logo
ಕನ್ನಡ ಸುದ್ದಿ  /  ಜೀವನಶೈಲಿ  /  Wednesday Motivation: ಯಶಸ್ಸಿಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಸಾಕ್ಷಿ; 65 ನೇ ವಯಸ್ಸಿಗೆ ಕೆಎಫ್‌ಸಿ ಪರಿಚಯಿಸಿದ ಇವರ ಸಾಧನೆ ಅದ್ಭುತ

Wednesday Motivation: ಯಶಸ್ಸಿಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಸಾಕ್ಷಿ; 65 ನೇ ವಯಸ್ಸಿಗೆ ಕೆಎಫ್‌ಸಿ ಪರಿಚಯಿಸಿದ ಇವರ ಸಾಧನೆ ಅದ್ಭುತ

Rakshitha Sowmya HT Kannada

Feb 21, 2024 09:24 AM IST

google News

ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್

  • Wednesday Motivation: 60 ವರ್ಷ ದಾಟಿದ ನಂತರವೂ ಜೀವನದಲ್ಲಿ ಯಶಸ್ಸು ಕಂಡ ಎಷ್ಟೋ ಮಾದರಿ ಜನರಿದ್ದಾರೆ. ಅದರಲ್ಲಿ ಅಮೆರಿಕದ ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಕೂಡಾ ಒಬ್ಬರು. ಇವರು ಪರಿಚಯಿಸಿದ ಕೆಎಫ್‌ಸಿ ಚಿಕನ್‌ ಇಂದು ವಿಶ್ವಾದ್ಯಂತ ಶಾಖೆಗಳನ್ನು ಹೊಂದಿವೆ. 

ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್
ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್

Wednesday Motivation: ವಯಸ್ಸು 30 ದಾಟುತ್ತಿದ್ದಂತೆ ಜೀವನದಲ್ಲಿ ಅರ್ಧ ಆಯಸ್ಸು ಮುಗಿದುಹೋದವರಂತೆ ಬೇಸರದಿಂದ ದಿನ ಆರಂಭಿಸುವವರನ್ನು ನೋಡಿದ್ದೇವೆ. 40 ದಾಟುತ್ತಿದ್ದಂತೆ ವಯಸ್ಸಾಯ್ತು ಇನ್ನು ಜೀವನದಲ್ಲಿ ಎಲ್ಲವೂ ಮುಗಿದಂತೆ ಎಂದು ಕೂರುವವರನ್ನೂ ನೋಡಿದ್ದೇವೆ. ಆದರೆ ಯಶಸ್ಸಿಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

