logo
ಕನ್ನಡ ಸುದ್ದಿ  /  ಜೀವನಶೈಲಿ  /  Varalakshmi Vratham 2023: ವರಮಹಾಲಕ್ಷ್ಮಿ ಹಬ್ಬ ಯಾವಾಗ, ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ ಇತ್ಯಾದಿ ವಿವರ ತಿಳಿದುಕೊಳ್ಳಿ

Varalakshmi Vratham 2023: ವರಮಹಾಲಕ್ಷ್ಮಿ ಹಬ್ಬ ಯಾವಾಗ, ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ ಇತ್ಯಾದಿ ವಿವರ ತಿಳಿದುಕೊಳ್ಳಿ

Praveen Chandra B HT Kannada

Aug 16, 2023 10:08 PM IST

google News

ವರಮಹಾಲಕ್ಷ್ಮಿ ಹಬ್ಬ ದಿನಾಂಕ ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ

    • Varalakshmi Vratham 2023: ಈ ವರ್ಷ ವರಮಹಾಲಕ್ಷ್ಮಿ ಹಬ್ಬವು ಆಗಸ್ಟ್‌ 25ರಂದು ಶುಕ್ರವಾರ ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ಮಹತ್ವ, ವರಮಹಾಲಕ್ಷ್ಮಿ ವ್ರತ ಕೈಗೊಳ್ಳುವ ವಿಧಾನ, ಪೂಜೆಗೆ ಅಗತ್ಯವಿರುವ ಸಾಮಾಗ್ರಿಗಳು, ಪೂಜಾ ವಿಧಾನ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
ವರಮಹಾಲಕ್ಷ್ಮಿ ಹಬ್ಬ ದಿನಾಂಕ ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ
ವರಮಹಾಲಕ್ಷ್ಮಿ ಹಬ್ಬ ದಿನಾಂಕ ಹಬ್ಬದ ಮಹತ್ವ ಪೂಜಾ ಸಮಯ ವ್ರತ ಮಾಡುವ ವಿಧಾನ

ಶ್ರಾವಣ ಮಾಸವೆಂದರೆ ಹಬ್ಬ ಹರಿದಿನಗಳ ಕಾಲ. ನಾಗರಪಂಚಮಿ ನಂತರ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು. ಬದುಕಿನ ಸಮೃದ್ಧಿ, ಏಳ್ಗೆ, ವಿದ್ಯೆ, ಬುದ್ಧಿ ಎಲ್ಲವನ್ನೂ ಕೊಡುವ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಮೊದಲು ಬರುವ ಶುಕ್ರವಾರ ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ಆದಿ ಲಕ್ಷ್ಮಿ (ರಕ್ಷಕ), ಧನ ಲಕ್ಷ್ಮಿ (ಸಂಪತ್ತಿನ ದೇವತೆ), ಧೈರ್ಯ ಲಕ್ಷ್ಮಿ (ಧೈರ್ಯ ದೇವತೆ), ಸೌಭಾಗ್ಯ ಲಕ್ಷ್ಮಿ (ಸಮೃದ್ಧಿಯ ದೇವತೆ), ವಿಜಯ ಲಕ್ಷ್ಮಿ (ವಿಜಯದ ದೇವತೆ), ಧಾನ್ಯ ಲಕ್ಷ್ಮಿ (ಪೋಷಣೆಯ ದೇವತೆ), ಸಂತಾನ ಲಕ್ಷ್ಮಿ (ಸಂತಾನದ ದೇವತೆ), ವಿದ್ಯಾ ಲಕ್ಷ್ಮಿ (ಬುದ್ಧಿವಂತಿಕೆಯ ದೇವತೆ)ಯ ಕೃಪೆಗೆ ಪಾತ್ರವಾಗಲು ಈ ಹಬ್ಬವು ಪ್ರಮುಖವಾಗಿದೆ.

2023ರಲ್ಲಿ ವರಮಹಾಲಕ್ಷ್ಮಿ ಹಬ್ಬ ಯಾವಾಗ?

ಈ ವರ್ಷ ಆಗಸ್ಟ್‌ 25ರಂದು (Friday, August 25th, 2023) ವರಮಹಾಲಕ್ಷ್ಮಿ ಹಬ್ಬ ಇರುತ್ತದೆ. ಈ ದಿನದಂದು ಲಕ್ಷ್ಮಿ ಅಭಿಷೇಕ ಸಮಯ ಬೆಳಗ್ಗೆ 9 ಗಂಟೆಗೆ ಇರುತ್ತದೆ. ವರಮಹಾಲಕ್ಷ್ಮಿ ಪೂಜೆಯು 6:30 ಗಂಟೆಗೆ ಇರುತ್ತದೆ. ಅಂದರೆ ಉದಯಕಾಲದಲ್ಲಿ ಪೂಜೆ ಮತ್ತು ಬಳಿಕ ಒಂಬತ್ತು ಗಂಟೆಗೆ ಅಭಿಷೇಕ ಮಾಡಬೇಕು.

ವರಮಹಾಲಕ್ಷ್ಮೀ ಹಬ್ಬದ ಮಹತ್ವವೇನು?

