ವರಮಹಾಲಕ್ಷ್ಮಿ ಹಬ್ಬ ಬಂದೇ ಬಿಡ್ತು, ಲಕ್ಷ್ಮಿಗೆ ಸೀರೆ ಉಡಿಸಲು ಹೀಗಿದೆ ಸರಳ ವಿಧಾನ
Aug 19, 2023 05:35 PM IST
ವರಮಹಾಲಕ್ಷ್ಮಿ ಹಬ್ಬ ಬಂದೇ ಬಿಡ್ತು ಲಕ್ಷ್ಮಿಗೆ ಸೀರೆ ಉಡಿಸಲು ಹೀಗಿದೆ ಸರಳ ವಿಧಾನ
- ವರಮಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುಮಾಗಿದೆ. ಮನೆಯ ಹೆಂಗಳೆಯರು ಹಬ್ಬದ ತಯಾರಿಯಲ್ಲಿದ್ದಾರೆ. ಈ ನಡುವೆ ಪ್ರತಿಷ್ಟಾಪಿಸಲ್ಪಡುವ ಲಕ್ಷ್ಮಿಗೆ ಚೆಂದವಾಗಿ ಸೀರೆಯನ್ನೂ ಈ ಹಬ್ಬದಂದು ಉಡಿಸಲಾಗುತ್ತದೆ. ಸರಳವಾಗಿ ಸೀರೆ ಉಡಿಸುವ ವಿಧಾನ ಹೀಗಿದೆ.
Varamahalakshmi Festival 2023: ಆಷಾಢ ಮುಗಿದು ಅಧಿಕ ಶ್ರಾವಣಕ್ಕೆ ಕಾಲಿಟ್ಟಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ನಿಜ ಶ್ರಾವಣ ಆರಂಭವಾಗಲಿದೆ. ಶ್ರಾವಣ ಬಂತೆಂದರೆ ಮಹಿಳೆಯರಿಗೆ ಹಬ್ಬಗಳ ಸರದಿ ಬಂದಂತೆ. ಈಗಾಗಲೇ ಮಹಿಳೆಯರು ಕಾತುರದಿಂದ ಕಾಯುತ್ತಿರುವ ವರಮಹಾಲಕ್ಷ್ಮಿ ಹಬ್ಬವು ಆಗಸ್ಟ್ 25 ರಂದು ಶುಕ್ರವಾರ ಹಬ್ಬದ ದಿನ.
ಈ ಹಿಂದೆ ವರಮಹಾಲಕ್ಷ್ಮಿಯನ್ನು ಪದ್ಧತಿ ಇರುವ ಮನೆಗಳಲ್ಲಿ ಮಾತ್ರ ಆಚರಿಸುತ್ತಿದ್ದರು. ಆದರೆ ಈಗ ಪ್ರತಿಯೊಬ್ಬರು ತಮ್ಮ ಮನೆಗಳಿಗೆ ಲಕ್ಷ್ಮಿಯನ್ನು ಬರಮಾಡಿಕೊಂಡು, ಲಕ್ಷ್ಮಿಯನ್ನು ಅಲಂಕರಿಸಿ, ತಮ್ಮ ಮನೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ವರಮಹಾಲಕ್ಷ್ಮಿಯನ್ನು ಆಚರಿಸುವುದರಿಂದ ಹಾಗೂ ಪೂಜಿಸುವುದರಿಂದ ಮನೆಯಲ್ಲಿ ಧನಲಕ್ಷ್ಮಿ ಆಗಮನವಾಗುತ್ತದೆ ಎಂಬುದು ನಂಬಿಕೆ.
ವರಮಹಾಲಕ್ಷ್ಮಿ ಹಬ್ಬದಂದು ಕಲಶವಿಟ್ಟು ಅದಕ್ಕೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ. ಮನೆಯಲ್ಲಿ ಕಳಶ ಪ್ರತಿಷ್ಠಾಪಿಸಿ ಅದಕ್ಕೆ ತಮ್ಮ ಇಚ್ಛಾನುಸಾರ ಸೀರೆಯನ್ನು ತಂದು ದೇವರಿಗೆ ಉಡಿಸುತ್ತಾರೆ. ಕಳಶಕ್ಕೆ ಮುಖವಾಡ ಧರಿಸಿ ತಮ್ಮ ಬಳಿ ಇರುವ ಆಭರಣಗಳಿಂದ ಅಲಂಕರಿಸುವುದು ಇತ್ತೀಚಿನ ಟ್ರೆಂಡ್ ಕೂಡ ಆಗಿದೆ.
ಹಬ್ಬಕ್ಕೂ 15 ದಿನದ ಮೊದಲೇ ಮಹಿಳೆಯರು ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗಳಲ್ಲಿ ಓಡಾಡುತ್ತಿದ್ದಾರೆ. ನಗರಗಳ ಪ್ರಮುಖ ಪೇಟೆಗಳಲ್ಲಿ ಫ್ಯಾನ್ಸಿ ಐಟಂಗಳು ಹಾಗೂ ರೆಡಿಮೇಡ್ ವಸ್ತುಗಳು ಎಲ್ಲವೂ ಸಿಗುವುದರಿಂದ ಈಗಿನಿಂದಲೇ ಖರೀದಿ ಶುರುವಾಗಿದೆ. ಇದೆಲ್ಲದರ ಜತೆಗೆ ಪ್ರತಿಷ್ಟಾಪಿಸಿದ ಲಕ್ಷ್ಮೀಗೆ ಸೀರೆ ಉಡಿಸುವುದೂ ಒಂದು ಸವಾಲು.
