Weight Loss: ತೂಕ ಇಳಿಸೋಕೆ ದೇಹ ದಂಡಿಸಲೇಬೇಕು ಅಂತೇನಿಲ್ಲ, ಈ 8 ಸಾತ್ವಿಕ ಆಹಾರಗಳ ಸೇವನೆಯೂ ವೈಟ್‌ಲಾಸ್‌ಗೆ ನೆರವಾಗುತ್ತೆ
Jun 16, 2024 08:30 AM IST
ತೂಕ ಇಳಿಸೋಕೆ ದೇಹ ದಂಡಿಸಲೇಬೇಕು ಅಂತೇನಿಲ್ಲ, ಈ 8 ಸಾತ್ವಿಕ ಆಹಾರಗಳನ್ನು ಸೇವಿಸಿ ನೋಡಿ
- ತೂಕ ಇಳಿಕೆಯ ಪಯಣ ಸುಲಭವಲ್ಲ ನಿಜ. ಆದರೆ ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಿದ್ರೆ ಈ ಪ್ರಯಾಣ ನೀವಂದುಕೊಂಡಷ್ಟು ಕಷ್ಟ ಕೂಡ ಅಲ್ಲ. ನೀವು ತೂಕ ಇಳಿಸೋಕೆ ಬಯಸಿದ್ರೆ ಈ 8 ಸಾತ್ವಿಕ ಆಹಾರಗಳನ್ನು ಸೇವಿಸಲು ಆರಂಭಿಸಿ. ಖಂಡಿತವಾಗಿ ನೀವು ಅತ್ಯಂತ ಕಡಿಮೆ ಸಮಯದಲ್ಲಿ ದೇಹತೂಕ ಇಳಿಸಿಕೊಳ್ಳಲು ಸಾಧ್ಯ.
ಇತ್ತೀಚಿನ ದಿನಗಳಲ್ಲಿ ಹೇಗಾದರೂ ಮಾಡಿ ತೂಕ ಇಳಿಕೆ ಮಾಡಿಕೊಳ್ಳಬೇಕು ಎನ್ನುವ ಹರಸಾಹಸ ಹಲವರದ್ದು. ತೂಕ ಏರಿಕೆಯಾದಷ್ಟು ವೇಗದಲ್ಲಿ ತೂಕ ಇಳಿಕೆ ಮಾಡಿಕೊಳ್ಳುವುದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಆದರೆ ನೀವು ಆಹಾರಕ್ರಮದಲ್ಲಿ ಮಾಡಿಕೊಳ್ಳುವ ಕೆಲವು ಮುಖ್ಯ ಆಯ್ಕೆಗಳು ಖಂಡಿತವಾಗಿಯೂ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಕೆಲವು ಸಾತ್ವಿಕ ಆಹಾರಗಳ ಸೇವನೆಯು ಸಹಾಯ ಮಾಡುತ್ತದೆ. ಅಂತಹ ಸಾತ್ವಿಕ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ತರಕಾರಿಗಳು
ಕ್ಯಾರೆಟ್, ಬ್ರೊಕೊಲಿ, ಸೌತೆಕಾಯಿ ಸೇರಿದಂತೆ ವಿವಿಧ ಬಣ್ಣ ಬಣ್ಣದ ತರಕಾರಿಗಳು, ಹಸಿರು ಎಲೆಗಳು ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಉತ್ತಮ ಆಯ್ಕೆ. ಇದು ನಿಮ್ಮ ದೇಹದಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವುದರ ಜೊತೆಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣವನ್ನೂ ವೃದ್ಧಿಸುತ್ತದೆ. ಅಲ್ಲದೇ ದೇಹದಲ್ಲಿ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುವ ಕಾರ್ಯ ಕೂಡ ತರಕಾರಿಗಳಿಂದ ಸಾಧ್ಯವಿದೆ.
ತಾಜಾ ಹಣ್ಣುಗಳು
ಬ್ಲೂ ಬೆರ್ರಿಗಳು, ಸೇಬುಹಣ್ಣು, ಕಿತ್ತಳೆಹಣ್ಣು, ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ತಾಜಾ ಹಣ್ಣುಗಳ ಸೇವನೆಯು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಇವುಗಳು ಕಡಿಮೆ ಕ್ಯಾಲೊರಿ ಪ್ರಮಾಣ ಕಡಿಮೆ ಹೊಂದಿದ್ದು ಪೋಷಕಾಂಶ ಸಮೃದ್ಧವಾಗಿರುತ್ತವೆ. ಇವುಗಳಲ್ಲಿ ನಾರಿನಾಂಶ ಜಾಸ್ತಿ ಇರುವುದರಿಂದ ನಿಮಗೆ ಬೇಗನೆ ಹಸಿವಾದ ಭಾವನೆ ಉಂಟಾಗುವುದಿಲ್ಲ. ತಾಜಾ ಹಣ್ಣುಗಳು ನಮ್ಮ ಜೀರ್ಣಶಕ್ತಿಯನ್ನು ಸುಧಾರಿಸುವ ಜೊತೆಯಲ್ಲಿ ತೂಕ ಇಳಿಕೆಗೂ ಸಹಕರಿಸುತ್ತದೆ.
