Weight Loss Story: ಅನ್ನ-ಸಕ್ಕರೆ ಸೇವಿಸಿದರೂ 5 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡ ಯುವತಿ: ಈಕೆಯ ಸ್ಟೋರಿ ಇಲ್ಲಿದೆ
Sep 11, 2024 12:41 PM IST
ಮುಂಬೈನ ಏಕ್ತಾ ಪಾಂಡೆ ಎಂಬಾಕೆ 5 ತಿಂಗಳಿನಲ್ಲಿ ಬರೋಬ್ಬರಿ 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ.
ತೂಕ ಇಳಿಕೆಗೆ ಬಹುತೇಕ ಮಂದಿ ಪ್ರಯತ್ನಿಸುತ್ತಾರೆ. ಕಠಿಣ ಪರಿಶ್ರಮದಿಂದ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇದೀಗ ಮುಂಬೈನ ಏಕ್ತಾ ಪಾಂಡೆ ಎಂಬಾಕೆ 5 ತಿಂಗಳಿನಲ್ಲಿ ಬರೋಬ್ಬರಿ 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಅದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಇಲ್ಲಿ ತಿಳಿಯಿರಿ.
ಪ್ರತಿಯೊಬ್ಬರ ತೂಕ ನಷ್ಟ ಪ್ರಯಾಣವು ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತೂಕ ಇಳಿಕೆಗೆ ಪ್ರಯತ್ನಿಸಲು ವಿಭಿನ್ನ ಕಾರಣವನ್ನು ಹೊಂದಿದ್ದಾರೆ. ಈ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ತೂಕ ಇಳಿಕೆಗೆ ಸಿದ್ಧರಾಗುತ್ತಾರೆ. ಈ ಮೂಲಕ ಯಶಸ್ಸನ್ನೂ ಪಡೆದುಕೊಂಡವರು ಹಲವರಿದ್ದಾರೆ. ಇವರುಗಳಲ್ಲಿ ಮುಂಬೈನ ಏಕ್ತಾ ಪಾಂಡೆ ಕೂಡ ಒಬ್ಬರು. ಕಠಿಣ ಪರಿಶ್ರಮ ಹಾಗೂ ದೃಢ ನಿರ್ಧಾರದಿಂದ 5 ತಿಂಗಳಿನಲ್ಲಿ ಬರೋಬ್ಬರಿ 15 ಕೆ.ಜಿ ತೂಕ ಇಳಿಸಿಕೊಂಡಿರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ತೂಕ ಇಳಿಕೆಗೆ ಪ್ರೇರೇಪಣೆ ಸಿಕ್ಕೇದ್ದು ಹೇಗೆ ಎಂಬ ಬಗ್ಗೆ ವಿವರಿಸಿರುವ ಏಕ್ತಾ, 2 ಕಿ.ಮೀ ವರೆಗೆ ನಡೆಯಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಲ್ಲದೆ, ಅಧಿಕ ತೂಕದಿಂದ ಬಟ್ಟೆಗಳು ಕೂಡ ದೇಹಕ್ಕೆ ಫಿಟ್ ಆಗುತ್ತಿದ್ದವರು. ಹೀಗಾಗಿ ತಾನು ತೂಕ ಇಳಿಕೆಗೆ ಪ್ರಯತ್ನಿಸಬೇಕಾಯಿತು ಎಂಬುದಾಗಿ ವಿವರಿಸಿದ್ದಾರೆ. ಹೀಗಾಗಿ ಕಠಿಣ ಶ್ರಮ ವಹಿಸಿ 5 ತಿಂಗಳಿನಲ್ಲಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ತೂಕನಷ್ಟಕ್ಕಾಗಿ ಏಕ್ತಾ ಪಾಂಡೆಯವರ ದಿನಚರಿ ಹೇಗಿತ್ತು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ತೂಕ ನಷ್ಟ ಆಹಾರ ಮತ್ತು ದಿನಚರಿ ಹೀಗಿತ್ತು