ಸಾಧನೆಗೆ ವಯಸ್ಸಿನ ಮಿತಿ ಎಲ್ಲ ಎಂಬುದಕ್ಕೆ ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಸಾಕ್ಷಿ. ಎಲ್ಲರಿಗೂ ಇವರು ಸ್ಫೂರ್ತಿ. 65ನೇ ವಯಸ್ಸಿಗೆ ತಮ್ಮ ವಿಭಿನ್ನ ಪಾಕವಿಧಾನವನ್ನು ಜಗತ್ತಿಗೇ ಪರಿಚಯಿಸಿದ ವ್ಯಕ್ತಿ ಇವರು. ಸ್ಯಾಂಡರ್ಸ್‌ ಇಂದು ಜಗತ್ತಿಗೆ ಪರಿಚಯಿಸಿದ ಕೆಎಫ್‌ಸಿ ಚಿಕನ್‌ ಈಗ ದೊಡ್ಡವರಿಗೆ ಮಾತ್ರವಲ್ಲ, ಪುಟ್ಟ ಮಕ್ಕಳಿಗೂ ಫೇವರೆಟ್‌. ಇದರ ರುಚಿಗೆ ಮಾರು ಹೋದವರೇ ಇಲ್ಲ. ಯಾವುದೇ ಪಾರ್ಟಿ ಇರಲಿ, ಸ್ನೇಹಿತರ ಜೊತೆ ಹೊರಗೆ ಹೋಗಲಿ ಅಲ್ಲಿ ಕೆಎಫ್‌ಸಿ ಚಿಕನ್‌ ಇರಲೇಬೇಕು. ಈ ವೆರೈಟಿ ರೆಸಿಪಿಯನ್ನು ಜನರಿಗೆ ಪರಿಚಯಿಸಿದ ಸ್ಯಾಂಡರ್ಸ್‌ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ವ್ಯಕ್ತಿಯೋರ್ವ ಸಣ್ಣ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾನೆ. ಅವರ ಬಳಿ ಹಳೆಯ ಕಾರು, ಮುರಿದು ಬಿದ್ದ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ. ಅವರಿಗೆ 65 ವರ್ಷ. ಸರ್ಕಾರ ನೀಡುವ 99 ಡಾಲರ್‌ನಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗೆ ಬದುಕುವುದು ಅವರಿಗೆ ಬಹಳ ಕಷ್ಟವಾಯಿತು. 65 ನೇ ವಯಸ್ಸಿನಲ್ಲಿ ಅವರು ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಲು ನಿರ್ಧರಿಸಿದರು. ಮೊದಲಿಗಿಂತ ಉತ್ತಮವಾಗಿ ಬದುಕಲು ಬಯಸಿದರು. ಒಳ್ಳೆ ಅಡುಗೆ ಮಾಡಲು ಬರುತ್ತಿದ್ದರಿಂದ ಡೇವಿಡ್ ಸ್ಯಾಂಡರ್ಸ್ ಹೊಸ ಹೊಸ ರೆಸಿಪಿಗಳನ್ನು ಪ್ರಯತ್ನ ಮಾಡಿದರು. ಚಿಕನ್‌ನಲ್ಲಿ ಹೊಸ ರುಚಿ ಪ್ರಯೋಗ ಮಾಡಿದರು.

ಡೇವಿಡ್ ಸ್ಯಾಂಡರ್ಸ್ ತಯಾರಿಸಿದ ಹೊಸ ರುಚಿ ಸೇವಿಸಿದ ಜನರು ಅದನ್ನು ಬಹಳ ಇಷ್ಟಪಟ್ಟರು. ಇದಾದ ನಂತರ ತನ್ನ ಪಾಕವಿಧಾನವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ನಿರ್ಧರಿಸಿದ ಅವರು ಊರು ಬಿಟ್ಟು ನಗರಕ್ಕೆ ತೆರಳಿದರು. ರೆಸ್ಟೊರೆಂಟ್‌ಗಳಿವೆ ಹೋಗಿ ತಮ್ಮ ರೆಸಿಪಿಯನ್ನು ಜನರಿಗೆ ಪರಿಚಯಿಸುವಂತೆ ಮನವಿ ಮಾಡಿದರು. ತಾವು ತಯಾರಿಸಿದ ಚಿಕನ್‌ ರೆಸಿಪಿಯನ್ನು ರೆಸ್ಟೋರೆಂಟ್‌ನವರಿಗೆ ಉಚಿತವಾಗಿ ನೀಡುತ್ತಿದ್ದರು. ಇಷ್ಟಾದರೂ ರೆಸ್ಟೋರೆಂಟ್‌ನವರು ಡೇವಿಡ್ ಸ್ಯಾಂಡರ್ಸ್‌ ರೆಸಿಪಿಯನ್ನು ತಮ್ಮ ಮೆನು ಕಾರ್ಡ್‌ನಲ್ಲಿ ಸೇರಿಸಲು ಒಪ್ಪಲಿಲ್ಲ. ಎಷ್ಟೋ ಬಾರಿ ಅಲೆದಾಡಿದ ನಂತರ ಕೊನೆಗೆ ರೆಸ್ಟೋರೆಂಟ್‌ ಮಾಲೀಕರೊಬ್ಬರು ತಮ್ಮ ಮೆನುವಿನಲ್ಲಿ ಆ ಫ್ರೈಡ್‌ ಚಿಕನ್‌ ಸೇರಿಸಲು ಒಪ್ಪಿದರು.

