Malnad ಊರುಬದಿ; ಭೀಮನ ಅಮಾವಾಸ್ಯೆಯನ್ನು ಮಲೆನಾಡು ಭಾಗದಲ್ಲಿ ಕೊಡೆ ಹಬ್ಬ ಎನ್ನಲು ಕಾರಣ ಹೀಗಿದೆ; ನವವಿವಾಹಿತರಿಗೆ ಈ ದಿನ ತುಂಬಾ ಸ್ಪೆಷಲ್
Jul 17, 2023 09:07 AM IST
ಕೊಡೆ ಹಬ್ಬದ ಕುರಿತು ಊರುಬದಿ ಅಂಕಣ
- Urubadi-Kode Habba-Bheemana Amavasya: 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು-ಸಂಸ್ಕೃತಿ-ಪರಂಪರೆ ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಪ್ರಕಟವಾಗಲಿದೆ. ಈ ಬಾರಿ ಮಲೆನಾಡಿನ ಹಳ್ಳಿ ಬದಿ ಆಚರಿಸುವ ಕೊಡೆ ಹಬ್ಬದ ಮಾಹಿತಿ ನೀಡಲಾಗಿದೆ.
ಪ್ರತಿ ವರ್ಷ ಆಷಾಢ ಮಾಸದ ಕೊನೆಯಲ್ಲಿ ಭೀಮನ ಅಮಾವಾಸ್ಯೆ ಬರುತ್ತದೆ. ಈ ವರ್ಷ ಜುಲೈ 17 ರಂದು ಭೀಮನ ಅಮವಾಸ್ಯೆ ಬಂದಿದೆ. ಕೇವಲ ವಿವಾಹಿತ ಮಹಿಳೆಯರು ಮಾತ್ರವಲ್ಲ, ಅವಿವಾಹಿತ ಯುವತಿಯರು ಕೂಡ ಭೀಮನ ಅಮಾವಾಸ್ಯೆಯನ್ನು ಆಚರಿಸಬಹುದು. ಆದರೆ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆ ತುಂಬಾ ವಿಶೇಷವಾದುದು.
ಆಷಾಡ ಮಾಸದಲ್ಲಿ ಗಂಡನಿಂದ ದೂರ ಉಳಿದು ತವರಿಗೆ ಹೋಗುವ ನವವಿವಾಹಿತ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಪತಿಯ ಪಾದ ಪೂಜೆ ಮಾಡಿ ಮತ್ತೆ ತಮ್ಮ ಸಂಸಾರ ಪ್ರಾರಂಭಿಸುವ ವಾಡಿಕೆಯಿದೆ. ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಭೀಮನ ಅಮಾವಾಸ್ಯೆಯಂದು ಪೂಜೆ ಮಾಡುತ್ತಾರೆ. ಹಾಗೆಯೇ ಅವಿವಾಹಿತ ಯುವತಿಯರು ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಕೀಚಕನಿಂದ ದ್ರೌಪತಿಯನ್ನು ಧೀರನಂತೆ ಕಾಯ್ದ ಭೀಮನಂತೆ ಇರುವ ಗಂಡ ತಮಗೂ ಸಿಗಲೆಂದು ಭೀಮನ ಅಮಾವಾಸ್ಯೆಯಂದು ಶಿವನನ್ನು ಪೂಜಿಸಿ ಬೇಡಿಕೊಳ್ಳುತ್ತಾರೆ.
ರುದ್ರದೇವನ ಮತ್ತೊಂದು ಹೆಸರು ಭೀಮ ಎಂದಾಗಿರುವುದರಿಂದ ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ವಿವಾಹಿತ ಮಹಿಳೆಯರು ಭೀಮನ ಅಮಾವಾಸ್ಯೆ ದಿನ ಒಮ್ಮೆ ವ್ರತ ಕೈಗೊಂಡರೆ 5 ಅಥವಾ 9 ಅಥವಾ 16 ವರ್ಷಗಳ ವರೆಗೆ ವ್ರತ ಮಾಡಬೇಕು ಎಂದು ಹೇಳಲಾಗುತ್ತದೆ. ಈ ದಿನ ಮಹಿಳೆಯರು ಶಿವ-ಪಾರ್ವತಿಯನ್ನು ಆರಾಧಿಸಿದರೆ ದೀರ್ಘ ಸುಮಂಗಲೀತನ, ಸಂತಾನ, ಪತಿಗೆ ದೀರ್ಘಾಯುಷ್ಯ, ಆಯಸ್ಸು, ಯಶಸ್ಸು, ಸಂಪತ್ತು, ಸಂತೋಷವನ್ನು ಶಿವ ಮತ್ತು ಪಾರ್ವತಿ ಕರುಣಿಸುತ್ತಾರೆ ಎಂಬ ನಂಬಿಕೆಯಿದೆ.
