Keeping Kids Safe; ರೈಲು ಪ್ರಯಾಣದ ವೇಳೆ ಮಕ್ಕಳು ಜೊತೆಗಿದ್ದರೆ ಈ ಟಿಪ್ಸ್ ಮರೆಯಬೇಡಿ: ನೀವು ತಿಳಿಯಲೇಬೇಕಾದ ಮಕ್ಕಳ ಸುರಕ್ಷಾ ಕ್ರಮಗಳಿವು
Sep 11, 2024 04:03 PM IST
ಅಪರಿಚಿತನ ಕೈಗೆ ಮಗಳನ್ನೇಕೆ ಕೊಟ್ಟಿರಿ ಎಂಬುದು ಅನೇಕರ ಪ್ರಶ್ನೆ; ರೈಲು ಪ್ರಯಾಣದ ವೇಳೆ ಅನುಸರಿಸಬೇಕಾದ ಸುರಕ್ಷಾ ಕ್ರಮ
Keeping Kids Safe on Long Train Journeys; ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ ಎಂಬ ಶೀರ್ಷಿಕೆಯ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದ್ದು, ಅಪರಿಚಿತನ ಕೈಗೆ ಮಗಳನ್ನೇಕೆ ಕೊಟ್ಟಿರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇಲ್ಲಿದೆ ರೈಲು ಪ್ರಯಾಣದ ವೇಳೆ ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ವಿವರ.
ರೈಲು ಪ್ರಯಾಣ ಅದರಲ್ಲೂ ದೀರ್ಘ ದೂರದ ಪ್ರಯಾಣ ವಿಭಿನ್ನ ಅನುಭವಗಳನ್ನು ನೀಡುವಂಥದ್ದು. 20 -22 ಬೋಗಿಗಳ ರೈಲಿನಲ್ಲಿ ನೂರಾರು ಜನ ಅಪರಿಚಿತರು. ಎರಡು ಮೂರು ದಿನಗಳ ಪ್ರಯಾಣವಾದರೆ ಕೇಳುವುದೇ ಬೇಡ. ಪರಸ್ಪರ ಮಾತುಕತೆಗೆ ಇಳಿದು ಪರಿಚಿತರೇ ಆಗಿಬಿಡುತ್ತಾರೆ. ಆದರೆ, ಬಹುತೇಕ ಈ ಪರಿಚಯ ಪ್ರಯಾಣದ ಅವಧಿಗಷ್ಟೇ ಸೀಮಿತವಾಗಿರುತ್ತದೆ ಎಂಬುದೂ ಅಷ್ಟೇ ನಿಜ.
ನಿತ್ಯವೂ ಒಂದಿಲ್ಲೊಂದು ಅಪರಾಧ ಸುದ್ದಿ, ವಂಚನೆಗಳ ಸುದ್ದಿಗಳನ್ನು ಗಮನಿಸುತ್ತಿದ್ದರೆ ಪ್ರಯಾಣದ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ನಿಗಾವಹಿಸುವುದು ಅನಿವಾರ್ಯ. ವಿಶೇಷವಾಗಿ ಪುಟ್ಟ ಮಕ್ಕಳು, ಬಾಲಕಿಯರ ವಿಚಾರದಲ್ಲಿ ಹೆಚ್ಚು ಕಾಳಜಿವಹಿಸಬೇಕು. ಇಷ್ಟೆಲ್ಲ ಪೀಠಿಕೆ ಯಾಕೆ ಎಂಬುದನ್ನು ಕೊನೆಗೆ ತಿಳಿಸುವೆ.
ಇರಲಿ, ಮಕ್ಕಳನ್ನು ದೀರ್ಘ ದೂರದ ರೈಲು ಪ್ರಯಾಣಕ್ಕೆ ಕರೆದೊಯ್ಯುವಾಗ ಗಮನಿಸಲೇಬೇಕಾದ ಹಲವು ಅಂಶಗಳಿವೆ ಅವುಗಳನ್ನೊಮ್ಮೆ ಗಮನಿಸೋಣ.
ಮಕ್ಕಳೊಂದಿಗೆ ದೀರ್ಘ ದೂರದ ರೈಲು ಪ್ರಯಾಣ; ಸುರಕ್ಷತೆ ದೃಷ್ಟಿಯಿಂದ ಗಮನಿಸಬೇಕಾದ ಅಂಶಗಳು
1) ರೈಲು ಹತ್ತುವಾಗ ಮತ್ತು ಹತ್ತಿ ಕುಳಿತ ಬಳಿಕ ನಿಮ್ಮ ಮಗು ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ. ನಿಮ್ಮೊಂದಿಗೇ ಸೀಟಿನಲ್ಲಿ ಕುಳಿತಿರುವುದನ್ನು ಖಾತ್ರಿ ಮಾಡಿಕೊಳ್ಳಿ.
