logo
ಕನ್ನಡ ಸುದ್ದಿ  /  ಜೀವನಶೈಲಿ  /  ತೆಂಗಿನಕಾಯಿಯ ಬಗೆಬಗೆ ಬಳಕೆ: ಕೊಬ್ಬರಿಯನ್ನು ಅದೆಷ್ಟು ಥರ ಬಳಸ್ತಾರೆ? ಅಬ್ಬಾ ಎಲ್ಲಕ್ಕೂ ಸಲ್ಲುತ್ತೆ ನಾರಿಕೇಳ

ತೆಂಗಿನಕಾಯಿಯ ಬಗೆಬಗೆ ಬಳಕೆ: ಕೊಬ್ಬರಿಯನ್ನು ಅದೆಷ್ಟು ಥರ ಬಳಸ್ತಾರೆ? ಅಬ್ಬಾ ಎಲ್ಲಕ್ಕೂ ಸಲ್ಲುತ್ತೆ ನಾರಿಕೇಳ

Priyanka Gowda HT Kannada

Sep 10, 2024 01:54 PM IST

google News

ತೆಂಗಿನಕಾಯಿ

    • ತೆಂಗಿನಕಾಯಿ ಒಂದು ಅದ್ಭುತ ಫಲ. ಶ್ರೀಫಲ ಎಂದೂ ಕರೆಯುವ ಇದನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ತೆಂಗಿನ ನೀರಿನಿಂದ ಹಿಡಿದು, ಎಣ್ಣೆಯವರೆಗೂ ಮಾನವ ಇದರಿಂದ ಉಪಯೋಗ ಪಡೆದುಕೊಳ್ಳುತ್ತಾನೆ. ಇಂತಹ ಅದ್ಭುತ ತೆಂಗಿನಕಾಯಿಯನ್ನು ಹೇಗೆಲ್ಲಾ ಬಳಸಬಹುದು? ಬಹಳ ದಿನಗಳವರೆಗೆ ಕೆಡದಂತೆ ಇಡುವುದು ಹೇಗೆ ಇಲ್ಲಿದೆ ಮಾಹಿತಿ.
ತೆಂಗಿನಕಾಯಿ
ತೆಂಗಿನಕಾಯಿ

ತೆಂಗಿನಮರವನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಇದು ಬಹುಪಯೋಗಿ ಮರ. ಇದರ ಪ್ರತಿಯೊಂದು ಭಾಗದಿಂದಲೂ ಪ್ರಯೋಜನವಿದೆ. ತೆಂಗಿನ ಕಾಯಿ, ಮರ, ಗರಿ, ಎಳನೀರು, ತೆಂಗಿನ ಎಣ್ಣೆ ಎಲ್ಲವನ್ನು ಉಪಯೋಗಕ್ಕೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿಯೇ ತೆಂಗನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ತೆಂಗಿನ ಕಾಯಿ ಅಡುಗೆಗೆ ಎಷ್ಟು ಮುಖ್ಯವೋ ಹಾಗೆಯೇ ದೇವರ ಪೂಜೆಗೂ ಶ್ರೇಷ್ಠವೆಂದು ಹೇಳಲಾಗಿದೆ. ತೆಂಗಿನಕಾಯಿ ಅಡುಗೆಯ ರುಚಿ ಮತ್ತು ಆರೋಗ್ಯ ಎರಡಕ್ಕೂ ಉತ್ತಮವಾಗಿದೆ. ಭಾರತದ ಎಲ್ಲಾ ಪ್ರದೇಶಗಳಲ್ಲೂ ತೆಂಗಿನಕಾಯಿ ಬಳಸುವುದನ್ನು ಕಾಣಬಹುದಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇದರ ಉಪಯೋಗ ಸ್ವಲ್ಪ ಹೆಚ್ಚು ಎಂದರೂ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಇದರ ಬೆಳೆ ಹೆಚ್ಚು. ಇದನ್ನು ಶ್ರೀಫಲ ಎಂದೂ ಕರೆಯುತ್ತಾರೆ. ತೆಂಗಿನಕಾಯಿಯ ನೀರು, ಹಾಲು, ಕೊಬ್ಬರಿ ಬಳಸುವುದರ ಜೊತೆಗೆ ಇದರ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಅಡುಗೆ ಮಾಡಲು, ತ್ವಚೆ ಮತ್ತು ಕೂದಲ ಆರೈಕೆಗೆ ಬಳಸುತ್ತಾರೆ. ತೆಂಗಿನಕಾಯಿ ಅಥವಾ ಕೊಬ್ಬರಿಯನ್ನು ಬಹಳಷ್ಟು ವಿಧಗಳಲ್ಲಿ ಬಳಸುತ್ತಾರೆ. ಬಹುಪಯೋಗಿ ತೆಂಗಿನಕಾಯಿಯನ್ನು ಹೇಗೆಲ್ಲಾ ಬಳಸಬಹುದು ಎಂದು ನೋಡೋಣ.