ವರಮಹಾಲಕ್ಷ್ಮಿ ಸೀರೆ ಉಡಿಸುವ ವಿಧಾನ
ಲಕ್ಷ್ಮಿಗೆ ಸರಳವಾಗಿ ಹಲವು ಬಗೆಗಳಲ್ಲಿ ಸೀರೆಯನ್ನು ಉಡಿಸಬಹುದು. ಲಕ್ಷ್ಮಿ ದೇವಿಗೆ ಹಸಿರು ಬಣ್ಣದ ಸೀರೆಯನ್ನು ಸಾಮಾನ್ಯವಾಗಿ ಉಡಿಸುತ್ತಾರೆ. ಮಾರುಕಟ್ಟೆಗಳಲ್ಲಿ ಇದೀಗ ದೇವಿಗೆ ಅಲಂಕರಿಸುವ ಕೈ ಮತ್ತು ಕಾಲುಗಳು ಸಿಗಲಿವೆ ಅಥವಾ ಯೂಟ್ಯೂಬ್ ನಲ್ಲಿ ಅದನ್ನು ಸಿದ್ಧಪಡಿಸುವ ವಿಧಾನ ಕೂಡ ಇರಲಿದೆ. ನೀವು ಅದನ್ನು ನೋಡಿಕೊಂಡು ಸುಲಭವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದು.
ಒಂದು ಚೊಂಬು ಅಥವಾ ಸಣ್ಣ ಬಿಂದಿಗೆಯ ಸಹಾಯದಿಂದ ಸೀರೆಯನ್ನು ಉಡಿಸಬಹುದು. ಬಿಂದಿಗೆ ಕುತ್ತಿಗೆಗೆ ಒಂದು ಗಟ್ಟಿಯಾದ ಕೋಲನ್ನು ಅಥವಾ ಕಬ್ಬಿಣದ ತುಂಡನ್ನು ಕಟ್ಟ ಬೇಕು. ದೇವಿಯ ಕೈಕಾಲುಗಳನ್ನು ಬಿಂದಿಗೆಗೆ ಕಟ್ಟಿ ಬಲಭಾಗದ ಕೈ ಮೇಲ್ಮುಖವಾಗಿ ಎಡಗೈ ಕೆಳಮುಖವಾಗಿ ಇರುವಂತೆ ಪ್ರತ್ಯೇಕ ಬ್ಲೌಸ್ ಪೀಸ್ ನಲ್ಲಿ ಅಲಂಕರಿಸಿ ಕೊಳ್ಳಿ. ನಂತರ ಚೊಂಬು ಅಥವಾ ಬಿಂದಿಗೆಯ ಕುತ್ತಿಗೆ ಭಾಗಕ್ಕೆ ಅದನ್ನು ಸುತ್ತಿಕೊಂಡು ಇಟ್ಟುಕೊಳ್ಳಬೇಕು. ಸೀರೆಯ ಫಾಲ್ಸ್ ಭಾಗದಿಂದ ನೆರಿಗೆಯನ್ನು ಮಾಡಿಕೊಂಡು ಸೆರಗಿಗೆ ಬೇಕಾದಷ್ಟು ಬಿಟ್ಟು ಮಿಕ್ಕ ನೆರಿಗೆಗಳನ್ನು ಕಟ್ಟಿಕೊಂಡು ಅಥವಾ ಕ್ಲಿಪ್ಪನ್ನು ಹಾಕಿಕೊಳ್ಳಬೇಕು. ನೆರಿಗೆ ಹಿಡಿದ ಸೀರೆಯ ಭಾಗವನ್ನು ಉಲ್ಲನ್ ದಾರದ ಸಹಾಯದಿಂದ ಎಷ್ಟು ಎತ್ತರ ಬೇಕು ಅಷ್ಟು ಎತ್ತರ ಇಟ್ಟುಕೊಂಡು ಉಳಿದ ಭಾಗವನ್ನು ಮಡಿಚಿಕೊಂಡು ಬಿಂದಿಗೆ ಕಟ್ಟಿ.
ನಂತರ ನೆರಿಗೆಯನ್ನು ನೀಟಾಗಿ ಮಡಚಿಕೊಂಡು ಚೊಂಬು ಅಥವಾ ಬಿಂದಿಗೆಯ ಭಾಗ ಎಲ್ಲವೂ ಮರೆಯಾಗುವಂತೆ ನೀಟಾಗಿ ಹರಡಿಕೊಳ್ಳಬೇಕು.
ಬಳಿಕ ಒಂದು ಸುತ್ತು ಸೆರಗನ್ನು ಹಾಕಿ ಎರಡು ಕಡೆ ಪಿನ್ ಮಾಡಿ ಬಿಂದಿಗೆಯ ಎಡಭಾಗದಿಂದ ಒಂದು ಸುತ್ತು ಸೆರಗನ್ನು ತೆಗೆದುಕೊಳ್ಳಿ. ಸೆರಗನ್ನು ಕೂಡ ಮುಂದುಗಡೆ ಬಿಡಬಹುದು. ಅದಕ್ಕೆ ಪಿನ್ ಮಾಡಿಕೊಳ್ಳಿ. ಸೊಂಟದ ಪಟ್ಟಿಯನ್ನು ಹಾಕುವ ಮೂಲಕ ಸೀರೆಯನ್ನು ಗಟ್ಟಿಯಾಗಿ ಕೂರಿಸಿಕೊಳ್ಳಬಹುದು.
ಹೀಗೆ ಸರಳವಾಗಿ ಸೀರೆಯನ್ನು ಉಡಿಸುವ ಮೂಲಕ ವರಮಹಾಲಕ್ಷ್ಮಿ ದೇವಿಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ತಕ್ಕಂತೆ ಒಡವೆ ಮತ್ತು ಹೂಗಳಿಂದ ಅಲಂಕರಿಸಿಕೊಳ್ಳಿ.