ಭಾರತದ ಹಬ್ಬಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ವರಮಹಾಲಕ್ಷ್ಮಿ ಹಬ್ಬವು ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಮುಖ್ಯವಾದ ಹಬ್ಬ. ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಮಹಿಳೆಯರು ತಮ್ಮ ಬಲಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಅಂದು ಉಪವಾಸ ಕೈಗೊಳ್ಳುವ ಮೂಲಕ ವರಮಹಾಲಕ್ಷ್ಮಿ ವ್ರತ ಕೈಗೊಳ್ಳುತ್ತಾರೆ. ಈ ಮೂಲಕ ಲಕ್ಷ್ಮೀ ದೇವಿಯ ಕೃಪಕಟಾಕ್ಷ ಪಡೆಯಲು ಬಯಸುತ್ತಾರೆ.

ವರಮಹಾಲಕ್ಷ್ಮಿ ಮಂತ್ರ

ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ|

ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ

ಈ ಮಂತ್ರವನ್ನು ಪಠಿಸುವ ಮೂಲಕ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದು.

ವರಮಹಾಲಕ್ಷ್ಮಿ ಪೂಜೆಗೆ ಸಾಮಾಗ್ರಿಗಳು

ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಮೊದಲು ಪೂಜಾ ಸಾಮಾಗ್ರಿಗಳನ್ನು ಸಮರ್ಪಕವಾಗಿ ಹೊಂದಿಸಿಕೊಳ್ಳಿ. ಹಬ್ಬಕ್ಕೆ ಯಾವೆಲ್ಲ ಪೂಜಾ ಸಾಮಾಗ್ರಿಗಳು ಬೇಕೆಂಬ ಸಂದೇಹ ನಿಮ್ಮಲ್ಲಿರಬಹುದು. ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಪ್ರತಿವರ್ಷ ಈ ಪೂಜೆ ಕೈಗೊಳ್ಳುವುದರಿಂದ ಇದರ ಆಚಾರ ವಿಚಾರಗಳೆಲ್ಲವೂ ತಿಳಿದಿರಬಹುದು. ಹೊಸದಾಗಿ ಮದುವೆಯಾದವರು, ಶಾಸ್ತ್ರ ಸಂಪ್ರದಾಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲದವರು ಈ ಮುಂದಿನ ಮಾಹಿತಿಯನ್ನು ಗಮನಿಸಬಹುದು.

ವರಮಹಾಲಕ್ಷ್ಮಿ ಪೂಜೆಗೆ ಲಕ್ಷ್ಮೀ ದೇವಿಯ ಮುಖವಾಡ ಬೇಕು. ಇದರ ಜತೆಗೆ ಕಲಶವೊಂದು ಇರಲಿ. ದೇವಿಗೆ ಉಡಿಸಲು ಸೀರೆ ಬೇಕು. ದೇವಿಗೆ ಆಭರಣದಿಂದ ಅಲಂಕಾರ ಮಾಡಬೇಕು. ರೆಡಿಮೆಡ್‌ ಕೂದಲು, ಒಂದಿಷ್ಟು ಪರಿಕರಗಳು ಇರಬೇಕು. ಇವೆಲ್ಲ ಗ್ರಂಥಿಕೆ ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ದೊರಕುತ್ತದೆ. ಕನ್ನಡಿ ಇರಲಿ. ಸಿಪ್ಪೆ ತೆಗೆದ ಮೂರು ತೆಂಗಿನಕಾಯಿಯನ್ನು ಇಡಿ. ಇದರೊಂದಿಗೆ ಅಲಂಕಾರಕ್ಕೆ ಮತ್ತು ಪೂಜೆಗೆ ಹೂವುಗಳು ಬೇಕು.

ಮಣಿಕಟ್ಟಿಗೆ ಕಟ್ಟಲು ಹಳದಿ ದಾರ ತಂದಿಡಿ. ಮರದ ಮಣೆ, ಪೀಠ ಬೇಕು. ಹೂವಿನ ಹಾರ ಸಿದ್ಧವಾಗಿಟ್ಟುಕೊಳ್ಳಿ. ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಬಾಳೆಹಣ್ಣು, ಅರಶಿನ, ಚಂದನ, ಕುಂಕಮ, ಬಿಳಿರಂಗೋಲಿ ಪುಡಿ, ಅಕ್ಷತೆ ಮತ್ತು ಅಕ್ಕಿ ಇರಲಿ. ಇವುಗಳೊಂದಿಗೆ ಎಣ್ಣೆ, ತುಪ್ಪ ಮತ್ತು ದೀಪ, ಧೂಪದ್ರವ್ಯದ ತುಂಡುಗಳು, ಕರ್ಪೂರ ಇರಲಿ. ಲೋಹದ ಅಥವಾ ಬೆಳ್ಳಿಯ ತಟ್ಟೆಯೂ ಪೂಜೆಗೆ ಬೇಕಾಗುತ್ತದೆ.

ವರಮಹಾಲಕ್ಷ್ಮಿ ಪೂಜೆ ಮಾಡುವುದು ಹೇಗೆ?