ಹಸಿ ಮತ್ತು ಒಣ ತೆಂಗಿನಕಾಯಿಯ ಉಪಯೋಗಗಳು

1) ತೆಂಗಿನ ಹಸಿ ಕೊಬ್ಬರಿಯಿಂದ ಚಟ್ನಿ ತಯಾರಿಸಲಾಗುತ್ತದೆ. ಹಸಿ ತೆಂಗಿನ ತುರಿಗೆ, ಪುಟಾಣಿ, ಹಸಿಮೆಣಸಿನ ಕಾಯಿ, ಕೊತ್ತೊಂಬರಿ ಸೊಪ್ಪು, ಉಪ್ಪು ಸೇರಿಸಿ ಚಟ್ನಿ ತಯಾರಿಸುತ್ತಾರೆ. ಇದು ದೋಸೆ, ಇಡ್ಲಿ, ಚಪಾತಿಗೆ ಬೆಸ್ಟ್‌ ಕಾಂಬಿನೇಷನ್‌.

2) ತಾಜಾ ತೆಂಗಿನ ತುರಿಗೆ, ಮಾಸಾಲಾ ಪುಡಿ, ಕೆಂಪು ಮೆಣಸಿನಕಾಯಿ ಸೇರಿಸಿ ರುಬ್ಬಿ, ಅದನ್ನು ಬೇಯಿಸಿದ ಬೇಳೆ ಮತ್ತು ತರಕಾರಿಗೆ ಸೇರಿಸಿ, ಸಾಂಬಾರ ತಯಾರಿಸಲಾಗುತ್ತದೆ. ಬಿಸಿ ಅನ್ನಕ್ಕೆ ಇದು ಅದ್ಭುತ ರುಚಿ ನೀಡುತ್ತದೆ.

3) ತೆಂಗಿನ ಕಾಯಿಯನ್ನು ಕಬಾಬ್‌ ತಯಾರಿಸಲೂ ಬಳಸಲಾಗುತ್ತದೆ. ಆಲೂಗಡ್ಡೆ, ಫ್ರೆಂಚ್‌ ಬೀನ್ಸ್‌, ಕ್ಯಾರೆಟ್‌, ಬಟಾಣಿ ಮುಂತಾದ ತರಕಾರಿಗಳ ಸಾಗು ತಯಾರಿಸಲು ತೆಂಗಿನಕಾಯಿ ಬಳಸುತ್ತಾರೆ. ಇದು ಅಡುಗೆಯ ರುಚಿ ದುಪ್ಪಟ್ಟಾಗುವಂತೆ ಮಾಡುತ್ತದೆ.

4) ತುರಿದ ತೆಂಗಿನಕಾಯಿಯಿಂದ ಬರ್ಫಿ ತಯಾರಿಸಲಾಗುತ್ತದೆ. ಸಕ್ಕರೆ ಪಾಕಕ್ಕೆ ತುರಿದ ತೆಂಗಿನಕಾಯಿ, ಏಲಕ್ಕಿ ಹಾಕಿ ಗಟ್ಟಿಯಾಗುವವರೆಗೆ ಕಾಯಿಸಿ, ಟ್ರೇನಲ್ಲಿ ಹರಡಿ. ತಣ್ಣಗಾದ ನಂತರ ಚೌಕಾರದಲ್ಲಿ ಕತ್ತರಿಸಿ ಬರ್ಫಿ ತಯಾರಿಸಲಾಗುತ್ತದೆ. ರುಚಿಕರವಾದ ಬರ್ಫಿಯನ್ನು ಒಂದು ವಾರದವರೆಗೆ ಸವಿಯಬಹುದು.

