logo
ಕನ್ನಡ ಸುದ್ದಿ  /  ಜೀವನಶೈಲಿ  /  Kunigal Stud Farm: ಟಿಪ್ಪು ಕಾಲದ ಕುಣಿಗಲ್‌ ಕುದುರೆ ಫಾರಂಗೆ ಟೌನ್‌ ಶಿಪ್‌ ರೂಪ: ಇತಿಹಾಸ ಸೇರಲಿರುವ ಏಷ್ಯಾದ ದೊಡ್ಡ ಕುದುರೆ ಮೈದಾನ

Kunigal Stud Farm: ಟಿಪ್ಪು ಕಾಲದ ಕುಣಿಗಲ್‌ ಕುದುರೆ ಫಾರಂಗೆ ಟೌನ್‌ ಶಿಪ್‌ ರೂಪ: ಇತಿಹಾಸ ಸೇರಲಿರುವ ಏಷ್ಯಾದ ದೊಡ್ಡ ಕುದುರೆ ಮೈದಾನ

HT Kannada Desk HT Kannada

Dec 28, 2023 10:39 AM IST

google News

ಕುಣಿಗಲ್‌ ಸಮೀಪದ ಸ್ಟಡ್‌ ಫಾರಂಗೆ ಮುಚ್ಚುವ ಭೀತಿ ಶುರುವಾಗಿ ವರ್ಷಗಳೇ ಕಳೆದಿವೆ. ಮುಂದೇನು ಎನ್ನುವ ತೀರ್ಮಾನ ಮಾತ್ರ ಆಗಿಲ್ಲ.

    • ಏಷ್ಯಾದ ಅತಿ ದೊಡ್ಡ ಸ್ಟಡ್‌  ಫಾರ್ಮ್ ಇತಿಹಾಸದ ಪುಟಗಳನ್ನು ಸೇರಲಿದೆಯೆ? ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಇನ್ನು ಮುಂದೆ ಇಲ್ಲಿ ಕುದುರೆ ಸಂತಾನೋತ್ಪತ್ತಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿವೆ. ಇಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕುಣಿಗಲ್‌ ಸಮೀಪದ  ಸ್ಟಡ್‌ ಫಾರಂಗೆ ಮುಚ್ಚುವ ಭೀತಿ ಶುರುವಾಗಿ ವರ್ಷಗಳೇ ಕಳೆದಿವೆ. ಮುಂದೇನು ಎನ್ನುವ ತೀರ್ಮಾನ ಮಾತ್ರ ಆಗಿಲ್ಲ.
ಕುಣಿಗಲ್‌ ಸಮೀಪದ ಸ್ಟಡ್‌ ಫಾರಂಗೆ ಮುಚ್ಚುವ ಭೀತಿ ಶುರುವಾಗಿ ವರ್ಷಗಳೇ ಕಳೆದಿವೆ. ಮುಂದೇನು ಎನ್ನುವ ತೀರ್ಮಾನ ಮಾತ್ರ ಆಗಿಲ್ಲ.

ಬೆಂಗಳೂರು: ಒಂದು ಕಾಲಕ್ಕೆ ಇದು ಅಪ್ರತಿಮ ಕುದುರೆಗಳಿಂದ ತುಂಬಿದ್ದ ಪ್ರಮುಖ ಜಾಗ. ಅಲ್ಲಿನ ಕುದುರೆಗಳಿಗೂ ಎಲ್ಲಿಲ್ಲದ ಬೇಡಿಕೆ. ಟಿಪ್ಪುವಿನಿಂದ ಆರಂಭಗೊಂಡು ವಿಜಯಮಲ್ಯ ಅವರವರೆಗೂ ಇದನ್ನು ನಿಭಾಯಿಸಿದವರೇ. ಈಗ ಕುದುರೆ ಫಾರಂ ಬಹುತೇಕ ಮುಚ್ಚುವ ಕ್ಷಣ. ಕೆಲವೇ ದಿನಗಳಲ್ಲಿ ಇದು ಟೌನ್‌ಶಿಪ್‌ ಆಗಿ ಪರಿವರ್ತನೆಗೊಂಡರೂ ಅಚ್ಚರಿಯಿಲ್ಲ.

ಇದು ತುಮಕೂರು ಜಿಲ್ಲೆಯ ಕುಣಿಗಲ್‌ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ 223 ವರ್ಷಗಳ ಸುದೀರ್ಘ ಇತಿಹಾಸದ ಕುದುರೆ ಫಾರಂ. ಈ ಭಾಗದಲ್ಲಿ ಸ್ಟಡ್‌ ಫಾರಂ ಎಂದರೆ ಜನರಿಗೆ ತಕ್ಷಣಕ್ಕೆ ಗೊತ್ತಾಗಿಬಿಡುತ್ತದೆ.

