ಕಚೇರಿ ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲವೇ? ಹೀಗೆ ಮಾಡಿ ನೋಡಿ
Feb 21, 2023 10:26 AM IST
ಕಚೇರಿ ಕೆಲಸ
- Tricks to concentration on work: ಕೆಲಸದ ಮಧ್ಯೆ ನಿಮ್ಮ ಯೋಚನೆ, ಗಮನ ವಿಚಲಿತವಾಗಿದ್ದರೆ ನೀವು ಈ ಕೆಲವು ತಂತ್ರಗಳ ಮೂಲಕ ಮನಸ್ಸನ್ನು ಮತ್ತೆ ಕೆಲಸದತ್ತ ವಾಲುವಂತೆ ಮಾಡಬಹುದು. ಸುಲಭವಾಗಿ ಕುಳಿತಲ್ಲೇ ಮಾಡುವ ತಂತ್ರಗಳು ಇವಾಗಿದ್ದು, ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ.
ನಾವು ಕಚೇರಿ ಅಥವಾ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಬೇಡವೆಂದರೂ ನಮ್ಮ ಮನಸ್ಸು ವಿಚಲಿತಗೊಳ್ಳುವುದು ಸಾಮಾನ್ಯ. ಇಮೇಲ್ ಸದ್ದು, ಫೋನ್ ಕರೆ, ಮೆಸೇಜ್‌ನ ರಿಂಗ್ ಹೀಗೆ ಯಾವುದಾದರೂ ಕಾರಣಗಳಿಂದ ಕೆಲಸದ ಮೇಲಿಂದ ಗಮನ ಬೇರೆಡೆ ಹೋಗಿರುತ್ತದೆ. ಒಮ್ಮೆ ಬೇರೆಡೆ ಸೆಳೆದ ಗಮನವನ್ನು ಪುನಃ ಕೆಲಸದ ಮೇಲೆ ತರಲು ಹರಸಾಹಸ ಮಾಡುತ್ತೇವೆ. ಕೆಲವೊಮ್ಮೆ ಕೆಲಸಕ್ಕೆ ಸಂಬಂಧಿಸಿದ ಮೇಲ್, ಮೆಸೇಜ್, ಮೀಟಿಂಗ್ ರಿಕ್ವೆಸ್ಟ್ ಇಂಥದ್ದಕ್ಕೂ ಉತ್ತರ ನೀಡಲೇಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹರಿಸಬೇಕಾಗುತ್ತದೆ.
ಆದರೆ ಈ ರೀತಿಯ ವಿಷಯಗಳಿಂದ ಮನಸ್ಸಿಗೆ ಪದೇ ಪದೇ ಕಿರಿಕಿರಿಯಾಗುತ್ತಿದ್ದು, ಕೆಲಸದಿಂದ ಗಮನ ಬೇರೆಡೆ ಹೋಗುತ್ತಿದ್ದರೆ, ಗಂಭೀರವಾಗಿ ಕೆಲಸ ಮಾಡಲು ಕಷ್ಟವಾಗಬಹುದು. ಇದರಿಂದ ಆಸಕ್ತಿಯಿಂದ ಮಾಡುತ್ತಿದ್ದ ಕೆಲಸದ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು ಅಥವಾ ಮುಗಿಯುವುದೇ ಇಲ್ಲ ಎನ್ನಿಸಬಹುದು. ಆದರೆ ಕೆಲಸದ ಮಧ್ಯೆ ನಿಮ್ಮ ಯೋಚನೆ, ಗಮನ ವಿಚಲಿತವಾಗಿದ್ದರೆ ನೀವು ಈ ಕೆಲವು ತಂತ್ರಗಳ ಮೂಲಕ ಮನಸ್ಸನ್ನು ಮತ್ತೆ ಕೆಲಸದತ್ತ ಮರಳಿಸಬಹುದು. ಸುಲಭವಾಗಿ ಕುಳಿತಲ್ಲೇ ಮಾಡುವ ತಂತ್ರಗಳು ಇವಾಗಿದ್ದು, ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ.
