬಜೆಟ್‌ಗೆ ಯಾವ ತಾಣ ಹೊಂದುತ್ತದೆ ಎಂಬುದನ್ನು ನಿರ್ಧಾರ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಐಷಾರಾಮಿ ತಾಣಗಳನ್ನು ಬಯಸುವವರು ಅಂತಹ ಟೂರ್‌ ಪ್ಯಾಕೇಜ್‌ಗಳನ್ನೇ ಆಯ್ಕೆ ಮಾಡಬಹುದು. ಕಡಿಮೆ ಬಜೆಟ್‌ನಲ್ಲೂ ಕೂಡ ನೀವು ಅಂದುಕೊಂಡ ಜಾಗವನ್ನು ಅನ್ವೇಷಣೆ ಮಾಡುವ ಅವಕಾಶ ಇರುತ್ತದೆ.

ಅಗ್ಗದ ಪ್ಯಾಕೇಜ್‌ನಲ್ಲಿ ಸೌಲಭ್ಯವೂ ಕಡಿಮೆ ಇರಬಹುದು

ಅಗ್ಗದ ಪ್ಯಾಕೇಜ್‌ಗಳು ನಮ್ಮ ಬಜೆಟ್‌ಗೆ ತಕ್ಕಂತೆ ಇರುವುದು ಸಹಜ, ಆದರೆ ಇವುಗಳಲ್ಲಿ ಸೌಕರ್ಯ ಕಡಿಮೆ ಇರುತ್ತದೆ. ಕೇವಲ ಮೂಲಭೂತ ಸೌಕರ್ಯಗಳಷ್ಟೇ ಇರಬಹುದು. ಇದರಿಂದ ನೀವು ಪ್ರವಾಸದ ಸ್ಥಳದಲ್ಲಿ ಹೆಚ್ಚು ಹಣ ನೀಡಬೇಕಾಗಬಹುದು. ಅಗ್ಗದ ಪ್ಯಾಕೇಜುಗಳು ಸಾಮಾನ್ಯವಾಗಿ ಪ್ರಯಾಣದ ದಿನಾಂಕಗಳು ಅಥವಾ ಪ್ರಯಾಣದ ವಿವರಗಳನ್ನು ಬದಲಾಯಿಸುವ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿರುತ್ತವೆ ಮತ್ತು ಜೊತೆಗೆ ಮರುಪಾವತಿ ಆಯ್ಕೆಯು ಇರುವುದು ಕಡಿಮೆ. ಇನ್ನು ಅಗ್ಗದ ಪ್ಯಾಕೇಜ್‌ನಲ್ಲಿ ಊಟ, ವಸತಿಯಂತಹ ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಬಹುದು.

ಬೇರೆ ಶುಲ್ಕಗಳ ಬಗ್ಗೆಯೂ ಗಮನವಿರಲಿ

ಕೆಲವೊಮ್ಮೆ ಪ್ಯಾಕೇಜ್‌ ಟೂರ್‌ಗಳ ವಿಷಯಕ್ಕೆ ಬಂದಾಗ ಕೆಲವೊಂದು ಅಂಶಗಳು ಮಾತ್ರ ಸೇರಿರುತ್ತವೆ. ಹೆಚ್ಚುವರಿ ಚಟುವಟಿಕೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು. ನಿಮ್ಮಿಷ್ಟದ ಚಟುವಟಿಕೆಗಳಲ್ಲಿ ಭಾಗವಹಿಸಲು ನೀವು ಇನ್ನಷ್ಟು ಶುಲ್ಕವನ್ನು ನೀಡಬೇಕಾಗುತ್ತದೆ. ಪ್ರಯಾಣ ವಿಮೆಯು ಪ್ಯಾಕೇಜ್‌ನ ಭಾಗವಾಗಿಲ್ಲದಿದ್ದರೆ ನೀವು ತೊಂದರೆ ಎದುರಿಸಬೇಕಾಗಬಹುದು. ಹಾಗಾಗಿ ಈ ಎಲ್ಲಾ ಶುಲ್ಕಗಳನ್ನು ಗಮನಿಸಿ ನಂತರವಷ್ಟೇ ಪ್ಯಾಕೇಜ್‌ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ.

