logo
ಕನ್ನಡ ಸುದ್ದಿ  /  ಜೀವನಶೈಲಿ  /  Valentine's Day 2023: ಯಾರು ಈ ವ್ಯಾಲೆಂಟೈನ್‌...ಆತನ ಹೆಸರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ..?

Valentine's Day 2023: ಯಾರು ಈ ವ್ಯಾಲೆಂಟೈನ್‌...ಆತನ ಹೆಸರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ..?

HT Kannada Desk HT Kannada

Feb 14, 2023 10:00 AM IST

google News

ವ್ಯಾಲೆಂಟೈನ್‌ ಡೇ 2023

    • Lovers Day 2023: ಮರಣ ದಂಡನೆಯ ದಿನ ಅಂದರೆ ಫೆಬ್ರವರಿ 14, ಕ್ರಿ.ಶ. 269 ರಂದು ವ್ಯಾಲೆಂಟೈನ್‌, ಜೂಲಿಯಾಗೆ ಒಂದು ಪ್ರೇಮ ಪತ್ರ ಬರೆದು, ಕೊನೆಯಲ್ಲಿ 'ಇಂತಿ ನಿನ್ನ ವ್ಯಾಲೆಂಟೈನ್‌' ಎಂದು ಸಹಿ ಮಾಡುತ್ತಾರೆ. ನಂತರ, ಕಾರಾಗೃಹದ ಅಧಿಕಾರಿಗಳು ಪಾದ್ರಿ ವ್ಯಾಲೆಂಟೈನ್‌ಗೆ ಶಿಕ್ಷೆ ವಿಧಿಸಿ ದೇಹವನ್ನು ಸಮಾಧಿ ಮಾಡುತ್ತಾರೆ.
ವ್ಯಾಲೆಂಟೈನ್‌ ಡೇ 2023
ವ್ಯಾಲೆಂಟೈನ್‌ ಡೇ 2023 (PC: Freepik.com)

ಎಲ್ಲಾ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಬಂದಿದೆ. ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ವಿಶೇಷ ದಿನಗಳಲ್ಲಿ ವ್ಯಾಲೆಂಟೈನ್‌ ಡೇ ಕೂಡಾ ಒಂದು. ಪರ-ವಿರೋಧ ಚರ್ಚೆಗಳ ನಡುವೆ, ಆಚರಣೆಯ ವಿರೋಧದ ನಡುವೆಯೂ ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ.

ವ್ಯಾಲೆಂಟೈನ್‌ ವೀಕ್‌ ಆರಂಭದಿಂದ ಪ್ರೇಮಿ, ತನ್ನ ಸಂಗಾತಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆ ನೀಡುವ ಮೂಲಕ ಅವರನ್ನು ಇಂಪ್ರೆಸ್‌ ಮಾಡುತ್ತಾರೆ. ಆದರೆ ಪ್ರೇಮಿಗಳ ದಿನ ಆಚರಿಸುವುದು ಏಕೆ..? ವ್ಯಾಲೆಂಟೈನ್‌ ಡೇ ಎಂದರೇನು..? ಈ ವ್ಯಾಲೆಂಟೈನ್‌ ಎಂದರೆ ಯಾರು..? ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಪ್ರತಿಯೊಂದು ಆಚರಣೆ ಹಿಂದೆ ಒಂದು ಹಿನ್ನೆಲೆ ಇರುತ್ತದೆ. ಹಾಗೇ ಪ್ರೇಮಿಗಳ ದಿನ ಸೆಲಬ್ರೇಷನ್‌ಗೆ ಒಂದು ಮಹತ್ವ ಇದೆ.

ಯಾರು ಈ ವ್ಯಾಲೆಂಟೈನ್‌..?

ವ್ಯಾಲೆಂಟೈನ್‌, ರೋಮ್‌ಗೆ ಸೇರಿದ ಪಾದ್ರಿ. ಸುಮಾರು 3ನೇ ಶತಮಾನದಲ್ಲಿ ಅಂದರೆ ಕ್ರಿ.ಶ. 260 ಸಮಯದಲ್ಲಿ ರೋಮ್ ರಾಜ ಕ್ಲಾಡಿಯಸ್, ಪ್ರೇಮ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಿರುತ್ತಾನೆ. ಸೈನಿಕರು ಮದುವೆ ಆಗಬಾರದು ಎಂಬ ನಿಯಮ ಕೂಡಾ ವಿಧಿಸುತ್ತಾನೆ. ಒಂದು ವೇಳೆ ನಿಯಮ ಮೀರಿ ನಡೆದರೆ ಅಂತವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದ. ಪ್ರೀತಿ, ಪ್ರೇಮ, ಮದುವೆ ಎಂಬ ಸಂಬಂಧದಲ್ಲಿ ಇರುವವರು ಸಮಯ ವ್ಯರ್ಥ ಮಾಡುತ್ತಾರೆ, ಹಾಗೂ ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಸೈನ್ಯಕ್ಕೆ ಬರುವುದಿಲ್ಲ ಎಂಬ ಉದ್ದೇಶದಿಂದ ರಾಜ ಕ್ಲಾಡಿಯಸ್, ಈ ಕ್ರಮ ಕೈಗೊಂಡಿದ್ದ. ಆದರೆ ಇದಕ್ಕೆ ವಿರುದ್ಧವಾಗಿ ಪಾದ್ರಿ ವ್ಯಾಲೆಂಟೈನ್‌, ಪ್ರೇಮಿಗಳಿಗೆ ಹಾಗೂ ಮದುವೆಯಾಗಬೇಕೆಂದುಕೊಂಡ ಸೈನಿಕರಿಗೆ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದರು.