ಕುಳಿತುಕೊಳ್ಳುವ ಜಾಗವನ್ನು ಸೆಟ್ ಮಾಡಿ
ನೀವು ಮಾಡುತ್ತಿರುವ ಕೆಲಸದ ಬಗ್ಗೆ ಮನಸ್ಸಿನಲ್ಲಿ ಆಳವಾಗಿ ಯೋಚಿಸಿ. ಕೆಲಸದ ಬಗ್ಗೆ ಪ್ರೀತಿ ಇರಿಸಿಕೊಳ್ಳಿ. ಇದರಿಂದ ಮನಸ್ಸು, ದೇಹ ಎರಡೂ ಪುನಃ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ. ಒಂದು ವೇಳೆ ನಿಮ್ಮ ಗಮನ ಬೇರೆಡೆಗೆ ಸೆಳೆದಿದ್ದರೂ ಆಳ ಮನಸ್ಸಿನಲ್ಲಿ ಕೆಲಸದ ಬಗ್ಗೆ ಪ್ರೀತಿ ಇದ್ದರೆ ಅದು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಇದರಿಂದ ಪುನಃ ನಾವು ಕೆಲಸದ ಮೇಲೆ ಗಮನ ಹರಿಸಲು ಸುಲಭವಾಗುತ್ತದೆ. ಆದರೆ ಕೆಲಸದ ಮೇಲೆ ಗಮನ ಹರಿಸುವ ಮೊದಲು ನಿಮ್ಮ ಗಮನ ಕೆಲಸದತ್ತ ಹರಿಯುವಂತೆ ಮಾಡುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ನಾವು ಕುಳಿತುಕೊಳ್ಳುವ ಜಾಗ ಶಾಂತವಾಗಿ ಹಾಗೂ ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬೇಕು. ನಿಮ್ಮ ಬಳಿ ಶಬ್ದ ನಿಯಂತ್ರಿಸುವ ಇಯರ್ ಫೋನ್, ಬಿಸಿಕಾಫಿ ಅಥವಾ ನೀರು ಇದೆಯೇ ನೋಡಿಕೊಳ್ಳಿ. ಈ ರೀತಿ ನಿಮ್ಮ ಕೆಲಸದ ಸ್ಥಳವನ್ನು ಸೆಟ್ ಮಾಡಿಕೊಳ್ಳುವುದರಿಂದ ನೀವು ಕೆಲಸವನ್ನು ಆಳವಾಗಿ ಪ್ರೀತಿಸಲು ಸಾಧ್ಯ, ಒಂದು ವೇಳೆ ಮನಸ್ಸು ವಿಚಲಿತಗೊಂಡರು ಪುನಃ ಅದರ ಮೇಲೆ ಗಮನ ಹರಿಸಲು ಸಾಧ್ಯ.
ಸಹೋದ್ಯೋಗಿಗಳೊಂದಿಗೆ ಗಡಿ ಹಾಕಿಕೊಳ್ಳಿ
ಕೆಲಸದ ಮೇಲೆ ದೀರ್ಘವಾಗಿ ಗಮನ ಹರಿಸಲು ನಿಮ್ಮ ಸಹೋದ್ಯೋಗಿಗಳ ವಿಚಾರದಲ್ಲಿ ನಿರ್ಬಂಧ ಹಾಕಿಕೊಳ್ಳುವುದು ಬಹಳ ಮುಖ್ಯ. ಕೆಲಸ ಮಾಡುತ್ತಿರುವಾಗ ಡೆಸ್ಕ್ ಬಳಿ ಅತಿಯಾಗಿ ಮಾತನಾಡುವ ನಿಮ್ಮ ಸಹೋದ್ಯೋಗಿ ಬಂದು ಗಮನ ಬೇರೆಡೆ ಸೆಳೆಯುವಂತೆ ಮಾಡಬಹುದು. ಮನೆಯಿಂದ ಕೆಲಸ ಮಾಡುತ್ತಿದ್ದರೆ ಫೋನ್ ಕರೆ ಮಾಡಿ ತೊಂದರೆ ಮಾಡಬಹುದು. ಇದರಿಂದ ಕೆಲಸದ ಮೇಲಿನ ನಿಮ್ಮ ಗಮನ ಬೇರೆಡೆ ಸೆಳೆಯಬಹುದು. ಅಂತಹ ಸಮಯದಲ್ಲಿ ಅವರ ಮಾತನ್ನು ಅರ್ಧ ನಿಲ್ಲಿಸುವಂತೆ ಮಾಡಿ ಮುಖ್ಯವಾದ ಕೆಲಸ ಮಾಡುತ್ತಿರುವುದಾಗಿ ತಿಳಿಸಿ, ಅಲ್ಲದೇ ಕೆಲಸ ಮುಗಿಸಿದ ಮೇಲೆ ಮಾತನಾಡಲು ಬರುವುದಾಗಿ ಹೇಳಿ. ಕೆಲವೊಮ್ಮೆ ನಿಮ್ಮ ಟೇಬಲ್ ಬಳಿ ಬ್ಯುಸಿ ಎಂದಿರುವ ಬೋರ್ಡ್ ಇರಿಸಿಕೊಳ್ಳಬಹುದು ಅಥವಾ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬ್ಯುಸಿ ಎಂದು ಹಾಕಿಕೊಳ್ಳಬಹುದು.
