logo
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್​​ಸಿ ತೇರ್ಗಡೆಯಾದ 3 ವರ್ಷದ ಮಗುವಿನ ತಾಯಿ ನಿವೇದಿತಾ ಶೆಟ್ಟಿ

ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್​​ಸಿ ತೇರ್ಗಡೆಯಾದ 3 ವರ್ಷದ ಮಗುವಿನ ತಾಯಿ ನಿವೇದಿತಾ ಶೆಟ್ಟಿ

HT Kannada Desk HT Kannada

Nov 03, 2023 11:07 AM IST

google News

ನಿವೇದಿತಾ ಶೆಟ್ಟಿ

    • Nivedita Shetty: ನಿವೇದಿತಾ ಶೆಟ್ಟಿಗೆ ಮೂರು ವರ್ಷದ ಮಗು ಇದೆ. ಆದರೂ ಯುಪಿಎಸ್​​ಸಿ ಬರೆಯುವ ಛಲ ಮರೆಯದ ಇವರು ಸಾಧಿಸಿ ತೋರಿದ್ದಾರೆ. 2022ರ ಸಾಲಿನ ಕೇಂದ್ರ ನಾಗರಿಕ ಸೇವಾಪರೀಕ್ಷೆಯ ಪರಿಷ್ಕೃತ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ತೇರ್ಗಡೆಯಾಗಿದ್ದಾರೆ.
ನಿವೇದಿತಾ ಶೆಟ್ಟಿ
ನಿವೇದಿತಾ ಶೆಟ್ಟಿ

ಸಾಧನೆಯ ಛಲ ಇದ್ದರೆ ಎಂಥದ್ದೂ ಕಷ್ಟವಲ್ಲ ಎಂಬುದನ್ನು ತೋರಿಸಿದ ಈ ಛಲಗಾತಿ ನಿವೇದಿತಾ. ಉಡುಪಿ ಅಂಬಾಗಿಲು ನಿವಾಸಿ ನಿವೇದಿತಾ ಶೆಟ್ಟಿ ಅವರು ಅಂಬಾಗಿಲಿನಲ್ಲಿರುವ ಪೆರ್ಡೂರು ಸದಾನಂದ ಶೆಟ್ಟಿ ಮತ್ತು ಸಮಿತಾ ಶೆಟ್ಟಿ ದಂಪತಿ ಪುತ್ರಿ. ಅವರ ಪತಿ ದಿವಾಕರ ಶೆಟ್ಟಿ ಓಮನ್​​​ನ ಕಾಲೇಜೊಂದರಲ್ಲಿ ಪ್ರಾಧ್ಯಾಪಕ. ನಿವೇದಿತಾಗೆ ಮೂರು ವರ್ಷದ ಮಗು ಇದೆ. ಆದರೂ ಯುಪಿಎಸ್​​ಸಿ ಬರೆಯುವ ಛಲ ಮರೆಯದ ಇವರು ಸಾಧಿಸಿ ತೋರಿದ್ದಾರೆ.

2022ರ ಸಾಲಿನ ಕೇಂದ್ರ ನಾಗರಿಕ ಸೇವಾಪರೀಕ್ಷೆಯ ಪರಿಷ್ಕೃತ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ತೇರ್ಗಡೆಯಾಗಿದ್ದಾರೆ. ಯುಪಿಎಸ್​​ಸಿ ಪರೀಕ್ಷೆಯಲ್ಲಿ ಸಾಧಿಸುವ ಮನಸ್ಸಿದ್ದರೆ, ಛಲವಿದ್ದರೆ, ಮನೆಯಲ್ಲಿ ಮಕ್ಕಳಿದ್ದರೂ ಕಠಿಣ ಪರಿಶ್ರಮದಿಂದ ಯಾವುದೇ ಕೋಚಿಂಗ್ ಇಲ್ಲದೆ ತೇರ್ಗಡೆಯಾಗಬಹುದು ಎಂಬುದಕ್ಕೆ ನಿವೇದಿತಾ ಸಾಕ್ಷಿಯಾಗಿದ್ದಾರೆ.

ಪತಿ ಹಾಗೂ ಮಗಳೊಂದಿಗೆ ಅವರೀಗ ಓಮನ್​​ನಲ್ಲಿ ನೆಲೆಸಿದ್ದಾರೆ. ಗ್ರೂಪ್ ಎ ಹುದ್ದೆ ಪಡೆಯುವ ನಿರೀಕ್ಷೆ ಅವರದ್ದು. ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಕಟವಾದ ಯುಪಿಎಸ್​​​ಸಿ ಮೆರಿಟ್ ಲಿಸ್ಟ್ ನ 933 ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೇವಲ ಒಂದು ಅಂಕದಿಂದ ವಿಫಲರಾದ ನಿರಾಶೆ ಈ ಪರಿಷ್ಕೃತ ಪಟ್ಟಿಯಿಂದ ದೂರವಾಗಿದೆ ಎಂಬ ಸಮಾಧಾನ ಅವರಿಗಿದೆ.