2) ಮಗುವಿನ ಮೇಲೆ ಕಣ್ಣಿಡಿ. ವಿಶೇಷವಾಗಿ ರೈಲು ಚಲಿಸಲಾರಂಭಿಸಿದ ಬಳಿಕ ಎದ್ದು ಒಬ್ಬರೇ ಓಡಾಡದಂತೆ ನೋಡಿಕೊಳ್ಳಿ. ಬಾಗಿಲ ಬಳಿಗೆ ಅಥವಾ ಅಪರಿಚಿತರ ಬಳಿ ಮಗು/ಮಕ್ಕಳು ಹೋಗದಂತೆ ಗಮನಿಸಿ.
3) ಮಗುವಿನ ಕೈಗೆ ಗುರುತು ವಿವರದ ಟ್ಯಾಗ್ ಕಟ್ಟಿರಿ. ಅಥವಾ ಮಗುವಿನ ಸರದ ಲಾಕೆಟ್‌ನಲ್ಲಿಡಿ. ಅಥವಾ ಉಡುಪಿನ ಜೇಬಿನಲ್ಲಿ ದಾಖಲೆ ಪತ್ರದ ಪ್ರತಿ ಇಟ್ಟಿರಿ. ಒಂದೊಮ್ಮೆ ಮಗು ಬೇರ್ಪಟ್ಟರೂ ಟ್ಯಾಗ್‌ನಲ್ಲಿ ಅಥವಾ ಲಾಕೆಟ್ ಅಥವಾ ಜೇಬಿನಲ್ಲಿರುವ ದಾಖಲೆ ಪತ್ರದ ಪ್ರತಿಯ ಸಂಪರ್ಕ ಮಾಹಿತಿ ಉಪಯೋಗಕ್ಕೆ ಬಂದೀತು.
4) ಮಗುವಿಗೆ ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬುದನ್ನು ಮೊದಲೇ ಹೇಳಿಕೊಡಿ. ತುರ್ತುಕರೆ ಮಾಡುವುದಕ್ಕೆ ಅಗತ್ಯ ಮೊಬೈಲ್ ನಂಬರ್ ಕಂಠಪಾಠ ಮಾಡಿಸಿ. ಅದನ್ನು ಮಗು ನೆನಪಿಟ್ಟುಕೊಂಡಿದೆಯಾ ನೋಡಿ.
5) ಅಪರಿಚಿತರೊಂದಿಗೆ ಏನನ್ನೂ ಮಾತನಾಡದಿರುವ ಅಥವಾ ಸ್ವೀಕರಿಸದಿರುವ ಪ್ರಾಮುಖ್ಯವನ್ನು ನಿಮ್ಮ ಮಗುವಿಗೆ ವಿವರಿಸಿ ಜಾಗೃತಗೊಳಿಸಿ. ಅಪರಿಚಿತರ ನಡವಳಿಕೆ ಗಮನಿಸುವುದನ್ನು ಮಗುವಿಗೆ ಹೇಳಿಕೊಡಬೇಕು. ಪುಟ್ಟ ಮಗುವಾದರೆ ಅಪರಿಚಿತರ ಕೈಗೆ ಕೊಡಬೇಡಿ.
6) ಅಪರಿಚಿತರ ಜೊತೆಗೆ ವ್ಯವಹರಿಸುವುದರಿಂದ ಎದುರಾಗಬಹುದಾದ ಸಂಭಾವ್ಯ ಅಪಾಯಗಳು- ಮಗುವಿನ ಅಪಹರಣ, ನಗ ನಗದು ದೋಚಬಹುದು, ಅವರು ಕೊಡುವ ತಿನಿಸು, ಪಾನೀಯ ಸೇವಿಸಿದರೆ ಬೇರೆ ರೀತಿಯ ಸಂಕಷ್ಟಗಳೂ ಎದುರಾಗಬಹುದು. ಈ ಕುರಿತು ರೈಲ್ವೆ ಕೂಡ ಎಚ್ಚರಿಕೆ ಸಂದೇಶವನ್ನು ನೀಡುತ್ತಿರುತ್ತದೆ.
7) ಮಗು/ ಮಕ್ಕಳೊಂದಿಗೆ ಪ್ರಯಾಣಿಸುವಾಗ ನಿಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಕಡೆಗೂ ನಿಗಾವಹಿಸಿ. ಅಪರಿಚಿತರ ಜೊತೆಗೆ ವ್ಯವಹರಿಸಬೇಕಾಗಿ ಬಂದಾಗ ಮಕ್ಕಳ ಮೇಲೆ ನಿಗಾ ಇರಲಿ. ಪರಿಸ್ಥಿತಿ ಇರಿಸುಮುರಿಸು ತರುವಂತಿದ್ದರೆ ಭಾರತೀಯ ರೈಲ್ವೆಯ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಸಹಾಯ ಕೇಳಬಹುದು. ಅಥವಾ 139ಕ್ಕೆ ಕರೆ ಮಾಡಬಹುದು. ಅದೂ ಅಲ್ಲದೇ ಇದ್ದರೆ ಪೊಲೀಸ್ ಕಂಟ್ರೋಲ್ ರೂಮ್ 100, 112ಕ್ಕೆ ಕರೆ ಮಾಡಬಹುದು.