5) ಒಣಗಿದ ತೆಂಗಿನಕಾಯಿ ಅಂದರೆ ಡೆಸಿಕೇಟೆಡ್‌ ತೆಂಗಿನಕಾಯಿಯನ್ನು ವಿವಿಧ ಅಡುಗೆಗಳಲ್ಲಿ ಬಳಸಲಾಗುತ್ತದೆ. ಒಣ ಕೊಬ್ಬರಿ ಪುಡಿಯಿಂದ ಲಾಡು, ಪೇಡಾಗಳನ್ನು ತಯಾರಿಸುತ್ತಾರೆ.

6) ಮನೆಯಲ್ಲಿ ತಾಜಾ ತೆಂಗಿನಕಾಯಿ ಇಲ್ಲದಿದ್ದರೆ, ಚಟ್ನಿ ಮಾಡುವ ಮೊದಲು ಕೊಬ್ಬರಿಯನ್ನು ಉಗುರುಬೆಚ್ಚಗಿನ ಹಾಲು ಅಥವಾ ಮೊಸರಿನಲ್ಲಿ ನೆನೆಸಿ ನಂತರ ಚಟ್ನಿ ಮಾಡಬಹುದು. ಹೀಗೆ ಮಾಡುವುದರಿಂದ ಚಟ್ನಿಗೆ ತಾಜಾ ತೆಂಗಿನಕಾಯಿಯ ಸ್ವಾದವೇ ಬರುತ್ತದೆ.

7) ಜಾಮ್‌ ಮತ್ತು ತೆಂಗಿನ ತುರಿಯಿಂದಲೂ ಲಡ್ಡು ತಯಾರಿಸಬಹುದು. ಒಣ ಕೊಬ್ಬರಿ ಪುಡಿಯನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ಜಾಮ್‌ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಆ ಮಿಶ್ರಣದಿಂದ ಲಡ್ಡು ತಯಾರಿಸಬಹುದು.

8) ತೆಂಗಿನ ತುರಿ, ಪನ್ನೀರ್‌ ಹಾಗೂ ಉಪ್ಪು , ಮಸಾಲೆಗಳನ್ನು ಸೇರಿಸಿ ಪರಾಠ ತಯಾರಿಸಬಹುದು. ಇದು ಮಕ್ಕಳ ಲಂಚ್ ಬಾಕ್ಸ್‌ಗೆ ಬೆಸ್ಟ್‌.

9) ಚಿತ್ರಾನ್ನಗಳಂತಹ ಅನ್ನದ ವಿಶೇಷ ಅಡುಗೆಗಳಲ್ಲಿ ತೆಂಗಿನ ತುರಿಯನ್ನು ತಪ್ಪದೇ ಬಳಸಿ. ಇದು ರುಚಿ ಹೆಚ್ಚಿಸುತ್ತದೆ.

ತೆಂಗಿನಕಾಯಿಯನ್ನು ಬಹಳ ದಿನಗಳವರೆಗೆ ಕೆಡದಂತೆ ರಕ್ಷಿಸುವುದು ಹೇಗೆ?

1) ತಾಜಾ ತೆಂಗಿನಕಾಯಿ ಹೋಳುಗಳನ್ನು ಸ್ವಚ್ಛ ನೀರಿನಲ್ಲಿ ತೊಳೆದು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ. ಅಥವಾ ಒಂದು ಪಾತ್ರೆಯಲ್ಲಿ ತೆಂಗಿನಕಾಯಿ ಹೋಳುಗಳು ಮುಳುಗುವವರೆಗೆ ನೀರು ಹಾಕಿ ಫ್ರಿಜ್‌ನಲ್ಲಿಡಿ. ಪ್ರತಿದಿನ ನೀರು ಬದಲಾಯಿಸಿ. ಸುಮಾರು 10 ರಿಂದ 15 ದಿನಗಳವರೆಗೆ ತೆಂಗಿನಕಾಯಿ ಕೆಡದಂತೆ ಬಳಸಬಹುದು.

