ಪನೀರ್ ಅಥವಾ ಮೊಟ್ಟೆ, ತೂಕ ಇಳಿಸುವ ಡಯಟ್ ಪ್ಲ್ಯಾನ್‌ನಲ್ಲಿ ಯಾವುದು ಉತ್ತಮ ಆಯ್ಕೆ?
Nov 23, 2023 12:14 PM IST
ಪ್ರೋಟೀನ್ ಅಂಶ ಹೇರಳವಾಗಿರುವ ಪ್ರೋಟೀನ್, ಮೊಟ್ಟೆ
Weight Loss Tips: ಮೊಟ್ಟೆ ಮತ್ತು ಪನೀರ್ ಎರಡೂ ಒಂದೇ ರೀತಿಯ ಪೋಷಕಾಂಶ ಸಂಯೋಜನೆಯನ್ನು ಹೊಂದಿವೆ. ಇವುಗಳು ಪ್ರೋಟೀನ್‌ನ ಸಂಪೂರ್ಣ ಮೂಲಗಳಾಗಿವೆ. ಎರಡೂ ನಿಮ್ಮ ಡಯಟ್ ಪ್ಲ್ಯಾನ್‌ಗೆ ಉತ್ತಮ ಮೂಲವಾಗಿದ್ದು 2 ದಿನಗಳಿಗೊಮ್ಮೆ ನೀವು ಇವರೆಡನ್ನೂ ಬದಲಿಸಬಹುದು.
Weight Loss Tips: ತೆಳ್ಳಗೆ ಬೆಳ್ಳಗೆ ಇರಬೇಕು ಅನ್ನೋದು ಎಲ್ಲರಿಗೂ ಇಷ್ಟ. ಆದರೆ ಆ ರೀತಿ ಆಗಲು ಬಹಳ ಕಠಿಣ ಶ್ರಮ ಬೇಕು. ನಿಮ್ಮ ಡಯೆಟ್‌ನಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರಬೇಕು. ಡಯಟ್ ಮಾಡುವವರು ಮೊಟ್ಟೆ ಹಾಗೂ ಪನೀರ್ ಎರಡನ್ನೂ ಬಳಸುತ್ತಾರೆ. ಆದರೆ ಪ್ರೋಟೀನ್ ಅಂಶ ಮೊಟ್ಟೆಯಲ್ಲಿ ಹೆಚ್ಚಾಗಿದೆಯೋ, ಪನೀರ್‌ನಲ್ಲಿ ಹೆಚ್ಚಾಗಿದೆಯೋ ಎಂಬುದರ ಬಗ್ಗೆ ಕೆಲವರಿಗೆ ಗೊಂದಲ ಇದೆ.
ಮೊಟ್ಟೆ ಹಾಗೂ ಪನೀರ್ ಎರಡನ್ನೂ ಕುಕ್ ಮಾಡುವುದು ಬಹಳ ಸುಲಭ. ಆರೋಗ್ಯಕ್ಕೆ ಇವರೆಡೂ ಬಹಳ ಒಳ್ಳೆಯದು. ಆದರೆ ತೂಕ ಇಳಿಸಲು ಇವೆರಡಲ್ಲಿ ಯಾವುದು ಒಳ್ಳೆಯದು? ಎರಡರಲ್ಲೂ ಏನೆಲ್ಲಾ ಪೋಷಕಾಂಶಗಳಿವೆ ಎಂಬುದನ್ನು ನೋಡೋಣ.
ಮೊಟ್ಟೆ: ಪನೀರ್‌ಗೆ ಹೋಲಿಸಿದರೆ ಮೊಟ್ಟೆ ಬಹಳ ಕಡಿಮೆ ಬೆಲೆಯ ಆಹಾರ ಪದಾರ್ಥವಾಗಿದೆ. ಮೊಟ್ಟೆ ಪ್ರೋಟೀನ್‌ನ ಉತ್ತಮ ಗುಣಮಟ್ಟದ್ದಾಗಿದೆ. ಮೊಟ್ಟೆಯಲ್ಲಿ ನಮ್ಮ ದೇಹಕ್ಕೆ ಒಂದು ದಿನದಲ್ಲಿ ಅಗತ್ಯವಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳಿವೆ. ಇಡೀ ಮೊಟ್ಟೆಯು 6 ಗ್ರಾಂ ಪ್ರೋಟೀನ್ ಮತ್ತು ದೇಹದ ಸಾಮಾನ್ಯ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಬೇಯಿಸುವುದು, ಸ್ಕ್ರಾಂಬಲ್ಡ್, ಹಸಿ ಮೊಟ್ಟೆ ತಿನ್ನುವುದು ಹೀಗೆ ನೀವು ಯಾವ ರೂಪದಲ್ಲಾದರೂ ಮೊಟ್ಟೆಯನ್ನು ಸೇವಿಸಬಹುದು. ಮೊಟ್ಟೆಯ ಬಿಳಿ ಭಾಗಕ್ಕಿಂತ ಹಳದಿ ಭಾಗದಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಆದರೆ ಅದರಲ್ಲಿ ಹೆಚ್ಚಿನ ಕೊಬ್ಬಿನಾಂಶ ಇದೆ ಎಂಬ ಕಾರಣಕ್ಕೆ ಅನೇಕರು ಅದನ್ನು ಸೇವಿಸಲು ನಿರಾಕರಿಸುತ್ತಾರೆ.