ಮಕ್ಕಳ ಸುರಕ್ಷೆ ವಿಚಾರ ಚರ್ಚೆಗೆ ಗ್ರಾಸ ಒದಗಿಸಿತು ಇನ್‌ಸ್ಟಾಗ್ರಾಂ ವಿಡಿಯೋ
ಇಷ್ಟು ವಿಷಯ ಯಾಕೆ ಹೇಳಬೇಕಾಗಿ ಬಂತು ಎಂದರೆ, ಕಾರಣ ಇದು - “ನನ್ನ ಮಗಳನ್ನು ಆಟ ಆಡಿಸ್ತಾ ಕಣ್ಣೀರು ಸುರಿಸಿದ ಅಪರಿಚಿತ; ವೈರಲ್ ಆಯಿತು ಪ್ರೊಫೆಸರ್ ಮಮ್ಮಿ ಇನ್‌ಸ್ಟಾಗ್ರಾಂ ವಿಡಿಯೋ”
ಈ ವಿಡಿಯೋಕ್ಕೆ ಕಾಮೆಂಟ್ ಮಾಡಿದ ಹಲವರು ಮಕ್ಕಳ ಸುರಕ್ಷೆ ವಿಚಾರ ಪ್ರಸ್ತಾಪಿಸಿದ್ದಾರೆ.
ಐಶ್ವರ್ಯ ಈಟ್ಸ್ ಎಂಬುವವರು "ದಯವಿಟ್ಟು ನಿಮ್ಮ ಮಗುವನ್ನು ಯಾದೃಚ್ಛಿಕವಾಗಿ ಭೇಟಿಯಾದ ವ್ಯಕ್ತಿಯ ಕೈಗೆ ಕೊಡಬೇಡಿ. ಅವರನ್ನು ನಂಬಬೇಡಿ. ನೀವು ಅದೃಷ್ಟವಂತರು ಅವರು ಒಳ್ಳೆಯವರಾಗಿದ್ದರು. ಆದರೆ ರೈಲಿನಲ್ಲಿ ನಾನು ಮಲಗಿದ್ದಾಗ ಒಬ್ಬ "ಒಳ್ಳೆಯ" ಧಾರ್ಮಿಕ ವ್ಯಕ್ತಿ ನನ್ನ ಉಡುಪಿನೊಳಗೆ ತನ್ನ ಕೈ ಹಾಕಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದ, ಹಾಗಾಗಿ, ಅಪರಿಚಿತರನ್ನು ದಯವಿಟ್ಟು ನಂಬಬೇಡಿ ಎಂದು ಬರೆದುಕೊಂಡಿದ್ದಾರೆ.
ಯಾಝ್‌ಷೆಫ್ ಎಂಬ ವ್ಯಕ್ತಿ, “ಈ ಘಟನೆಯಲ್ಲಿ ಪೇರೆಂಟಿಂಗ್ ಪಾಠ ಇದೆ. ನಿಮ್ಮ ಮಗು ಅಪರಿಚಿತರ ಬಳಿ ಹೋಗದಂತೆ ಪಾಠ ಕಲಿಸಬೇಕು. ಆ ವ್ಯಕ್ತಿ ಸನ್ಯಾಸಿಯೇ ಇರಬಹುದು. ಆದರೂ ಬೇಡ! ಇದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ವ್ಯೂವ್ಸ್ ಮತ್ತು ಲೈಕ್ಸ್‌ಗಾಗಿ ಮಾತ್ರ ಚಂದ” ಎಂದು ಹೇಳಿದ್ದಾರೆ.
"ನಾನಾಗಿದ್ದರೆ ಖಚಿತವಾಗಿ ನನ್ನ ಮಗಳನ್ನು ಹೀಗೆ ಬಿಡುತ್ತಿರಲಿಲ್ಲ. ಅವರ ಉದ್ದೇಶ ಏನೇ ಇದ್ದರೂ ಅವಕಾಶ ನೀಡುತ್ತಿರಲಿಲ್ಲ ಎಂದು ಇದ್ರಿಸ್ಕ್ ಎಂಬುವವರು ಕಾಮೆಂಟ್ ಮಾಡಿದ್ದಾರೆ.