ರಿವ್ಯೂ ಪರಿಶೀಲಿಸಿ

ನೀವು ಬುಕ್‌ ಮಾಡಲು ಬಯಸುವ ಪ್ಯಾಕೇಜ್‌ ಬಗ್ಗೆ ಈ ಹಿಂದೆ ಅದೇ ಪ್ಯಾಕೇಜ್‌ ಆಯ್ಕೆ ಮಾಡಿರುವವರು ನೀಡಿದ ರಿವ್ಯೂಗಳನ್ನು ಪರಿಶೀಲಿಸಿ ಅಥವಾ ನಿಮ್ಮ ಪರಿಚಯದವರಿಗೆ ಈ ಬಗ್ಗೆ ತಿಳಿದಿದ್ದರೆ ಅವರ ಅಭಿಪ್ರಾಯ ಪಡೆದುಕೊಳ್ಳಿ. ರಿವ್ಯೂನಲ್ಲಿ ವಿಡಿಯೊ ಅಥವಾ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದರೆ ಅದನ್ನು ನೋಡಿಕೊಳ್ಳಿ.

ಕ್ರೆಡಿಟ್‌ ಕಾರ್ಡ್‌ ಆಫರ್‌ ಗಮನಿಸಿ

ಕೆಲವೊಂದು ಹೋಟೆಲ್‌, ಫ್ಲೈಟ್‌ ಇಂತಹ ಕಡೆಗಳಲ್ಲಿ ನಿಮ್ಮ ಬಳಿ ಇರುವ ಕ್ರೆಡಿಟ್‌ ಕಾರ್ಡ್‌ಗೆ ವಿಶೇಷ ಆಫರ್‌ ನೀಡಿರುತ್ತಾರೆ. ನಿಮ್ಮ ಟೂರ್‌ ಪ್ಯಾಕೇಜ್‌ನಲ್ಲಿ ಅದನ್ನು ಸೇರಿಸಲು ಬರುವುದೇ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಅಲ್ಲದೇ ಟ್ರಾವೆಲರ್‌ಗಳು ಕೂಡ ಕೆಲವು ಸಂದರ್ಭದಲ್ಲಿ ಮಾತ್ರ ವಿಶೇಷ ಪ್ಯಾಕೇಜ್‌ ಘೋಷಿಸುತ್ತಾರೆ. ಅದನ್ನು ಗಮನಿಸಿ. ವಿಶೇಷ ಕೋಡ್‌ಗಳು, ರಿಯಾಯಿತಿ ಇದ್ದರೆ ಬಳಸಿಕೊಳ್ಳಿ. ಕೆಲವೊಮ್ಮೆ ಇಂತಿಷ್ಟು ಜನಕ್ಕಿಂತ ಹೆಚ್ಚಿದ್ದರೆ ವಿಶೇಷ ಆಫರ್‌ ನೀಡುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರನ್ನು ಸೇರಿಸಿಕೊಳ್ಳಿ.

ನಂತರ ಪಾವತಿಸಿ ಸ್ಕೀಮ್‌ಗಳು ಬೇಡ

ಕೆಲವು ಟ್ರಾವೆಲ್‌ ಏಜೆನ್ಸಿಗಳು ಈಗ ಟ್ರಿಪ್‌ ಮಾಡಿ ನಂತರ ಪಾವತಿಸಿ ಎಂದು ಆಫರ್‌ ನೀಡುತ್ತವೆ. ಇದಕ್ಕೆ ನೀವು ಮುಂಗಡವಾಗಿ ಶೇ 15 ರಿಂದ 20 ರಷ್ಟು ನೀಡಬೇಕಾಗುತ್ತದೆ. ನಂತರ ಟ್ರಿಪ್‌ ಮುಗಿಸಿ ಬಂದ ಮೇಲೆ ಉಳಿದ ಹಣವನ್ನು ನೀಡಬೇಕಾಗುತ್ತದೆ. ಆದರೆ ನೀವು ಇದಕ್ಕಾಗಿ ಹೆಚ್ಚುವರಿ ಬಡ್ಡಿಯನ್ನು ನೀಡಬೇಕಾಗುತ್ತದೆ. ಇದು ನಿಮಗೆ ನಂತರದ ದಿನಗಳಲ್ಲಿ ಹೊರೆಯಾಗಬಹುದು. ಹಾಗಾಗಿ ಇಂತಹ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡದೇ ಇರುವುದು ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