ಬೆಲ್ಲಿ ಫ್ಯಾಟ್ ಬೇಸರ ತರಿಸಿದ್ಯಾ, ನಿಮ್ಮ ದಿನಚರಿಯಲ್ಲಿ ಈ 5 ಅಭ್ಯಾಸಗಳನ್ನ ರೂಢಿಸಿಕೊಳ್ಳಿ, ಹೊಟ್ಟೆಯ ಕೊಬ್ಬು ಸುಲಭವಾಗಿ ಕರಗುತ್ತೆ
Sep 18, 2024 06:39 AM IST
ಬೆಲ್ಲಿ ಫ್ಯಾಟ್ ಕರಗಿಸಲು ಟಿಪ್ಸ್
- ಇತ್ತೀಚಿನ ಜಡ ಜೀವನಶೈಲಿಯಿಂದಾಗಿ ಹಲವರು ಬೆಲ್ಲಿ ಫ್ಯಾಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಏನೇ ಸರ್ಕಸ್ ಮಾಡಿದ್ರು ಹೊಟ್ಟೆಯ ಬೊಜ್ಜು ಕರಗಿಸುವುದು ಕಷ್ಟವಾಗುತ್ತದೆ. ನೀವು ಆ ಲಿಸ್ಟ್‌ನಲ್ಲಿ ಇದ್ರೆ ನಿಮ್ಮ ಬೆಳಗಿನ ದಿನಚರಿಯಲ್ಲಿ ತಪ್ಪದೇ ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದರಿಂದ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತೆ.
ತೂಕ ಇಳಿಕೆ ಹಾಗೂ ಬೊಜ್ಜು ಕರಗಿಸುವುದು ಇತ್ತೀಚಿನ ದಿನಮಾನದಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಹಲವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಕರಗಿಸುವ ಸಲುವಾಗಿ ಹರಸಾಹಸ ಪಡುತ್ತಾರೆ. ಆದರೂ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸುವುದು ಅಸಾಧ್ಯವಾಗಿರುತ್ತದೆ. ಇದಕ್ಕಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡಲೇಬೇಕು ಅಂತೇನಿಲ್ಲ. ನೀವು ಬೆಳಗೆದ್ದು ಈ ಕೆಲವು ದಿನಚರಿಯನ್ನು ರೂಢಿಸಿಕೊಂಡರೆ ಸಾಕು ನಿಧಾನಕ್ಕೆ ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತದೆ.
ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲು ನಮ್ಮ ನಿದ್ದೆಯ ಕ್ರಮವೂ ಕಾರಣವಾಗಬಹುದು. ಆ ಕಾರಣಕ್ಕೆ ರಾತ್ರಿ ಮಲಗುವ 2 ಗಂಟೆಗೂ ಮುನ್ನ ಊಟ ಮಾಡುವುದು ಬೇಗ, ಬೇಗ ಏಳುವುದು ಬಹಳ ಮುಖ್ಯವಾಗುತ್ತದೆ.
ಬೆಳಗ್ಗೆ ಎದ್ದಾಗ ನೀವು ಈ ಅಭ್ಯಾಸಗಳನ್ನ ರೂಢಿಸಿಕೊಂಡರೆ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಂತಹ ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ.
ಒಂದು ಲೋಟ ನೀರು, ಉಪ್ಪು
ಬೆಳಿಗ್ಗೆ ಎದ್ದ ತಕ್ಷಣ ಒಂದು ದೊಡ್ಡ ಲೋಟ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ. ಇದು ಚಯಾಪಚಯನವನ್ನ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ನಿಮ್ಮನ್ನ ದಿನವಿಡೀ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಹಸಿವುವನ್ನು ನಿಯಂತ್ರಿಸುತ್ತದೆ.
