logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಎ ಪಾಸ್‌ ಮಾಡಿದ ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತರಕಾರಿ ವ್ಯಾಪಾರಿ ತಾಯಿ, ವೈರಲ್‌ ವಿಡಿಯೊ ಕಂಡು ಕಣ್ಣೀರಾದ ನೆಟ್ಟಿಗರು

ಸಿಎ ಪಾಸ್‌ ಮಾಡಿದ ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತರಕಾರಿ ವ್ಯಾಪಾರಿ ತಾಯಿ, ವೈರಲ್‌ ವಿಡಿಯೊ ಕಂಡು ಕಣ್ಣೀರಾದ ನೆಟ್ಟಿಗರು

Reshma HT Kannada

Jul 16, 2024 05:10 PM IST

google News

ಸಿಎ ಪಾಸ್‌ ಮಾಡಿದ ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತರಕಾರಿ ವ್ಯಾಪಾರಿ ತಾಯಿ, ವೈರಲ್‌ ವಿಡಿಯೊ ಕಂಡು ಕಣ್ಣೀರಾದ ನೆಟ್ಟಿಗರು

    • ತಂದೆ-ತಾಯಿಗಳಿಗೆ ಮಕ್ಕಳ ಸಾಧನೆಗಿಂತ ಮಿಗಿಲಾದದ್ದಿಲ್ಲ. ಮಕ್ಕಳ ಸಾಧನೆಯ ಮುಂದೆ ತಮ್ಮೆಲ್ಲಾ ಕಷ್ಟವನ್ನು ಮರೆಯುತ್ತಾರೆ ಪೋಷಕರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ವಿಡಿಯೊ ವೈರಲ್‌ ಆಗಿದೆ. ತರಕಾರಿ ವ್ಯಾಪಾರ ಮಾಡುವ ತಾಯಿ ತನ್ನ ಮಗ ಸಿಎ ಪಾಸ್‌ ಆಗಿದ್ದಕ್ಕಾಗಿ ಕಣ್ಣೀರು ಸುರಿಸುವ ವಿಡಿಯೊ ಇದಾಗಿದೆ. ಏನಿದು ಕಥೆ, ಎಲ್ಲಿ ನಡೆದಿದೆ ವಿವರಕ್ಕಾಗಿ ಮುಂದೆ ಓದಿ.
ಸಿಎ ಪಾಸ್‌ ಮಾಡಿದ ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತರಕಾರಿ ವ್ಯಾಪಾರಿ ತಾಯಿ, ವೈರಲ್‌ ವಿಡಿಯೊ ಕಂಡು ಕಣ್ಣೀರಾದ ನೆಟ್ಟಿಗರು
ಸಿಎ ಪಾಸ್‌ ಮಾಡಿದ ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ತರಕಾರಿ ವ್ಯಾಪಾರಿ ತಾಯಿ, ವೈರಲ್‌ ವಿಡಿಯೊ ಕಂಡು ಕಣ್ಣೀರಾದ ನೆಟ್ಟಿಗರು

ಅಮ್ಮ ಎಂದರೆ ಅದ್ಭುತ ಶಕ್ತಿ. ಆಕೆ ನವಮಾಸಗಳ ಕಾಲ ಕಂದಮ್ಮನನ್ನು ಹೊಟ್ಟೆಯಲ್ಲಿಟ್ಟುಕೊಂಡು ಸಾಕಿ ಸಲಹುವುದು ಮಾತ್ರವಲ್ಲ, ಮಗು ಹುಟ್ಟಿದಾಗಿನಿಂದ ತಾನು ಕೊನೆಯುಸಿರು ಎಳೆಯುವವರೆಗೂ ಅದರ ಏಳ್ಗೆಗಾಗಿಯೇ ಶ್ರಮಿಸುತ್ತಿರುತ್ತಾಳೆ. ಮಕ್ಕಳ ಚಿಕ್ಕ ಪುಟ್ಟ ಸಾಧನೆಯನ್ನೂ ಅಂಬರದಂತೆ ಸಂಭ್ರಮಿಸುವವಳು ತಾಯಿ. ಇಂತಹ ಅದ್ಭುತ ಜೀವಿಯೊಬ್ಬಳು ಮಕ್ಕಳ ಖುಷಿಗಾಗಿ ಏನು ಬೇಕಾದರೂ ಮಾಡುತ್ತಾಳೆ. ಮಗನ ಅಪರೂಪದ ಸಾಧನೆ ಕಂಡು ಕಣ್ಣೀರು ಹಾಕುವ ತರಕಾರಿ ವ್ಯಾಪಾರ ಮಾಡುವ ತಾಯಿಯ ಕಣ್ಣೀರು ಈಗ ನೆಟ್ಟಿಗರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. 

ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಸಚಿವ ರವೀಂದ್ರ ಚವ್ಹಾಣ್‌ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾದ ತರಕಾರಿ ಮಾರಾಟ ಮಾಡುವ ಮಹಿಳೆಯ ಮಗನ ಬಗ್ಗೆ ಹೃದಯಸ್ಪರ್ಶಿ ಕಥೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಯೋಗೇಶ್ ಎಂಬ ಯುವಕನ ಕಠಿಣ ಪರಿಶ್ರಮ ಮತ್ತು ಅವರ ಶಿಕ್ಷಣದ ಬಗ್ಗೆ ಚವಾಣ್ ಹಂಚಿಕೊಂಡಿದ್ದಾರೆ. ಯೋಗೇಶ್ ಅಂತಿಮವಾಗಿ ಸಿಎ ಪಾಸ್‌ ಮಾಡಿದ್ದಾನೆ ಎಂದು ತಿಳಿದ ನಂತರ ಅವರ ತಾಯಿ ಅನುಭವಿಸಿದ ಸಂತೋಷವನ್ನು ಪ್ರದರ್ಶಿಸುವ ವಿಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಯೋಗೇಶ್ ಅವರ ತಾಯಿ ತೊಂಬರೆ ಮಾವಶಿ ಅವರು ಡೊಂಬಿವಿಲಿ ಪೂರ್ವದ ಗಾಂಧಿನಗರದಲ್ಲಿರುವ ಗಿರ್ನಾರ್ ಮಿಠಾಯಿ ಅಂಗಡಿ ಬಳಿ ತರಕಾರಿ ಮಾರುತ್ತಿದ್ದಾರೆ ಎಂದು ಚವಾಣ್ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. "ಸಂಕಲ್ಪ ಮತ್ತು ಕಠಿಣ ಪರಿಶ್ರಮದ ಬಲದಿಂದ, ಕಠಿಣ ಪರಿಸ್ಥಿತಿಗಳ ನಡುವೆಯೂ ಯೋಗೇಶ್ ಈ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಅವರ ಯಶಸ್ಸಿನಿಂದಾಗಿ ಅವರ ಅಮ್ಮನ ಸಂತೋಷದ ಕಣ್ಣೀರು ಲಕ್ಷಾಂತರ ಮೌಲ್ಯದ್ದಾಗಿದೆ. ಸಿಎಯಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದ ಯೋಗೇಶ್ ಅವರ ಯಶಸ್ಸನಿಂದ ತಾಯಿ ಸಾಕಷ್ಟು ಸಂತೋಷವಾಗಿದೆ" ಎಂದು ಚವಾಣ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಸುದ್ದಿಯೊಂದಿಗೆ ಯೋಗೇಶ್ ತನ್ನ ತಾಯಿಯನ್ನು ಆಶ್ಚರ್ಯಗೊಳಿಸಿರುವ ವಿಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ. ತೊಂಬರೆ ಮಾವಶಿ ತನ್ನ ರಸ್ತೆ ಬದಿಯ ತರಕಾರಿ ಅಂಗಡಿಯಲ್ಲಿ ಕುಳಿತಿರುವುದನ್ನು ವಿಡಿಯೊ ತೋರಿಸುತ್ತದೆ. ಯೋಗೇಶ್ ಅವಳ ಬಳಿಗೆ ಬರುತ್ತಿದ್ದಂತೆ, ಅವನು ಫಲಿತಾಂಶದ ಬಗ್ಗೆ ಅವಳಿಗೆ ತಿಳಿಸುತ್ತಾನೆ. ಮಾವಶಿ ತಕ್ಷಣವೇ ಎದ್ದು ಯೋಗೇಶನನ್ನು ಖುಷಿಯಿಂದ ತಬ್ಬಿಕೊಳ್ಳುತ್ತಾನೆ. ಮಾತ್ರವಲ್ಲ ಆಕೆ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ.

ಜುಲೈ 14 ರಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. 4000 ಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದು, ಹಲವರು ಕಾಮೆಂಟ್‌ ಮಾಡಿದ್ದಾರೆ.

ʼಸಿಎ ಪರೀಕ್ಷೆಯು ಯಾವುದೇ ಮೀಸಲಾತಿ ಇಲ್ಲದ ಏಕೈಕ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳು ಅರ್ಹತೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಯಶಸ್ಸನ್ನು ಪಡೆಯುತ್ತಾರೆ. ಬಡವರಿರಲಿ, ಶ್ರೀಮಂತರಾಗಿರಲಿ, ಹಿಂದುಳಿದ ವರ್ಗದವರಿರಲಿ, ಮೇಲ್ಜಾತಿಯವರೇ ಆಗಿರಲಿ, ಅರ್ಹತೆ ಇದ್ದರೆ ಮಾತ್ರ ಸಿಎ ಮಾಡಲಾಗುವುದು. ಹಾಗಾಗಿ ಯೋಗೇಶ್‌ಗೆ ಆಲ್ ದಿ ಬೆಸ್ಟ್!ʼ ಎಂದು ಎಕ್ಸ್‌ ಬಳಕೆದಾರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

"ಭಾರತದಲ್ಲಿ ಸಾಕಷ್ಟು ಯುವ ಪ್ರತಿಭೆಗಳಿವೆ, ನಮ್ಮಲ್ಲಿಲ್ಲದಿರುವುದು ಅವಕಾಶಗಳು ಮಾತ್ರ ಎಂದು ನಾನು ಹೇಳುತ್ತೇನೆ. ಯೋಗೇಶ್‌ಗೆ ಶುಭವಾಗಲಿ ಎಂದು ದರ್ಶನಾ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.

"ಅಭಿನಂದನೆಗಳು ಯೋಗೇಶ್. ಪೋಷಕರಿಗೆ ಹೆಮ್ಮೆಯ ಕ್ಷಣಗಳು," ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