ಏಕ್ತಾ ಪಾಂಡೆ ತೂಕ ಇಳಿಕೆಗೆ ಪ್ರಯತ್ನಿಸುವಾಗ ನಿರ್ದಿಷ್ಟ ತೂಕ ನಷ್ಟ ಆಹಾರವನ್ನು ಸೇವಿಸಿಲ್ಲವಂತೆ. ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುತ್ತಾರೆ. ಉತ್ತಮ ಚಯಾಪಚಯ ಕ್ರಿಯೆಗಾಗಿ ಪ್ರತಿದಿನ ಮಜ್ಜಿಗೆ ಮತ್ತು ಚಿಯಾ ಬೀಜಗಳ ನೀರನ್ನು ಸೇವಿಸುತ್ತಾರೆ. ಹಾಗೆಯೇ ಸಕ್ಕರೆ ಅಂಶವನ್ನೂ ಸಂಪೂರ್ಣವಾಗಿ ಕಡಿಮೆ ಮಾಡಿರಲಿಲ್ಲ. ಚಹಾಗೆ ಸಕ್ಕರೆ ಬೆರೆಸಿ ಕುಡಿಯುತ್ತಾರೆ. ಆದರೆ ಹೆಚ್ಚುವರಿ ಯಾವುದೇ ಸಕ್ಕರೆ ಅಂಶವನ್ನು ಸೇವಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಆಹಾರದ ವಿಚಾರಕ್ಕೆ ಬಂದ್ರೆ ಏಕ್ತಾ ಪಾಂಡೆ ಮಿತವಾಗಿ ಊಟ ಮಾಡುತ್ತಾರೆ. ಅನ್ನ ಅಂದ್ರೆ ತುಂಬಾ ಪ್ರೀತಿ. ಹೀಗಾಗಿ ಪ್ರತಿದಿನ ಅನ್ನ ಊಟ ಮಾಡುತ್ತಿದ್ದರು. ಆದರೂ ತಮ್ಮ ಕೊಬ್ಬನ್ನು ಕಳೆದುಕೊಳ್ಳುವಲ್ಲಿ ಏಕ್ತಾ ಯಶಸ್ವಿಯಾಗಿದ್ದಾರೆ. ಯಾಕೆಂದರೆ ಬಹುತೇಕ ಮಂದಿ ತೂಕ ಇಳಿಕೆ ವೇಳೆ ಅನ್ನದ ಸೇವನೆಯನ್ನು ನಿಲ್ಲಿಸುತ್ತಾರೆ. ಆದರೆ, ಏಕ್ತಾ ಪಾಂಡೆ ಮಾತ್ರ ಈ ರೀತಿ ಮಾಡದೇ ತೂಕ ಇಳಿಸಿಕೊಂಡಿರುವುದು ವಿಶೇಷ.
ತೂಕವನ್ನು ಕಳೆದುಕೊಳ್ಳಲು ಅನುಸರಿಸಿದ ನಿಯಮ
ತೂಕ ಇಳಿಕೆ ಪ್ರಯಾಣದಲ್ಲಿ ಏಕ್ತಾ ಪಾಂಡೆ ಅರಿತುಕೊಂಡ ಒಂದು ವಿಷಯವೆಂದರೆ ಏನೇ ಇರಲಿ ಸ್ಥಿರವಾಗಿರುವುದು. ದೃಢ ನಿರ್ಧಾರ ಹಾಗೂ ಆತ್ಮವಿಶ್ವಾಸ. ಇವೆರಡಿದ್ದರೆ ಏನೂ ಬೇಕಿದ್ದರೂ ಸಾಧಿಸಬಹುದು. ಏನೇ ಕಷ್ಟಗಳು ಎದುರಾದರೂ ಹೋರಾಡುವೆ ಎಂಬ ಮನಸ್ಥಿತಿ ಇದ್ದರೆ ಖಂಡಿತಾ ಅಂದುಕೊಂಡದ್ದನ್ನು ಸಾಧಿಸಬಹುದು ಎನ್ನುತ್ತಾರೆ ಏಕ್ತಾ ಪಾಂಡೆ.
ಕನಿಷ್ಠವೆಂದರೂ 90 ನಿಮಿಷಗಳ ಕಾಲ ಏಕ್ತಾ ವಾಕಿಂಗ್ ಮಾಡುತ್ತಿದ್ದರು. ವ್ಯಾಯಾಮ ಮಾಡುತ್ತಿದ್ದರು. ಲಘು ಉಪಹಾರ ಹಾಗೂ ಮಿತವಾಗಿ ಊಟವನ್ನು ಮಾಡುವುದರ ಮೂಲಕ 5 ತಿಂಗಳಲ್ಲಿ 15 ಕೆ.ಜಿ ತೂಕ ಇಳಿಕೆ ಸಾಧ್ಯವಾಗಿಸಿತು. ಆಹಾರ ಮತ್ತು ವ್ಯಾಯಾಮದ ಕಟ್ಟುಪಾಡುಗಳನ್ನು ಬದಲಾಯಿಸಿದಾಗ ನಿಧಾನವಾಗಿ ತೂಕ ಇಳಿಕೆಗೆ ಸಹಕಾರಿಯಾಯಿತು ಎಂದು ವಿವರಿಸಿದ್ದಾರೆ ಏಕ್ತಾ ಪಾಂಡೆ.