ಖ್ಯಾತಿ ತಂದು ಕೊಟ್ಟ ಫಾರಂ

ಈ ಕುದುರೆ ಸಂತಾನೋತ್ಪತ್ತಿ ಕೇಂದ್ರವನ್ನು 1790ರಲ್ಲಿ ಟಿಪ್ಪು ಸುಲ್ತಾನ್ ಸ್ಥಾಪಿಸಿದ್ದ. ಬ್ರಿಟೀಷರ ವಿರುದ್ಧ ಹೋರಾಡಲು ಟಿಪ್ಪು ಇಲ್ಲಿ ಕುದುರೆಗಳನ್ನು ಸಾಕುತ್ತಿದ್ದ ಎಂದುಇತಿಹಾಸ ಹೇಳುತ್ತದೆ.

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣಕ್ಕೆ ಹೊಂದಿಕೊಂಡಂತೆ 427 ಎಕರೆಯ ಈ ಸ್ಟಡ್‌ ಫಾರಂನ ಕುದುರೆಗಳೂ ಜಾಗತಿಕ ಮಟ್ಟದ ರೇಸ್ ನಲ್ಲಿ ಭಾಗವಹಿಸಿ ಕುಣಿಗಲ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿವೆ.

ಕುದುರೆ ತಳಿಗಳ ಸಂತಾನೋತ್ಪತ್ತಿಗೆ 1992ರಲ್ಲಿ ಡಾ.ವಿಜಯ್ ಮಲ್ಯ ಈ ಸ್ಟಡ್‌ ಫಾರ್ಮ್ ಅನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದ ಅವಧಿ 30,ಸೆಪ್ಟಂಬರ್ 2022ಕ್ಕೆ ಮುಗಿದಿದೆ.

ಮರು ಟೆಂಡರ್‌

ಬಿಜೆಪಿ ಸರ್ಕಾರ 6,ಜನವರಿ ,2022ರಲ್ಲಿ ಟೆಂಡರ್ ಆಹ್ವಾನಿಸಿತ್ತು. ಒಟ್ಟು ಆರು ಮಂದಿ ಬಿಡ್ಡರ್ ಗಳು ಭಾಗವಹಿಸಿದ್ದು, ಮೂಲಗಳ ಪ್ರಕಾರ ಮತ್ತೊಬ್ಬ ಖ್ಯಾತ ಉದ್ಯಮಿ ಗ್ರೀನ್ ಫೀಲ್ಡ್ ಫಾರ್ಮ್ ಮಾಲೀಕ ವಿಲ್ಲೂ ಪೂನಾವಾಲಾ 1.4 ಕೋಟಿ ರೂ.ಗಳಿಗೆ ಬಿಡ್ ಸಲ್ಲಿಸಿದ್ದರು. 21, ಫೆ.2023ರಂದು ಗುತ್ತಿಗೆ ಯಾರಿಗೆ ಲಭಿಸಿದೆ ಎಂದು ಬಹಿರಂಗಪಡಿಸಬೇಕಿತ್ತು. ಆದರೆ ಈ ವಿಷಯ ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವುದಕ್ಕೂ ಮುನ್ನವೇ ಬಿಜೆಪಿ ಅಧಿಕಾರ ಕಳೆದು ಕೊಂಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಿ 7 ತಿಂಗಳೂ ಕಳೆದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಳೆಯ ಟೆಂಡರ್ ಪ್ರಕ್ರಿಯೆಯನ್ನು ತಡೆ ಹಿಡಿದಿದೆ.

ಈ 400 ಎಕರೆಯ ಪ್ರದೇಶದಲ್ಲಿ ಸಾವಿರಾರು ಅಪರೂಪದ ಮರಗಳಿವೆ. ನವಿಲು ಸೇರಿದಂತೆ ಸಾವಿರಾರು ಪಕ್ಷಿಗಳು ಇಲ್ಲಿ ನೆಲೆ ಕಂಡುಕೊಂಡಿವೆ.

ಒಂದು ವೇಳೆ ಸರ್ಕಾರ ಇಲ್ಲಿ ಟೌನ್ ಶಿಪ್ ಮಾಡಲು ಹೊರಟರೆ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ ಎಂದು ಕುಣಿಗಲ್ ರಕ್ಷಿಸಿ ಸಮಿತಿ ಪ್ರತಿಪಾದಿಸಿದೆ.