ಕೆಲಸದ ಬಗ್ಗೆ ಬರೆದಿಡಿ
ಸಾಮಾನ್ಯವಾಗಿ ಕೆಲಸದ ಮಧ್ಯದಲ್ಲಿ ಯಾವುದಾದರು ವಿಷಯದಿಂದ ಆಡಚಣೆಯಾದಾಗ ಮಾಡುತ್ತಿದ್ದ ಕೆಲಸ ಮರೆತು ಹೋಗಬಹುದು. ಕೆಲಸದ ಮಧ್ಯ ಮೀಟಿಂಗ್ ಇದ್ದರೆ ಅದರಲ್ಲೂ ಭಾಗವಹಿಸಬೇಕು. ಅಂತಹ ಸಂದರ್ಭದಲ್ಲಿ ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಪುಸಕ್ತವೊಂದರಲ್ಲಿ ಬರೆದಿಡಬೇಕು. ಸದ್ಯಕ್ಕೆ ಏನು ಕೆಲಸ ಮಾಡಬೇಕು ಹಾಗೂ ಮುಂದಿನ ಯೋಜನೆಗಳೇನು ಈ ಎರಡನ್ನೂ ಬರೆದಿಟ್ಟಾಗ ಪುನಃ ಕೆಲಸ ಮಾಡಲು ಆರಂಭಿಸಿದಾಗ ಗೊಂದಲವಿರುವುದಿಲ್ಲ. ಇದರಿಂದ ತಕ್ಷಣಕ್ಕೆ ಪುನಃ ಕೆಲಸ ಆರಂಭಿಸಲು ಸಹಾಯವಾಗುತ್ತದೆ.
ಪೊಮೊಡೊರೊ ತಂತ್ರ ಅಳವಡಿಸಿ
ಇದು ಸಮಯ ನಿರ್ವಹಣೆಯ ತಂತ್ರ. ನೀವು ಗಂಭೀರವಾದ ಅಥವಾ ಬಹಳ ಮುಖ್ಯವಾದ ಕೆಲಸ ಮಾಡುತ್ತಿರುವಾಗ ಈ ತಂತ್ರವನ್ನು ಬಳಸಿಕೊಳ್ಳುವುದು ಉತ್ತಮ. ಒಂದು ಕೆಲಸ ಆರಂಭಿಸಿದ ಮೇಲೆ 20 ಅಥವಾ 25 ನಿಮಿಷಕ್ಕೆ ಅಲಾರಂ ಇರಿಸಿಕೊಳ್ಳಿ. ಅಲಾರಂ ಶಬ್ದವಾದ ಬಳಿಕ 5 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಳ್ಳಿ. ಹೀಗೆ ಮಾಡುತ್ತಾ ಹೋದರೆ ನಿಮಗೆ ಕೆಲಸ ಮುಗಿರುವುದೇ ತಿಳಿದಿರುವುದಿಲ್ಲ.
ಸರಿಯಾಗಿ ನೀರು ಕುಡಿಯಿರಿ
ನೀರು ಕುಡಿಯುವುದರಲ್ಲೇನಿದೆ ವಿಶೇಷ ಇದನ್ನು ಎಲ್ಲರೂ ಮಾಡುತ್ತಾರೆ ಎಂದುಕೊಳ್ಳಬೇಡಿ. ಆದರೆ ಇದು ನಿಜಕ್ಕೂ ಉತ್ತಮ ವಿಧಾನ. ನೀವು ದೇಹದ ಆಯಾಸವನ್ನು ನಿಯಂತ್ರಿಸುತ್ತದೆ. ನಿರ್ಜಲೀಕರಣವಾದಾಗ ದೇಹಕ್ಕೆ ಸುಸ್ತಾಗುತ್ತದೆ. ಆದರೆ ಕೆಲಸದತ್ತ ಗಮನ ಹರಿಸಲು ಕಷ್ಟವಾಗಬಹುದು. ಹಾಗಾಗಿ ನೀರು ಕುಡಿಯುವುದು ಬಹಳ ಮುಖ್ಯ. ನೀರು ಕುಡಿಯುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಎದ್ದು ಹೋಗುತ್ತೇವೆ. ಇದರಿಂದ ಮನಸ್ಸು ಕೊಂಚ ಬೇರೆಡೆ ಸೆಳೆಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಪುನಃ ಬಂದು ಕೆಲಸ ಮಾಡುವಾಗ ಚೈತನ್ಯ ತುಂಬಿರುತ್ತದೆ.
