Varamahalakshmi festival: ಕರ್ನಾಟಕದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರದ್ದೇ ಹವಾ
Aug 25, 2023 10:41 AM IST
ಸೋಷಿಯಲ್ ಮೀಡಿಯಾದಲ್ಲಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದ ಶ್ವೇತಾ ಚೆಂಗಪ್ಪ
- Varamahalakshmi festival: ಇಂದು ವರಮಹಾಲಕ್ಷ್ಮಿ ಹಬ್ಬ. ಪ್ರತಿಮನೆಮನೆಯಲ್ಲೂ ಪೂಜೆ, ಸಡಗರ, ಸಂಭ್ರಮ. ಸೋಷಿಯಲ್ ಮೀಡಿಯಾದಲ್ಲೂ ಮಹಿಳೆಯರು ಇಂದಿನ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರ ಮನೆಯಲ್ಲಿ ಹಬ್ಬದ ಸಂಭ್ರಮ ಹೇಗಿದೆ ಎಂದು ತಿಳಿಯಲು ಸೋಷಿಯಲ್ ಮೀಡಿಯಾದಲ್ಲೊಂದು ಸುತ್ತು ಹಾಕೋಣ ಬನ್ನಿ.
ಇಂದು ಬೆಳಗ್ಗಿನಿಂದಲೇ ಪ್ರತಿಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಬೆಳಗ್ಗೆ ಬೇಗ ಎದ್ದು ಮನೆಯ ಮುಂದೆ ರಂಗೋಲಿ ಹಾಕಿ, ದೇವರ ಕೋಣೆಯನ್ನು ಅಲಂಕರಿಸಿ, ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ಮಹಿಳೆಯರು ಭಕ್ತಿ ಪರವಶರಾಗಿದ್ದಾರೆ. ಪ್ರತಿ ಮನೆಯಲ್ಲೂ ಹಬ್ಬದ ಅಡುಗೆ, ತಿಂಡಿತಿನಿಸುಗಳ ಪರಿಮಳವಿದೆ. ಮಹಿಳೆಯರ ಸಂಭ್ರಮಕ್ಕೆ ತೋರಣ, ಅಲಂಕಾರಕ್ಕೆ ನೆರವಾಗುತ್ತ ಪುರುಷರೂ ಸಹಕರಿಸುತ್ತಿದ್ದಾರೆ. ಮುಂಜಾನೆಯಿಂದ ಇಷ್ಟೊತ್ತಿನವರೆಗೆ ಹಬ್ಬದ ಗಡಿಬಿಡಿಯಲ್ಲಿದ್ದ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಳ್ಳುತ್ತಿದ್ದಾರೆ.
ಇಂದು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಪ್ ಸ್ಟೇಟಸ್ ಇತ್ಯಾದಿ ಎಲ್ಲಿ ನೋಡಿದರೂ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಕೆಲವರು ವರಮಹಾಲಕ್ಷ್ಮಿ ದೇವಿಯ ಅಲಂಕಾರದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಸುಂದರ ಉಡುಗೆ ತೊಟ್ಟು ಹಬ್ಬದ ಸಿಹಿಯನ್ನು ತೋರಿಸುತ್ತ ನೋಡುಗರಿಗೆ ಹಬ್ಬದ ಅಡುಗೆಯ ಆಸೆ ಹುಟ್ಟಿಸುತ್ತಿದ್ದಾರೆ. ಮಹಿಳೆಯರ ಈ ಸಂಭ್ರಮ ಸಡಗರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಟ್ರೆಂಡ್ ಆಗಿದೆ.
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರಪೂಜಿತೆ, ಶಂಖಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ, ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಕ್ಷ್ಮಿಯು ಸಕಲರಿಗೂ ಆಯುರಾರೋಗ್ಯ ಸುಖ-ಶಾಂತಿ, ನೆಮ್ಮದಿ, ಸಂಪತ್ತನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಇತ್ಯಾದಿ ಶುಭಾಶಯಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತಿದೆ. ಅಂದಹಾಗೆ, ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಸೋಷಿಯಲ್ ಮೀಡಿಯಾದಲ್ಲಿ ದೇವಿಯ ಫೋಟೊ ಹಾಕಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿದೆ ಎಂದು ಕಣ್ತುಂಬಿಕೊಳ್ಳೋಣ.