ಮಣ್ಣಿನ ಗುಣವೇ ಮುಖ್ಯ

ಇಲ್ಲಿನ ಮಣ್ಣಿನ ಗುಣ ಕುದುರೆ ತಳಿಗಳ ಉತ್ಪಾದನೆಗೆ ಹೇಳಿ ಮಾಡಿಸಿದಂತಿದೆ. ಜಗತ್ತಿನ ಅನೇಕ ಭೂಗರ್ಭ ಶಾಸ್ತ್ರಜ್ಞರು ಇಲ್ಲಿನ ಮಣ್ಣಿನ ಗುಣ ಕುರಿತು ಕೊಂಡಾಡಿದ್ದಾರೆ. ಇಲ್ಲಿನ ಅನೇಕ ಕುದುರೆಗಳು ರೇಸ್ ನಲ್ಲಿ ಗೆಲುವು ಸಾಧಿಸಿವೆ. ಆದ್ದರಿಂದ ಇಲ್ಲಿ ಕುದುರೆ ತಳಿಗಳ ಉತ್ಪಾದನೆಯನ್ನೇ ಮುಂದುವರೆಸಬೇಕು ಎಂದು ಯುನೈಟೆಡ್ ಬ್ರೀವರೀಸ್ ಅಧಿಕಾರಿಗಳೂ ಅಭಿಪ್ರಾಯಪಡುತ್ತಾರೆ.

ಈ ಸ್ಟಡ್‌ಫಾರ್ಮ್ ನಲ್ಲಿ ಕುದುರೆ ಸಾಕಾಣೆ ಬಿಟ್ಟು ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅದರಲ್ಲೂ ಟೌನ್ ಶಿಪ್ ಮಾಡುವುದನ್ನು ವಿರೋಧಿಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಕುಣಿಗಲ್ ರಕ್ಷಿಸಿ ವೇದಿಕೆಯು ಸರ್ಕಾರದ ತನ್ನ ನಿರ್ಧಾರವನ್ನು ಮರು ವಿಮರ್ಶೆ ಮಾಡಬೇಕು. ಇಲ್ಲಿ ಸ್ಟಡ್‌ ಫಾರ್ಮ್ ಮಾತ್ರ ಮುಂದುವರೆಯಬೇಕು. ರಾಜ್ಯದ ಇತರೆ ಐತಿಹಾಸಿಕ ಸ್ಥಳದಂತೆಯೇ ಈ ಸ್ಥಡ್ ಫಾರ್ಮ್ ಗೂ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ಇಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಕುಣಿಗಲ್ ಪ್ರೇಮಿಗಳ ಆಗ್ರಹವಾಗಿದೆ.

ಈ ಸ್ಟಡ್‌ ಫಾರ್ಮ್ ಗೂ ಕುಣಿಗಲ್ ನಿವಾಸಿಗಳಿಗೂ ಅವಿನಾಭಾವ ಸಂಬಂಧವಿದೆ. ಈ ಫಾರ್ಮ್ ಗೆ ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿದೆ. ಆದರೆ ಯಾವುದೇ ಕಾರಣಕ್ಕೂ ಇಲ್ಲಿ ಅನ್ಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸ್ಥಳೀಯ ಹೋರಾಟ ಸಮಿತಿ ಆಗ್ರಹಪಡಿಸಿದೆ.

ರೇಸ್‌ಕೋರ್ಸ್‌ ಬೇಡ

100 ಎಕರೆ ಭೂಮಿಯನ್ನು ಪಡೆದು ಬೆಂಗಳೂರು ರೇಸ್ ಕ್ಲಬ್ ಅನ್ನು ಇಲ್ಲಿಗೆ ಸ್ಥಳಾಂತರಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.ಇಷ್ಟಕ್ಕೂ 70 ಕಿಮೀ ದೂರದಲ್ಲಿ ರೇಸ್ ಕೋರ್ಸ್ ಮಾಡಲು ಬೆಂಗಳೂರು ಟರ್ಫ್ ಕ್ಲಬ್ ಒಪ್ಪುವುದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಆದರೆ ಇಲ್ಲಿ ರೇಸ್ ಕೋರ್ಸ್ ನಿರ್ಮಿಸಲು ವಿರೋಧ ವ್ಯಕ್ತವಾಗಿದೆ. ರೇಸ್ ಕೋರ್ಸ್ ನಿರ್ಮಾಣ ಮಾಡುವುದಾದರೆ ಬೇರೆ ಸ್ಥಳದಲ್ಲಿ ಮಾಡಲಿ. ಆದರೆ ಈ ಸ್ಟಡ್‌ ಫಾರ್ಮ್ ನಲ್ಲಿ ಬೇಡ ಎಂದು ಸ್ಥಳೀಯರು ಆಗ್ರಹಪಡಿಸುತ್ತಿದ್ದಾರೆ.

(ವಿಶೇಷ ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