Yakshagana Hotel: ಆಗುಂಬೆಯಲ್ಲೊಂದು ಯಕ್ಷಗಾನ ಹೊಟೇಲ್: ಇಲ್ಲಿ ಕಲಾವಿದರ ಪಕ್ಕದಲ್ಲೇ ಕುಳಿತು ಉಪಾಹಾರ ಸೇವಿಸಬಹುದು
Dec 10, 2023 08:00 AM IST
ಯಕ್ಷಗಾನದ ವಿಶೇಷತೆಯೊಂದಿಗೆ ಆಗುಂಬೆಯಲ್ಲಿ ರೂಪಿಸಿರುವ ಹೊಟೇಲ್
- Agumbe hotel ಕರಾವಳಿ ಜನರಿಗೆ ಯಕ್ಷಗಾನವೆಂದರೆ ಪಂಚಪ್ರಾಣ. ಉಡುಪಿ ಕಡೆಯವರಿಗೆ ಬಡಗುತಿಟ್ಟಿನ ಯಕ್ಷಗಾನ ಕಲಾವಿದರೇ ಸ್ಟಾರ್ ಗಳು. ಆಗುಂಬೆಯ ಹೋಟೆಲ್ ಒಂದರಲ್ಲಿ ಸೂಪರ್ ಸ್ಟಾರ್ ಕಲಾವಿದರ ಚಿತ್ರಗಳು ರಾರಾಜಿಸುತ್ತಿವೆ. ಈ ಕುರಿತು ವಿಶೇಷ ವರದಿ..
ಉಡುಪಿ: ಸಾಮಾನ್ಯವಾಗಿ ಹೋಟೆಲ್ ಗೆ ಹೋದರೆ ಅಲ್ಲಿನ ಮೆನ್ಯುವನ್ನು ನೋಡುತ್ತೇವೆ. ಆದರೆ ಆಗುಂಬೆ ಘಾಟ್ ಹತ್ತಿದೊಡನೆ ಸಿಗುವ ಗಣೇಶ್ ಗ್ರ್ಯಾಂಡ್ ಹೋಟೆಲ್ ಹೊಕ್ಕರೆ, ಬಡಗು ತಿಟ್ಟಿನ ಯಕ್ಷಗಾನ ಕಲಾವಿದರ ಛಾಯಾಚಿತ್ರಗಳ ಫ್ರೇಮ್ ಗಳೇ ಕಾಣಸಿಗುತ್ತವೆ.
ಸುಮಾರು ಎಂಭತ್ತರ ದಶಕದಲ್ಲಿ ಕರಾವಳಿಯ ಯಕ್ಷಗಾನ ರಂಗದಲದಲಿ ತನ್ನ ಭಾಗವತಿಕೆ ಮೋಡಿಯಿಂದ ಮಿಂಚು ಹರಿಸಿದವರು ಜಿ.ಆರ್.ಕಾಳಿಂಗ ನಾವಡ. ನೀವು ತೆಂಕುತಿಟ್ಟು ಯಕ್ಷಗಾನದ ಅಭಿಮಾನಿಯಾಗಿದ್ದರೂ ಬಡಗಿನ ಕಾಳಿಂಗ ನಾವಡರ ಕ್ರೇಝ್ ಬೇರೆಯೇ.ಇನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆ ವೇಷವೆಂದರೆ ಮೈಲುಗಟ್ಟಲೆ ಸಾಗಿ ನೋಡುವವರಿದ್ದಾರೆ. ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ದಶಕಗಳ ಹಿಂದೆ ಮಿಂಚಿದ್ದ ಸೂಪರ್ ಸ್ಟಾರ್ ಗಳ ಅಭಿಮಾನಿಗಳು ಈಗಲೂ ಇದ್ದಾರೆ. ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಪ್ರಸ್ತುತ ಸ್ಟಾರ್ ಕಲಾವಿದರಾಗಿದ್ದವರು, ಹಿಂದೆ ಆಗಿಹೋದವರನ್ನು ಪ್ರತಿದಿನವೂ ನೋಡಬೇಕು ಎಂದು ವರ್ಣಚಿತ್ರಗಳನ್ನು ಹಾಕುವ ಮೂಲಕ ಗಮನ ಸೆಳೆಯುತ್ತಿದೆ ಆಗುಂಬೆಯ ಹೋಟೆಲ್ ಗಣೇಶ್ ಗ್ರ್ಯಾಂಡ್.
ಅಡಿಗರ ಯಕ್ಷಗಾನ ಪ್ರೇಮ
ಗುರುರಾಜ ಅಡಿಗ, ನಾಗೇಂದ್ರ ಅಡಿಗ, ಪ್ರಸಾದ್, ಅಶೋಕ ಈ ನಾಲ್ವರು ಪಾಲುದಾರರಾಗಿರುವ ಗಣೇಶ್ ಗ್ರ್ಯಾಂಡ್ ಹೋಟೆಲ್ ಉಡುಪಿ ಕಡೆಯಿಂದ ಆಗುಂಬೆ ಘಾಟಿ ಹತ್ತಿದ ಕೂಡಲೇ ಸಿಗುತ್ತದೆ. ಶೃಂಗೇರಿ ಕಡೆಗೆ ಹೋಗುವವರು, ಶಿವಮೊಗ್ಗಕ್ಕೆ ಸಾಗುವವರು ಈ ಹೋಟೆಲ್ ಗೆ ಭೇಟಿ ನೀಡುತ್ತಾರೆ. ಉಡುಪಿ ಶಿವಮೊಗ್ಗ ಬಸ್ಸುಗಳೂ ಇಲ್ಲಿಯೇ ನಿಲ್ಲಿಸುತ್ತವೆ. ಹೀಗಾಗಿ ಇಲ್ಲಿ ಬಸ್ಸು ಪ್ರಯಾಣಿಕರಿಗೆ ಒಂದು ಇತರಿಗೆ ಒಂದು ಕೌಂಟರ್ ತೆರೆದಿದೆ. ಉತ್ತರ ಮತ್ತು ದಕ್ಷಿಣ ಭಾರತದ ಖಾದ್ಯಗಳು ಇಲ್ಲಿವೆ. ಶುಚಿ, ರುಚಿಯಾದ ಖಾದ್ಯಗಳನ್ನು ಸವಿಯುವ ವೇಳೆ ಸುತ್ತಲೂ ನೋಡಿದರೆ, ಯಕ್ಷಗಾನ ವೇಷಗಳ ಭಂಗಿಗಳಲ್ಲಿ ಸ್ಟಾರ್ ಕಲಾವಿದರೇ ಕಾಣಸಿಗುತ್ತಾರೆ.