ಕೊಡೆ ಹಬ್ಬ
ಭೀಮನ ಅಮಾವಾಸ್ಯೆಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆ ಅಥವಾ ಕೊಡೆ ಹಬ್ಬ ಎಂದು ಕರೆದರೆ, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಭೀಮನ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಎಂದೂ ಹಾಗೂ ಈ ದಿನ ಕಟಕ ಸಂಕ್ರಾಂತಿಯೂ ಇರುವುದರಿಂದ ಇದನ್ನು ಕರ್ಕಾಟಕ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಮಲೆನಾಡಿನಲ್ಲಿ ಇದನ್ನು ಕೊಡೆ ಅಮಾವಾಸ್ಯೆ ಎಂದು ಯಾಕೆ ಕರೆಯುತ್ತಾರೆಂದರೆ, ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಆಷಾಢ ಮಾಸದಲ್ಲಿ ತವರು ಮನೆಗೆ ಹೋಗಿರುತ್ತಾರೆ. ಭೀಮನ ಅಮಾವಾಸ್ಯೆ ದಿನ ಅಳಿಯನನ್ನು ಮನಗೆ ಕರೆಯಿಸಿ, ಬಗೆ ಬಗೆಯ ಅಡುಗೆ ಮಾಡಿ ಅಳಿಯನಿಗೆ ಉಣಬಡಿಸಲಾಗುತ್ತದೆ. ಮಳೆಗಾಲ ಆಗಿರುವುದರಿಂದ ಕೊಡೆ (ಛತ್ರಿ)ಯನ್ನು ಅಳಿಯನ ಕೈಗೆ ಕೊಟ್ಟು, ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ಮಲೆನಾಡಿನ ಕೆಲವಡೆ, ವಿಶೇಷವಾಗಿ ಹಳ್ಳಿಗಳಲ್ಲಿ, ಅದರಲ್ಲಿಯೂ ದೀವರ ಜಾತಿಯಲ್ಲಿ ಈ ಆಚರಣೆಯನ್ನು ಹೆಚ್ಚು ಮಾಡಲಾಗುವುದು. ಹೀಗಾಗಿ ಇದಕ್ಕೆ ಕೊಡೆ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ಮಾಡುವವರು ಸಿಹಿ ಪದಾರ್ಥಗಳನ್ನು ಮಾಡಿ ಗಂಡನಿಗೆ ಉಣಬಡಿಸುತ್ತಾರೆ. ಆದರೆ ಮಲೆನಾಡಿನ ಹಳ್ಳಿಗಳಲ್ಲಿ ಕೊಡೆ ಅಮಾವಾಸ್ಯೆ ಅಥವಾ ಕೊಡೆ ಹಬ್ಬವನ್ನು ಆಚರಿಸುವವರು ಕೋಳಿ ಸಾರು ಹಾಗೂ ಕಜ್ಜಾಯ ಮಾಡೇ ಮಾಡುತ್ತಾರೆ (ಮಾಂಸಾಹಾರಿಗಳು). ಜೊತೆಯಲ್ಲಿ ಹೋಳಿಗೆ ಅಥವಾ ಪಾಯಸದಂತಹ ಸಿಹಿ ತಿನಿಸು ಮಾಡಿ ಇಡಕಲು (ನೀರಿನ ಪಾತ್ರೆ ಇಡುವ ಜಾಗ) ಮುಂದೆ ಎಡೆ ಹಾಕಿ, ಬಳಿಕ ಅಳಿಯನಿಗೆ ಉಣಬಡಿಸುತ್ತಾರೆ.
ಇನ್ನು ಮಲೆನಾಡಿದ ಇತರ ಕೆಲಭಾಗಗಳಲ್ಲಿ ಬೇರೆಡೆಯಂತೆಯೇ ವಿವಾಹಿತ ಮಹಿಳೆಯರು ಬೆಳಗ್ಗೆ ಎದ್ದು ಸ್ನಾನ ಮಾಡಿ, ಗಂಡನಿಗೆ ಅರಿಶಿಣ ಎಣ್ಣೆಯಲ್ಲಿ ಸ್ನಾನ ಮಾಡಿಸಿ ಕೈಗೆ ಕಂಕಣ ಕಟ್ಟಿಕೊಳ್ಳುತ್ತಾರೆ. ಪತಿಯ ಪಾದ ತೊಳೆದು ಅರಿಶಿಣ-ಕುಂಕುಮ ಹಚ್ಚಿ, ಹೂಗಳನ್ನಿಟ್ಟು ಪೂಜೆ ಮಾಡುತ್ತಾರೆ. ಗಂಡನಿಗೆ ಸಿಹಿ ಅಡುಗೆ ತಿನ್ನಿಸಿ ಶಿವನ ದೇಗುಲಕ್ಕೆ ಹೋಗಿ ಬರುತ್ತಾರೆ. ಶಿವಮೊಗ್ಗದ ಜನರು ಸಾಧ್ಯವಾದರೆ ಈ ದಿನ ಭೀಮೇಶ್ವರನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಾಗರ ಮತ್ತು ಭಟ್ಕಳ ಗಡಿ ನಡುವೆ ಬರುವ ಶಿವಮೊಗ್ಗದ ಕರ್ಗಲ್ ಪಟ್ಟಣದ ಸಮೀಪವಿರುವ ಭೀಮೇಶ್ವರದಲ್ಲಿ ದಟ್ಟ ಕಾಡಿನ ನಡುವೆ ಈ ದೇವಸ್ಥಾನವಿದೆ. ಇಲ್ಲಿರುವ ಜಲಪಾತವನ್ನು ಭೀಮೇಶ್ವರ ಜಲಪಾತವೆಂದೇ ಕರೆಯಲಾಗುತ್ತದೆ. ಮಹಾಭಾರತದ ಭೀಮನು ಈ ಸ್ಥಳದಲ್ಲಿ ಶಿವಲಿಂಗವನ್ನು ತಂದು ದೇವಾಲಯ ಸ್ಥಾಪಿಸಿದನು ಎಂದು ಹೇಳಲಾಗುತ್ತದೆ.
-ಮೇಘನಾ ಬಿ. ಸಾಗರ
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.inಗೆ ಮೇಲ್ ಮಾಡಿ