ಬ್ರೇಕ್ ತೆಗೆದುಕೊಳ್ಳಿ
ಬಹಳ ಹೊತ್ತಿನಿಂದ ಕೆಲಸ ಮಾಡುತ್ತಿದ್ದು, ಮನಸ್ಸು ಸ್ಕ್ರೀನ್ ನೋಡಲು ಭಯ ಪಡುತ್ತಿದ್ದರೆ ಒಂದು ಬ್ರೇಕ್ ತೆಗೆದುಕೊಳ್ಳಿ. ಕುಳಿತಲ್ಲಿಂದ ಎದ್ದು ಹೋಗಿ ನೀರು, ಜ್ಯೂಸ್ ಅಥವಾ ಸ್ಕ್ನಾಕ್ಸ್ ಸೇವಿಸಿ. ಆದರೆ ಒಂದು ಸ್ಕ್ರೀನ್‌ನಿಂದ ಬ್ರೇಕ್ ತೆಗೆದುಕೊಂಡಾಗ ಮತ್ತೊಂದ ಸ್ಕ್ರೀನ್ ನೋಡಬೇಡಿ. ಫೋನ್ ಅಥವಾ ಟ್ಯಾಬ್ ನೋಡಬೇಡಿ. ಬಹಳ ಹೊತ್ತಿನಿಂದ ಕೆಲಸ ಮಾಡಿ ಮೆದುಳು ಸುಸ್ತಾಗಿರುತ್ತದೆ, ಪುನಃ ಸಾಮಾಜಿಕ ಜಾಲತಾಣ ಅಥವಾ ನ್ಯೂಸ್ ನೋಡುವ ಮೂಲಕ ಮೆದುಳಿಗೆ ಇನ್ನಷ್ಟು ಕೆಲಸ ಕೊಡಬಾರದು. ಅದದ ಬದಲು ಮನೆಯಿಂದ ಹೊರಗೆ ಸಣ್ಣ ವಾಕ್ ಹೋಗಿ ಅಥವಾ ಶುದ್ಧವಾದ ಗಾಳಿ ಉಸಿರಾಡಿ. ಒಂದು 15 ರಿಂದ 20 ನಿಮಿಷಗಳ ಬ್ರೇಕ್ ತೆಗೆದುಕೊಂಡು ಸ್ಕ್ರೀನ್‌ನಿಂದ ದೂರ ಉಳಿಯುವುದರಿಂದ ಪುನಃ ಕೆಲಸ ಮಾಡಲು ಹುಮ್ಮಸ್ಸು ಮೂಡುತ್ತದೆ.
ಉಸಿರಿನ ಮೇಲೆ ಗಮನ ಹರಿಸಿ
ಕೆಲಸದಲ್ಲಿ ಆಡಚಣೆ ಉಂಟಾದಾಗ ತಕ್ಷಣಕ್ಕೆ ಉಸಿರಿನ ಮೇಲೆ ಗಮನ ಹರಿಸಬೇಕು. ದೀರ್ಘವಾಗಿ ಉಸಿರು ಎಳೆದುಕೊಳ್ಳಬೇಕು. ಇದರಿಂದ ಮನಸ್ಸು ಪುನಃ ನಮ್ಮ ಹಿಡಿತಕ್ಕೆ ಬರುತ್ತದೆ. ಉಸಿರಾಟವು ನಮ್ಮ ನರವ್ಯೂಹವನ್ನು ನಿಯಂತ್ರಿಸಿ, ನಮ್ಮ ಯೋಚನೆ ಬೇರೆಡೆ ಸೆಳೆಯುವುದನ್ನು ತಡೆಯುತ್ತದೆ. 3 ರಿಂದ 5 ನಿಮಿಷಗಳ ಕಾಲ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ಹೊರ ಬಿಡುವುದು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ನಿಮ್ಮ ಮೇಲೆ ಕಾಳಜಿ ತೋರಿ
ಕೆಲವೊಮ್ಮೆ ಅತಿಯಾದ ಕೆಲಸದ ಒತ್ತಡದ ನಡುವೆ ನಾವು ನಮ್ಮ ದೇಹದ ಮೇಲೆ ಗಮನ ಹರಿಸಿರುವುದಿಲ್ಲ. ದೇಹಕ್ಕೆ ಅತಿಯಾಗಿ ಸುಸ್ತಾಗಿರುವುದನ್ನೂ ಗಮನಿಸುವುದಿಲ್ಲ. ಸರಿಯಾಗಿ ನಿದ್ದೆ ಮಾಡದೇ, ಊಟ-ತಿಂಡಿಯನ್ನು ಮಾಡದೆಯೂ ಇರಬಹುದು. ಇದರಿಂದ ಮನಸ್ಸು ಕೂಡ ಕೆಲಸ ಮಾಡಲು ಬಯಸುವುದಿಲ್ಲ. ಆ ಕಾರಣಕ್ಕೆ ಸ್ವ ಕಾಳಜಿ ತೋರುವುದು ಅವಶ್ಯ ಎನ್ನಿಸಿಕೊಳ್ಳುತ್ತದೆ.
ವಿಭಾಗ