ಹವ್ಯಾಸಿ ಭಾಗವತರೂ ಆಗಿರುವ ನಾಗೇಂದ್ರ ಅಡಿಗ ಅವರ ಯಕ್ಷಗಾನದ ಪ್ರೇಮ ಫೊಟೋ ಫ್ರೇಮ್ ಹಾಕುವವರೆಗೆ ಬಂದಿದೆ. ಇಲ್ಲಿಗೆ ಬಂದ ಗ್ರಾಹಕರು ತಮ್ಮಿಷ್ಟದ ಕಲಾವಿದರ ಚಿತ್ರದ ಪಕ್ಕ ನಿಂತಿ ಸೆಲ್ಫೀ ತೆಗೆದುಕೊಂಡು ಹೋಗುವುದುಂಟು.
ಯಕ್ಷಗಾನದ ಸೂಪರ್ ಸ್ಟಾರ್ ಗಳಿವರು
ಗಣೇಶ ಗ್ರ್ಯಾಂಡ್ ಹೋಟೆಲ್ ಗೆ ಸಾಕಷ್ಟು ಪಾರ್ಕಿಂಗ್ ಜಾಗವಿದೆ. ಹೀಗಾಗಿ ಇಲ್ಲಿಗೆ ಬಂದವರು ರಿಲ್ಯಾಕ್ಸ್ ಆಗಿ ಚಹ, ತಿಂಡಿ ಸೇವಿಸಿ ಹೋಗುವವರೇ ಜಾಸ್ತಿ. ಈ ಸಂದರ್ಭ ಬಡಗುತಿಟ್ಟಿನ ಸೂಪರ್ ಸ್ಟಾರ್ ಕಲಾವಿದರಾದ ಜಿ.ಆರ್. ಕಾಳಿಂಗ ನಾವಡ, ಬಳ್ಕೂರು ಕೃಷ್ಣಯಾಜಿ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವಿದ್ಯಾಧರ ರಾವ್, ರಮೇಶ್ ಭಂಢಾರಿ ಮೂರೂರು, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ವಂಡಾರು ಗೋವಿಂದ ಮೊಗವೀರ, ಶಶಿಕಾಂತ ಶೆಟ್ಟಿ ಕಾರ್ಕಳ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಕೆರೆಮನೆ ಶಂಭು ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯ, ಕೆರೆಮನೆ ಮಹಾಬಲ ಹೆಗಡೆ, ಥಂಡಿಮನೆ ಶ್ರೀಪಾದ ಭಟ್, ಬೇಗಾರು ಶಿವಕುಮಾರ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಅರಾಟೆ ಮಂಜುನಾಥ, ತೋಟದಮನೆ ಗಣಪತಿ ಹೆಗಡೆ, ಕಣ್ಣೀಮನೆ ಗಣಪತಿ ಭಟ್ ಅವರ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.
ನಾವೂ ಯಕ್ಷಗಾನಪ್ರೇಮಿಗಳು. ಘಟ್ಟ ಹತ್ತಿದ ಪ್ರಯಾಣದ ಸುಸ್ತು ಮರೆಸುವಂತೆ ಕಲಾವಿದರ ಚಿತ್ರಗಳನ್ನು ನೋಡಿ ಮನಸ್ಸು ರಿಲ್ಯಾಕ್ಸ್ ಮಾಡಿಕೊಳ್ಳುವ ಪ್ರಯಾಣಿಕರು ನಮ್ಮ ಬಳಿ ಖುಷಿಪಟ್ಟದ್ದುಂಟು. ಜತೆಗೆ ಈ ಚಿತ್ರದಲ್ಲಿ ಇರುವ ಸ್ಟಾರ್ ಕಲಾವಿದರೂ ನಮ್ಮ ಹೋಟೆಲ್ ಗೆ ಬಂದದ್ದುಂಟು. ಮಲೆನಾಡಿನಲ್ಲೂ ಯಕ್ಷಗಾನ ಪ್ರೇಮಿಗಳಿದ್ದಾರೆ. ಹೊಟೇಲ್‌ಗೆ ಬಂದವರು ಖುಷಿಯಾಗಿ ಹೋಗುತ್ತಾರೆ ಎಂದು ಹಿಂದುಸ್ತಾನ್ ಟೈಮ್ಸ್ ಕನ್ನಡ ಪ್ರತಿನಿಧಿ ಜೊತೆ ಹೋಟೆಲ್ ಮಾಲೀಕರು ವಿವರಿಸಿದರು.
(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)