2) ತಾಜಾ ತೆಂಗಿನಕಾಯಿಯನ್ನು ತುರಿಯಿರಿ. ಅದನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ರುಬ್ಬಿ. ಆ ಮಿಶ್ರಣವನ್ನು ಐಸ್‌ಕ್ಯೂಬ್‌ ಟ್ರೇ ಅಥವಾ ಮೌಲ್ಡ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಅದು ಗಟ್ಟಿಯಾದ ನಂತರ ಅದನ್ನು ಜಿಪ್ ಇರುವ ಪೌಚ್‌ ಅಥವಾ ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ. ತಿಂಗಳುಗಳವರೆಗೆ ಇದನ್ನು ಅಡುಗೆಯಲ್ಲಿ ಬಳಸಬಹುದು.

3) ಕೊಬ್ಬರಿಯನ್ನು ಜಿಪ್‌ ಇರುವ ಪೌಚ್ನಲ್ಲಿ ಹಾಕಿ ಸೀಲ್‌ ಮಾಡಿ ಫ್ರೀಜರ್‌ನಲ್ಲಿಡಿ. ಇದನ್ನೂ ಅಷ್ಟೇ ತಿಂಗಳುಗಳವರೆಗೆ ಕೆಡದಂತೆ ಬಳಸಬಹುದು.

ಆರೋಗ್ಯ ಕಾಪಾಡುವ ತೆಂಗಿನಕಾಯಿ

ಆಹಾರದ ರುಚಿಯನ್ನು ಹೆಚ್ಚಿಸುವ ತೆಂಗಿನಕಾಯಿ ಆರೋಗ್ಯಕ್ಕೂ ಉತ್ತಮವಾಗಿದೆ. ಇದು ಗ್ಲುಟನ್‌ನಿಂದ ಮುಕ್ತವಾಗಿರುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ತೆಂಗಿನಕಾಯಿಯು ಪೋಷಕಾಂಶಗಳ ಗಣಿಯಾಗಿದೆ. ಇದರಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಆರೋಗ್ಯಕರ ಕೊಬ್ಬು, ಫೈಬರ್‌, ಮ್ಯಾಂಗನೀಸ್‌, ತಾಮ್ರ, ಪೊಟ್ಯಾಸಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳಿವೆ. ಆದ್ದರಿಂದ ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನ ನೀಡುತ್ತದೆ.

1) ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ತೆಂಗಿನಕಾಯಿ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಬಿಡುಗಡೆಯಾಗುವ ಎಣ್ಣೆಯು ಆರೋಗ್ಯಕರ ಕೊಲೆಸ್ಟ್ರಾಲ್‌ ಅನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುತ್ತದೆ.

2) ಋತುಮಾನಗಳ ಬದಲಾವಣೆಯ ಸಮಯದಲ್ಲಿ ತೆಂಗಿನಕಾಯಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಂಗಿನಕಾಯಿ ತಿನ್ನುವುದರಿಂದ ರಕ್ತಹೀನತೆ ದೂರವಾಗುತ್ತದೆ.

3) ತೆಂಗಿನಕಾಯಿಯಲ್ಲಿ ಫೈಬರ್‌ ಅಂಶ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಅದನ್ನು ತಿನ್ನುವುದರಿಂದ ಮಲಬದ್ಧತೆಗೆ ಪರಿಹಾರ ದೊರಕುತ್ತದೆ. ಅಷ್ಟೇ ಅಲ್ಲದೇ ನಿದ್ರಾಹೀನತೆಯ ಸಮಸ್ಯೆಗೂ ಪರಿಹಾರ ಸಿಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