1 ಬೇಯಿಸಿದ ಮೊಟ್ಟೆಯಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ನೋಡಿ
ಪ್ರೋಟೀನ್: 5.5 ಗ್ರಾಂ
ಒಟ್ಟು ಕೊಬ್ಬು: 4.2 ಗ್ರಾಂ
ಕ್ಯಾಲ್ಸಿಯಂ: 24.6 ಮಿಗ್ರಾಂ
ಕಬ್ಬಿಣಾಂಶ: 0.8 ಮಿಗ್ರಾಂ
ಮೆಗ್ನೀಷಿಯಮ್: 5.3 ಮಿಗ್ರಾಂ
ರಂಜಕ: 86.7 ಮಿಗ್ರಾಂ
ಪೊಟ್ಯಾಸಿಯಮ್: 60.3 ಮಿಗ್ರಾಂ
ಸತು: 0.6 ಮಿಗ್ರಾಂ
ಕೊಲೆಸ್ಟ್ರಾಲ್: 162 ಮಿಗ್ರಾಂ
ಸೆಲೆನಿಯಮ್: 13.4 ಮೈಕ್ರೋಗ್ರಾಂಗಳು
ಪನೀರ್
ಪನೀರನ್ನು ಕಾಟೇಜ್ ಚೀಸ್ ಎಂದೂ ಕರೆಯಲಾಗುತ್ತದೆ. ಇದು ಭಾರತದಲ್ಲಿ ಅತ್ಯಂತ ಜನಪ್ರಿಯ ಡೈರಿ ಉತ್ಪನ್ನವಾಗಿದೆ. ಹೆಚ್ಚಿನ ಕ್ಯಾಲ್ಸಿಯಂ ಅಂಶವಿರುವ ಪನೀರನ್ನು ಸ್ಯಾಂಡ್‌ವಿಚ್, ಸಲಾಡ್ ತಯಾರಿಸಲು ಬಳಸಬಹುದು. ಪನೀರ್ ರೋಲ್, ಬಟರ್ ಪನೀರ್ ಮಸಾಲಾ ಸೇರಿದಂತೆ ನಿಮಗಿಷ್ಟವಾದ ರೀತಿ ಸೇವಿಸಬಹುದು. ಪನೀರ್‌ನಲ್ಲಿ ವಿಟಮಿನ್ ಬಿ 12, ಸೆಲೆನಿಯಮ್, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ.
40 ಗ್ರಾಂ ಪನೀರಿನಲ್ಲಿರುವ ಪೋಷಕಾಂಶಗಳ ಪಟ್ಟಿ ಈ ರೀತಿ ಇವೆ.
ಪ್ರೋಟೀನ್: 7.54 ಗ್ರಾಂ
ಕೊಬ್ಬು: 5.88 ಗ್ರಾಂ
ಕಾರ್ಬೋಹೈಡ್ರೇಟ್‌ಗಳು: 4.96 ಗ್ರಾಂ
ಫೋಲೇಟ್‌ಗಳು: 37.32 ಮೈಕ್ರೋಗ್ರಾಂ
ಕ್ಯಾಲ್ಸಿಯಂ: 190.4 ಮಿಗ್ರಾಂ
ರಂಜಕ: 132 ಮಿಗ್ರಾಂ
ಪೊಟ್ಯಾಷಿಯಮ್: 50 ಮಿಗ್ರಾಂ
ಅಂತಿಮವಾಗಿ ಹೇಳುವುದಾದರೆ, ಮೊಟ್ಟೆ ಮತ್ತು ಪನೀರ್ ಎರಡೂ ಒಂದೇ ರೀತಿಯ ಪೋಷಕಾಂಶ ಸಂಯೋಜನೆಯನ್ನು ಹೊಂದಿವೆ. ಇವುಗಳು ಪ್ರೋಟೀನ್‌ನ ಸಂಪೂರ್ಣ ಮೂಲಗಳಾಗಿವೆ. ಎರಡೂ ನಿಮ್ಮ ಡಯಟ್ ಪ್ಲ್ಯಾನ್‌ಗೆ ಉತ್ತಮ ಮೂಲವಾಗಿದ್ದು 2 ದಿನಗಳಿಗೊಮ್ಮೆ ನೀವು ಇವರೆಡನ್ನೂ ಬದಲಿಸಬಹುದು. ಸಸ್ಯಾಹಾರಿಗಳಿಗೆ ಪನೀರ್, ಪ್ರೋಟೀನ್‌ನ ಏಕೈಕ ಮೂಲವಾಗಿದೆ, ಮಾಂಸಾಹಾರಿಗಳು ಮೊಟ್ಟೆಯನ್ನು ಇಷ್ಟಪಡುತ್ತಾರೆ. ಇದರ ಜೊತೆಗೆ ಸೋಯಾ ಉತ್ಪನ್ನಗಳು, ಬೇಳೆ ಕಾಳುಗಳು, ನಟ್ಸ್ ಕೂಡಾ ನಿಮ್ಮ ಆಹಾರ ಕ್ರಮದಲ್ಲಿರಲಿ.