Travel tips for Heart Patients: ಪ್ರಯಾಣದ ಸಮಯದಲ್ಲಿ ಹೃದ್ರೋಗಿಗಳಿಗೆ ನೆರವಾಗುವ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ
Apr 18, 2023 10:00 AM IST
ಪ್ರವಾಸದಲ್ಲಿ ಹೃದ್ರೋಗಿಗಳು ಅನುಸರಿಸಬೇಕಾದ ಸಲಹೆಗಳು
- Travel tips for Heart Patients: ಹೃದ್ರೋಗಿಗಳು ಪ್ರವಾಸದ ಸಮಯದಲ್ಲಿ ಸಾಕಷ್ಟು ಎಚ್ಚರದಿಂದಿರಬೇಕು. ಪ್ರವಾಸದಲ್ಲಿ ಎಂಜಾಯ್ ಮಾಡಬೇಕು ನಿಜ, ಹಾಗಂತ ಎಚ್ಚರ ತಪ್ಪುವುದು ಅಪಾಯಕ್ಕೆ ಕಾರಣವಾಗಬಹುದು. ಹೃದ್ರೋಗಿಗಳು ಪ್ರವಾಸದ ಸಮಯದಲ್ಲಿ ಅನುಸರಿಸಲೇಬೇಕಾದ ಕೆಲವು ಸಲಹೆಗಳು ಹೀಗಿವೆ.
ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಕೊರೊನಾ ಕಾಲದ ನಂತರದಲ್ಲಿ ಹೃದ್ರೋಗಿಗಳ ಪ್ರಮಾಣವು ಹೆಚ್ಚಿದೆ. ಇದು ಬೇಸಿಗೆ ಕಾಲ. ಮಕ್ಕಳಿಗೆ ರಜಾದಿನಗಳು ಆರಂಭವಾಗಿರುವ ಕಾರಣ ಸಮಯದಲ್ಲಿ ಪ್ರವಾಸ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರವಾಸ ಮಾಡುವುದು ಖುಷಿ ವಿಚಾರವೇ ಸರಿ, ಆದರೆ ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡವರು ಹಾಗೂ ಯಾವುದೇ ರೀತಿಯ ಹೃದಯ ಚಿಕಿತ್ಸೆಗೆ ಒಳಗಾದವರು ಪ್ರಯಾಣ ಮಾಡುವಾಗ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ.
ಹಾಗಂತ, ಭಯ ಪಡುವುದು ಬೇಡ. ತಜ್ಞರ ಸಲಹೆಗಳನ್ನು ಪಾಲಿಸುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಬೇಸಿಗೆ ರಜೆ ಎಂದರೆ ವಿಶ್ರಾಂತಿ ಮತ್ತು ಒತ್ತಡವನ್ನು ತೊಡೆದುಹಾಕಲು ಪ್ರಯಾಣಿಸುವುದು, ಆದರೆ ಪ್ರಯಾಣಿಸಲು ಯೋಜಿಸುವ ಹೃದ್ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು. ಅವರಿಗಾಗಿ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.
ಮುಂಬೈನ ಗ್ಲೋಬಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಹಿರಿಯ ವೈದ್ಯರಾದ ಡಾ. ಸಮೀರ್ ಪಾಗಡ್ ಪ್ರಯಾಣದ ಸಮಯದಲ್ಲಿ ಹೃದ್ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
* ಸಾಮಾನ್ಯವಾಗಿ ಪ್ರಯಾಣ ಎಂದರೆ ಸಂತಸ. ಪ್ರವಾಸಕ್ಕೆ ಹೊರಡುವ ಖುಷಿಯ ನಡುವೆ ಔಷಧಿಗಳನ್ನು ಮರೆಯುವುದು ಸಾಮಾನ್ಯ. ಆಂಜಿಯೋಪ್ಲ್ಯಾಸ್ಟಿ ಅಥವಾ ಇತರ ಯಾವುದೇ ಹೃದಯ ಚಿಕಿತ್ಸೆ ಪಡೆದ ನಂತರ ವೈದ್ಯರು ಸೂಚಿಸಿದಂತೆ, ಅವರು ಹೇಳಿದ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಪ್ರಯಾಣಕ್ಕೂ ಮುನ್ನ ಅಗತ್ಯ ಔಷಧಿಗಳನ್ನು ಬ್ಯಾಗ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ನೀವು ಭೇಟಿ ನೀಡುವ ಜಾಗದಲ್ಲಿ ಔಷಧಿ ಸಿಗದೇ ಇರಬಹುದು. ಹೃದಯ ಚಿಕಿತ್ಸೆಗೆ ಒಳಗಾದ ವ್ಯಕ್ತಿಯು ಔಷಧಿಯನ್ನು ತಪ್ಪಿಸುವುದರಿಂದ ಜೀವನಕ್ಕೆ ಹಾನಿಯಾಗಬಹುದು. ಆ ಕಾರಣಕ್ಕೆ ಮರೆಯದೇ ಔಷಧಿಯನ್ನು ಬ್ಯಾಗ್‌ನಲ್ಲಿ ಇರಿಸಿಕೊಳ್ಳಬೇಕು.