ಅತ್ಯಧಿಕ ಪೋಷಕಾಂಶ ಇರುವ ಬೆಳಗಿನ ಉಪಾಹಾರ
ಬೆಳಗಿನ ಉಪಾಹಾರದಲ್ಲಿ ಮೊಟ್ಟೆ, ಗ್ರೀಕ್ ಯೋಗರ್ಟ್, ಪ್ರೊಟೀನ್ ಶೇಕ್, ಮೊಳಕೆಕಾಳು ಇಂತಹ ಹೈ ಪ್ರೊಟೀನ್ ಆಹಾರಗಳು ಇರುವಂತೆ ನೋಡಿಕೊಳ್ಳಿ. ಇದನ್ನು ಸೇವಿಸುವುದರಿಂದ ಆಹಾರದ ಕಡು ಬಯಕೆಯನ್ನು ನಿಯಂತ್ರಿಸಬಹುದು. ಪದೇ ಪದೇ ಹಸಿವಾಗುವುದನ್ನು ತಡೆಯಬಹುದು. ಇದರಿಂದ ನಮ್ಮ ಸ್ನಾಯುಗಳ ಬಲವೂ ಸುಧಾರಿಸುತ್ತದೆ. ಇದು ಹೊಟ್ಟೆಯ ಬೊಜ್ಜು ಕರಗಲು ಮಾತ್ರವಲ್ಲ ತೂಕ ಇಳಿಕೆಗೂ ಬಹಳ ಮುಖ್ಯ.
ಬೆಳಗಿನ ವ್ಯಾಯಾಮ
ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಕಾರ್ಡಿಯೊ, ಸ್ಟ್ರೆಂಥ್ ಟ್ರೈನಿಂಗ್‌ನಂತಹ ಕ್ರಮಗಳ ಮೂಲಕ ನಮ್ಮ ದೇಹದಲ್ಲಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಕ್ಯಾಲೊರಿ ಕಡಿಮೆಯಾಗಲು ಸಹಕರಿಸುತ್ತವೆ. ಇದರಿಂದ ದೇಹದಲ್ಲಿ ಕೊಬ್ಬಿನಾಂಶ ಕರಗುತ್ತದೆ. ಆ ಕಾರಣಕ್ಕೆ ಬೆಳಗೆದ್ದು ಕನಿಷ್ಠ 15 ರಿಂದ 20 ನಿಮಿಷ ವ್ಯಾಯಾಮ ಮಾಡಬೇಕು.
ಸಕ್ಕರೆ ಅಂಶ ಇರುವ ಆಹಾರ, ಪಾನೀಯ ಸೇವಿಸದಿರಿ
ಸಿಹಿ ಅಂಶ ಇರುವ ಸಿರಲ್ಸ್‌ಗಳು (ಓಟ್ಸ್‌ನಂತಹ ತಿನಿಸುಗಳು), ಪೇಸ್ಟ್ರಿಗಳು, ಸಿಹಿ ತಿನಿಸುಗಳನ್ನು ಬೆಳಗೆದ್ದು ತಿನ್ನಲೇಬೇಡಿ. ಜ್ಯೂಸ್, ಸ್ಮೂಥಿಗಳನ್ನು ಸಕ್ಕರೆ ರಹಿತವಾಗಿ ಸೇವಿಸಿ. ಇದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಏರಿಕೆಯನ್ನು ತಡೆಯಬಹುದು. ಇದು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕೊಬ್ಬಿನಾಂಶ ಕೂಡ ಸುಲಭವಾಗಿ ಕರಗುತ್ತದೆ.
ಊಟ ಹಾಗೂ ಸ್ನ್ಯಾಕ್ಸ್ ಕೂಡ ಆರೋಗ್ಯಕರವಾಗಿರಲಿ
ನಿಮ್ಮ 2 ಹೊತ್ತಿನ ಊಟ ಹಾಗೂ ಸ್ನ್ಯಾಕ್ಸ್ ಕೂಡ ಆರೋಗ್ಯಕರವಾಗಿರುವುದನ್ನೇ ಸೇವಿಸಿ. ಕರಿದ ಹಾಗೂ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಿ. ಪೋಷಕಾಂಶ ಸಮೃದ್ಧ ಆಹಾರ ಸೇವನೆಗೆ ಒತ್ತು ನೀಡಿ. ಸಮತೋಲಿತ ಆಹಾರ ಸೇವಿಸಿ.
ನಿಮ್ಮ ದಿನಚರಿಯಲ್ಲಿ ಈ 5 ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತದೆ. ನೆನಪಿಡಿ ಹಾಗಂತ ಒಂದೇ ಸಲಕ್ಕೆ ಅಥವಾ ಒಂದೇ ದಿನಕ್ಕೆ ಹೊಟ್ಟೆಯ ಬೊಜ್ಜು ಕರಗುವುದಿಲ್ಲ. ಈ ಅಭ್ಯಾಸಗಳನ್ನು ನಿರಂತರವಾಗಿ ಪಾಲಿಸಿದರೆ ಮಾತ್ರ ಸುಲಭವಾಗಿ ಹೊಟ್ಟೆಯ ಬೊಜ್ಜ ಕರಗುತ್ತದೆ.