ಪೂಜೆ ಮಾಡುವ ವಿಧಾನ ಕರ್ನಾಟಕದ ವಿವಿಧೆಡೆ ಬೇರೆಬೇರೆ ರೀತಿ ಇರಬಹುದು. ತಮ್ಮ ಆಚಾರ ವಿಚಾರದಂತೆ, ನಡೆಸಿಕೊಂಡು ಬಂದ ಕ್ರಮದಂತೆ ಮಾಡಬಹುದು. ಬೆಳಗ್ಗೆ ಉದಯಕಾಲದಲ್ಲಿ ಪೂಜೆ ಮಾಡಬೇಕು. ಹೀಗಾಗಿ ಅಂದು ಬೆಳಗ್ಗೆ ಬೇಗ ಎದ್ದೇಳಬೇಕು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಅಥವಾ ಆಚರಣೆ ಇರುತ್ತದೆ. ಪೂಜಾ ಪ್ರದೇಶವನ್ನು ನೀರಿನಿಂದ ಶುದ್ಧ ಮಾಡಿ. ಗಂಗಾಜಲವಿದ್ದರೆ ಉತ್ತಮ. ಮರದ ಪೀಠ, ಮಣೆಗೆ ಅರಸಿನ ಹಚ್ಚಿ, ರಂಗೋಲಿ ಪುಡಿ ಇರಲಿ. ಪೀಠಕ್ಕೆ ಅಕ್ಷತೆ ಹಾಕಿ, ಲೋಹದ ತಟ್ಟೆ ಇಡಿ. ಅರಶಿನ, ಕುಂಕುಮವನ್ನು ಕಲಶಕ್ಕೆ ಹಚ್ಚಿ. ಅದನ್ನು ತಟ್ಟೆಯ ಮಧ್ಯ ಭಾಗದಲ್ಲಿ ಇಟ್ಟು, ಕಲಶಕ್ಕೆ ಕೊಂಚ ನೀರು ಹಾಕಿ. ಕಲಶಕ್ಕೆ ಅಕ್ಷತೆ ಹಾಕಿ. ಕಲಶದ ಮೇಲೆ ತೆಂಗಿನಕಾಯಿ ಇಡಿ.

ಈ ರೀತಿ ಕಲಶ ಮತ್ತು ತೆಂಗಿನಕಾಯಿಯು ಲಕ್ಷ್ಮೀ ದೇವಿಯಾಗಬೇಕು. ಇದಕ್ಕಾಗಿ ತೆಂಗಿನಕಾಯಿಗೆ ಲಕ್ಷ್ಮೀ ದೇವಿಯ ಮುಖವಾಡವನ್ನು ಜೋಡಿಸಿರಿ. ಬಟ್ಟೆ ಬಳಸಿ ಸೀರೆ ಉಡಿಸಿ. ಕೂದಲು, ಆಭರಣ ಇತ್ಯಾದಿಗಳಿಂದ ಅಲಂಕರಿಸಿ.ಹೂವಿನ ಹಾರ ಹಾಕಿ.

ವರಲಕ್ಷ್ಮಿ ಮಂತ್ರಗಳು

ವರಮಹಾಲಕ್ಷ್ಮಿ ದೇವರ ಅಲಂಕಾರ ಮುಗಿದ ಬಳಿಕ ದೇವಿಯ ಹಿಂದೆ ಕನ್ನಡಿ ಇರಿಸಿ. ಎಣ್ಣೆ ಹಾಕಿ ದೀಪ ಬೆಳಗಿಸಿ. ದೇವಿಯ ಮುಂದೆ ವೀಳ್ಯದೆಲೆ, ಅಡಿಕೆ ಇಡಿ. ಮೊದಲೊಂದಿಪೆ ಗಣನಾಥ ಎಂಬಂತೆ ಮೊದಲು ಗಣೇಶ ದೇವರಿಗೆ ಪೂಜೆ ಸಲ್ಲಿಸಿ. ದೇವಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಣ ಮಾಡಿ. ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಿಸಬಹುದು. ದೇವಿಗೆ ಪೂಜೆ ಸಲ್ಲಿಸುವಾಗ ಹೂವು ಅರ್ಪಿಸಿ, ತಾಂಬೂಲ ಅರ್ಪಿಸಿ. ದೇವಿಗೆ ನೈವೇದ್ಯ ಅರ್ಪಿಸಿ. ಕಡಲೆ ಪಾಯಸ, ಮೋದಕ, ಇಡ್ಲಿ, ಉಪ್ಪು ಇತ್ಯಾದಿಗಳನ್ನು ನೈವೇದ್ಯವಾಗಿ ಮಹಾಲಕ್ಷ್ಮಿ ದೇವಿಗೆ ಸಮರ್ಪಿಸಬಹುದು.ಇದೆಲ್ಲ ಆದ ಬಳಿಕ ಆರತಿ ಮಾಡಿ, ಬಳಿಕ ನಿಮ್ಮ ಕೈಗೆ ದಾರವನ್ನು ಕಟ್ಟಿ. ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ, ನಿಮ್ಮ ಕೋರಿಕೆಗಳನ್ನು ಸಲ್ಲಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