* ಪ್ರವಾಸದಲ್ಲಿ ಯಾವುದೇ ಸಾಹಸ ಕ್ರೀಡೆಗಳು, ಬೆಟ್ಟ ಏರುವುದು, ಹೈಕಿಂಗ್‌ನಂತಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಯೋಜನೆ ಇದ್ದರೆ ಹೃದ್ರೋಗ ತಜ್ಞರ ಅಭಿಪ್ರಾಯವನ್ನು ಪಡೆದು ಮುಂದುವರಿಯುವುದು ಉತ್ತಮ.
* ವಿಮಾನದಲ್ಲಿ ತುಂಬಾ ದೂರದವರೆಗೆ ಪ್ರಯಾಣ ಮಾಡುವಾಗ, ಯಾವುದೇ ದೈಹಿಕ ಚಟುವಟಿಕೆ ಇರುವುದಿಲ್ಲ. ಇದು ಅಪಾಯವನ್ನು ತರಬಹುದು. ಆ ಕಾರಣಕ್ಕೆ ಲಘ ವ್ಯಾಯಾಮಗಳಾದ ನಡಿಗೆ ಅಥವಾ ಸ್ಪಾಟ್ ಯೋಗ (ಕುಳಿತಲ್ಲೇ ಯೋಗ ಮಾಡುವುದು) ಇದನ್ನು ಅನುಸರಿಸಬಹುದು.
* ಹೃದ್ರೋಗಿಗಳು ತಮ್ಮ ಆಹಾರಕ್ರಮದ ಮೇಲೆ ಗಮನ ಇಡುವುದು ಬಹಳ ಅವಶ್ಯವಾಗುತ್ತದೆ. ಎಣ್ಣೆ ಪದಾರ್ಥಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳಿಗಿಂತ ತಾಜಾ ಹಣ್ಣು ಹಾಗೂ ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಿ.
* ಪ್ರಯಾಣಕ್ಕೂ ಮುನ್ನ ಇಸಿಜಿ, ಎಕೋಕಾರ್ಡಿಯೋಗ್ರಫಿಯಂತಹ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಇದರಿಂದ ನೀವು ಫಿಟ್ ಆಗಿದ್ದು, ಪ್ರಯಾಣಕ್ಕೆ ಯೋಗ್ಯರಾಗಿದ್ದೀರಿ ಎಂಬುದು ನಿಮಗೆ ತಿಳಿಯುತ್ತದೆ. ಇದರಿಂದ ಒತ್ತಡವೂ ನಿವಾರಣೆಯಾಗುತ್ತದೆ.
* ಕೋವಿಡ್ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಿ.
* ವಿಮಾನದಲ್ಲಿ ಪ್ರಯಾಣಿಸುವವರಾದರೆ ಆರಾಮದಾಯಕ ಎನ್ನಿಸುವ ಚಪ್ಪಲಿಗಳನ್ನು ಧರಿಸಿ. ಸಾಕಷ್ಟು ನೀರು ಕುಡಿಯುತ್ತಲೇ ಇರಿ. ಇದರಿಂದ ನಿರ್ಜಲೀಕರಣ ಸಮಸ್ಯೆಯನ್ನು ತಡೆಯಬಹುದು. ಕಾಲಿಗೆ ಕಂಪ್ರೆಷನ್ ಸಾಕ್ಸ್ ಧರಿಸಬಹುದು. ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆ ಅನ್ನಿಸಿದರೆ ವಿಮಾನದ ಒಳಗಡೆಯೇ ಸಣ್ಣ ನಡಿಗೆ ಮಾಡಿ.
* ಎದೆನೋವು, ಉಸಿರಾಟದ ಸಮಸ್ಯೆ, ಆಯಾಸ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಸ್ಥಳೀಯ ವೈದ್ಯರ ಬಳಿ ತೋರಿಸಿ, ಸಲಹೆ ಪಡೆಯಿರಿ.
ವಿಭಾಗ