ಮೊನ್ನೆ ಪ್ರಕಟಿಸಿದ 89 ಅಭ್ಯರ್ಥಿಗಳ ಮೀಸಲು ಪಟ್ಟಿಯಲ್ಲಿ 5ನೇ ಸ್ಥಾನ ಹೊಂದಿರುವ ನಿವೇದಿತಾ ಶೆಟ್ಟಿ ಅವರ ತಂದೆ ಸದಾನಂದ ಶೆಟ್ಟಿ ಪೆರ್ಡೂರು ಹಾಗೂ ತಾಯಿ ಸಮಿತಾ ಶೆಟ್ಟಿ ಉಡುಪಿಯವರು. ತಂದೆ ಅಂಬಾಗಿಲಿನಲ್ಲಿ ಭಾರತ್ ಟೈಲ್ಸ್ ನಲ್ಲಿ ನೌಕರಿಯಲ್ಲಿದ್ದು ನಿವೃತ್ತರಾಗಿದ್ದಾರೆ. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಲ್ಯಾಣಪುರ ಮಿಲಾಗ್ರೀಸ್ ಸಂಸ್ಥೆಯಲ್ಲಿ ಮಾಡಿದ್ದರು. ಉಡುಪಿ ವಿದ್ಯೋದಯದಲ್ಲಿ ಪಿಯುಸಿ ಮುಗಿಸಿದ ಬಳಿಕ ನಿಟ್ಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು. ಕಂಪ್ಯೂಟರ್ ಸೈನ್ಸ್ ನಲ್ಲಿ ಅವರು ಇಂಜಿನಿಯರಿಂಗ್ ಕಲಿತಿದ್ದಾರೆ.

ಕೊನೆ ವರ್ಷ ಇಂಜಿನಿಯರಿಂಗ್​​​ನಲ್ಲಿದ್ದಾಗ ನಿವೇದಿತಾ ಶೆಟ್ಟಿ ಅವರಿಗೆ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರಕಿದದ್ದರಲ್ಲಿ ಅತ್ಯಧಿಕ ಮೊತ್ತದ ವೇತನದ ಹುದ್ದೆ ಆಫರ್ ಬಂದಿತ್ತು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ದುಡಿಯುವಾಗಲೇ ನಾಗರಿಕ ಸೇವಾ ಪರೀಕ್ಷೆ ಬರೆಯಲು ಅವರು ಸಿದ್ಧತೆ ನಡೆಸಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಸಂಪೂರ್ಣ ತಯಾರಿ ನಡೆಸಿದರು.

ಯಾವುದೇ ಕೋಚಿಂಗ್, ತರಬೇತಿ ಸಹಾಯವಿಲ್ಲದೆ, ಸ್ವಪ್ರಯತ್ನದಲ್ಲಿ ಯುಪಿಎಸ್​​ಸಿ ತೇರ್ಗಡೆಯಾಗಿರುವುದು ಇವರ ಹೆಗ್ಗಳಿಕೆ. ಕಂಪನಿ ಕೆಲಸದ ಮಧ್ಯೆ ಪರೀಕ್ಷೆ ಬರೆಯಲು ಕಷ್ಟವಾಗುವ ಸಂದರ್ಭ ಕೆಲಸವನ್ನೇ ಬಿಟ್ಟರು.

ಓಮನ್​​​ನಲ್ಲಿ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ದಿವಾಕರ ಶೆಟ್ಟಿ ಅವರನ್ನು ಮದುವೆಯಾಗಿ ಮಗುವಿನ ತಾಯಿಯೂ ಆಗಿರುವ ನಿವೇದಿತಾ, ತಾಯಿ ಮನೆಯಲ್ಲಿ ಪರೀಕ್ಷೆ ಸಿದ್ಧತೆ ನಡೆಸಿದ್ದರು. 2022ರ ಮೇ ತಿಂಗಳಲ್ಲಿ ಪ್ರಕಟವಾದ ಯುಪಿಎಸ್​​​ಸಿ ಅಂತಿಮ ಪರೀಕ್ಷೆಯಲ್ಲಿ ಕೇವಲ ಒಂದು ಅಂಕ ಕಡಿಮೆ ಆಗಿತ್ತು. ಇದೀಗ ಸಾಧಿಸಿ ತೋರಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