ವ್ಯಾಲೆಂಟೈನ್‌ ಮಾಡುತ್ತಿರುವ ಈ ಕೆಲಸ ರೋಮ್‌ ರಾಜನ ಗಮನಕ್ಕೆ ಬಂದು ಆತನನ್ನು ಬಂಧಿಸಿ ಅರಮನೆಯ ಕಾರಾಗೃಹದಲ್ಲಿ ಇರಿಸಿ ಮರಣ ದಂಡನೆಗೆ ಆದೇಶಿಸುತ್ತಾನೆ. ಕಾರಾಗೃಹದಲ್ಲಿರುವಾಗ ವ್ಯಾಲೆಂಟೈನ್‌, ಸೆರೆಮನೆಯ ಅಧಿಕಾರಿಯ ಪುತ್ರಿ ಜೂಲಿಯಾಳ ಅಂಧತ್ವವನ್ನು ಗುಣಪಡಿಸುತ್ತಾರೆ. ಮರಣ ದಂಡನೆಯ ದಿನ ಅಂದರೆ ಫೆಬ್ರವರಿ 14, ಕ್ರಿ.ಶ. 269 ರಂದು ವ್ಯಾಲೆಂಟೈನ್‌, ಜೂಲಿಯಾಗೆ ಒಂದು ಪ್ರೇಮ ಪತ್ರ ಬರೆದು, ಕೊನೆಯಲ್ಲಿ 'ಇಂತಿ ನಿನ್ನ ವ್ಯಾಲೆಂಟೈನ್‌' ಎಂದು ಸಹಿ ಮಾಡುತ್ತಾರೆ. ನಂತರ, ಕಾರಾಗೃಹದ ಅಧಿಕಾರಿಗಳು ಪಾದ್ರಿ ವ್ಯಾಲೆಂಟೈನ್‌ಗೆ ಶಿಕ್ಷೆ ವಿಧಿಸಿ ದೇಹವನ್ನು ಸಮಾಧಿ ಮಾಡುತ್ತಾರೆ.

ವ್ಯಾಲೆಂಟೈನ್‌ ದೇಹವನ್ನು ಸಮಾಧಿ ಮಾಡಿದ ದಿನವನ್ನು (ಫೆಬ್ರವರಿ 14) ಪ್ರತಿ ವರ್ಷ ವ್ಯಾಲೆಂಟೈನ್‌ ಡೇಯನ್ನಾಗಿ ಆಚರಿಸುತ್ತಾ ಬರಲಾಗಿದೆ. ಆತ ಜೂಲಿಯಾಗೆ ಬರೆದ ಪತ್ರದ ಕೊನೆಯಲ್ಲಿ 'ಇಂತಿ ನಿನ್ನ ವ್ಯಾಲೆಂಟೈನ್‌' ಎಂದು ಬರೆದದ್ದನ್ನು ಇಂದಿಗೂ ಪ್ರೇಮಿಗಳು ತಮ್ಮ ಪ್ರೀತಿಯ ಹುಡುಗಿಗೆ ಪತ್ರ ಬರೆಯುವಾಗ ಇಂತಿ ನಿನ್ನ ವ್ಯಾಲೆಂಟೈನ್‌ ಎಂದು ಸಹಿ ಮಾಡುತ್ತಾರೆ. ಹಾಗೇ ವ್ಯಾಲೆಂಟೈನ್‌ ಸಮಾಧಿ ಬಳಿ ಜೂಲಿಯಾ, ಪಿಂಕ್‌ ಬಣ್ಣದ ಹೂಗಳನ್ನು ಬಿಡುವ ಗಿಡವೊಂದನ್ನು ನೆಟ್ಟ ಕಾರಣದಿಂದ ಹುಡುಗಿಯರಿಗೆ ಪ್ರೇಮ ನಿವೇದನೆ ಮಾಡುವಾಗ ಪಿಂಕ್‌ ಬಣ್ಣದ ವಸ್ತುಗಳನ್ನು ನೀಡಲಾಗುತ್ತದೆ ಎಂಬ ನಂಬಿಕೆ ಇದೆ.

ಒಟ್ಟಿನಲ್ಲಿ ಹಿನ್ನೆಲೆ ಏನೇ ಇರಲಿ, ಪವಿತ್ರ ಪ್ರೀತಿಯ ಸಂಕೇತವಾಗಿ ಪ್ರೇಮಿಗಳಿಗಾಗಿ ಒಂದು ವಿಶೇಷ ದಿನ ಮೀಸಲಾಗಿದೆ. ಉಡುಗೊರೆ, ಆಡಂಬರ ಇಲ್ಲಿ ಮುಖ್ಯವಲ್ಲ. ಒಬ್ಬರ ಪ್ರೀತಿಯನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು, ಕಷ್ಟ-ಸುಖಗಳಲ್ಲಿ ಜೊತೆಗಿದ್ದರೆ ಫ್ರೆಬ್ರವರಿ 14 ಮಾತ್ರವಲ್ಲ, ಪ್ರತಿ ದಿನವೂ ವ್ಯಾಲೆಂಟೈನ್ಸ್‌ ಡೇ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