ಒಮ್ಮೆ ಆ ಹೊಸ ರುಚಿಯನ್ನು ಸವಿದವರು ಮತ್ತೆ ಅದಕ್ಕಾಗಿ ರೆಸ್ಟೋರೆಂಟ್‌ಗೆ ಬರುತ್ತಿದ್ದರು. ಮುಂದೆ ಅದೇ ಚಿಕನ್‌ ಕೆಂಟುಕಿ ಫ್ರೈಡ್‌ ಚಿಕನ್‌ ( ಕೆಎಫ್‌ಸಿ) ಆಗಿ ಫೇಮಸ್‌ ಆಯ್ತು. ಸಾವಿರಾರು ಬ್ರಾಂಚ್‌ಗಳು ತೆರೆದವು. 65ನೇ ವಯಸ್ಸಿನಲ್ಲಿ , ತಾವು ಮಾಡಿದ ರೆಸಿಪಿ ಸಾವಿರಾರು ಬಾರಿ ತಿರಸ್ಕೃತಗೊಂಡಾಗ ಆ ವ್ಯಕ್ತಿ ಮನೆಯಲ್ಲಿ ಬೇಸರ ಮಾಡಿಕೊಂಡು ಕೂರುತ್ತಿದ್ದರೆ ಇಂದು ನಾವು ಕೆಎಫ್‌ಸಿ ಚಿಕನ್‌ ರುಚಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮಲ್ಲಿ ಹಲವರು ಕೆಎಫ್‌ಸಿ ಚಿಕನ್‌ ಅಭಿಮಾನಿಗಳಾಗಿರುತ್ತೀರಿ. ಕೆಲವರು ರೆಸ್ಟೋರೆಂಟ್‌ನಲ್ಲೇ ಹೋಗಿ ತಿಂದು, ಮನೆಗೂ ಪಾರ್ಸೆಲ್‌ ತಂದರೆ, ಇನ್ನೂ ಕೆಲವರು ಮನೆಯಲ್ಲೇ ಆ ರೆಸಿಪಿ ಪ್ರಯತ್ನಿಸುತ್ತಾರೆ.

ಒಟ್ಟಿನಲ್ಲಿ ಕರ್ನಲ್ ಹಾರ್ಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ 65 ನೇ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಮೊದಲ ಗೆಲುವು ಪಡೆದರು. ವಯಸ್ಸಿಗೂ ಯಶಸ್ಸಿಗೂ ಸಂಬಂಧವಿಲ್ಲ. ಪರಿಶ್ರಮದಿಂದ ಯಾವಾಗಲೂ ಯಶಸ್ಸನ್ನು ಸಾಧಿಸಬಹುದು. ನೀವು ಎಷ್ಟು ಬಾರಿ ವಿಫಲರಾಗಿದ್ದರೂ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಿಸುತ್ತಲೇ ಇರಿ. ಒಮ್ಮೊಮ್ಮೆ ನೀವು ವಿಜಯಶಾಲಿಯಾಗಿ ಹೊರ ಹೊಮ್ಮುತ್ತೀರಿ. ಒಂದು ದಿನ ಯಶಸ್ಸು ನಿಮ್ಮ ಮನೆ ಬಾಗಿಲಲ್ಲಿ ನಿಲ್ಲುತ್ತದೆ. ಪ್ರಯತ್ನ ಮಾಡದಿದ್ದರೆ ನಿರಾಸೆ, ಸೋಲು ಕಂಡರೆ ಒಂದು ಹೆಜ್ಜೆ ಮುಂದಿಡಲು ಸಾಧ್ಯವಾಗುವುದಿಲ್ಲ. ಕರ್ನಲ್ ಸ್ಯಾಂಡರ್ಸ್ ಅವರ ಜೀವನ ನಿಮಗೂ ಸ್ಫೂರ್ತಿಯಾಗಲಿ. ವಯಸ್ಸನ್ನು ಮರೆತುಬಿಡಿ, ಸಾಧನೆ ದಾರಿಯತ್ತ ಹೆಜ್ಜೆ ಇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