ಸೋಷಿಯಲ್ ಮೀಡಿಯಾದಲ್ಲಿ 'ಬರ್ಡ್ ಟೆಸ್ಟ್' ಟ್ರೆಂಡಿಂಗ್; ಜೋಡಿ ಹಕ್ಕಿಗಳ ಟೆಸ್ಟ್‌ನಲ್ಲಿದೆ ಟ್ವಿಸ್ಟ್
May 10, 2024 05:48 PM IST
ಸೋಷಿಯಲ್ ಮೀಡಿಯಾದಲ್ಲಿ 'ಬರ್ಡ್ ಟೆಸ್ಟ್' ಟ್ರೆಂಡಿಂಗ್
- ಹಸ್ಬೆಂಡ್ ಟೆಸ್ಟ್ ವೈರಲ್ ಆಗುತ್ತಿರುವುದರ ನಡುವೆಯೇ, ಬರ್ಡ್ ಟೆಸ್ಟ್ ಎಂಬ ಹೊಸ ಚಾಲೆಂಜ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಈ ಬರ್ಡ್ ಟೆಸ್ಟ್ ಎಂದರೇನು? ಇದನ್ನು ಯಾರು ಮತ್ತೆ ಯಾಕಾಗಿ ಮಾಡುತ್ತಿದ್ದಾರೆ ಎಂಬುದನ್ನು ನೋಡೋಣ.
ಈ ಸಾಮಾಜಿಕ ಮಾಧ್ಯಮಗಳೇ ಹೀಗೆ. ಅಲ್ಲೊಂದು ಇಲ್ಲೊಂದು ವೈರಲ್ ಆಗುತ್ತಾ ಇರುತ್ತವೆ. ಹೊಸ ಹೊಸ ಟ್ರೆಂಡ್, ಚಾಲೆಂಜ್, ಟೆಸ್ಟ್ ಅಂತೆಲ್ಲಾ ಜನರ ನಡುವೆ ಸುಳಿದಾಡುತ್ತಿರುತ್ತದೆ. ಒಂದು ಕಡೆ ಆರಂಭವಾಗುವ ಒಂದು ಅಭ್ಯಾಸ, ಕೋಟ್ಯಾಂತರ ಜನರಿಗೆ ತಿಳಿದು ಟ್ರೆಂಡ್ ಆಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ಬರ್ಡ್ ಟೆಸ್ಟ್. ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್‌ಟಾಕ್‌ನಲ್ಲಿ ಹಸ್ಬೆಂಡ್ ಟೆಸ್ಟ್ ವೈರಲ್ ಆದ ನಡುವೆಯೇ ಬರ್ಡ್ ಟೆಸ್ಟ್ ಕೂಡಾ ಟ್ರೆಂಡ್ ಆಗುತ್ತಿದೆ. ಈ ಎರಡೂ ಟೆಸ್ಟ್‌ಗಳು ರಿಲೇಷನ್‌ಶಿಪ್‌ಗೆ ಸಂಬಂಧಿಸಿದ್ದು. ಹಾಗಿದ್ರೆ ಬಾಯ್‌ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್ ಎಂಬ ಸಂಬಂಧದ ನಡುವೆ ಸದ್ದು ಮಾಡುತ್ತಿರುವ ಈ ಬರ್ಡ್ ಟೆಸ್ಟ್ ಕುರಿತು ತಿಳಿಯೋಣ.
ಏನಿದು 'ಬರ್ಡ್ ಟೆಸ್ಟ್'?
ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ವಿಶೇಷವಾಗಿ ಟಿಕ್‌ಟಾಕ್‌ನಲ್ಲಿ ಈ ಬರ್ಡ್ ಟೆಸ್ಟ್ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ ಹಲವು ಜೋಡಿಗಳು ತಮ್ಮ ನಡುವೆ ಇದನ್ನು ಪ್ರಾಯೋಗಿಕವಾಗಿ ಪರಿಶೀಲಿಸಿದ್ದಾರೆ. 'ಬರ್ಡ್ ಟೆಸ್ಟ್' ಪ್ರಕಾರ, ಒಬ್ಬರು ತನ್ನ ಸಂಗಾತಿಗೆ ಏನಾದರೂ ಒಂದು ವಾಕ್ಯ ಹೇಳುತ್ತಾರೆ. ಉದಾಹರಣೆಗೆ 'ಹೇ ಅಲ್ಲಿ ನೋಡು, ಆ ಪಕ್ಷಿ ಎಷ್ಟು ಸುಂದರವಾಗಿದೆ', 'ಅಲ್ಲಿ ನೋಡಿ ಪಕ್ಷಿ ಗೂಡುಕಟ್ಟುತ್ತಿದೆ...' ಹೀಗೆ ತಮ್ಮ ನಡುವೆ ನಡೆಯುತ್ತಿರುವ ಸಂಬಾಷಣೆಗೆ ಸಂಬಂಧವೇ ಇಲ್ಲದ ಒಂದು ವಾಕ್ಯ ಹೇಳುತ್ತಾರೆ. ನಂತರ ತಮ್ಮ ಸಂಗಾತಿಯು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಗಮನಿಸುತ್ತಾರೆ.
ಒಂದು ವೇಳೆ ಸಂಗಾತಿಯು ಆ ಮಾತನ್ನು ಸರಿಯಾಗಿ ಕೇಳಿಸಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸಿದರೆ, ಇದು ಅವರ ಸಂಬಂಧವು ದೀರ್ಘಕಾಲ ಉಳಿಯುತ್ತದೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಜೊತೆಗಾರ ಅಥವಾ ಜೊತೆಗಾತಿಯು ಇನ್ನೊಬ್ಬ ವ್ಯಕ್ತಿಯ ಅಭಿಪ್ರಾಯ ಅಥವಾ ದೃಷ್ಟಿಕೋನವನ್ನು ಗೌರವಿಸುತ್ತಾರೆ ಎಂಬುದು ಈ ಪರೀಕ್ಷೆಯ ಕಲ್ಪನೆ.
ಇದನ್ನೂ ಓದಿ | Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ
ಒಂದು ವೇಳೆ ಪಾಲುದಾರನು ಸಂಗಾತಿಯ ಮಾತನ್ನು ನಿರ್ಲಕ್ಷಿಸಿದರೆ, ಅಥವಾ ತಿರಸ್ಕರಿಸುವ ರೀತಿಯಲ್ಲಿ ಅಸಡ್ಡೆಯಿಂದ ಪ್ರತಿಕ್ರಿಯೆ ನೀಡಿದರೆ, ಅದು ಆರೋಗ್ಯಕರ ಸಂಬಂಧದ ಸಂಕೇತ ಅಲ್ಲ. ಜೊತೆಗಾರನು ಇತರ ವ್ಯಕ್ತಿಯೊಂದಿಗೆ ಮಾತನಾಡಲು ಅಥವಾ ಅವರಿಗೆ ಸರಿಯಾಗಿ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ತನ್ನದೇ ಕೆಲಸದಲ್ಲಿ ಮಗನನಾಗಿರುತ್ತಾರೆ ಎಂಬುದನ್ನು ಈ ಬರ್ಡ್ ಟೆಸ್ಟ್ ತೋರಿಸುತ್ತದೆ.