ಹರ್ಬಲ್ ಚಹಾ
ಸಕ್ಕರೆಯಂಶಯುಕ್ತ ಪಾನೀಯಗಳ ಜಾಗಕ್ಕೆ ಗಿಡಮೂಲಿಕೆಯುಕ್ತ ಚಹಾವನ್ನು ಸೇವಿಸುವುದು ಕೂಡ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಈ ಪಾನೀಯಗಳು ನಿಮ್ಮ ಜೀರ್ಣಶಕ್ತಿಯನ್ನು ಸುಧಾರಿಸುತ್ತವೆ. ಇವುಗಳು ತೂಕ ಇಳಿಕೆಯ ಕಾರ್ಯವನ್ನು ವೇಗಗೊಳಿಸುತ್ತದೆ.
ಡ್ರೈಫ್ರೂಟ್‌ಗಳು
ಬಾದಾಮಿ, ಒಣದ್ರಾಕ್ಷಿ, ಗೋಡಂಬಿಗಳು, ಪಿಸ್ತಾ, ಚಿಯಾ ಬೀಜಗಳು, ಕಲ್ಲಂಗಡಿ ಬೀಜ ಹಾಗೂ ವಾಲ್‌ನಟ್‌ನಂತಹ ಡ್ರೈಫ್ರೂಟ್ಸ್ ನಿಮ್ಮ ತೂಕ ಇಳಿಕೆಯ ಪಯಣಕ್ಕೆ ಸ್ನೇಹಿತರಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್ ಹಾಗೂ ನಾರಿನಾಂಶ ಅಗಾಧ ಪ್ರಮಾಣದಲ್ಲಿದ್ದು ಆರೋಗ್ಯ ಸುಧಾರಣೆಯ ಜೊತೆಯಲ್ಲಿ ತೂಕ ನಷ್ಟಕ್ಕೆ ಸಹಕರಿಸುತ್ತದೆ.
ಆರೋಗ್ಯಕರ ಕೊಬ್ಬು
ತೂಕ ಇಳಿಕೆ ಮಾಡುವುದು ಎಂದರೆ ನೀವು ಎಣ್ಣೆ ಸೇವಿಸಲೇಬಾರದು ಎಂದೇನಿಲ್ಲ. ಆಲಿವ್ ಎಣ್ಣೆ, ಅವಕಾಡೋ ಎಣ್ಣೆಗಳು ಉತ್ತಮ ಕೊಬ್ಬನ್ನು ಹೊಂದಿರುತ್ತವೆ. ಅಡುಗೆಯಲ್ಲಿ ಇಂಥ ಎಣ್ಣೆಯನ್ನು ಬಳಸುವ ಮೂಲಕ ತೂಕ ಇಳಿಕೆ ಮಾಡಿಕೊಳ್ಳಬಹುದಾಗಿದೆ.
ಬೇಳೆ ಕಾಳುಗಳು
ಶೇಂಗಾಬೀಜ, ಕಡ್ಲೆ ಬೀಜ, ಹೆಸರುಕಾಳು, ಕಡ್ಲೆ ಕಾಳು ಸೇರಿದಂತೆ ವಿವಿಧ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದಲೂ ನೀವು ಉತ್ತಮ ಲಾಭ ಪಡೆಯಲು ಸಾಧ್ಯವಿದೆ. ಇವುಗಳಲ್ಲಿ ಪ್ರೊಟೀನ್, ನಾರಿನಾಂಶ ಹಾಗೂ ಉತ್ತಮ ಕೊಬ್ಬು ಅಗಾಧ ಪ್ರಮಾಣದಲ್ಲಿ ಇರುತ್ತದೆ. ನಿಮ್ಮ ಜೀರ್ಣಶಕ್ತಿಯನ್ನು ಸುಧಾರಿಸುವ ಜೊತೆಯಲ್ಲಿ ತೂಕ ಇಳಿಕೆಗೆ ಸಹಕರಿಸುತ್ತದೆ.
ಧಾನ್ಯಗಳು
ಕೆಂಪಕ್ಕಿ, ಬಾರ್ಲಿ, ಗೋಧಿ, ಜೋಳ ಹಾಗೂ ರಾಗಿಯಂತಹ ಧಾನ್ಯಗಳು ಕೂಡ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿವೆ. ಇವುಗಳು ನಾರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಇದರಿಂದ ನಮಗೆ ಬೇಗನೆ ಹಸಿವಾಗುವುದಿಲ್ಲ. ಪದೇ ಪದೇ ತಿನ್ನಬೇಕೆಂಬ ಕಡು ಬಯಕೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಈ ಧಾನ್ಯಗಳಿಗೆ ಇರುತ್ತದೆ.
ಮಸಾಲೆ ಪದಾರ್ಥಗಳು
ಅರಿಶಿಣ, ಶುಂಠಿ, ಚಕ್ಕೆ ಹಾಗೂ ಜೀರಿಗೆಯಂತಹ ಮಸಾಲೆ ಪದಾರ್ಥಗಳು ಗಿಡಮೂಲಿಕೆಗಳಂತೆ ಕಾರ್ಯ ನಿರ್ವಹಿಸುತ್ತವೆ. ಇವುಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಯಲ್ಲಿ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ತಿಂದ ಆಹಾರ ಸರಾಗವಾಗಿ ಜೀರ್ಣವಾಗುವುದರಿಂದಲೂ ತೂಕ ಇಳಿಕೆಯ ಪಯಣ ಸುಲಭವಾಗುತ್ತದೆ.