ಟೆಸ್ಟ್‌ನಲ್ಲಿ ಇದೆ ಟ್ವಿಸ್ಟ್
ಒಂದು ವೇಳೆ ಪಾಲುದಾರರು ಬೇರೆ ಯಾವುದೋ ಕೆಲಸದಲ್ಲಿ ನಿರತನಾಗಿದ್ದರೆ, ಅಥವಾ ಗಮನ ಸಂಪೂರ್ಣವಾಗಿ ಒಂದು ನಿರ್ದಿಷ್ಟ ಅಥವಾ ಗಂಭೀರ ವಿಷಯದ ಮೇಲಿದ್ದಾಗ 'ಬರ್ಡ್ ಟೆಸ್ಟ್' ಮಾಡುವಂತಿಲ್ಲ. ಇದೇ ವೇಳೆ, ಒಂದೇ ಪ್ರಯತ್ನದಲ್ಲಿ ಬರ್ಡ್ ಟೆಸ್ಟ್ ನಡೆಸಿದ ಬೆನ್ನಲ್ಲೇ ವ್ಯಕ್ತಿಯ ಕುರಿತು ಅಂತಿಮ ನಿರ್ಧಾರಕ್ಕೆ ಬರಬಾರದು. ಬದಲಾಗಿ, ಅವರ ಮೇಲೆ ಈ ಪರೀಕ್ಷೆಯನ್ನು ಸ್ವಲ್ಪ ಸಮಯದ ಬಳಿಕ ಮತ್ತೆ ಪ್ರಯತ್ನಿಸಬೇಕು. ಅವರ ಪ್ರತಿಕ್ರಿಯೆಯ ಮಾದರಿಯನ್ನು ಕಂಡುಕೊಂಡ ಬಳಿಕ ಒಂದು ನಿರ್ಧಾರಕ್ಕೆ ಬರಬಹುದು. ನಿರಂತರವಾಗಿ ನಕಾರಾತ್ಮಕವಾಗಿದ್ದರೆ, ಸಂಬಂಧದಲ್ಲಿ ಸಮಸ್ಯೆ ಬರಬಹುದು ಎಂಬ ಸುಳಿವು ಸಿಗುತ್ತದೆ. ಆ ಬಳಿಕ ರಿಲೇಶನ್‌ಶಿಪ್ ಮುಂದುವರೆಸುವ ಕುರಿತು ಮಾತನಾಡಬಹುದು.
'ಬರ್ಡ್ ಟೆಸ್ಟ್' ಹಿಂದೆ ನಡೆದಿದೆ ದೊಡ್ಡ ಸಂಶೋಧನೆ
'ಬರ್ಡ್ ಟೆಸ್ಟ್' ಎಂದು ಕರೆಯಲ್ಪಡುವ ಈ ಪರಿಕಲ್ಪನೆಯು, ಮನಶ್ಶಾಸ್ತ್ರಜ್ಞ ಜಾನ್ ಗಾಟ್‌ಮನ್ ಮತ್ತು ಅವರ ಸಹೋದ್ಯೋಗಿ ರಾಬರ್ಟ್ ಲೆವೆನ್‌ಸನ್ ಅವರಿಗೆ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ವಿಷಯವಾಗಿತ್ತು. ಸುದೀರ್ಘ ಆರು ವರ್ಷಗಳ ಸಂಶೋಧನೆಯ ಸಮಯದಲ್ಲಿ, ಗಾಟ್‌ಮನ್ ಮತ್ತು ಲೆವೆನ್‌ಸನ್ ವಿಭಿನ್ನ ದಂಪತಿಗಳ ನಡುವಿನ ಒಂದಷ್ಟು ಅಂಶಗಳನ್ನು ಕಂಡುಕೊಂಡಿದ್ದಾರೆ. ಜೋಡಿ ಜೀವಗಳು ದಿನನಿತ್ಯ ಪರಸ್ಪರ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅವರು ಅಧ್ಯಯನ ಮಾಡಿದರು. ಇಲ್ಲಿ ನಿತ್ಯ ಸಂತೋಷದಿಂದ ಇರುವವರು, ಬ್ರೇಕ್‌ಅಪ್ ಮಾಡಿಕೊಂಡವರು ಮತ್ತು ಅತೃಪ್ತಿಯಿಂದಲೂ ಜೊತೆಯಾಗಿ ಇರುವವರು ಕೂಡಾ ಇದ್ದಾರೆ.
'ಬರ್ಡ್ ಟೆಸ್ಟ್' ಕೇವಲ ಪ್ರೀತಿಯಲ್ಲಿ ಬಿದ್ದಿರುವ ಜೋಡಿಹಕ್ಕಿಗಳಿಗೆ ಮಾತ್ರವಲ್ಲ. ಸ್ನೇಹಿತರು, ಕುಟುಂಬ ಸದಸ್ಯರ ನಡುವೆಯೂ ಮಾಡಬಹುದು. ನಿಮ್ಮನ್ನು ಪ್ರಾಮಾಣಿಕವಾಗಿ ಇಷ್ಟಪಡುವ ಜನರು ಯಾರು ಎಂಬುದನ್ನು ಕಂಡುಹಿಡಿಯಬಹುದು.